ಟೆರರಿಸಂ ಗೂಡಾಗುತ್ತಿದೆ ಟೂರಿಸಂ ನಾಡು: ಮೋದಿ

Published On :
ಕಾಸರಗೋಡು/ದೆಹಲಿ/ತಿರುವನಂತಪುರ: 'ಪ್ರವಾಸೋದ್ಯಮ (ಟೂರಿಸಂ)ದ ನಾಡಾಗಿರುವ ಕೇರಳ ಈಗ ಭಯೋತ್ಪಾದನೆಯ(ಟೆರರಿಸಂ) ನರ್ಸರಿಯಾಗಿ ಬದಲಾಗುತ್ತಿದೆ'.
ಹೀಗೆಂದು ಹೇಳಿದ್ದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ. ಕೇರಳದ ಕಾಸರಗೋಡಿನಲ್ಲಿ ಚುನಾವಣಾ ಪ್ರಚಾರದ ಕೊನೆಯ ದಿನವಾದ ಮಂಗಳವಾರ ನಡೆದ ರ್ಯಾಲಿಯಲ್ಲಿ ಮೋದಿ, ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇರಳದಲ್ಲಿ ಅಭಿವೃದ್ಧಿಯನ್ನು ಕಡೆಗಣಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕೇರಳ ರಾಜ್ಯವು ಪ್ರವಾಸೋದ್ಯಮ ಮತ್ತು ಆಯುರ್ವೇದದಂತಹ ಸಂಪನ್ಮೂಲಗಳನ್ನು ಹೊಂದಿದ್ದರೂ ಸರ್ಕಾರಗಳು ಅದನ್ನು ಅಭಿವೃದ್ಧಿಪಡಿಸುತ್ತಿಲ್ಲ. ಬದಲಾಗಿ ಇಲ್ಲಿನ ಯುವಕರನ್ನು ಕೆಲಸಕ್ಕಾಗಿ ವಿದೇಶಗಳಿಗೆ ಕಳುಹಿಸುವಂತೆ ಮಾಡುತ್ತಿವೆ ಎಂದೂ ಮೋದಿ ಆರೋಪಿಸಿದ್ದಾರೆ.
ಎನ್‌ಡಿಎ ಅಧಿಕಾರಕ್ಕೇರುವುದು ಖಚಿತ: ಇದೇ ವೇಳೆ ತಿರುವನಂತಪುರದ ರ್ಯಾಲಿಯಲ್ಲಿ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಆಡ್ವಾಣಿ, ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೇರುವುದು ಖಚಿತ ಎಂದಿದ್ದಾರೆ. ಬಿಜೆಪಿ ಮತ್ತು ಮಿತ್ರಪಕ್ಷಗಳು ಐತಿಹಾಸಿಕ ಫಲಿತಾಂಶವನ್ನು ಕಾಣಲಿದೆ. ಮೋದಿ ಪ್ರಧಾನಿಯಾಗಲಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಗುಜರಾತ್ ಗಲಭೆಯನ್ನು ಯಾರೂ ಮರೆತಿಲ್ಲ: ಕೇರಳವು ಭಯೋತ್ಪಾದನೆಯ ನರ್ಸರಿಯಾಗುತ್ತಿದೆ ಎಂಬ ಮೋದಿ ಹೇಳಿಕೆಗೆ ಕೇರಳ ಸಿಎಂ ಉಮ್ಮನ್ ಚಾಂಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನಲ್ಲಾದ ನರಮೇಧವನ್ನು ಯಾರೂ ಮರೆತಿಲ್ಲ ಎನ್ನುವ ಮೂಲಕ ಮೋದಿಗೆ ಟಾಂಗ್ ನೀಡಿದ್ದಾರೆ. ಮೋದಿಗೆ ಅಮ್ನೇಷಿಯಾ(ಮರೆವು ಕಾಯಿಲೆ) ಇದೆ ಎಂದು ನನಗನಿಸುತ್ತಿದೆ. ತಾನು ಇಂತಹ ಹೇಳಿಕೆ ನೀಡುತ್ತಿರುವುದು ಕೇರಳದಲ್ಲಿ ಎಂಬುದನ್ನು ಅವರು ಮರೆತಂತಿದೆ ಎಂದು ಟೀಕಿಸಿದ್ದಾರೆ.
ಗುಜರಾತ್ ಸರ್ಕಾರದ ವರದಿ ಮೂಲಕವೇ ಟಾಂಗ್
ಮೋದಿ ಆಡಳಿತಾವಧಿಯಲ್ಲಿನ ಆರ್ಥಿಕ ಅಭಿವೃದ್ಧಿ ಲಾಭ ಅಲ್ಲಿನ ಜನರಿಗೆ ತಲುಪಿಲ್ಲ ಎಂಬ ಗುಜರಾತ್ ಸರ್ಕಾರದ ವರದಿಯನ್ನೇ ಇಟ್ಟುಕೊಂಡು ಈಗ ಕಾಂಗ್ರೆಸ್ ಮೋದಿ 'ಸುಳ್ಳು'ಗಳನ್ನು ಬಯಲು ಮಾಡಲು ಹೊರಟಿದೆ. ಸರ್ಕಾರದ ಸಾಮಾಜಿಕ-ಆರ್ಥಿಕ ಪರಿಶೀಲನೆ 2012-13ರ ವರದಿಯಲ್ಲಿ, ಸರ್ಕಾರದ ಅಭಿವೃದ್ಧಿಯ ಲಾಭ ಜನರಿಗೆ ತಲುಪಿಲ್ಲ ಎಂದು ಹೇಳಲಾಗಿದೆ. ಇದುವೇ ಮೋದಿ ಸರ್ಕಾರದ ಅಭಿವೃದ್ಧಿ ಸುಳ್ಳು ಎಂಬುದನ್ನು ತೋರಿಸಿಕೊಟ್ಟಿದೆ. ಜತೆಗೆ, ಬಂಡವಾಳಶಾಹಿ ಪರ ನಿಲವನ್ನು ತೋರಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


