ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ವಿ. ಹೇಮಂತಕುಮಾರ ಅವರು ಬರೆಯುತ್ತಾರೆ- 'ಡಿ.3ರ 'ಬೈಟುಕಾಫಿ' ಪುರವಣಿಯ 'ಬ್ರಾಂಡ್ ಮಂಡೇಲಾ ಮಕ್ಕಳಿಗೆ ಮಾಡೆಲ್ ದೇಶಕ್ಕೆ ಸೋತ ಮಾಡೆಲ್' ಶೀರ್ಷಿಕೆಯ ಲೇಖನದಲ್ಲಿ 'ಎರಡು ಪತ್ನಿಯರಿಂದ ನೆಲ್ಸನ್ ಮಂಡೇಲಾ ಮೂವರು ಹೆಣ್ಣು ಮಕ್ಕಳು, ಹದಿನೇಳು ಮೊಮ್ಮಕ್ಕಳು ಹಾಗೂ ಹದಿನಾಲ್ಕು ಮರಿಮೊಮ್ಮಕ್ಕಳನ್ನು ಹೊಂದಿದ್ದಾರೆ' ಎಂದು ಪ್ರಕಟವಾಗಿದೆ.'
'ಎರಡು ಪತ್ನಿಯರು ಎಂದು ಹೇಳುವುದು ಅಷ್ಟು ಸಮಂಜಸವೆನಿಸುವುದಿಲ್ಲ. ಅದಕ್ಕೆ ಬದಲಾಗಿ 'ಇಬ್ಬರು ಪತ್ನಿಯರು' ಎಂದು ಬರೆಯುವುದೇ ಹೆಚ್ಚು ಸೂಕ್ತ.'
'ಲೇಖನದ ಮುಂದಿನ ಭಾಗದಲ್ಲಿ 'ಅವರ ಒಬ್ಬ ಮಗ (ಮಂಡ್ಲಾ ಮಂಡೇಲಾ) ಈ ಎಲ್ಲಾ ವಿವಾದದಿಂದ ದೂರ ಸರಿದು, ತನ್ನ ತಾತನ ಹಳ್ಳಿಯಲ್ಲಿ ನೆಲೆಸಿದ್ದಾನೆ' ಎಂದಿದೆ. ಮಂಡ್ಲಾ ಮಂಡೇಲಾ ಅವರು ನೆಲ್ಸನ್ ಮಂಡೇಲಾ ಅವರ ಮೊಮ್ಮಗನೋ, ಮರಿಮೊಮ್ಮಗನೋ ತಿಳಿಯಲಿಲ್ಲ.'
'ಡಿ.26ರ ಸಂಚಿಕೆಯ ಪುಟ 2ರಲ್ಲಿ 'ಕಾಪಿ ಜೀವನ್ ಕೊಲೆ ಪ್ರಕರಣ, ಐವರ ಸೆರೆ' ಶೀರ್ಷಿಕೆಯ ಲೇಖನದಲ್ಲಿ ತಪ್ಪೊಂದು ರಾಜಾರೋಷವಾಗಿ ನುಸುಳಿದೆ. ಶೀರ್ಷಿಕೆಯಲ್ಲಿ ಐವರ ಸೆರೆ ಎಂದಿದ್ದರೆ, ಆರು ಜನ ಆರೋಪಿಗಳ ಚಿತ್ರ ಸೆರೆಹಿಡಿಯಲಾಗಿದೆ. ಲೇಖನದಲ್ಲೂ ಆರು ಜನ ಆರೋಪಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ.'
'ಅದೇ ಪುಟದ 'ಮರ್ಮಾಂಗಕ್ಕೆ ಪೆಟ್ಟು: ವ್ಯಕ್ತಿ ಸಾವು' ಶೀರ್ಷಿಕೆಯ ಲೇಖನದಲ್ಲಿ 'ಮರ್ಮಾಂಗ ಇರಿತದಿಂದ ಆಸ್ಪತ್ರೆ ಸೇರಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ' ಎಂದು ಪ್ರಕಟವಾಗಿದೆ. ಪೆಟ್ಟಿಗೂ ಇರಿತಕ್ಕೂ ವ್ಯತ್ಯಾಸವಿಲ್ಲವೇ? ಹೊಡೆದಾಗ ಉಂಟಾಗುವುದು ಪೆಟ್ಟು, ಚುಚ್ಚಿದಾಗ ಆಗುವ ಪರಿಣಾಮಕ್ಕೆ ಇರಿತ ಎನ್ನುತ್ತಾರಲ್ಲವೇ?'
'ಅಪರೂಪಕ್ಕೊಮ್ಮೆ ದಿನ ಭವಿಷ್ಯ ನೋಡೋಣವೆಂದು ಜ.10ರ 'ನಿತ್ಯಫಲ' (ಪುಟ 13) ಓದಿದರೆ ಅದರಲ್ಲೂ ತಪ್ಪು! ಕಟಕ: 'ಉತ್ತಮ ಕೆಲಸದಿಂದ ಕೆಲಸದಲ್ಲಿ ಬಡ್ತಿ ಸಾಧ್ಯತೆ. ನಿಮ್ಮ ಕಾರ್ಯಕ್ಕೆ ಕುಂಟುಂಬ ವರ್ಗದವರಿಂದಲೂ ಶ್ಲಾಘನೆ' ಎಂದಿದೆ. 'ಕುಟುಂಬ' ಇಲ್ಲಿ 'ಕುಂಟುಂಬ'ವಾಗಿದೆ. ಇನ್ನು ಮೀನರಾಶಿಯವರ ವಿವರದಲ್ಲಿ, 'ಕೈಗೊಳ್ಳುವ ಕಾರ್ಯದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ, ಹೊಸ ಅತಿಥಿಗಲ ಆಗಮನ' ಎಂದು ಪ್ರಕಟವಾಗಿದೆ. 'ಅತಿಥಿಗಲ' ಎಂಬುದು 'ಅತಿಥಿಗಳ' ಎಂದಾಗಬೇಕಿತ್ತು' ಎಂದಿದ್ದಾರೆ.
ಮಂಡ್ಲಾ ಮಂಡೇಲಾ ಅವರು ನೆಲ್ಸನ್ ಮಂಡೇಲಾ ಅವರ ಮೊಮ್ಮಗ. ಅವರಿಗೆ ಗಂಡು ಮಕ್ಕಳಿಲ್ಲ ಅಂದಮೇಲೆ ಅವರ ಮಗ ಎಂಬ ಮಾತೇ ಉದ್ಭವಿಸುವುದಿಲ್ಲ. ಇನ್ನು 'ಪೆಟ್ಟು' ಅಂದರೆ ಹೊಡೆದಾಗ ಆಗುವ ಗಾಯ ಎಂಬ ಅರ್ಥವಾದರೂ, ಗಾಯಕ್ಕೂ ಪೆಟ್ಟು ಎಂದು ಹೇಳುವವರಿದ್ದಾರೆ. ಗಾಯವಾಗಿದೆ ಎಂಬುದನ್ನು ತುಂಬಾ ಪೆಟ್ಟಾಗಿದೆ, ಏಟುಬಿದ್ದಿದೆ ಎಂದೆಲ್ಲ ಹೇಳುತ್ತಾರೆ. ಪ್ರದೇಶಗಳ ಆಧಾರದಲ್ಲಿ ಇದರ ಅರ್ಥಬೇರೆಯಾಗುತ್ತದೆ.
-ವಿಶ್ವೇಶ್ವರಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

