ಶಂಕರ ಶಾಲೆಯಲ್ಲಿ ಅತಿಯಾದ ತುಂಟತನದಿಂದಾಗಿ ಸದಾ ಶಿಕ್ಷೆಗೆ ಒಳಗಾಗುತ್ತಿದ್ದ ಪೋರ. ಮಹಾ ಧೈರ್ಯವಂತ. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ, ಗಾಢಾಂಧಕಾರ ರಾತ್ರಿಯಲ್ಲಿ ತುಂಬಿ ಹರಿಯುತ್ತಿದ್ದ ಹೊಳೆಯನ್ನು ದಾಟಿ ತನ್ನ ತಾಯಿಗೆ ಮದ್ದು ತಂದ ವೀರ. ಇಂತಹ ಹುಡುಗನ ಜೀವನವನ್ನೇ ಬದಲಿಸಿ ವಿಶ್ವ ಮಟ್ಟಕ್ಕೆ ಕೊಂಡೊಯ್ದದ್ದು ಒಂದು ಪುಸ್ತಕ ಎಂದರೆ ನಂಬಲು ಕಷ್ಟವಾಗಬಹುದು.
ಒಮ್ಮೆ ಶಂಕರನ ಗೆಳೆಯನೊಬ್ಬ ಅವನಿಗೆ ಒಂದು ಪುಸ್ತಕವನ್ನು ಕೊಟ್ಟ. ಅವನು ಎಂದೂ ಕೇಳರಿಯದ ರಾಮಕೃಷ್ಣ ಪರಮಹಂಸರ ಕುರಿತು ಬರೆದ "ಶ್ರೀ ರಾಮಕೃಷ್ಣ ವಚನಾಮೃತ"ವೇ ಆ ಪುಸ್ತಕ. ಅದನ್ನು ಓದಲು ತೊಡಗಿದಾಗ ಏನೋ ಅಲೌಕಿಕ ಅನುಭವ ಅವನಿಗಾಯಿತು. ಆಗ ಅವನಿಗೆ ಹದಿನಾಲ್ಕು ವರ್ಷವಷ್ಟೆ. ನಂತರ ವಿವೇಕಾನಂದರ ಕೃತಿಗಳನ್ನು ಓದಿದಮೇಲೆ ದೇವರ ಬಗ್ಗೆ ಮತ್ತು ಜನರ ಬಗ್ಗೆ ಪ್ರೀತಿ ಇಮ್ಮಡಿಸಿತು. ವೈರಾಗ್ಯದ ಹಾದಿಯೊಂದೇ ಜೀವನದ ಪರಮ ಉದ್ದೇಶ ಎಂದು ಭಾವಿಸಿ ಮೈಸೂರು ರಾಮಕೃಷ್ಣಾಶ್ರಮದ ಸ್ವಾಮಿ ಸಿದ್ದೇಶ್ವರಾನಂದರ ಮೊರೆಹೋದ. ಕೊಚ್ಚಿಯಿಂದ ಉದಕಮಂಡಲಕ್ಕೆ ಬಂದು ಅಲ್ಲಿ ಸ್ವಾಮಿ ಶಿವಾನಂದರಿಂದ ಮಂತ್ರದೀಕ್ಷೆ ಪಡೆದುಕೊಂಡು ಮೈಸೂರಿನ ರಾಮಕೃಷ್ಣಾಶ್ರಮಕ್ಕೆ ಬಂದು ಅಲ್ಲಿ ಕೆಲವರ್ಷ ಸೇವೆ ಸಲ್ಲಿಸಿ, ಸ್ವಾಮಿ ರಂಗನಾಥಾನಂದರಾದರು. ಮುಂದೆ ವಿವೇಕಾನಂದರ ನಂತರ ವಿಶ್ವ ಕಂಡ ಶ್ರೇಷ್ಠ ಆಧ್ಯಾತ್ಮ ಜ್ಯೋತಿಯಾಗಿ ಬೆಳಗಿದರು. ಅಪ್ರತಿಮ ವಾಗ್ಮಿಗಳಾಗಿದ್ದ ರಂಗನಾಥಾನಂದರು ಭಾರತದಾದ್ಯಂತ ತಿರುಗಿ ಸಹಸ್ರಾರು ವೇದಿಕೆಗಳಲ್ಲಿ ಪರಮಹಂಸರ, ಶಾರದಾದೇವಿಯವರ ಮತ್ತು ವಿವೇಕಾನಂದರ ಸಂದೇಶವನ್ನು ಜನರಿಗೆ ತಲುಪಿಸಿದರು. ಸುಮಾರು ಐವತ್ತುಕ್ಕೂ ಹೆಚ್ಚು ದೇಶಗಳಿಗೆ ತೆರಳಿ ಅಲ್ಲಿ ವಿವೇಕಾನಂದ ಜ್ಯೋತಿಯನ್ನು ಮನಮನಗಳಲ್ಲಿಯೂ ಬೆಳಗಿಸಿ ಬಂದರು. ಇಂಗ್ಲಿಷ್, ಮಲಯಾಳಂ, ಕನ್ನಡ, ಹಿಂದಿ ಮತ್ತು ಬಂಗಾಳಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ರಂಗನಾಥಾನಂದರು ಬದಲಾಗುತ್ತಿರುವ ಸಮಾಜಕ್ಕೆ ಅನಿವಾರ್ಯವಾದ ಶಾಶ್ವತ ಮೌಲ್ಯಗಳು ಎಂಬ ಕೃತಿಯನ್ನು ನಾಲ್ಕು ಆವೃತ್ತಿಯಲ್ಲಿ ಪ್ರಕಟಿಸಿದ್ದಾರೆ. ಅದೇರೀತಿ ಉಪನಿಷತ್ತುಗಳ ಸಂದೇಶ, ಯಾತ್ರಿಕ ಕಂಡ ಜಗತ್ತು, ಭಗವದ್ಗೀತೆಯ ಸಾರ ಮುಂತಾದ ಅನೇಕ ಮೌಲಿಕ ಕೃತಿಗಳನ್ನು ಸರಳಭಾಷೆಯಲ್ಲಿ ಬರೆದು ಪ್ರಸಿದ್ಧರಾಗಿದ್ದಾರೆ. 1998 ರಲ್ಲಿ ರಾಮಕೃಷ್ಣ ಮಿಷನ್ನಿನ ಅಧ್ಯಕ್ಷರಾಗಿ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಆತ್ಮ ಚರಿತ್ರೆಯನ್ನೊಳಗೊಂಡ ಹ್ಯೂಮನ್‌ಬೀಯಿಂಗ್ ಇನ್ ಡೆಪ್ತ್ ಎಂಬ ಗ್ರಂಥವನ್ನು ನ್ಯೂಯಾರ್ಕ್‌ನ ಸ್ಟೇಟ್ಸ್ ವಿಶ್ವವಿದ್ಯಾನಿಲಯ ಪ್ರಕಟಿಸಿರುವುದು ಅವರ ಹೆಗ್ಗಳಿಕೆಯಾಗಿದೆ. ಇಂದು ಅವರಿಲ್ಲದಿದ್ದರೂ ಅವರು ಪಸರಿಸಿದ ಆಧ್ಯಾತ್ಮಿಕ ಕಂಪು ಚಿರಸ್ಥಾಯಿಯಾಗಿದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com