ಗೋಪಾಲ ಕೃಷ್ಣ ಗೋಖಲೆಯವರು ಸರ್ವೆಂಟ್ಸ್ ಆಫ್ ಸೊಸೈಟಿಯ ಸ್ಥಾಪಕರಾಗಿ, ಸ್ವಾತಂತ್ರ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ನಾಯಕರಾಗಿದ್ದರು. ಗಾಂಧೀಜಿ ಮತ್ತು ಜಿನ್ನಾರವರಿಗೆ ರಾಜಕೀಯ ಗುರುಗಳಾಗಿ, ಮಾರ್ಗದರ್ಶಕರೂ ಆಗಿದ್ದರು. ಅತ್ಯಂತ ಸರಳಜೀವಿಯಾಗಿದ್ದ ಗೋಖಲೆಯವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ರತನ್ ಟಾಟಾ ಅವರು, ತಮ್ಮ ಬಂಗಲೆಗೆ ಬಂದಿರಿ ಎಂದು ಆಹ್ವಾನಿಸಿದರೂ ಒಪ್ಪದ ಸ್ವಾಭಿಮಾನಿ. ಅವರ ಸಮಾಜ ಸೇವೆಯನ್ನು ಪರಿಗಣಿಸಿ ಬ್ರಿಟಿಷ್ ಸರ್ಕಾರ ಅವರಿಗೆ ಕೆ.ಸಿ.ಐ.ಇ ಎಂಬ ಉನ್ನತ ಪ್ರಶಸ್ತಿಯನ್ನು ದಯಪಾಲಿಸಿತು. ಅದು ಆಗಿನ ಕಾಲಕ್ಕೆ ಸರ್ಕಾರ ನೀಡುತ್ತಿದ್ದ ಒಂದು ದೊಡ್ಡ ಪ್ರಶಸ್ತಿ. ಆದರೆ ಗೋಖಲೆಯವರು ಅದನ್ನು ನಯವಾಗಿ ತಿರಸ್ಕರಿಸಿ, ದೇಶದ ಜನರ ಸೇವಕನಾಗಿ ನಾನು ಅಂತಹ ಗೌರವವನ್ನು ಸ್ವೀಕರಿಸಲಾರೆ ಎಂದುಬಿಟ್ಟರು.
ಅವರಿಗೆ ಅದ್ಭುತವಾದ ನೆನಪಿನ ಶಕ್ತಿಯಿತ್ತು. ಒಮ್ಮೆ ಓದಿದರೆ ಅದನ್ನು ಕೊನೆಯವರೆಗೂ ಸ್ಮರಣೆಯಲ್ಲಿಟ್ಟುಕೊಳ್ಳುವ ಕಲೆ ಅವರಿಗೆ ಒಲಿದಿತ್ತು. ವಿದ್ಯಾರ್ಥಿಯಾಗಿದ್ದಾಗ ಅವರೊಮ್ಮೆ ಕೋಪದ ಭರದಲ್ಲಿ ತಮ್ಮ ಪಠ್ಯಪುಸ್ತಕವನ್ನು ಹರಿದು ಹಾಕಿದರು. ನಂತರ ತಮ್ಮ ಗೆಳೆಯನಿಂದ ಅದೇ ಪುಸ್ತಕವನ್ನು ಎರವಲು ತಂದು ಮೊದಲಿನಿಂದ ಕೊನೆಯವರೆಗೂ ಓದಿ ತಮ್ಮ ಸ್ಮೃತಿ ಪಟಲದಲ್ಲಿ ಇಟ್ಟುಕೊಂಡಿದ್ದರು. ನಂತರ ಅದನ್ನೆಲ್ಲ ಗೆಳೆಯರಿಗೆ ಯಥಾವತ್ತಾಗಿ ಹೇಳಿದಾಗ ಕೇಳಿದವರಿಗೆಲ್ಲಾ ದಂಗುಬಡಿದಂತಾಯಿತು.
ಅವರು ಐರ್ಲೆಂಡಿಗೆ ಭೇಟಿ ನೀಡಿದಾಗ ಒಮ್ಮೆ ರೈಲಿನಲ್ಲಿ ಪಯಣಿಸುತ್ತಿದ್ದರು. ಅಲ್ಲಿಯೇ ಇದ್ದ ರೈಲ್ವೆ ವೇಳಾಪಟ್ಟಿಯ ಮೇಲೆ ಕಣ್ಣಾಡಿಸಿ ಎಲ್ಲ ರೈಲ್ವೆ ನಿಲ್ದಾಣಗಳ ಹೆಸರನ್ನು ನಿರರ್ಗಳವಾಗಿ ಹೇಳಿದಾಗ ಅಲ್ಲಿದ್ದವರೆಲ್ಲ ಆಶ್ಚರ್ಯಪಟ್ಟರು. ಗೋಖಲೆಯವರು ವಿದ್ಯಾರ್ಥಿ ದೆಸೆಯಲ್ಲಿ ತುಂಬಾ ಆರ್ಥಿಕ ಮುಗ್ಗಟ್ಟನ್ನು ಅನುಭವಿಸಿದವರು. ಅವರ ಅಣ್ಣ ಗೋವಿಂದರಾವ್ ತಮ್ಮನ ವಿದ್ಯಾಭ್ಯಾಸಕ್ಕೆಂದು ತನ್ನ 15 ರು. ಸಂಬಳದಲ್ಲಿ ಅರ್ಧದಷ್ಟನ್ನು ಕಳುಹಿಸಿಕೊಡುತ್ತಿದ್ದರು. ಒಮ್ಮೆ ತಿಲಕರ ಶ್ರೀಮಂತ ಗೆಳೆಯನೊಬ್ಬನ ಒತ್ತಾಯಕ್ಕೆ ಮಣಿದು ನಾಟಕಕ್ಕೆ ಹೋಗಿದ್ದರು. ಟಿಕೇಟು ಕೊಳ್ಳಲು ನೀಡಿದ್ದ ಎಂಟಾಣೆಯನ್ನು ಸರಿದೂಗಿಸಲು ಆ ತಿಂಗಳು ಪೂರ್ತಿ ಬೀದಿ ದೀಪದಲ್ಲಿ ಓದಿ ಸೀಮೆಎಣ್ಣೆಯ ಖರ್ಚನ್ನು ಉಳಿಸಿದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com