ಮೋದಿ ಟೀಕಿಸಲು ಅಟಲ್ ಅಸ್ತ್ರ ಬಳಸಿದ ಕೈ!

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಟೀಕಿಸಲು ಕಾಂಗ್ರೆಸ್ ಹೊಸ ಅಸ್ತ್ರ ಪ್ರಯೋಗಿಸಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹೊಗಳಿ ಅಟ್ಟಕ್ಕೇರಿಸಿರುವ ಕಾಂಗ್ರೆಸ್, ಅಟಲ್ಜೀ ಮಾತುಗಳನ್ನು ನೆನಪಿಸುತ್ತಾ ಮೋದಿ ವಿರುದ್ಧ ಹರಿಹಾಯ್ದಿದೆ.
ಬಿಜೆಪಿಯ ಹಿರಿಯ ನಾಯಕ ಅಟಲ್ಜೀ ಅವರು, ಮುಖ್ಯಮಂತ್ರಿ ಸ್ಥಾನದಿಂದಲೇ ಕಿತ್ತೆಸೆಯಬೇಕು ಎಂದು ತೀರ್ಮಾನಿಸಿದ್ದ ವ್ಯಕ್ತಿಯೊಬ್ಬರನ್ನು ಅದೇ ಬಿಜೆಪಿ ಈಗ ಪ್ರಧಾನಿ ಅಭ್ಯರ್ಥಿಯನ್ನಾಗಿಸಿದೆ. ಈಗ ಬಿಜೆಪಿಗೆ ರಾಜಧರ್ಮ ಹೇಳಿಕೊಡುವವರು ಯಾರೂ ಇಲ್ಲ ಎಂದು ಕಾಂಗ್ರೆಸ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಿದೆ. ಅದರ ಜತೆಗೆ ವೆಬ್ಸೈಟ್ನಲ್ಲಿ ವಾಜಪೇಯಿ ಅವರ ಭಾವಚಿತ್ರವೊಂದನ್ನೂ ಅಪ್ಲೋಡ್ ಮಾಡಿದೆ.
ನನ್ನ ಅಭಿಪ್ರಾಯವೂ ಅದೇ: 2002ರ ಗುಜರಾತ್ ಗಲಭೆಯ ಬಳಿಕ ಮನಾಲಿಯಲ್ಲಿ ಮಾತನಾಡಿದ್ದ ವಾಜಪೇಯಿ, 'ಕೆಲವರು ಮೋದಿಯನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಬೇಕು ಎನ್ನುತ್ತಿದ್ದಾರೆ. ನನ್ನ ಅಭಿಪ್ರಾಯವೂ ಅದೇ ಆಗಿದೆ' ಎಂದಿದ್ದರು. ಇದನ್ನು ಉಲ್ಲೇಖಿಸಿರುವ ಕಾಂಗ್ರೆಸ್, ತನ್ನ ಪ್ರಜೆಗಳನ್ನೇ ರಕ್ಷಿಸಲು ವಿಫಲವಾದ, ಧರ್ಮದ ಆಧಾರದಲ್ಲಿ ಜನರನ್ನು ಒಡೆದ, ಜನತೆಯ ನೋವನ್ನು ನೋಡಿ ವ್ಯಂಗ್ಯ ಮಾಡಿದ ವ್ಯಕ್ತಿ ಉತ್ತಮ ಪ್ರಧಾನಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದೆ.
ಹತಾಶೆಯ ಪ್ರತಿಬಿಂಬ: ಇದೇ ವೇಳೆ, ಕಾಂಗ್ರೆಸ್ ವೆಬ್ಸೈಟ್ನ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಬಿಜೆಪಿ, ಪ್ರಧಾನಿಯಾಗಿದ್ದಾಗ ಅಟಲ್ಜೀಯನ್ನು ತೆಗಳುತ್ತಿದ್ದ ಕಾಂಗ್ರೆಸ್ ಈಗ ಅವರನ್ನು ಹೊಗಳುತ್ತಾ ಮೋದಿಯನ್ನು ಟೀಕಿಸುತ್ತಿರುವುದು ಅದರ ಹತಾಶೆಯನ್ನು ತೋರಿಸುತ್ತದೆ ಎಂದು ಹೇಳಿದೆ. ಕಾಂಗ್ರೆಸ್ನ ಆರೋಪ ಯಾವುದೂ ನೈಜವಲ್ಲ ಎಂದೂ ಹೇಳಿದೆ.
ಸೋನಿಯಾ ವಿರುದ್ಧ ಕೇಸು: ವೆಬ್ಸೈಟ್ ಪ್ರಕಟಣೆಗೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಮಧ್ಯಪ್ರದೇಶ ಬಿಜೆಪಿ ಪೊಲೀಸರಿಗೆ ದೂರು ದಾಖಲಿಸಿದೆ. ಮಾಜಿ ಪ್ರಧಾನಿ ವಾಜಪೇಯಿ ಅವರ ಹೆಸರು ಹೇಳಿ ಕೊಂಡು ಕಾಂಗ್ರೆಸ್ ಪಕ್ಷ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ. ಐಪಿಸಿ ಮತ್ತು ಸೈಬರ್ ಕಾನೂನಿನ ಅನ್ವಯ ಸೋನಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದೆ.
ಸುಳ್ಳು ಅಫಿಡವಿಟ್: ಮೋದಿ ವಿರುದ್ಧ ದೂರು
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಚನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಈ ಹಿಂದಿನ ಚುನಾವಣೆಗಳಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಅಫಿಡವಿಟ್ನಲ್ಲಿ 'ತಪ್ಪು' ಮಾಹಿತಿ ನೀಡಿದ್ದಾರೆ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಮೋದಿ ಸುಳ್ಳು ಹೇಳಿಲ್ಲ: ವೈವಾಹಿಕ ಮಾಹಿತಿ ಬಗ್ಗೆ ಮೋದಿ ಸುಳ್ಳು ಹೇಳಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪವನ್ನು ಬಿಜೆಪಿ ತಿರಸ್ಕರಿಸಿದೆ. 'ರಾಹುಲ್ ಗಾಂಧಿ ಮೋದಿ ಸಲ್ಲಿಸಿದ ಅಫಿಡವಿಟ್ ಅನ್ನು ಪೂರ್ತಿಯಾಗಿ ಓದಲಿ. ನಂತರ ಮಾಹಿತಿ ಸುಳ್ಳು ಎಂಬುದರ ಬಗ್ಗೆ ಮಾತನಾಡಲಿ' ಎಂದು ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 'ಮಹಿಳೆಗೆ ಅಗೌರವ ತೋರಿದ್ದಾರೆ' ಎಂದು ಆರೋ ಪಿಸಿ ದೆಹಲಿಯಲ್ಲಿ ಮಹಿಳಾ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


