ಅಮಾನ್ಯಗೊಳ್ಳುವ ನೋಟುಗಳು
ಭಾರತೀಯ ರಿಸರ್ವ್ ಬ್ಯಾಂಕ್ನ ಸೂಚನೆಯಂತೆ ಮುಂದಿನ ಏಪ್ರಿಲ್ 1ರಿಂದ, 2005ರವರೆಗೆ ಮುದ್ರಿತವಾದ ಎಲ್ಲಾ ಮೌಲ್ಯದ ನೋಟುಗಳು ಸಾಮಾನ್ಯ ದೈನಂದಿನ ವ್ಯವಹಾರದಲ್ಲಿ ಅಮಾನ್ಯಗೊಳ್ಳುತ್ತವೆ. ವಿನಿಮಯ ಕಷ್ಟವಾದ ಸಂದರ್ಭಗಳಲ್ಲಿ ಹೆಚ್ಚಾಗಿ ಕಪ್ಪುಹಣವಿರುವೆಡೆ ಅಮಾನ್ಯವಾಗುವ ನೋಟುಗಳು ದೇವಸ್ಥಾನದ ಹುಂಡಿಗಳನ್ನು ಸೇರುವ ಸಾಧ್ಯತೆಗಳಿವೆ. ಈ ನೋಟುಗಳೂ ಸಹ ಸರ್ಕಾರದಿಂದ ಮುದ್ರಿತವಾದ ಅಧಿಕೃತ ನೋಟುಗಳಾದ್ದರಿಂದ, ದೇವಸ್ಥಾನಗಳು ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ಸಂಗ್ರಹವಾಗುವ ಈ ನೋಟುಗಳಿಗೆ ಮಾನ್ಯತೆ ಅವಧಿಯನ್ನು ಈ ವರ್ಷದ ಅಂತ್ಯದವರೆಗೆ ವಿಸ್ತರಿಸಿದಲ್ಲಿ, ಈ ಅಧಿಕೃತ ಹಣವನ್ನು ಈ ಸಂಸ್ಥೆಗಳು, ಸೂಕ್ತ ಲೆಕ್ಕಗಳನ್ನಿಡುವ ಮೂಲಕ ತಮ್ಮ ತಮ್ಮ ರಾಜ್ಯದಲ್ಲಿನ ಶಾಲೆಗಳು, ಆಸ್ಪತ್ರೆಗಳಿಗೆ, ಹಳ್ಳಿಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು, ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವು ನೀಡಲು ವ್ಯಯಿಸಲು ಸಹಾಯವಾಗಬಹುದು. ಅಲ್ಲದೆ, ರೂ.100ರವರೆಗಿನ ವಿವಿಧ ಮೌಲ್ಯದ ನೋಟುಗಳು ದಿನಸಿ, ತರಕಾರಿ ಖರೀದಿಯಂತಹ ದಿನನಿತ್ಯದ ವ್ಯವಹಾರದಲ್ಲಿ ಹೆಚ್ಚಾಗಿ ಬಡವರು ಹಾಗೂ ಮಧ್ಯಮವರ್ಗದವರ ಕೈಯಲ್ಲಿ ಹೆಚ್ಚಾಗಿ ಚಲಾವಣಿಯಾಗುತ್ತಿದ್ದು, ಪ್ರತಿ ಬಾರಿಯೂ ಮುದ್ರಿತ ವರ್ಷವನ್ನು ಪರೀಕ್ಷಿಸುವುದು ಸಾಧ್ಯವಾಗದ ಕಾರಣ ಜನಸಾಮಾನ್ಯನ ಹಿತದೃಷ್ಟಿಯಿಂದ ಇವುಗಳ ಚಲಾವಣೆಯನ್ನು ಈ ವರ್ಷದ ಅಂತ್ಯದವರೆಗೆ ಅಥವಾ ಮುಂದಿನ ಮಾರ್ಚ್ವರೆಗೆ ಮುಂದುವರಿಸಿ, ಈ ಮಧ್ಯೆ ಇವುಗಳ ಬದಲಾಗಿ, ಸುಲಭವಾಗಿ ಗುರ್ತಿಸಲು ಅನುವಾಗುವಂತೆ ಹೊಸ ಬಣ್ಣ ಹಾಗೂ ವಿನ್ಯಾಸದ ನೋಟುಗಳನ್ನು ಬಿಡುಗಡೆ ಮಾಡುವುದು ಸೂಕ್ತ ಹಾಗೂ ಅಗತ್ಯವೆಂಬುದು ನನ್ನ ಅಭಿಪ್ರಾಯ. ಸಂಬಂಧಪಟ್ಟವರು ಸೂಕ್ತವಾಗಿ ಸ್ಪಂದಿಸುವರೇ?
-ಕೆ.ಟಿ.ಕಣ್ಣನ್, ಬೆಂಗಳೂರು
ಸಂಸದರ ದುಂಡಾವರ್ತನೆ
ಸಂಸತ್ನಲ್ಲಿ ಮತ್ತು ವಿಧಾನ ಸಭೆಗಳಲ್ಲಿ ಕೈ ಕೈ ಮಿಲಾಯಿಸುವುದು, ಮೈಕ್ ಕಿತ್ತುಕೊಳ್ಳುವುದು, ಭಾಷಣಕ್ಕೆ ಅಡ್ಡಿ ಮಾಡುವುದು ಇವುಗಳು ಹೊಸದೇನಲ್ಲ. ಆದರೆ ಗುರುವಾರ ಸಂಸದರು ತೋರ್ಪಡಿಸಿದ ದುರ್ನಡತೆ ಹಿಂದೆ ನಡೆದಿರುವ ಅನೇಕರ ಕಠೋರಕಾರಿ ಮತ್ತು ಅವಹೇಳನಕಾರಿ ನಡವಳಿಕೆಗಳನ್ನು ಮರೆಯುವಂತೆ ಮಾಡಿದೆ. ಕಾನೂನು ರೂಪಿಸುವಂತಹ ಸಂಸದರು, ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಚಾಕು ಮತ್ತು ಪೆಪ್ಪರ್ ಸ್ಪ್ರೇಯಂತಹ ಅಪಾಯಕಾರಿ ವಸ್ತುಗಳನ್ನು ಸಂಸತ್ ಆವರಣಕ್ಕೆ ಸಂಸದರು ತೆಗೆದುಕೊಂಡು ಹೋಗಿದ್ದಾರೆಂದರೆ ಮನೆಯಿಂದ ಹೊರಟಾಗಲೇ ಯಾವುದೇ ಮಟ್ಟಕ್ಕೂ ಇಳಿಯುವುದಕ್ಕೆ ಅವರು ಸಿದ್ಧವಾಗಿದ್ದರೆಂದು ಊಹಿಸುವುದು ಕಷ್ಟವಲ್ಲ. ತೆಲಂಗಾಣ ರಾಜ್ಯದ ಪರ ಹಾಗೂ ವಿರೋಧಿ ನಡುವಿನ ಬಣಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಸಾಧನೆ ಮಾಡುವಲ್ಲಿ ಪ್ರಧಾನಿ ಹಾಗೂ ಯುಪಿಎ ಸರ್ಕಾರವು ಸಂಪೂರ್ಣವಾಗಿ ವಿಫಲಗೊಂಡಿರುವುದಕ್ಕೆ ಸಂಸದರ ಕೋಲಾಹಲವೇ ಸಾಕ್ಷಿ. ತಮ್ಮ ಪಕ್ಷದವರೇ ಆದ ಸಂಸದರನ್ನೂ ನಿಯಂತ್ರಿಸುವಲ್ಲಿ ಕಾಂಗ್ರೆಸ್ ನಾಯಕತ್ವ ಹಿಂದೆ ಬಿದ್ದಿದೆ. ಸರ್ಕಾರದ ನೀತಿಗಳನ್ನು ಅಹಿಂಸಾ ಮಾರ್ಗದಿಂದ ವಿರೋಧಿಸಿ ತನ್ನೆಡೆ ಗಮನ ಸೆಳೆಯುವ ಪರಂಪರೆ ನಿಧಾನವಾಗಿ ನಶಿಸಿ ಹೋಗುವಂತೆ ಕಾಣುತ್ತಿದೆ. ತೆಲಂಗಾಣ ವಿರೋಧಿಗಳು ಸಾಮೂಹಿಕವಾಗಿ ಸಂಸತ್ ಮುಂದೆ ಆಮರಣಾಂತ ಉಪವಾಸವನ್ನು ಕೈಗೊಂಡಿದ್ದರೆ, ಸರ್ಕಾರವು ಸಂಧಾನಕ್ಕೆ ಮುಂದೆ ಬರಲೇಬೇಕಿತ್ತು. ತಮ್ಮನ್ನು ತಾವು ದಂಡಿಸಿಕೊಳ್ಳದೆ ಸಂಸದರು ಬೇರೊಬ್ಬರನ್ನು ದಂಡಿಸುವ ಮಾರ್ಗವನ್ನು ತುಳಿದು ಪ್ರಜಾಸತ್ತೆಗೆ ಕಳಂಕವನ್ನು ತಂದಿದ್ದಾರೆ. Records are meant to be broken ಎಂದು ಹೇಳುವಂತೆ ಹಿಂದಿನ ದಾಖಲಾತಿಗಳನ್ನು ಕೆಲ ಸಂಸದರು ಮುರಿದು ಹೆಮ್ಮೆ ಪಡುವ ಬದಲು ನಾಚಿಕೆಪಡುವಂತಹ ಕೆಲಸವನ್ನು ಮಾಡಿದ್ದಾರೆ. ಈಗಿನ ದಾಖಲೆಯಾದರೂ ಮುಂದೆ ಮುರಿಯುವಂತಹ ನಡವಳಿಕೆ ನಮ್ಮ ಜನ ಪ್ರತಿನಿಧಿಗಳಿಂದ ಆಗದಿರಲಿ ಎಂದು ಆಶಿಸುವುದಷ್ಟೇ ಈಗ ಉಳಿದಿರುವುದು.
-ಕೆ.ವಿ. ಸೀತಾರಾಮಯ್ಯ, ಹಾಸನ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

