ಸಂಪಾದಕೀಯ

ಮಹಾಯುದ್ಧದ ನಿಜಸ್ವರೂಪ

Published On :

ಹದಿನಾರನೆ ಲೋಕಸಭೆ ಚುನಾವಣೆಯ ಮಹಾ ಯುದ್ಧದಲ್ಲಿ ಗುರುವಾರ ಮತದಾನದ ಮೂರನೆಯ ಸುತ್ತು ಮುಗಿಯಿತು. ಗುರುವಾರದ ಮತದಾನ ನಡೆದ ರಾಜ್ಯಗಳು ನರೇಂದ್ರ ಮೋದಿ ಅಲೆ ದೇಶದಲ್ಲಿ ನಿಜವಾಗಲೂ ಇದೆಯೋ ಇಲ್ಲವೋ ಎನುಢಿವ ಸೂಚನೆಯನ್ನು ಕೊಡಬಹುದು.
ಆದರೆ ಇದುವರೆಗಿನ ಮೂರು ಸುತ್ತುಗಳಲ್ಲಿ ಮತದಾನ ಮಾಡಿದ ಜನಸಮುದಾಯಗಳು ಯಾವುದಾದರೂ ಒಂದು ನಿರ್ದಿಷ್ಟವಾದ ವಿಷಯದ ಪರವಾಗಿ ಅಥವಾ ವಿರುದ್ಧವಾಗಿ ತಮ್ಮ ಮುದ್ರೆಯನ್ನು ಒತ್ತಿದ್ದಾರೆ ಎಂದು ಹೇಳುವುದಕ್ಕಾಗದು. ರಾಜಕೀಯ ಪಕ್ಷಗಳು ಮತದಾರರ ಮುಂದೆ ಅಂತಹ ಆಯ್ಕೆಯನ್ನು ಇಡಲೇ ಇಲ್ಲ.
ಭಾರತೀಯ ಜನತಾ ಪಾರ್ಟಿ, ನರೇಂದ್ರ ಮೋದಿ ಬೇಕೋ ಬೇಡವೋ ಎನ್ನುವ ಪ್ರಶ್ನೆ ಕೇಳಿದರೆ, ಕಾಂಗ್ರೆಸ್ ರಾಹುಲ ಗಾಂಧಿಯವರ ಹೆಸರನ್ನು ಪರೋಕ್ಷವಾಗಿ ಪ್ರಸ್ತಾಪಿಸಿತ್ತಷ್ಟೇ. ಹಲವು ಹತ್ತು ಸಹಸ್ರ ಕೋಟಿ ರುಪಾಯಿಗಳ ವೆಚ್ಚದ ಅನಂತರವೂ ಮತದಾರ ಸಮುದಾಯಗಳ ಮುಂದೆ ಗಂಭೀರವಾದ ಯಾವ ವಿಚಾರವೂ ಇರಲಿಲ್ಲ.
ಚುನಾವಣೆ ಪ್ರಣಾಳಿಕೆಗಳನ್ನು ಪಕ್ಷಗಳೇ ಗಂಭೀರವಾಗಿ ಪರಿಗಣಿಸಿರಲಿಲ್ಲ. ಜನಸಾಮಾನ್ಯ ವರ್ಗಗಳಿಗೆ ಪ್ರಣಾಳಿಕೆಯ ಬಿಡುಗಡೆಯ ಚಿತ್ರ ನೋಡಲಿಕ್ಕೆ ಮಾಧ್ಯಮದಲ್ಲಿ ಸಿಕ್ಕಿತ್ತು ಅಷ್ಟೇ. ಪ್ರಣಾಳಿಕೆ ಒಂದು ದಾಖಲೆ. ಪ್ರಕಟಣೆಯ ಅನಂತರ ಅಲ್ಲಿಗೇ ಅದರ ಉಪಯುಕ್ತತೆ ಮುಗಿಯಿತೆಂದೇ ಭಾವಿಸಬೇಕು.
ಚುನಾವಣೆ ಆಯೋಗ, ಈ ಬಾರಿ ಪ್ರಣಾಳಿಕೆಗಳನ್ನು ಅಧ್ಯಯನ ಮಾಡಿ, ಅದರಲ್ಲಿ ಕಾರ್ಯಸಾಧುವಲ್ಲದ ವಚನಗಳೇನಾದರೂ ಇದ್ದರೆ, ಅದನ್ನು ತೆಗೆದು ಹಾಕುವುದಾಗಿ ಹಿಂದೆ ಹೇಳಿತ್ತು. ರಾಜಕೀಯ ಪಕ್ಷಗಳಿಗೆ ಅಂತಹ ಆದೇಶ ಹೋಗಿತ್ತು. ಆ ಕೆಲಸ ಆಗಲೇ ಇಲ್ಲ. ಆ ವೈಫಲ್ಯವನ್ನು ಆಯೋಗ ಬುಧವಾರ ಅಧಿಕೃತವಾಗಿ ಒಪ್ಪಿಕೊಂಡಿದೆ.
ಜನಸಂಪರ್ಕ ರ್ಯಾಲಿಗಳು, ಟಿ.ವಿ. ವಾಹಿನಿಗಳಲ್ಲಿನ ಚರ್ಚೆ - ವಿಶ್ಲೇಷಣೆ - ಜಗಳ, ಮುದ್ರಣ ಮಾಧ್ಯಮದಲ್ಲಿ ಪುಟಗಟ್ಟಲೆ ಅಭಿಪ್ರಾಯಗಳ ಪ್ರಕಟಣೆಯ ಪರಿಣಾಮ ಒಂದೇ ಒಂದು; ಸುಲಭವಾಗಿ ಮೊಳಗಿಸಲು ಸಾಧ್ಯವಾಗುವಂತೆ ಘೋಷಣೆಗಳ ರಚನೆ.
ದೇಶ ಆರ್ಥಿಕ ದಿವಾಳಿಯತ್ತ ಸಾಗಿರುವುದು, ನಿಸರ್ಗ ಸಂಪತ್ತಿನ ಲೂಟಿ ನ್ಯೂಕ್ಲಿಯರ್ ನೀತಿ, ವಿದೇಶಾಂಗ ನೀತಿ, ಬಂಡವಾಳ ಹೂಡಿಕೆ, ಸರ್ಕಾರಿ ಉದ್ಯಮ ವಲಯದ ಜವಾಬ್ದಾರಿ. ಆಡಳಿತ ಯಂತ್ರ ಹಾಗೂ ಸಿಬ್ಬಂದಿಯ ಸುಧಾರಣೆ, ಕುಸಿದು ಬಿದ್ದಿರುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ - ಉಹೂಂ, ಇಂತಹ ವಿಷಯಗಳ ಚರ್ಚೆಯೇ ಆಗಲಿಲ್ಲ. ಅಲ್ಲಿ - ಇಲ್ಲಿ ನಿರುದ್ಯೋಗದ ಪ್ರಸ್ತಾಪ ಆಗಿರಬಹುದಷ್ಟೇ.
ಬಹುತೇಕ ರಾಜ್ಯಗಳಲ್ಲಿ ಹಳಬರು ಚುನಾವಣೆ ಕಣದಿಂದ ದೂರವಾಗಿದ್ದಾರೆ. ಹೊಸ ತಲೆಮಾರಿನ ನಾಯಕರು ಹೊಸದಾಗಿ ಏನನ್ನೂ ಹೇಳುತ್ತಿಲ್ಲ. ಇನ್ನು ದೇಶದಲ್ಲಿ ಬದಲಾವಣೆ ಬರುವುದಾದರೂ ಎಲ್ಲಿಂದ?
ಎಲ್ಲ ಪಕ್ಷಗಳಿಗೂ ಜನರನ್ನು ಆಕರ್ಷಿಸಲು ಇದ್ದ ಅಸ್ತ್ರಗಳೂ ಹಳೆಯದೇ. ಕೊಡುಗೆ - ಉಡುಗೊರೆ (ಅದು ಭ್ರಷ್ಟಾಚಾರದ ಹೆದ್ದಾರಿಯೂ ಹೌದು) ಜಾತಿ (ಸಮುದಾಯಗಳ ಮೇಲ್ಪದರಗಳಿಗೆ ಸಕಲ ಸೌಲಭ್ಯ). ಬೇರೆ ಚಿಂತನೆಯೇ ಇಲ್ಲ.
ನಿಜ. ದೇಶದ ಆರ್ಥಿಕ - ಸಾಮಾಜಿಕ ನೀತಿಯನ್ನು ಸಂವಿಧಾನದ ಚೌಕಟ್ಟಿನಲ್ಲೇ ಜಾರಿಗೊಳಿಸಬೇಕಾಗಿರುವುದರಿಂದ ಹೊಚ್ಚ ಹೊಸ ಆವಿಷ್ಕಾರಗಳಿಗೆ ಅವಕಾಶ ಕಡಿಮೆ ಇರಬಹುದು. ಆದರೂ ಸಮುದಾಯಗಳ ಮುಂದೆ ಆ ವಿಚಾರದಲ್ಲಾದರೂ ಮುಕ್ತ ಚರ್ಚೆಯಾಗಬೇಕಲ್ಲ.
ಈಗಲೇ ಮುಂದಿನ ಲೋಕಸಭೆಯ ಸ್ವರೂಪದ ಚಿತ್ರವನ್ನು ಊಹಿಸಿಕೊಳ್ಳುವುದು ಕಷ್ಟ. ಆದರೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯನ್ನು ನಿರೀಕ್ಷಿಸುವಂತಿಲ್ಲ. ಪರಸ್ಪರ ದ್ವೇಷಿಸುವ ಎರಡು ರಾಜಕೀಯ ಶಿಬಿರಗಳ ಸಂಘರ್ಷದ ಚಿತ್ರವೇ ಮತ್ತೆ ಮೂಡಲೂಬಹುದು. ಪಕ್ಷಗಳು ಅದಲು - ಬದಲಾಗಬಹುದು. ಆಗದೇ ಇರಲೂಬಹುದು. ವ್ಯವಸ್ಥೆಯ ಮಾರ್ಪಾಟಿನ ವಿಚಾರದಲ್ಲಿ ಹೆಚ್ಚಿನ ಆಶಾವಾದಕ್ಕೆ ಅವಕಾಶ ಕಂಡುಬರುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.