ಆಧಾರ್: ಕೇಂದ್ರದ ಪೇಚು
ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳು ಬಡವರಿಗೆ ನೀಡುವ ಸೌಲಭ್ಯಗಳೆಲ್ಲ ಅವರಿಗೇ ನೇರವಾಗಿ ತಲುಪುವ ವ್ಯವಸ್ಥೆಯ ಒಂದು ಭಾಗವಾಗಿದ್ದ ಆಧಾರ್ ಕಾರ್ಡಿನ ಕಡ್ಡಾಯದ ನಿಯಮವನ್ನು ಸುಪ್ರೀಮ್ ಕೋರ್ಟ್ ತಾತ್ಕಾಲಿಕ ಜಾರಿಗೆ ತರಬಾರದೆಂದು ಆದೇಶ ನೀಡಿರುವುದು, ಕೇಂದ್ರ ಸರ್ಕಾರವನ್ನು ನಿಜಕ್ಕೂ ಪೇಚಿನಲ್ಲಿ ಸಿಕ್ಕಿಸಿದೆ.
ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಿಸಿದ್ದರೆ ಮಾತ್ರ ಅಡುಗೆ ಗ್ಯಾಸ್ ಸಬ್ಸಿಡಿಯ ನೇರ ಪಾವತಿಯ ಯೋಜನೆಯನ್ನು ಈಗಾಗಲೇ ಅನೇಕ ಕಡೆಗಳಲ್ಲಿ ಆರಂಭಿಸಲಾಗಿದೆ. ಇದನ್ನು ಮಾರ್ಚ್ ವೇಳೆಗೆ ದೊಡ್ಡ ರೀತಿಯಲ್ಲಿ ವಿಸ್ತರಿಸುವ ಉದ್ದೇಶವೂ ಪ್ರಕಟವಾಗಿತ್ತು. ಈಗ ಆ ಮಹತ್ವಾಕಾಂಕ್ಷೆಗೆ ಅಡ್ಡಿ ಬಂದಿರುವಂತಿದೆ.
ಸೋಮವಾರ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿನಲ್ಲಿ ಆಧಾರ್ ಯೋಜನೆಯನ್ನು ರದ್ದುಪಡಿಸಿಲ್ಲ ಎನ್ನುವುದು ನಿಜ. ವಿವಾದವನ್ನು ನ್ಯಾಯಾಲಯ ಸಂಪೂರ್ಣವಾಗಿ ಪರಿಶೀಲಿಸಿ ಅಂತಿಮ ತೀರ್ಪನ್ನು ಪ್ರಕಟಿಸುವವರೆಗೆ, ಯಾವ ಸರ್ಕಾರಿ ಸೌಲಭ್ಯವನ್ನೇ ಆದರೂ ಅರ್ಹರಾದ ನಾಗರಿಕರು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಅಂದರೆ ಸರ್ಕಾರದ ಸೌಲಭ್ಯವನ್ನು ಪಡೆಯುವುದರಲ್ಲಿ ಆಧಾರ್ ಕಾರ್ಡ್ನವರು ಆಧಾರ್ ಕಾರ್ಡ್ ಇಲ್ಲದಿರುವವರು ಎನ್ನುವವರ ನಡುವೆ ವ್ಯತ್ಯಾಸ ಮಾಡುವಂತಿಲ್ಲ.
ಕೇಂದ್ರ ಸರ್ಕಾರದ ವಕೀಲರು ಆಧಾರ್ ಕಾರ್ಡ್ ಪಡೆಯುವುದು ಕಡ್ಡಾಯವೇನೂ ಇಲ್ಲ ಎಂದು ಹೇಳಿದರೂ, ವಾಸ್ತವದಲ್ಲಿ ಸರ್ಕಾರದ ಪರವಾಗಿ ಪ್ರಕಟವಾದ ಜಾಹಿರಾತುಗಳಲ್ಲಿ ಬಳಸಿದ್ದ ಪದಗಳನ್ನು ಗಮನಿಸಿದರೆ, ಆಧಾರ್ ಕಾರ್ಡ್ ಇಲ್ಲದಿದ್ದರೆ, ಯಾವ ಸೌಲಭ್ಯವೂ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಈಗ ಸರ್ಕಾರದ ಮುಂದಿರುವ ವಿಚಾರ ಎಂದರೆ ಆಧಾರ್ ಕಾರ್ಡ್ ಇಲ್ಲದೇ ಇರುವವರಿಗೂ ಸರ್ಕಾರದ ಜನ ಕಲ್ಯಾಣ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆಯಲು ಅರ್ಹತೆ ಇರುವವರಿಗೆ ಯಾವ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಬೇಕು, ಅದಕ್ಕೇನು ವ್ಯವಸ್ಥೆ ಎನ್ನುವುದೇ. ವಾಸ್ತವದಲ್ಲಿ ದೇಶದಲ್ಲಿ ವಯಸ್ಕ ನಾಗರಿಕರ ನೋಂದಣಿಗೆ ವ್ಯವಸ್ಥೆ ಇದೆ. ಅದಕ್ಕೆ ಕಾಯಿದೆಯ ಮಾನ್ಯತೆಯೂ ಇದೆ. ಆದರೆ ಆಧಾರ್ಗೆ ಸಂವಿಧಾನದ ರಕ್ಷಣೆ ಇಲ್ಲ. ಸಂಸತ್ತಿನಲ್ಲಿ ಚರ್ಚೆಯೂ ಆಗಿಲ್ಲ, ಕಾಯಿದೆಯನ್ನು ಅಂಗೀಕರಿಸಿಲ್ಲ. ಇಂತಹ ಅವ್ಯವಸ್ಥೆಯ ಆಧಾರ್ ಕಾರ್ಡನ್ನು ಜನರ ಮೇಲೆ ಹೇರುವ ಅಗತ್ಯವೇ ಇರಲಿಲ್ಲ.
ಆಧಾರ್ ಕಾರ್ಡ್ನಲ್ಲಿ ನಮೂದಿಸಬೇಕಾಗಿರುವ ಕೆಲವು ವೈಯಕ್ತಿಕ ವಿವರಗಳನ್ನು ಯಾವುದೋ ಗೊತ್ತುಗುರಿ ಇಲ್ಲದ ಸಂಸ್ಥೆಯ ವಶಕ್ಕೆ ಒಪ್ಪಿಸುವುದನ್ನು ಕಡ್ಡಾಯ ಮಾಡುವುದು ವೈಯಕ್ತಿಕ ಖಾಸಗಿ ಬದುಕಿನ ಖಾಸಗಿತನದ ಹಕ್ಕನ್ನೇ ಅಳಿಸಿ ಹಾಕಿದಂತೆ ಎನ್ನುವವರೂ ಇದ್ದಾರೆ. ಅದರಲ್ಲೂ ಬ್ಯಾಂಕ್ ಖಾತೆಯ ವಿವರಗಳನ್ನು ಬಹಿರಂಗವಾಗಿ ಕೊಡುವುದು ಅಪಾಯಕಾರಿ. ಇನ್ನು ಮುಂದೆಯೂ ಆಧಾರ್ ಕಾರ್ಡ್ಗಳನ್ನು ಸರ್ಕಾರ ಜನರಿಗೆ ಕೊಡುವುದಕ್ಕೆ ಸೋಮವಾರದ ತೀರ್ಪು ಅಡ್ಡಿ ಪಡಿಸಿಲ್ಲ. ಇದುವರೆಗೆ ಕೊಟ್ಟಿರುವ ಕಾರ್ಡ್ಗಳನ್ನು ರದ್ದುಪಡಿಸುವ ವಿಚಾರವೂ ತೀರ್ಪಿನಲ್ಲಿ ಇಲ್ಲ. ಆದರೆ ಸೌಲಭ್ಯಗಳಿಂದ ಅರ್ಹ ನಾಗರಿಕರು ವಂಚಿತರಾಗಬಾರದು. ಸರ್ಕಾರ ಆದಷ್ಟು ಬೇಗ ಆಧಾರ್ ಕಾರ್ಡ್ ಯೋಜನೆಗೆ ಸಂಬಂಧಿಸಿದಂತೆ ಸಮಗ್ರ ಸ್ವರೂಪದ ಮಸೂದೆಯನ್ನು ಸಂಸತ್ತಿನ ಮುಂದೆ ತರುವುದು ಒಳ್ಳೆಯದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

