ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಬೆಂಗಳೂರಿನಿಂದ ಎಚ್. ಆನಂದರಾಮ ಶಾಸ್ತ್ರೀ ಅವರು ಬರೆಯುತ್ತಾರೆ- 'ಡಾ. ಕೆ.ಎನ್.ಬಿ. ರಾಜ್ ಅವರ ಮೂರ್ಖತನ ಕಂಡು (ತಪ್ಪಾಯ್ತು ಜು.5) ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. 'ತಪ್ಪಾಗ್ತಾ ಇದೆ ತಿದ್ಕೊಳ್ಳಿ ಸ್ವಾಮಿ' ಎಂಬ ತಲೆಬರಹ ಕೊಟ್ಟು ಅವರು ಈ ಅಂಕಣಕ್ಕೆ ಬರೆದಿರುವ ಪತ್ರವು ಸಾರಾಸಗಟು ತಪ್ಪು ಪತ್ರವಾಗಿದೆ. 'ಪೂರ್ವಗ್ರಹ' ಎಂಬ ಪದವನ್ನು ತಪ್ಪೆಂದು ಭಾವಿಸಿ, 'ಪೂರ್ವಾಗ್ರಹ' ಎಂಬ ಪದವನ್ನು ಸರಿಯೆಂದು ಸಾಧಿಸಲು ಅವರು ನೀಡಿರುವ ಅರ್ಥವಿವರಗಳೆಲ್ಲ ಅವರದ್ದೇ ಆದ ತಪ್ಪು ಕಲ್ಪನೆಗಳಿಂದ ಕೂಡಿವೆ.'
"ಪೂರ್ವಗ್ರಹ' ಎಂಬ ಸರಿಯಾದ ಪದವನ್ನು ತಪ್ಪೆಂದು ಅಪಾರ್ಥಮಾಡಿಕೊಂಡು ಮತ್ತು 'ಪೂರ್ವಾಗ್ರಹ' ಎಂಬ ತಪ್ಪು ಪದವನ್ನು ಸರಿಯೆಂದು ತಪ್ಪಾಗಿ ಭಾವಿಸಿ ಅವರು ಏನೇನೋ ಅಸಂಬದ್ಧ ವಿವರಣೆ ನೀಡಿದ್ದಾರಲ್ಲದೆ, ತಮ್ಮ ವಾದವನ್ನೇ ಒಪ್ಪಿಕೊಳ್ಳಬೇಕೆಂಬ ಪರೋಕ್ಷ ಆಗ್ರಹವನ್ನೂ ವ್ಯಕ್ತಪಡಿಸಿದ್ದಾರೆ.'
'ಹೀಗೆಯೇ ಮಾಡಬೇಕೆಂದು ಈ ಹಿಂದೆಯೇ ಆಗ್ರಹ ಪಡಿಸಿದ್ದ ಸಂದರ್ಭಕ್ಕಾಗಿ 'ಪೂರ್ವಾಗ್ರಹ' ಎಂಬ ಪದವನ್ನು ಬಳಸಲಾಗುತ್ತದೆ ಎಂಬ ರಾಜ್ ಅವರ ಹೇಳಿಕೆಯು ಅವರದೇ ಆದ ಊಹಾಲೋಕದ ಸೃಷ್ಟಿಯಷ್ಟೇ. ಏಕೆಂದರೆ 'ಪೂರ್ವಾ ಗ್ರಹ' ಎಂಬ ಪದವೇ ಇಲ್ಲ. ಇರುವುದು 'ಪೂರ್ವಗ್ರಹ' ಎಂಬ ಪದ ಮಾತ್ರ.'
"ಗ್ರಹ' ಎಂದರೆ ರಾಜ್ ಅವರು ಅಂದುಕೊಂಡಿರುವಂತೆ 'ನವಗ್ರಹ' ಪದದಲ್ಲಿ ಬರುವ 'ಗ್ರಹ' ಅಷ್ಟೇ ಅಲ್ಲ, ಈ ಪದಕ್ಕೆ 'ಹಿಡಿಯುವುದು' ಎಂಬ ಅರ್ಥವೂ ಇದೆ. ಈ ಅರ್ಥವನ್ನೇ 'ನವಗ್ರಹ' ಎಂಬ ಪದದ 'ಗ್ರಹ'ವೂ ಹೊಂದಿದೆ. ಭೂಮಿ ಮೊದಲಾದವು ಗ್ರಹಗಳೆಂದು ಏಕೆ ಅಭಿಧಾನ (ಅಭಿದಾನ ಅಲ್ಲ) ಹೊಂದಿದವೆಂದರೆ, ಗುರುತ್ವಾಕರ್ಷಣ ಶಕ್ತಿಯಿಂದಾಗಿ ಹೊಂದಿದವು. ಆಕರ್ಷಣ ಶಕ್ತಿಯೆಂದರೆ ಸೆಳೆಯುವ ಅಥವಾ ಹಿಡಿದಿಡುವ ಶಕ್ತಿ. ಗುರುತ್ವಾಕರ್ಷಣ ಶಕ್ತಿಯಿಂದಾಗಿಯೇ, ಗ್ರಹಗಳು ವಸ್ತುಗಳನ್ನು ಹಿಡಿದಿಟ್ಟುಕೊಳ್ಳುವ ಮತ್ತು ಸೌರಮಂಡಲದಲ್ಲಿ ಹಿಡಿತಕ್ಕೊಳಗಾಗಿ ಸಾಗುವ ಕ್ರಿಯೆಗಳು ನಡೆದಿವೆ. ಒಂದು ಗ್ರಹದ ಮೇಲೆ ಇನ್ನೊಂದು ಗ್ರಹದ ಪ್ರಭಾವ ಮತ್ತು 'ಗ್ರಹಣ' ಇವು ಕೂಡ ಹಿಡಿಯುವಿಕೆಯನ್ನೇ ಹೇಳುತ್ತವೆ. ಈ ಅರ್ಥಗುಚ್ಛದಲ್ಲೇ 'ಗ್ರಸ್ತ' (ಹಿಡಿಯಲ್ಪಟ್ಟ) ಮತ್ತು 'ಗ್ರಹಿಕೆ' (ಅಂದರೆ ಅಭಿಪ್ರಾಯ) ಎಂಬೆರಡು ಪದಗಳೂ ಬರುತ್ತವೆ.'
'ಈ ರೀತಿ 'ಹಿಡಿಯುವಿಕೆ' ಸಂಬಂಧಪಟ್ಟ ಪದ, 'ಪೂರ್ವಗ್ರಹ' ಎಂಬ ಪದ. ಮನಸ್ಸಿನಲ್ಲಿ ಮೊದಲೇ ಮಾಡಿಕೊಂಡ ಅಭಿಪ್ರಾಯಕ್ಕೆ, ಅರ್ಥಾತ್ ಮನಸ್ಸು ಮೊದಲೇ ಹಿಡಿದಿರುವ ಅಭಿಪ್ರಾಯಕ್ಕೆ ಅರ್ಥಾತ್ ಮನಸ್ಸು ಮೊದಲೇ ಗ್ರಹಿಸಿರುವ ಅಭಿಪ್ರಾಯಕ್ಕೆ 'ಪೂರ್ವಗ್ರಹ' ಎನ್ನುತ್ತಾರೆ. ಗ್ರಹ೤ಇಸುಗ್ರಹಿಸುಹಿಡಿ (ಕ್ರಿಯಾಪದ) ಈ ಅರ್ಥ ಇಲ್ಲಿ ಗಮನಾರ್ಹ.'
'ಹೀಗೆ 'ಪೂರ್ವಗ್ರಹ' ಎಂಬುದೇ ಸರಿಯಾದ ಪದ. ಈ ಪದವು 'ಪೂರ್ವಾಗ್ರಹ' ಎಂಬ ಅನರ್ಥರೂಪದ ಶಿಕ್ಷೆಗೆ ಈಡಾದಂತೆಯೇ, 'ಮೊರೆಹೊಗು' (ಮೊರೆಪುಗು, ಮೊರೆವುಗು) ಎಂಬ ಶಬ್ದವೂ 'ಮೊರೆಹೋಗು' ಎಂದು ಬಹಳಕಡೆ ತಪ್ಪಾಗಿ ಪ್ರಯೋಗಿಸಲ್ಪಡುತ್ತಿದೆ. ಈ ಕುರಿತೂ ನಾನು ವಿವರವಾಗಿ ಬರೆದಿರುವ ಪತ್ರ ಇದೇ ಅಂಕಣದಲ್ಲಿ ಈ ಹಿಂದೆ ಪ್ರಕಟಗೊಂಡಿದೆ. ಅಂದ ಹಾಗೆ ಜು.6ರ 'ಖುಷಿ'ಯ 'ಉತ್ತರಾಧಿಕಾರಿ' ಅಂಕಣದಲ್ಲಿ 'ಮೋದಿ ಚಹಾ'ವು 'ಮೋರಿ ಚಹಾ' ಆಗಿದೆ. ಮೂಗು ಮುಚ್ಚಿಕೊಳ್ಳಬೇಕು!' ಎಂದಿದ್ದಾರೆ.

-ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.