ಆರ್.ಟಿ.ಇ ದಿಕ್ಕು ತಪ್ಪಿತೇ?
ಶಿಕ್ಷಣ ಹಕ್ಕು ಕಾಯಿದೆಯ ಮೂಲ ರೂಪವನ್ನು ಅಧಿಕಾರಿಗಳು ಮತ್ತು ಶಾಲಾ ಆಡಳಿತ ಮಂಡಳಿಯವರೊಡಗೂಡಿ ಬದಲಾಯಿಸುತ್ತಿರುವ ಸಂಗತಿಗಳು ದಿನೇ ದಿನೇ ಹೊರಬರುತ್ತಿವೆ ಹಾಗೂ ಆರ್.ಟಿ.ಇ ಬಗೆಗಿನ ಸಂಶಯ ಜನತೆಯಲ್ಲಿ ಮನೆಮಾಡಿದೆ. ಶಿಕ್ಷಣ ಹಕ್ಕು ಕಾಯಿದೆಯ ಮುಖ್ಯ ಅಂಶಗಳನ್ನು ದಾರಿ ತಪ್ಪಿಸಿರಬಹುದು ಎಂಬ ದಟ್ಟ ವದಂತಿ ಜನರ ಬಾಯಿಂದ ಬಾಯಿಗೆ ಹರಡುತ್ತಿದೆ, ಅಂದ ಮಾತ್ರಕ್ಕೆ ಇದು ಸುಳ್ಳಂತೂ ಅಲ್ಲವೇ ಅಲ್ಲ ಎನ್ನಬಹುದು.
ಶಾಲೆಯಲ್ಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲೇ ತಿದ್ದುಪಡಿ ಮಾಡಿ ಆರ್.ಟಿ.ಇ ಅಡಿ ಬರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿತಗೊಳಿಸಿಕೊಟ್ಟು ಶಾಲಾ ಆಡಳಿತ ಮಂಡಳಿಯ ಕೃಪಾಕಟಾಕ್ಷಕ್ಕೆ ಒಳಗಾಗಿರುವ ಅಧಿಕಾರಿಗಳು ಆರ್.ಟಿ.ಇ ಕಾಯ್ದೆಗೆ ಬಹುದೊಡ್ಡ ಪೆಟ್ಟು ಕೊಟ್ಟಿದ್ದಾರೆ.
ಇನ್ನು ಆಯ್ಕೆ ಪದ್ಧತಿಯಲ್ಲಿ ಭಾರಿ ಗೊಂದಲ ಮತ್ತು ಗೋಲ್‌ಮಾಲ್‌ಗಳೇ ನಡೆದುಹೋಗಿವೆ. ಇದರ ಬಗ್ಗೆ ದೂರು ನೀಡಿದರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಉತ್ತರವಂತೂ ಮತ್ತೆ ನಾವು ಅವರೆಡೆಗೆ ತಿರುಗದಂತಿರುತ್ತದೆ. ನೊಂದ ಪೋಷಕ ಬೇಸತ್ತು ಆರ್.ಟಿ.ಇ ನಮ್ಮ ಪಾಲಿಗೆ ಅಲ್ಲ ಅದು ಹಣವುಳ್ಳವರ ಪಾಲಿಗೆ ಎಂದು ಗೊಣಗುತ್ತಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಳಿ ಸುಳಿದಾಡುವುದನ್ನು ಗಮನಿಸಿದ್ದೇನೆ.
ಒಟ್ಟಾರೆ ಹೇಳುವುದಾದರೆ, ಈ ಆರ್.ಟಿ.ಇ ಕಾಯ್ದೆಯ ಸದುಪಯೋಗ ಅಧಿಕಾರಗಳ ಪಾಲಿಗಾದರೆ, ಅರ್.ಟಿ.ಇ ಗೋಸ್ಕರ ಲಂಚ ನೀಡಿ ದಾಖಲೆ ಹೊಂದಿಸಿಕೊಂಡು ಆರ್.ಟಿ.ಇಗೆ ಅರ್ಜಿ ಸಲ್ಲಿಸಿದ ಪೋಷಕರಿಗೆ ಮಾತ್ರ ನಿರಾಸೆ. ಇನ್ನು ಕೆಲವರು ಏನಾದರೂ ಆಗಲಿ ಆರ್.ಟಿ.ಇ ಅಡಿಯಲ್ಲಿ ಸೀಟು ಪಡೆಯಲೇಬೇಕೆಂಬ ಹಟಕ್ಕೆ ಬಿದ್ದು ಪಡೆದಿದ್ದಾರೆ. ಅದು ಹೇಗೆ ಎಂಬುದು ಮಾತ್ರ ಚಿದಂಬರ ರಹಸ್ಯ.
ದಯಮಾಡಿ ಸಂಬಂಧಪಟ್ಟವರು 2014-2015 ನೇ ಸಾಲಿನ ಆರ್.ಟಿ.ಇ ಅಡಿಯಲ್ಲಿ ಆಯ್ಕೆಗೊಂಡ ಸೀಟುಗಳ ಮರುಪರಿಶೀಲನೆ ಹಾಗೂ ತನಿಖೆಯ ಅಗತ್ಯವಿದೆ ಎಂಬುದನ್ನು ಮನಗಾಣಬೇಕು.
-ಕೌಡ್ಲೆರವಿ, ಬೆಂಗಳೂರು
ವಿದ್ಯಾರ್ಥಿಗಳ ಆತಂಕ ನಿವಾರಿಸಿ
ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿ ಒಂದಲ್ಲ ಒಂದು ತಪ್ಪುಗಳನ್ನು ಮಾಡುತ್ತಾ ಎಡವುತ್ತಿರುವುದು ವಿಪರ್ಯಾಸದ ಸಂಗತಿ. ಫಲಿತಾಂಶ ಪ್ರಕಟಿಸಿದಾಗ ಕೆಲವು ವಿದ್ಯಾರ್ಥಿಗಳ ಅಂಕದಲ್ಲಿ ವ್ಯತ್ಯಾಸವಾದಾಗ, ಮೌಲ್ಯಮಾಪಕರನ್ನು ತೋರಿಸಿ ತಪ್ಪನ್ನು ಮುಚ್ಚಿಕೊಳ್ಳುತ್ತದೆ. ಕಳೆದವಾರ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ವಿಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಪ್ರಶ್ನೆಗಳು ದೋಷದಿಂದ ಕೂಡಿರುವುದು ಸುದ್ದಿಯಾಗಿದೆ. ಈ ತಪ್ಪಿನಿಂದ ವಿದ್ಯಾರ್ಥಿಗಳು ಆಂತಂಕಕ್ಕೆ ಒಳಗಾಗಿದ್ದಾರೆ, ಹಾಗೆ ಕಡಿಮೆ ಅಂಕ ಬೀಳುವ ಭೀತಿಯಲ್ಲಿದ್ದಾರೆ. ಪ್ರಶ್ನೆಗಳನ್ನು ಭಾಷಾಂತರ ಮಾಡುವಾಗ ಆದ ಈ ಪ್ರಮಾದ ವಿದ್ಯಾರ್ಥಿಗಳ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಪರೀಕ್ಷಾ ಮಂಡಳಿ ತಪ್ಪನ್ನು ಸರಿಪಡಿಸಿ, ಮುಂದೆ ಈ ರೀತಿಯ ಪ್ರಮಾದಗಳಾಗದಂತೆ ಎಚ್ಚರ ವಹಿಸಬೇಕು.
-ಮಲ್ಲಿಕಾರ್ಜುನಗೌಡ, ನರಗುಂದ, ಗದಗ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

