ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಸಾಗರದಿಂದ ಬೊ.ನಾ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ಉತ್ತರ ಪ್ರದೇಶದಲ್ಲಿರುವ ಪ್ರಯಾಗವು ಸ್ಥಳೀಯ ಭಾಷೆಯಲ್ಲಿ ಇಲಾಹಾಬಾದ್ ಎಂದೂ ಕರೆಯಲ್ಪಡುವ ನಗರವಾಗಿದೆ. ಆದರೆ ಬ್ರಿಟಿಷರಿಂದ ಕುಲಗೆಟ್ಟಿರುವ ನೂರಾರು ಭಾರತೀಯ ಸ್ಥಳ ನಾಮಗಳಲ್ಲಿ ಈ ಇಲಾಹಾಬಾದ್ ಎಂಬ ಹೆಸರು ಕೂಡಾ ಒಂದು.    ಹಾಗಾಗಿ ಇಂಗ್ಲಿಷ್ ಬರವಣಿಗೆ ಸೂಚಿಸುವುದನ್ನೇ ಸತ್ಯವೆಂದು ನಂಬುವ ಬಹುತೇಕ ಅನ್ಯ ರಾಜ್ಯಗಳ ಜನರು ಈ  ನಗರವನ್ನು ಅಲಹಾಬಾದ್-ಅಲಾಹಾಬಾದ್ ಎಂದೇ ಕರೆಯುತ್ತಾರೆ. ಇಂಥಾ ಇಲಾಹಾಬಾದ್ ಅಥವಾ ಅಲಹಾಬಾದ್ ಯಾವತ್ತಾದರೂ ಉತ್ತರ ಪ್ರದೇಶ ತೊರೆದು ಗುಜರಾತಿಗೆ ಪಯಣ ಬೆಳೆಸಿತ್ತಾ? ಅಥವಾ ಉತ್ತರ ಪ್ರದೇಶದ ಇಲಾಹಾಬಾದ್ ನಗರಕ್ಕೆ ಪ್ರವೇಶವನ್ನು ನಿರಾಕರಿಸುವ ಅಧಿಕಾರವು ಗುಜರಾತಿನ ಮುಖ್ಯ ಮಂತ್ರಿಗಳಿಗೆ ಇತ್ತಾ?'
'ನನಗೆ ಈ ಬಗೆಯ ಅನುಮಾನಗಳು ಬರಲು ಕಾರಣ ಏ.29ರಂದು ಕೆ.ಎಲ್. ಮಂಜುನಾಥರ 'ಕೋಮುವಾದದ ಕೋಟೆಯ ಮೇಲೆ' ಲೇಖನದ ಮುಂದೆ ಹೇಳಿದ ಭಾಗ ಅಂದು ಅಲಹಾಬಾದ್ ಪ್ರವೇಶಿಸಲು ಅವಕಾಶ  ನೀಡಲಿಲ್ಲ ಎಂಬ ಕಾರಣಕ್ಕೆ ಗುಜರಾತ್ ಏನು ನರೇಂದ್ರ ಮೋದಿ ಅವರ ಆಸ್ತಿಯೇ ಎಂದು ಕೇಳಿದ್ದರು. ಹೀಗೆ  ಕೇಳಿದ್ದವರು ಯಾರು ಎಂಬುದು ಬರಹದಲ್ಲಿ ತೋರಿಬರದಿದ್ದರೂ, ಫಾರೂಕ್ ಅಬ್ದುಲ್ಲಾ ಅವರೇ ಎಂಬುದು ಗ್ರಹಿಕೆಗೆ ಸಾಧ್ಯ.'
'ಅಹ್ಮದಾಬಾದ್ ಎಂದು ಬರೆಯಬೇಕಾಗಿರುವ ಜಾಗದಲ್ಲಿ ಅಲಹಾಬಾದ್ ಎಂದು ಬರೆಯಲು ಕಾರಣ, ನೆನಪಿನ ಕೊರತೆಯೋ, ಬರವಣಿಗೆಯ ಗಡಿಬಿಡಿಯ ಎಡವಟ್ಟೋ,  ಅಥವಾ ಮುದ್ರಣದಲ್ಲಿ ತೂರಿ ಬಂದಿರುವ    ಅಕ್ಷರಮೋಸವೋ ಅಂತೂ ಯಾವುದೋ ಒಂದು.'
"ಸಾಧನೆಗೆ ಅಸಾಧ್ಯವಾದದ್ದು ಏನಾದರೂ ಇದೆಯಾ' ಇದು ಎ. ಆರ್. ಮಣಿಕಾಂತರ ಪ್ರಶ್ನೆ. (ಭಾವತೀರ  ಯಾನ ಏ.30) ಈ ಪ್ರಶ್ನೆಯಲ್ಲಿರುವ ಸಾಧನೆಗೆ ಎಂಬ ಪದವನ್ನು ಸಾಧಿಸುವ ಪ್ರಯತ್ನಕ್ಕೆ ಎಂಬ ಅರ್ಥದಲ್ಲಿ  ತೆಗೆದುಕೊಂಡರೂ, ಸಾಧನೆಯ ಗಳಿಕೆಗೆ ಎಂಬ ಅರ್ಥದಲ್ಲಿ ತೆಗೆದುಕೊಂಡರೂ ಅಸಾಧ್ಯವಾದದ್ದು ಇದೆಯೋ ಇಲ್ಲವೋ ಎಂದು ಯೋಚಿಸಿದರೆ, ಸಾವಿರಾರು ಜನರು ಅಸಾಧ್ಯವೆಂಬುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂದೇ ಹೇಳಿಯಾರು.'
'ಆದರೆ, ವಾಸ್ತವದಲ್ಲಿ ನಮ್ಮ ಜೀವನದಲ್ಲಿ ಸಾಧಿಸಲಾಗದ, ಸಾಧನೆಯ ಮೂಲಕ ಗಳಿಸಲಾಗದ ಸಾವಿರ ಸಾವಿರ  ಏಕೆ ಎಣೆಯಿಲ್ಲದಷ್ಟು ಸಂಗತಿಗಳಿವೆ. ಏನೇನು ಮಾಡಲು ಸಾಧ್ಯ, ಏನೇನು ಮಾಡಲು ಸಾಧ್ಯವೇ ಇಲ್ಲ ಎಂದು ಯೋಚಿಸುತ್ತಾ ಹೋದರೆ, ಸಾಧನೆಗೆ ಅಸಾಧ್ಯವಾದದ್ದು ಏನೂ ಇಲ್ಲ ಎನ್ನುವುದು ಕೇವಲ ಮನುಷ್ಯರನ್ನು ಬದುಕಿನಲ್ಲಿ ಸಾಧಕರಾಗುವಂತೆ ಪ್ರಚೋದಿಸಲೆಂದು, ಪ್ರೋತ್ಸಾಹಿಸಲೆಂದು ಹೇಳುವ ಔಪಚಾರಿಕ ಮಾತುಗಳು ಎಂಬುದು ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಗೂ ಅರ್ಥವಾದೀತು' ಎಂದಿದ್ದಾರೆ.
ಒಂದು ಕಾಲದಲ್ಲಿ ಅಸಾಧ್ಯ ಎನಿಸಿದ್ದು ಈಗ ಅತ್ಯಂತ ಸುಲಭ ಸಾಧ್ಯ. ಮೊದಲೆಲ್ಲ ಕಾಶಿಗೆ (ವಾರಣಾಸಿ) ಹೋಗುತ್ತಾರೆ ಅಂದರೆ ಅವರ ಶ್ರಾದ್ಧ ಮಾಡಿಯೇ ಬೀಳ್ಕೊಡುವ ಪದ್ಧತಿಯಿತ್ತು. ಅಂದರೆ ಜೀವಂತ ಮರಳಿಬರುತ್ತಾರೆ ಎಂಬ ನಂಬಿಕೆಯೇ ಇರಲಿಲ್ಲ. ಈಗ ಇವತ್ತು ಹೋಗಿ, ನಾಳೆ ಮರಳಿ ಬರಬಹುದು. ಚಂದ್ರನಲ್ಲಿಗೆ ಹೋಗಬಹುದು ಎಂಬುದು ಒಂದು ಕಾಲಕ್ಕೆ ಸುಂದರ ಕಲ್ಪನೆ ಮಾತ್ರ. ಆದರೆ ಇದು ನಿಜ. ಹೀಗೇ ಎಷ್ಟೋ ಸಂಗತಿಗಳು ಒಂದು ಕಾಲದಲ್ಲಿ ಸಾಧ್ಯವಿಲ್ಲ ಎನಿಸಿದ್ದನ್ನು ಇಂದು ಸಾಧಿಸಲಾಗಿದೆ. ಈ ದೃಷ್ಟಿಯಿಂದ 'ಅಸಾಧ್ಯವಾದುದು ಯಾವುದೂ ಇಲ್ಲ' ಎಂಬ ಮಾತನ್ನು ಹೇಳಲಾಗುತ್ತದೆ.

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.