ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಬೆಂಗಳೂರಿನಿಂದ ಐಟಿ ಉದ್ಯೋಗಿ ರವಿ ಶಿವಪ್ಪ ಕೋರೆ ಅವರು  ಬರೆಯುತ್ತಾರೆ- 'ಸೆ.27ರ ಪತ್ರಿಕೆಯಲ್ಲಿ ಮುಖಪುಟದಲ್ಲಿ ಉಗ್ರಗಾಮಿಗಳ ದಾಳಿಯಲ್ಲಿ ಹುತಾತ್ಮರಾದ ಸೇನಾಧಿಕಾರಿಯ ಹೆಸರು 'ಲೆ.ಜ. ಬಿ.ಜೆ. ಸಿಂಗ್‌' ಎಂದು ಪ್ರಕಟವಾಗಿದೆ. ಆದರೆ ಬಿ.ಜೆ. ಸಿಂಗ್ ಅವರು ಲೆ.ಜ. (ಲೆಫ್ಟಿನೆಂಟ್ ಜನರಲ್) ಆಗಿರಲಿಲ್ಲ. ಅವರು ಲೆ.ಕ. (ಲೆಫ್ಟಿನೆಂಟ್ ಕರ್ನಲ್) ಆಗಿದ್ದರು' ಎಂದಿದ್ದಾರೆ.
ಓದುಗ ಶ್ರೀಹರ್ಷ ಹೆಗಡೆ ಅವರು ಬರೆಯುತ್ತಾರೆ- 'ಸೆ.25ರ 'ಕನ್ನಡಪ್ರಭ'ದ ಪುಟ 12ರಲ್ಲಿ 'ರಜನಿಕಾಂತ್ ತೆಲುಗು ಸೂಪರ್‌ಸ್ಟಾರ್‌' ಎಂದು ಪ್ರಕಟವಾಗಿದೆ. ಪ್ರಪಂಚಕ್ಕೆಲ್ಲ ತಿಳಿದಿರುವ ಹಾಗೆ ಅವರು ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌' ಎಂದಿದ್ದಾರೆ.
'ಹಿರಿಯರ ಹಾದಿ' ಅಂಕಣ ಬರೆಯುವ ಎಂ.ಎನ್. ಸುಂದರರಾಜ್ ಅವರೇ ಪತ್ರ ಬರೆದಿದ್ದಾರೆ. ಅವರ ಅಂಕಣದಲ್ಲಾದ ತಪ್ಪಿನ ಕುರಿತು ಅವರೇ ತಪ್ಪೊಪ್ಪಿಗೆ ನೀಡಿದ್ದಾರೆ. ಅವರು ಬರೆಯುತ್ತಾರೆ- 'ಸೆ.17ರಂದು ಪ್ರಕಟವಾದ 'ಹಿರಿಯರ ಹಾದಿ' ಅಂಕಣದಲ್ಲಿ ಸೇಡಿಯಾಪು ಕೃಷ್ಣಭಟ್ಟರ' ಬಗ್ಗೆ ಬರೆದ ಲೇಖನದಲ್ಲಿ 'ಸೇಡಿಯಾಪು ಕೃಷ್ಣ ಭಟ್ಟರ ಮಗ ಅಮೆರಿಕನ್ ಹುಡುಗಿಯನ್ನು ವಿವಾಹವಾದ' ಎಂದಿದೆ. ಆದರೆ ಅದನ್ನು 'ಮೊಮ್ಮಗ' ಎಂದು ಓದಿಕೊಳ್ಳಬೇಕೆಂದು ವಿನಂತಿಸುತ್ತೇನೆ. ಈ ಬಗ್ಗೆ ಸೇಡಿಯಾಪು ಕೃಷ್ಣಭಟ್ಟರ ಪುತ್ರ ಎಸ್.ಜೆ. ಜಯರಾಮ ಭಟ್ಟ ಅವರು ಆದ ತಪ್ಪಿನ ಬಗ್ಗೆ ಗಮನ ಸೆಳೆದಿದ್ದಾರೆ. ಅಕಸ್ಮಾತ್ ಆದ ತಪ್ಪಿಗೆ ವಿಷಾದಿಸುತ್ತೇನೆ' ಎಂದಿದ್ದಾರೆ.
ಹರಪನಹಳ್ಳಿಯಿಂದ ಕೆ. ಶ್ರೀನಿವಾಸರಾವ್ ಅವರು ಬರೆಯುತ್ತಾರೆ- 'ದಾವಣಗೆರೆ ಜಿಲ್ಲೆ ಹರಪನಹಳ್ಳಿಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ ಬಗೆಗಿನ ವರದಿಯಲ್ಲಿ (ಸೆ.19ರ ಶಿವಮೊಗ್ಗ ಆವೃತ್ತಿ) 'ಎಚ್.ಪಿ.ಎಸ್. ಕಾಲೇಜಿನ ಶಾಂತಕುಮಾರಿ ವೀರಗ್ರಹಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ' ಎಂದು ಪ್ರಕಟವಾಗಿದೆ.'
'ಹಲವು ಬಾರಿ ತಲೆಕೆಡಿಸಿಕೊಂಡ ನಂತರ ಅರ್ಥವಾಯಿತು, ಇದು 'ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ' ಎಂದಿರಬೇಕಿತ್ತೆಂದು' ಎಂದಿದ್ದಾರೆ.
ಮೈಸೂರಿನಿಂದ ಕೊ.ಸು. ನರಸಿಂಹಮೂರ್ತಿ ಅವರು ಬರೆಯುತ್ತಾರೆ- 'ಸೆ.23ರ 'ಬೈಟು ಕಾಫಿ'ಯ 'ಜಗುಲಿ'ಯಲ್ಲಿ ಮೈಸೂರಿನ ಲಕ್ಷ್ಮೀ ಅವರ ಬರಹದ ಶೀರ್ಷಿಕೆ 'ಬಡರಿಗಿಲ್ಲದ ವಾಸ್ತು ಉಳ್ಳವರಿಗೇಕೆ?' ಎಂದಿದೆ. ಇದು ಯಾವ ಸೀಮೆ ಪ್ರಯೋಗ ಸ್ವಾಮಿ? ಅದು 'ಬಡವರಿಗಿಲ್ಲದ ವಾಸ್ತು ಉಳ್ಳವರಿಗೇಕೆ?' ಎಂದಿರಬೇಕಿತ್ತಲ್ಲವೇ?' ಎಂದಿದ್ದಾರೆ.
ಬೆಂಗಳೂರಿನ ಬಿಟಿಎಂ ಬಡಾವಣೆಯಿಂದ ವಿ. ನಾರಾಯಣಸ್ವಾಮಿ ಅವರು ಬರೆಯುತ್ತಾರೆ- 'ಸೆ.18ರಂದು ಪತ್ರಿಕೆಯ ಕ್ರೀಡಾ ಪುಟದಲ್ಲಿ ವೆಸ್ಟ್‌ಇಂಡೀಸ್ ಎ ತಂಡದದಲ್ಲಿ ಶತಕ ಪೂರೈಸಿದ ಜೋನಾಥನ್ ಕಾರ್ಟರ್ ಅವರ ಚಿತ್ರ ಪ್ರಕಟಿಸಿದ್ದೀರಿ. ಆದರೆ ಚಿತ್ರದ ಕೆಳಗೆ 'ಸೆತಕ ಸಂಭ್ರಮದಲ್ಲಿ ಕಾರ್ಟರ್‌' ಎಂಬುದಾಗಿ ಮುದ್ರಣಗೊಂಡಿದೆ. ಕನ್ನಡದಲ್ಲಿ ಶತಕಕ್ಕೆ ಸೆತಕ ಎಂಬ ಸಮನಾದ ಪದವಿದೆಯೇ? ದಯವಿಟ್ಟು ತಿಳಿಸಿ' ಎಂದಿದ್ದಾರೆ.
'ಸೆತಕ' ಎಂಬ ಪದ ಇರುವುದನ್ನು ನಾನೂ ಕೇಳಿಲ್ಲ. ಶತಕ ಬರೆಯುವಾಗ ತಪ್ಪಾಗಿ 'ಸೆತಕ' ಆಗಿದೆ ಎಂಬುದರಲ್ಲಿ ಅನುಮಾನವಿಲ್ಲ.

-ವಿಶ್ವೇಶ್ವರಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.