ತಪ್ಪಾಯ್ತು ತಿದ್ಕೋತೀವಿ
ಮಳವಳ್ಳಿಯ ಭಾರತೀ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಶರತ್ ಎಂ.ಆರ್. ಅವರು ಬರೆಯುತ್ತಾರೆ- 'ಸೆ.15ರ ಪತ್ರಿಕೆಯಲ್ಲಿ ಪುಟ 5ರಲ್ಲಿ (ಬೆಂಗಳೂರು ನಗರ ಆವೃತ್ತಿ) 'ಬಸ್-ಕಾರು ಡಿಕ್ಕಿ: ಐವರ ಸಾವು' ಎಂಬ ಸುದ್ದಿಯ ಕಡೆಯ ಪ್ಯಾರಾದಲ್ಲಿ 'ಡಿಕ್ಕಿಯ ರಭಸಕ್ಕೆ ಕಾರಿನ ಭಾಗಗಳು ತುಂಡು ತುಂಡಾಗಿ ಸಿಡಿದಿದ್ದವು' ಎಂದು ಪ್ರಕಟವಾಗಿದೆ. ಅಲ್ಲಿ ಬಾಂಬ್ ಸ್ಫೋಟವಾಗಿತ್ತೇ ಸಿಡಿಯಲು? ಅಲ್ಲಿ ಕಾರಿನ ಭಾಗಗಳು ತುಂಡು ತುಂಡಾಗಿದ್ದವು ಎಂದಾಗಬೇಕಿತ್ತು.'
'ಅದೇ ದಿನದ 7ನೇ ಪುಟದಲ್ಲಿ 'ಶೀಘ್ರವೇ ಬಿಎಸ್ವೈ ಬಿಜೆಪಿಗೆ' ಎಂಬ ಶೀರ್ಷಿಕೆಯ ಸುದ್ದಿಯ 2ನೇ ಪ್ಯಾರಾದಲ್ಲಿ 'ಬಳ್ಳಾರಿಯ ಕೊಟ್ಟೂರು ಸ್ವಾಮಿ ಮಠದಲ್ಲಿ ನಡೆಯುತ್ತಿರುವ ಆರ್ಎಸ್ಎಸ್ ಕರ್ನಾಟಕ ಪ್ರಾಂತಗಳ ವಾರ್ಷಿಕ ಸಮನ್ವಯ ಸಭೆಯಲ್ಲಿ' ಎಂದಿದೆ. ಇಲ್ಲಿ ಪ್ರಾಂತಗಳ ಬದಲಾಗಿ ಪ್ರಾಂತ್ಯಗಳು ಎಂದಾಗಬೇಕಿತ್ತಲ್ಲವೇ?'
'ಪುಟ 10ರಲ್ಲಿ 'ಬೆಳಗ್ಗಿನವರೆಗೂ ಮೆರವಣಿಗೆ: ಗಾಯ' ಎಂಬ ಸುದ್ದಿಯಲ್ಲಿ ಶೀರ್ಷಿಕೆಯೇ ತುಸು ಗೊಂದಲಕರವಾಗಿದೆ. ಅಂತೆಯೇ ಸುದ್ದಿಯಲ್ಲಿ 'ನಗರದ ದೇವರಾಜ ಅರಸು ಕಾಲೊನಿ ಗಣೇಶ ಮೆರವಣಿಗೆ ಶುಕ್ರವಾರ ರಾತ್ರಿ ಪ್ರಾರಂಭವಾಗಿ ಶನಿವಾರ ಬೆಳಗಿನ ಜಾವ ಶುಕ್ರವಾರ ರಾತ್ರಿ ಆರಂಭವಾಗಿ ಶನಿವಾರ ಬೆಳಗಿನ ಜಾವದವರೆಗೂ ಮುಗಿಸದೇ ವಿಳಂಬ ಮಾಡಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು' ಎಂದಿದೆ.'
'ಅದೇ ಸುದ್ದಿಯ 3ನೇ ಪ್ಯಾರಾದಲ್ಲಿ 'ಶನಿವಾರ ರಾತ್ರಿ 11 ಗಂಟೆಯೊಳಗಾಗಿ ಗಣೇಶ ವಿಸರ್ಜನೆ ಮುಗಿಸಬೇಕಿತ್ತು ಎನ್ನಲಾಗಿದೆ' ಎಂದಿದೆ. ಇಲ್ಲಿ ಶುಕ್ರವಾರ ರಾತ್ರಿ 11 ಗಂಟೆಯೊಳಗೆ ಎಂದಾಗಬೇಕಿತ್ತಲ್ಲವೇ?' ಎಂದಿದ್ದಾರೆ.
ಕಾರಿನ ಭಾಗಗಳು ಸಿಡಿಯಲು ಬಾಂಬ್ ಸ್ಫೋಟವೇ ಆಗಬೇಕೆಂದಿಲ್ಲ. ಟಯರ್ ಸ್ಫೋಟಗೊಂಡು ಎಂದು ಬಳಸುವುದನ್ನು ಗಮನಿಸಿರಬಹುದು. ಅಪಘಾತಗಳು ಸಂಭವಿಸಿದಾಗ ಅದರ ಸದ್ದು ಮತ್ತು ಭೀಕರ ದೃಶ್ಯವನ್ನು ವಿವರಿಸಲು ಸಾಧ್ಯವಿಲ್ಲ. ತುಂಬ ರಭಸದಲ್ಲಿ ಅಪಘಾತ ಸಂಭವಿಸಿದಾಗ ವಾಹನದ ಭಾಗಗಳು ದೂರಕ್ಕೆ ಸಿಡಿಯುತ್ತವೆ.
ಕನಕಪುರ ರಸ್ತೆಯಲ್ಲಿ ನಡೆದಿದ್ದು ಭೀಕರ ಅಪಘಾತ. ಅದರ ರಭಸಕ್ಕೆ ವಾಹನದ ಭಾಗಗಳು ಅಕ್ಕಪಕ್ಕಕ್ಕೆ ಸಿಡಿದಿದೆ. ಅದನ್ನೇ ಬರೆಯಲಾಗಿದೆ. ಅಪಘಾತದಂತಹ ಸುದ್ದಿಗಳನ್ನು ಬರೆಯುವಾಗ ಯಾವುದೇ ಕಾರಣಕ್ಕೂ ಏನನ್ನೂ ವೈಭವೀಕರಿಸಬಾರದು ಎಂಬುದು ಪತ್ರಿಕೋದ್ಯಮದ ಅಲಿಖಿತ ನಿಯಮ.
ಇನ್ನು ಆರ್ಎಸ್ಎಸ್ನಲ್ಲಿ 'ಪ್ರಾಂತ' ಎಂಬ ಬಳಕೆಯೇ ಜಾರಿಯಲ್ಲಿರುವುದು. 'ಪ್ರಾಂತ ಕಾರ್ಯವಾಹ' ಎಂಬ ಬಳಕೆಯನ್ನು ಎಲ್ಲಾದರೂ ಗಮನಿಸಿರಬಹುದು. ಇತಿಹಾಸ ಪುಸ್ತಕಗಳಲ್ಲಿ 'ಆತನ ನಂತರ ಸಾಮ್ರಾಜ್ಯ ಸಣ್ಣ ಸಣ್ಣ ಪ್ರಾಂತ್ಯಗಳಾಗಿ ಹಂಚಿಹೋಯಿತು' ಎಂಬ ಬಳಕೆಯನ್ನು ಗಮನಿಸಿರಬಹುದು. ಆದರೆ ಆರ್ಎಸ್ಎಸ್ನಲ್ಲಿ 'ಪ್ರಾಂತ' ಎಂದೇ ಬಳಸಲಾಗುತ್ತದೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

