ಐಪಿಎಲ್- ಅಧೋಗತಿಗೆ ಕ್ರಿಕೆಟ್
ಇನ್ನೊಂದು ಇಂಡಿಯಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ತಂಡಗಳು, ಕ್ರೀಡಾ ಪಟುಗಳ ಹರಾಜು ಪ್ರಕ್ರಿಯೆ ಆರಂಭವಾಗುವ ಸಮಯದಲ್ಲೇ, ಹಿಂದಿನ ಐಪಿಎಲ್ ವ್ಯವಹಾರ ಕುರಿತಂತೆ ತನಿಖೆ ನಡೆಸಿದ ಸುಪ್ರೀಮ್ ಕೋರ್ಟ್ ನೇಮಿಸಿದ್ದ ಮುದ್ಗಲ್ ಸಮಿತಿಯ ವರದಿ ಪ್ರಕಟವಾಗಿದ್ದು ಒಳ್ಳೆಯದೇ ಆಯಿತು.
ಈಗ ಐಪಿಎಲ್ ಟೂರ್ನಿಯನ್ನಂತೂ ರದ್ದು ಮಾಡುವಂತಿಲ್ಲ. ಅದು ದೇಶದ ಜನ ಜೀವನದ ಒಂದು ಭಾಗವೇ ಆಗಿಬಿಟ್ಟಿದೆ. ಹಿಂದಿನ ಬಾರಿ ನಡೆದ ತಪ್ಪುಗಳ ಪುನರಾವರ್ತನೆಯಾಗದಿರುವಂತೆ ನೋಡಿಕೊಳ್ಳಲು ಅಗತ್ಯವಾದ ನೈತಿಕ ಕಾವಲುಭಟರ ಪಡೆಯ ನೇಮಕಕ್ಕೆ ತನಿಖಾ ಸಮಿತಿ ಮಾಡಿರುವ ಶಿಫಾರ್ಸನ್ನು ಜಾರಿಗೆ ತರಲೇಬೇಕು.
ನಿಜ. ಮುದ್ಗಲ್ ಸಮಿತಿ ಹೆಸರಿಸಿರುವ ದ್ರಾವಿಡ್, ಸಚಿನ್, ಗಂಗೂಲಿ, ಲಕ್ಷ್ಮಣ್ ಅವರಷ್ಟೇ ನೈತಿಕ ಪಟುಗಳು ಎಂದೇನೂ ಅಲ್ಲ. ನೈತಿಕ ಕಾವಲುಭಟರ ಸಮಿತಿಗೆ ಯಾರನ್ನೇ ನೇಮಿಸಲಿ, ಅವರು ಶುದ್ಧ ಹಸ್ತರೂ, ಸ್ವಚ್ಛ ಮನಸ್ಸಿನವರೂ ಆಗಿರಬೇಕು. ಅದು ಸದ್ಯದ ತುರ್ತಿನ ವಿಚಾರ. ಸಜ್ಜನರ ಕ್ರೀಡೆ ಎಂದು ಹೆಸರು ಪಡೆದಿರುವ ಕ್ರಿಕೆಟ್ ಪ್ರಪಂಚದಲ್ಲಿ ಮತ್ತೆ ಸಜ್ಜನಿಕೆ- ವಿಜೃಂಭಿಸುವಂತೆ ಮಾಡಲು ಸೂಕ್ತ ಕ್ರಮಗಳನ್ನು ಕುರಿತು ಆಸಕ್ತರ ಅಭಿಪ್ರಾಯಗಳನ್ನು ಪಡೆಯಲೇಬೇಕು.
ಮುದ್ಗಲ್ ಸಮಿತಿಯ ತನಿಖಾ ವರದಿಯಂತೆ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ, ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಉಪಾಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಗುರುನಾಥ ಮೇಯಪ್ಪನ್ ಇಂಡಿಯಾ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಬಾಜಿ ಕಟ್ಟಿದ್ದು, ತನ್ನಲ್ಲಿದ್ದ ರಹಸ್ಯ ಮಾಹಿತಿಯನ್ನು ಬೇಕಾದವರಿಗೆ ಒದಗಿಸಿದ್ದು ರುಜುವಾತಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲಿಕರೇ ಶ್ರೀನಿವಾಸನ್ ಅವರೇ, ಇಲ್ಲಿ ನಿಷ್ಪಕ್ಷಪಾತವಾಗಿ ಕ್ರಿಕೆಟ್ನ ಅಭಿವೃದ್ಧಿಗೆ ಶ್ರಮಿಸಬೇಕಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿತೈಷಿಯಾಗಿಯೂ ಕೆಲಸ ಮಾಡಿರುವಂತಿದೆ. ಆ ಆರೋಪವನ್ನು ಸಮಿತಿ ಮಾಡಿಲ್ಲ. ಆದರೆ ಸಮಿತಿಯ ವರದಿಯಲ್ಲಿ ಈ ಪ್ರಕರಣದಲ್ಲಿ ಆಸಕ್ತ ಹಿತಗಳ ನಡುವಣ ಸಂಘರ್ಷದ ಪ್ರಸ್ತಾಪವೂ ಇದೆ. ಈಗ ಎಂ.ಎಸ್. ಧೋನಿ, ಇಂಡಿಯಾ ಸಿಮೆಂಟ್ಸ್ ಉಪಾಧ್ಯಕ್ಷ ಶ್ರೀನಿವಾಸನ್ ಅಥವಾ ಮೇಯಪ್ಪನ್ ಅವರ ವಿರುದ್ಧ "ಮ್ಯಾಚ್ ಫಿಕ್ಸಿಂಗ್" ಆರೋಪ ರುಜುವಾತಾಗಿದೆ ಎಂದು ಸಮಿತಿ ಹೇಳಿಲ್ಲ. ಆದರೆ ಆ ಆರೋಪ ಕುರಿತಂತೆ ಆಳವಾದ ತನಿಖೆ ಅಗತ್ಯ ಎಂದು ಹೇಳಿ ವಿಷಯವನ್ನು ಮುಕ್ತವಾಗಿಯೇ ಉಳಿಸಿದೆ.
ಒಂದು ವರ್ಷದಲ್ಲಿ ಕ್ರಿಕೆಟ್ 1500 ಕೋಟಿ ರುಪಾಯಿಗಳಿಂದ ಹಿಡಿದು 2000 ಕೋಟಿ ರುಪಾಯಿಗಳವರೆಗೂ ಜಾಹಿರಾತಿನ ವರಮಾನವನ್ನು ಸೃಷ್ಟಿಸುತ್ತದೆ. ಇದೆಲ್ಲವೂ ಸಾರ್ವಜನಿಕರ ಹಣವೇ. ಇಷ್ಟು ದೊಡ್ಡ ಪ್ರಮಾಣದ ಜಾಹಿರಾತು ವರಮಾನವನ್ನು ಸೃಷ್ಟಿಸುವ ಯಾವುದೇ ವ್ಯವಹಾರದಲ್ಲೇ ಆಗಲಿ ನೈತಿಕ ಕಾವಲುಗಾರ ವ್ಯವಸ್ಥೆಯ ಅಗತ್ಯ ಇದ್ದೇ ಇದೆ.
ಸುಪ್ರೀಮ್ ಕೋರ್ಟ್ ನೇಮಿಸಿದ್ದ ತನಿಖಾ ವರದಿ ಪ್ರಕಟವಾಗಿದ್ದು ಸೋಮವಾರ. ಮಾಧ್ಯಮ ಪ್ರಪಂಚದಲ್ಲಿ ಸಾಕಷ್ಟು ವಿವರವಾಗಿಯೇ ವರದಿಯಾಗಿದೆ. ಟಿ.ವಿ. ವಾಹಿನಿಗಳಲ್ಲಿ ಚರ್ಚೆಗಳೂ ನಡೆದಿವೆ. ಕ್ರೀಡಾ ಪ್ರಪಂಚದಲ್ಲಿ ಅವ್ಯವಹಾರ ನಡೆಯುವುದು ಅಪರೂಪವೇನೂ ಅಲ್ಲ. ಆ ಪ್ರಪಂಚದ ಅಕ್ರಮಗಳ ತಡೆಗೆ ಒಂದು ಕಾಯಿದೆಯ ಅಗತ್ಯ ಕಂಡುಬಂದಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

