ಭಾಷೆ ಹೆಸರಿನ ದಾಂದಲೆ ಸಲ್ಲ
ಬೆಳಗಾವಿ ತಾಲ್ಲೂಕಿನ ಯಳ್ಳೂರು, ಲಾಗಾಯ್ತಿನಿಂದಲೂ ಮರಾಠಿ ಪರವಾದ ಆಂದೋಲನ- ಅದರ ಜತೆಯಲ್ಲೇ ನಡೆಯುವ ಪುಂಡಾಟಿಕೆಗೆ ಕುಖ್ಯಾತಿ ಪಡೆದಿದೆ. ಈಚೆಗೆ ಅದರ ಉಗ್ರತೆ ಸ್ವಲ್ಪ ಕಡಿಮೆಯಾಗಿರಬಹುದಷ್ಟೇ.
1957ರಲ್ಲೇ ಆ ಊರಿನಲ್ಲಿ ಗೋಲಿಬಾರ್ ಆಗಿತ್ತು. ಅದರ ಅನಂತರ 57 ವರ್ಷಗಳಾದರೂ, ಇದೇ ದೇಶದ ಜನ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವೇ ಇಲ್ಲ ಎನ್ನುವುದನ್ನು ಒಪ್ಪಿಕೊಂಡರೂ, ಯಳ್ಳೂರಿನ ಕೆಲವು ಪುಂಡರು ಇನ್ನೂ ಅವಕಾಶ ಸಿಕ್ಕಾಗಲೆಲ್ಲ ಗೊಂದಲವನ್ನು ಎಬ್ಬಿಸುತ್ತಿದ್ದಾರೆ. ಶನಿವಾರ ಆಗಿದ್ದೂ ಅದೇ.
ಹೈಕೋರ್ಟಿನ ಆದೇಶದ ಮೇರೆಗೆ ಮಹಾರಾಷ್ಟ್ರದ ಪ್ರಸ್ತಾಪವಿರುವ ಫಲಕಗಳನ್ನೆಲ್ಲಾ (ಎಲ್ಲ ಬಗೆಯ ಮರಾಠಿ ಫಲಕಗಳನ್ನಲ್ಲ. ಅಲ್ಲಿ ಆ ಭಾಷೆಗೆ ಅಲ್ಪಸಂಖ್ಯಾತ ಭಾಷೆಯ ಸ್ಥಾನವಿದೆ) ತೆಗೆದು ಹಾಕಲು ಪೊಲೀಸರು ಮುಂದಾದಾಗ ಜಗಳವಾಗಿದೆ. ಪೊಲೀಸರ ಮೇಲೇ ಚಪ್ಪಲಿ ಎಸೆಯಲಾಗಿದೆ. ಲಾಠಿ ಚಾರ್ಜ್ ಕೂಡಾ ಆಗಿದೆ. ಯಳ್ಳೂರಿಗೆ ಇದೇನೂ ಹೊಸದಲ್ಲ. ಈ ಪುಂಡಾಟಿಕೆ ನಿಲ್ಲಲೇಬೇಕು. ಯಳ್ಳೂರಿನಲ್ಲಿ ಮರಾಠಿ ಭಾಷೆಗೆ ನ್ಯಾಯವಾದ ಸ್ಥಾನ ನೀಡುವುದಕ್ಕೂ ಪುಂಡಾಟಿಕೆಯನ್ನು ಸಹಿಸುವುದಕ್ಕೂ ವ್ಯತ್ಯಾಸವಿದೆ. ಅದನ್ನು ಮರಾಠಿ ಜನ ಗಮನಿಸಬೇಕು.
ಈಗ ಗಡಿ ವಿವಾದ ಹಾಗೂ ಬೆಳಗಾವಿಯ ಸ್ಥಾನ-ಮಾನ ಕುರಿತ ವಿವಾದವೇ ಇಲ್ಲದೇ ಇದ್ದರೂ, ಮಹಾರಾಷ್ಟ್ರದ ಕೆಲವು ಶಕ್ತಿಗಳಿಗೆ ಆ ವಿವಾದವನ್ನು ಏನಾದರೂ ಮಾಡಿ ಜೀವಂತವಾಗಿಟ್ಟು ಮರಾಠಿ ಸಮುದಾಯಗಳ ಭಾವನೆಗಳ ಜತೆ ಚೆಲ್ಲಾಟವಾಡುವುದು ಬೇಕಾಗಿದೆ. ಇಡೀ ಮಹಾರಾಷ್ಟ್ರದ ರಾಜಕೀಯವನ್ನೇ ಬೆಳಗಾವಿ- ವಿವಾದ ಕೇಂದ್ರೀಕೃತವಾಗುವಂತೆ ಮಾಡುವುದು ಕೆಲವು ಆಸಕ್ತ ಹಿತಗಳಿಗೆ ಚುನಾವಣೆ ಪೂರ್ವದ ಒಂದು ತಂತ್ರ.
ಈಗ ಮಹಾರಾಷ್ಟ್ರದಲ್ಲಿ ವಿಧಾನ ಸಭೆ ಚುನಾವಣೆ ಸನ್ನಿಹಿತವಾಗಿದ್ದು, ಕಾಂಗ್ರೆಸ್- ರಾಷ್ಟ್ರೀಯತಾ ಕಾಂಗ್ರೆಸ್ ಕೂಟದ ವಿರುದ್ಧ ಶಿವಸೇನೆ- ಭಾರತೀಯ ಜನತಾ ಪಾರ್ಟಿ- ರಿಪಬ್ಲಿಕನ್ ಪಕ್ಷದ ಕೂಟವನ್ನು ರಚಿಸುವ ಪ್ರಯತ್ನದಲ್ಲಿ ಯಶಸ್ಸು ಸಿಗುವ ಲಕ್ಷಣಗಳು ಕಂಡುಬಂದಿರುವಾಗ, ಕರ್ನಾಟಕದ ಯಳ್ಳೂರಿನಲ್ಲಿ ಗೊಂದಲವನ್ನೆಬ್ಬಿಸಿ, ಒಂದು ವೋಟು ಬ್ಯಾಂಕಿನ ರಕ್ಷಣೆಗೆ ಉಭಯ ಕೂಟಗಳೂ ಪ್ರಯತ್ನಿಸುವುದು ಸಹಜವೇ.
ಎರಡೂ ಕೂಟಗಳಲ್ಲಿ ಮರಾಠಿ- ಮಹಾರಾಷ್ಟ್ರ ಪರವಾದ ವ್ಯಕ್ತಿಗಳಿದ್ದಾರೆ. ಹೇಳಿ ಕೇಳಿ, ಶಿವಸೇನೆ ಮರಾಠಿ- ಮಹಾರಾಷ್ಟ್ರದ ಕಟ್ಟರ್ ಸ್ವಾಭಿಮಾನಿ ರಾಜಕೀಯ ಶಕ್ತಿ. ಶಿವಸೇನೆಯ ನಾಯಕರಿಗೂ, ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರಿಗೂ ಸಂಬಂಧವಿದೆ. ಮಹಾರಾಷ್ಟ್ರದ ನಾಯಕರಿಗೆ ಬೇಕಾದಾಗ, ಯಳ್ಳೂರು- ಬೆಳಗಾವಿಯಲ್ಲಿ ಶಾಂತಿ- ಸುರಕ್ಷಾ ವ್ಯವಸ್ಥೆಗೆ ತೊಂದರೆಯಾಗುವ ಸಂಭವ ಜಾಸ್ತಿ.
ಆ ಪ್ರಯತ್ನವನ್ನು ಕಾಂಗ್ರೆಸ್- ರಾಷ್ಟ್ರೀಯತಾ ಕಾಂಗ್ರೆಸ್ ಕೂಟದವರೇನೂ ವಿರೋಧಿಸುವುದಿಲ್ಲ. ಅಷ್ಟೇ ಅಲ್ಲ. ಅದನ್ನು ನಿಯಂತ್ರಿಸುವ ಪ್ರಯತ್ನಕ್ಕೂ ಕೈ ಹಾಕುವವರಲ್ಲ. ರಾಷ್ಟ್ರೀಯತಾ ಕಾಂಗ್ರೆಸಿನ ಅಧ್ಯಕ್ಷ ಶರದ್ ಪವಾರ್ ಹಿಂದೆ ಸಂಪೂರ್ಣ ಮಹಾರಾಷ್ಟ್ರ ಸಮಿತಿಯ ಮಹಾನಾಯಕರಾಗಿದ್ದವರು. ಒಮ್ಮೆ ವಿಪರೀತ ಗೊಂದಲದ ಸನ್ನಿವೇಶದಲ್ಲಿ ಬೆಳಗಾವಿಗೆ ಬಂದು ತಲೆ ತಪ್ಪಿಸಿಕೊಂಡು ಓಡಾಡಿದ್ದೂ ಉಂಟು. ಕಾಂಗ್ರೆಸ್ ಕೂಟದ ಬೆಳಗಾವಿ- ಯಳ್ಳೂರು ನೀತಿಯನ್ನು ಚುನಾವಣೆಯ ಮಟ್ಟಿಗಾದರೂ ರೂಪಿಸುವುದು ಪವಾರ್ ಅವರೇ.
ಕರ್ನಾಟಕ ರಾಜ್ಯ ಮಹಾರಾಷ್ಟ್ರ ರಾಜಕೀಯ ಸಮಸ್ಯೆಗೆ ತನ್ನ ನೀತಿಯನ್ನು ಬಲಿಗೊಡುವಂತಿಲ್ಲ. ಇಲ್ಲಿನ ಪುಂಡಾಟಿಕೆಯನ್ನು ಅಡಗಿಸಲೇಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

