ತಪ್ಪಾಯ್ತು ತಿದ್ಕೋತೀವಿ
ಶಿಕಾರಿಪುರದಿಂದ ಆರ್.ಸಿ. ಪರಶುರಾಮ ಅವರು ಬರೆಯುತ್ತಾರೆ- 'ಏ.2ರ ಮುಖಪುಟದಲ್ಲಿ 'ಮೋದಿ ಪ್ರಧಾನಿಯಾದರೆ ವೀಸಾ ರದ್ದು' ಎಂಬ ಶೀರ್ಷಿಕೆ ಇದೆ. ಆದರೆ ಈ ಸುದ್ದಿಯ ವಿಶ್ಲೇಷಣೆಯಲ್ಲಿ, 'ಮೋದಿಗೆ ವೀಸಾ ನಿರಾಕರಿಸಿದ್ದ ಅಮೇರಿಕಾ ಅವರು ಪ್ರಧಾನಿಯಾದ್ರೆ ವೀಸಾ ನಿಷೇಧ ತನ್ನಿಂತಾನೇ ರದ್ದಾಗುತ್ತದೆ ಎಂದು ಹೇಳಿದೆ' ಎಂದಿದೆ. ಶೀರ್ಷಿಕೆ ಮತ್ತು ಅದರ ಸುದ್ದಿಯನ್ನು ನೋಡಿದರೆ ಒಂದಕ್ಕೊಂದು ತದ್ವಿರುದ್ಧವಾದಂತಿದೆ. ಹಾಗಾಗಿ ಇದರ ಶೀರ್ಷಿಕೆಯು ಮೋದಿ ಪ್ರಧಾನಿಯಾದರೆ ವೀಸಾ ನಿಷೇಧ ರದ್ದು ಎಂದಾಗಬೇಕಿತ್ತು' ಎಂದಿದ್ದಾರೆ.
ಈ ಸುದ್ದಿಯ ಕುರಿತು ಇನ್ನೂ ಹಲವು ಓದುಗರು ಪತ್ರ ಬರೆದಿದ್ದಾರೆ. ಶೀರ್ಷಿಕೆಯಲ್ಲಿ ನಿಷೇಧ ಪದ ಬಿಟ್ಟುಹೋಗಿದ್ದರಿಂದ ಆಭಾಸವಾಗಿದೆ.
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಪತ್ರಿಕೆಗಳಲ್ಲಿ ಪದಗಳ ಬಗೆಗಿನ ಸರಿಯಾದ ಜ್ಞಾನದ ಕೊರತೆಯಿಂದಾಗಿ ಆಗಾಗ ತಪ್ಪಾಗಿ ಬಳಕೆಯಾಗುತ್ತಿರುವ ಪದಗಳಲ್ಲಿ 'ವಿನಾ' ಎಂಬ ಪದವೂ ಒಂದಾಗಿದೆ. ಮಾ.30 ಪುಟ 6ರಲ್ಲಿ ರಾಯಚೂರು ಅಭ್ಯರ್ಥಿ ಡಿ.ವಿ. ನಾಯಕರ ಮಾತುಗಳಲ್ಲಿ 'ವಿನಃ' ಎಂಬ ಪದ ಬಳಕೆಯಿದೆ. 'ವಿನಾ' ಎಂಬುದು ಸಂಸ್ಕೃತ ಪದ. 'ವಿನಃ' ಎಂಬ ಪದವಿಲ್ಲ.'
'ಪುನಃ ಎಂಬ ಪದದೊಂದಿಗೆ ವಿಸರ್ಗವಿದೆ. 'ವಿನಾ' ಎಂಬಲ್ಲಿ ವಿಸರ್ಗವಿಲ್ಲ. ವಿನಹ, ವಿನಃ ಎಂದು ಅಜ್ಞಾನದಿಂದ ತಪ್ಪು ಬಳಕೆ ರೂಢಿಯಲ್ಲಿದೆ. 'ಕನ್ನಡಪ್ರಭ' ಪತ್ರಿಕೆಯು ತನ್ನ ಸ್ಟೈಲ್ಷೀಟ್ನಲ್ಲಿ ಈ ಪದವನ್ನು 'ವಿನಾ' ಎಂದು ಬದಲಾಯಿಸಿಕೊಂಡರೆ ತನ್ನಿಂತಾನೇ ತಿದ್ದುಪಡಿಯಾಗುತ್ತದೆ.'
'ಭಾರತ ಮಾತಾಕೀ ಜೈ ಎಂಬುದನ್ನು '....ಮಾತಾಕಿ ಜೈ' ಎಂಬ ಬಳಕೆ ಸರಿಯಲ್ಲ. ಇದೇ ದಿನ ಲಘು ಬರಹದಲ್ಲಿ ಭಾರತ ಮಾತಾಕಿ ಜೈ ಎಂಬ ಬಳಕೆ ಇದೆ. ಸತ್ಯಮೇವ ಜಯತೇ ಎಂಬುದನ್ನೂ 'ಜಯತೆ' ಎಂದು ಹ್ರಸ್ವವಾಗಿ ಬಳಸಬಾರದು. 'ವಂದೇಮಾತರಮ್' ಎಂಬ ಘೋಷಣೆಯನ್ನು 'ವಂದೇಮಾತರಂ' ಎಂದು ತಪ್ಪಾಗಿ ಬಳಸುವ ರೂಢಿಯನ್ನು ಗಮನಿಸಬೇಕು. ಪತ್ರಿಕೆಯ ಸ್ಟೈಲ್ಷೀಟ್ನಲ್ಲಿ ಸಾಧು ರೂಪವನ್ನು ಅಳವಡಿಸಿಕೊಂಡರೆ ವರದಿಗಳಲ್ಲಾಗುವ ಈ ದೋಷಗಳು ಕಡಿಮೆಯಾಗಬಲ್ಲುದು.'
'ಮಹಾಯುದ್ಧ ಬಲಿಷ್ಠ ಭಾರತ'ಕ್ಕಾಗಿ ಶೀರ್ಷಿಕೆಯೊಂದಿಗೆ ಚುನಾವಣೆಯ ಲಾಂಛನವಾಗಿ ಬಳಸಿದ ಚಿತ್ರದಲ್ಲಿ ಒಂದು ಕ್ಷಮಾರ್ಹವಲ್ಲದ ತಪ್ಪಾಗಿದೆ. ಗುಣಿಸು (ಳ) ಆಕಾರದಲ್ಲಿರುವ ಖಡ್ಗಗಳ ಮುಂಬದಿಯಲ್ಲಿರಿಸಿದ ಗುರಾಣಿಯಲ್ಲಿ ಮೂಡಿದ ಮತಮುದ್ರೆಯ ಅಲಗುಗಳು ಪ್ರದಕ್ಷಿಣಾಕಾರ ವಾಗಬೇಕಾದ್ದು ಅಪ್ರದಕ್ಷಿಣಾಕಾರವಾಗಿದೆ. ಸ್ವಸ್ತಿಕವನ್ನು ಹೋಲುವ ಮತಮುದ್ರೆಯ ಪ್ರದಕ್ಷಿಣಾಕಾರದಲ್ಲಿರಬೇಕು ವಿನಾ, ಕ.ಪ್ರ.ದಲ್ಲಿರುವಂತೆ ಅಲ್ಲ. ತಿದ್ಕೋತೀರಾ? ನಾನು ತಿದ್ದಿಕೊಂಡಿದ್ದೇನೆ' ಎಂದಿದ್ದಾರೆ.
ಇವತ್ತಿಗೆ ನಮ್ಮ ರಾಜ್ಯದಲ್ಲಿ ಚುನಾವಣೆಯ ಗೌಜು ಮುಕ್ತಾಯ. ರಾಜಕೀಯ ಸುದ್ದಿಯ ಭರಾಟೆಯೂ ಕಡಿಮೆಯಾಗುತ್ತದೆ. ಆದರೂ ದೇಶದ ಉಳಿದ ಪ್ರದೇಶಗಳಲ್ಲಿ ಚುನಾವಣೆ ಇರುತ್ತದೆ. ಅವುಗಳ ಸುದ್ದಿಯನ್ನೂ 'ಮಹಾಯುದ್ಧ ಬಲಿಷ್ಠ ಭಾರತಕ್ಕಾಗಿ' ಎಂಬ ಹೆಸರಿನಲ್ಲಿಯೇ ಪ್ರಕಟಿಸಲಿದ್ದೇವೆ. ಆಗ ಈ ತಪ್ಪನ್ನು ಸರಿಪಡಿಸಿ ಪ್ರಕಟಿಸುವ ಪ್ರಯತ್ನ ಮಾಡುತ್ತೇವೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

