ಸಂಪಾದಕೀಯ

ಶಿಕ್ಷೆಯಾದರೂ ಸಂಸದರೇ

Published On :

ಕ್ರಿಮಿನಲ್ ಅಪರಾಧಕ್ಕಾಗಿ ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದ ಸಂಸದರು, ಶಾಸಕರು, ತತ್‌ಕ್ಷಣದಿಂದಲೇ ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆನ್ನುವ ಸುಪ್ರೀಮ್ ಕೋರ್ಟಿನ ತೀರ್ಪಿನ ಪರಿಣಾಮವನ್ನು ಅಳಿಸಿಹಾಕುವ ಸುಗ್ರೀವಾಜ್ಞೆಯ ಕರಡನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿರುವುದು ಈಗಿನ ಯಥಾಸ್ಥಿತಿಯನ್ನೇ ಕಾಯ್ದುಕೊಂಡಂತೆ ಆಗಿದೆ.
ಈಗ, ಸುಪ್ರೀಮ್ ಕೋರ್ಟಿನ ತೀರ್ಪಿನಂತೆ, ಶಿಕ್ಷೆಗೆ ಒಳಗಾದ ಸಂಸದರು, ಶಾಸಕರು ಆ ಸ್ಥಾನದಲ್ಲಿರಲು ಅನರ್ಹರು. ಈ ತೀರ್ಪಿಗೆ ಮುಂಚೆ, ಶಿಕ್ಷೆಗೊಳಗಾದ ಸಂಸದರು ಮೇಲ್ಮನವಿ ಸಲ್ಲಿಸಿದರೆ ಅದು ಇತ್ಯರ್ಥವಾಗುವವರೆಗೆ ಶಿಕ್ಷೆಗೆ ತಡೆಯಾದೇಶ ತಂದು ಮುಂದುವರಿಯುತ್ತಿದ್ದರು. ಸಚಿವ ಸಂಪುಟ ಈಗ ಅಂಗೀಕರಿಸಿರುವ ತುರ್ತು ಶಾಸನದಂತೆ, ಮತ್ತೆ ಹಿಂದಿನ ಸ್ಥಿತಿಯೇ ಜಾರಿಗೆ ಬಂದಂತೆ ಆಗುತ್ತದೆ.
ಆದರೆ ಈ ರೀತಿ ಸ್ಥಾನ ಉಳಿಸಿಕೊಂಡ ಸಂಸದರಿಗೆ ವೇತನ ಭತ್ಯೆ ಇಲ್ಲ. ಮತದಾನದ ಹಕ್ಕೂ ಇಲ್ಲ. ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಥಮ ಹಂತದ ನ್ಯಾಯಾಂಗ ವಿಚಾರಣೆಯಲ್ಲಿ ಅಪರಾಧ ಸಾಬೀತಾದರೂ, ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿದರೂ ಅಂತಹವರು ಇಡೀ ದೇಶಕ್ಕೆ ಶಾಸನ ರಚಿಸುವ ಸದನದ ಭಾಗವಾಗುವುದು ನಿಜಕ್ಕೂ ಒಂದು ವಿಪರ್ಯಾಸವೇ. ಸುಪ್ರೀಮ್ ಕೋರ್ಟಿನ ತೀರ್ಪು ಪ್ರಕಟವಾದ ಅನಂತರ, ಅದರ ಪರಿಣಾಮವನ್ನು ತಪ್ಪಿಸಲು ಒಂದು ವಿಧೇಯಕವನ್ನು ರಚಿಸಿತ್ತು. ಆ ವಿಧೇಯಕ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಪರಿಶೀಲನೆಗೆ ಬರುವುದಿತ್ತು. ಸಂಸತ್ತು ಒಪ್ಪಿದರೆ, ಶಾಸನದ ಲಾಭ ಶಿಕ್ಷೆಗೆ ತಡೆಯಾದೇಶ ಪಡೆದ ಎಲ್ಲರಿಗೂ ಅನ್ವಯವಾಗುತ್ತಿತ್ತು. ಅಷ್ಟರಲ್ಲೇ ಈಗೇಕೆ ತುರ್ತು ಶಾಸನ ರಚನೆಯಾಗಿದ್ದು?
ಅದಕ್ಕೆ ಅನೇಕರು ಕೊಡುವ ಕಾರಣ ಕಾಂಗ್ರೆಸ್‌ನ ರಾಜ್ಯ ಸಭೆ ಸದಸ್ಯ, ಕಾರ್ಯಕಾರಿಣಿಯ ಸದಸ್ಯ ರಷೀದ್ ಮಸೂದ್ ಅವರು ತ್ರಿಪುರಾದ ವಿದ್ಯಾರ್ಥಿಗಳಲ್ಲಿ ಅನೇಕರು ಅನರ್ಹರಾಗಿದ್ದರೂ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಕಲ್ಪಿಸಿಕೊಡಲು ನೆರವು ನೀಡಿದ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ತ್ರಿಪುರಾ ನ್ಯಾಯಾಲಯ ಅವರನ್ನು ಅಪರಾಧಿ ಎಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣ ಅಕ್ಟೋಬರ್ ಒಂದರಂದು ಪ್ರಕಟವಾಗಬೇಕಾಗಿದೆ. ಈ ಶುಕ್ರವಾರವೇ ಬಿಹಾರದ ಒಂದು ನ್ಯಾಯಾಲಯ ರಾಷ್ಟ್ರೀಯ ಜನತಾ ದಳದ ಸರ್ವೋಚ್ಚ ನಾಯಕ ಲಾಲೂ ಪ್ರಸಾದ ಯಾದವ್ ಅವರ ವಿರುದ್ಧದ ದನದ ಮೇವಿನ ಹಗರಣದಲ್ಲಿ ಅಂತಿಮ ಹಂತದ ತೀರ್ಪನ್ನು ನೀಡಲಿದೆ. ಆ ತೀರ್ಪು ಯಾವ ರೀತಿ ಇದ್ದೀತು ಎನ್ನುವುದನ್ನು ಊಹಿಸುವುದು ಕಷ್ಟವಾದರೂ ಕೇಂದ್ರ ಸಚಿವ ಸಂಪುಟ ತುರ್ತು ಶಾಸನದ ಹಾದಿಯನ್ನು ಹಿಡಿದು ಲಾಲೂ ಅವರನ್ನು ಅಗತ್ಯ ಬಿದ್ದರೆ ರಕ್ಷಿಸಲು ಹೊರಟಿದೆ ಎನ್ನುವ ಆರೋಪವೂ ಇದೆ.
ಒಂದು ನ್ಯಾಯಾಲಯದ ತೀರ್ಪಿನಲ್ಲಿ ಅಪರಾಧಿ ಎಂದು ಘೋಷಿತನಾದ ವ್ಯಕ್ತಿ ಮೇಲ್ಮನವಿ ಸಲ್ಲಿಸಿದರೆ, ತೀರ್ಪಿಗೆ ತಡೆಯಾದೇಶ ಪ್ರಕಟವಾದರೆ ಅದು ಶಿಕ್ಷೆಯನ್ನು ಅನುಭವಿಸುವುದಕ್ಕೆ ಅನ್ವಯಿಸುತ್ತದೆ. ಅಪರಾಧಿ ಎನ್ನುವ ತೀರ್ಮಾನಕ್ಕಲ್ಲ ಎನ್ನುವ ವಾದವನ್ನು ಅನೇಕರು ಮುಂದಿಟ್ಟಿದ್ದಾರೆ. ಆ ವ್ಯಕ್ತಿ ಅಪರಾಧಿ ಎನ್ನುವ ಕಳಂಕವನ್ನು ಕಳೆದುಕೊಳ್ಳುವುದು ಮೇಲಿನ ನ್ಯಾಯಾಲಯ ತನ್ನ ಅಂತಿಮ ತೀರ್ಪಿನಲ್ಲಿ ಅವನನ್ನು ನಿರ್ದೋಷಿ ಎಂದು ಸಾರಿದಾಗ ಮಾತ್ರ ಎಂದೂ ಹಲವು ಕಾನೂನು ಪಂಡಿತರು ಅಭಿಪ್ರಾಯವನ್ನು ಪ್ರಕಟಿಸಿದ್ದಾರೆ. ಕೇಂದ್ರ ಸಚಿವ ಸಂಪುಟ ಅಂಗೀಕರಿಸುವ ಕರಡಿನಂತೆ ವಿಧೇಯಕದ ಆಧಾರದ ಮೇಲೆ ತುರ್ತು ಶಾಸನವನ್ನು ರಾಷ್ಟ್ರಪತಿಯ ಅನುಮತಿ ಪಡೆದು ಜಾರಿಗೆ ತಂದರೂ, ಅದನ್ನು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸುವ ಹಕ್ಕು ಸಾರ್ವಜನಿಕರಿಗೆ ಇದ್ದೇ ಇದೆ. ಸಂಸತ್ತಿನಲ್ಲಿ ವಿಧೇಯಕದ ಪರಿಶೀಲನೆಗೆ ಮುಂಚೆಯೇ ಅದನ್ನೇ ತುರ್ತು ಶಾಸನದ ರೀತಿಯಲ್ಲಿ ಜಾರಿಗೆ ತರುವುದು ಜನತಾಂತ್ರಿಕ ಹೆದ್ದಾರಿಯಲ್ಲಿ ನಡೆಯಬೇಕಾದ ಸರ್ಕಾರದ ಲಕ್ಷಣವಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.