ಸಂಪಾದಕೀಯ

ನೌಕರರಿಗೆ ಭರ್ಜರಿ ಉಡುಗೊರೆ

Published On :

ಕಡು ಬಡವರಿಗೆ ಆಹಾರ ಭದ್ರತೆ, ಭೂ ಮಾಲಿಕರಿಗೆ ವಿಶೇಷ ಹಕ್ಕು - ಇಂತಹ ಉಡುಗೊರೆಗಳನ್ನು ಬಜೆಟ್‌ನಲ್ಲೇ ಅಳವಡಿಸಿ, 2014ರ ಚುನಾವಣೆಯಲ್ಲಿ ಜನರನ್ನು ಒಲಿಸಲು ಮುಂದಾಗಿರುವ ಸರ್ಕಾರ, ಅದೇ ದಾರಿಯಲ್ಲಿ ಮತ್ತೊಂದು ಹೆಜ್ಜೆ ಎನ್ನುವ ರೀತಿಯಲ್ಲಿ ಸುಮಾರು 80 ಲಕ್ಷ ಕೇಂದ್ರ ಸರ್ಕಾರಿ ನೌಕರರ ವೇತನ ಪುನರ್‌ವಿಮರ್ಶೆಗೆ ಏಳನೇ ಆಯೋಗವನ್ನು ರಚಿಸಲಿದೆ. ಆ ನಿರ್ಧಾರವನ್ನು ಈಗಲೇ ಪ್ರಕಟಿಸಿದ್ದರೂ, ಅದರ ಶಿಫಾರ್ಸುಗಳು ಜಾರಿಗೆ ಬರುವುದು 2016 ರ ಜನವರಿಯಲ್ಲೇ.
ಪ್ರತಿಯೊಂದು ವೇತನ ಆಯೋಗದ ನೇಮಕದ ಸಂಬಂಧದಲ್ಲೂ ಸಾರ್ವಜನಿಕ ಹಿತಾಸಕ್ತಿಯನ್ನು ಗಮನಿಸುವವರು, ವೇತನ ವಿಮರ್ಶೆಯ ಜತೆಯಲ್ಲೇ ದೇಶಕ್ಕೆ, ದೇಶದ ಜನರಿಗೆ ನೌಕರರ ಸೇನೆಯ ಕರ್ತವ್ಯಗಳ ಸಂಹಿತೆಯನ್ನೂ ರೂಪಿಸಬೇಕೆನ್ನುವ ಒತ್ತಾಯವನ್ನು ಪ್ರಕಟಿಸುವುದು ವಾಡಿಕೆಯಂತೆಯೇ ಆಗಿ ಬಿಟ್ಟಿದೆ. ಆದರೆ ಇದುವರೆಗೆ ನೌಕರರ ಬದ್ಧತೆ ಕುರಿತಂತೆ ಸರ್ಕಾರ ಯಾವ ಸಂಹಿತೆಯನ್ನೂ ರಚಿಸಿಲ್ಲ. ನೌಕರರ ಸೇವಾ ನಿಯಮಗಳೇ ಅಂತಹ ಒಂದು ಸಂಹಿತೆ ಎನ್ನುವುದಾದರೆ, "ಪ್ರಾಚೀನ ಕಾಲದ" ಸೇವಾ ನಿಯಮಗಳೇ ಇನ್ನೂ ಜಾರಿಯಲ್ಲಿರುವುದೇಕೆ?
ಐದನೇ ವೇತನ ಆಯೋಗದ ವರದಿಯಲ್ಲಿ ಸೇವಾ ನಿಯಮಗಳ ಬದಲಾವಣೆ ಕುರಿತಂತೆ ಹಲವಾರು ಪ್ರಸ್ತಾಪಗಳಿದ್ದವು. ಆದರೆ ಅದನ್ನೆಲ್ಲ ಸರ್ಕಾರಗಳು ಜಾಣತನದಿಂದ ಪರಿಶೀಲಿಸಲೇ ಇಲ್ಲ. ಕೇಂದ್ರದ ಏಳನೇ ವೇತನ ಆಯೋಗದ ಒಂದು ವೈಶಿಷ್ಟ್ಯ ಎಂದರೆ ರಕ್ಷಣಾ ಪಡೆಗಳಿಗೆ ಒಂದು ವಿಶೇಷ ಆಯೋಗದ ರಚನೆ. ಇದು ಸೇನಾ ಪಡೆಗಳ ಬಹುಕಾಲದ ಬೇಡಿಕೆಯಾಗಿತ್ತು. ಅದನ್ನು ಸರ್ಕಾರ ಈಗಲಾದರೂ ಒಪ್ಪಿದ್ದು ಒಳ್ಳೆಯದೇ. ಈಗಿನ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರಿಗೂ ಸೇನಾ ಪಡೆಗಳಲ್ಲಿ ಕೆಲಸ ಮಾಡುವವರಿಗೂ ವೇತನ, ಭತ್ಯೆ, ರಜಾ ಸೌಲಭ್ಯಗಳಲ್ಲಿ ಅಂತರವಿದೆ. ಸಾಧ್ಯವಿರುವಷ್ಟೂ ಅದನ್ನು ನಿವಾರಿಸುವ ಪ್ರಯತ್ನ ಆಗಲೇಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.