ರಾಜಸ್ಥಾನಿಗರ ಮನದಲ್ಲಿ ಬಿಜೆಪಿಯೇ ವಿರಾಜಮಾನ
-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸರಾಸರಿ ಗೆಲುವು ನಿರೀಕ್ಷಿಸಿರುವ ರಾಜ್ಯ ರಾಜಸ್ಥಾನ. 25 ಕ್ಷೇತ್ರಗಳ ಪೈಕಿ 20ರಿಂದ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಹುತೇಕ ಮಾಧ್ಯಮ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದರೆ, ಬಿಜೆಪಿ ಮಾತ್ರ 24 ರಿಂದ 25 ಕ್ಷೇತ್ರಗಳಲ್ಲಿ ಜಯಗಳಿಸುವ ವಿಶ್ವಾಸ ಹೊಂದಿದೆ.
ಕಾಂಗ್ರೆಸ್ ಪಕ್ಷ 1 ರಿಂದ 3 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದೆ. 2009ರಲ್ಲಿ 25 ಕ್ಷೇತ್ರಗಳ ಪೈಕಿ 20 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಈಗ ಆಂಧ್ರಪ್ರದೇಶದ ನಂತರ ಅತಿ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳಲಿರುವ ರಾಜ್ಯ ಇದು.
ಡಿಸೆಂಬರ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಧೂಳೀಪಟವಾಗಿತ್ತು. 200 ವಿಧಾನಸಭಾ ಕ್ಷೇತ್ರಗಳ ಪೈಕಿ ಗೆದ್ದಿದ್ದು 21 ಕ್ಷೇತ್ರಗಳಲ್ಲಿ ಮಾತ್ರ. ಬಿಜೆಪಿ 162 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿ ದಾಖಲೆ ಮಾಡಿತ್ತು. ವಿಧಾನಸಭಾ ಚುನಾವಣೆ ಮುಗಿದು ನಾಲ್ಕು ತಿಂಗಳಾಗಿದೆ. ನೂರಾ ಇಪ್ಪತ್ತು ದಿನಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಹೀಗಾಗಿ ಫಲಿತಾಂಶ ಕೂಡಾ ಬದಲಾಗುವ ಸಾಧ್ಯತೆಗಳಿಲ್ಲ.
ರಾಜಸ್ಥಾನ ಮತದಾರರ ವಿಶೇಷ ಎಂದರೆ- ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಪರ್ಯಾಯ ಪಕ್ಷಕ್ಕೆ ಅಧಿಕಾರ ನೀಡುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಅದು ಮರುಕಳಿಸಬಹುದು.
ಜಸ್ವಂತ್ ಸಿಂಗ್ ಬಿಜೆಪಿಯಿಂದ ಬಂಡಾಯ ಎದ್ದು ಸ್ಪರ್ಧಿಸಿರುವ ಬಾರ್ಮರ್ ಕ್ಷೇತ್ರ, ಜಯಪುರ್ ಗ್ರಾಮೀಣ ಮತ್ತು ಆಜ್ಮೇರ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಕಾಂಗ್ರೆಸ್ನದು. ಉಳಿದಂತೆ ಯಾವ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿಲ್ಲ.
ಜಸ್ವಂತ್ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನೀಡದ ಬಗ್ಗೆ ಮತದಾರರಲ್ಲಿ ಸಹಾನುಭೂತಿ ಇದೆ. ಹೀಗಾಗಿ ಜಸ್ವಂತ್ಗೆ ಹೆಚ್ಚು ಮತ ಬಂದಷ್ಟು ತನಗೆ ಅನುಕೂಲ ಎಂಬ ಸರಳ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದು. ಈ ಸರಳ ಲೆಕ್ಕಚಾರ ಮೀರಿ ಗೆಲುವು ಸಾಧಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಆದರೆ ಜಸ್ವಂತ್ ಸಿಂಗ್ ತಾವೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಅತಿದೊಡ್ಡ ಕ್ಷೇತ್ರವಾಗಿರುವ ಬಾರ್ಮರ್ನಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೆ ಆಪ್ತ ಸೋನಾರಾಮ್ ಬಿಜೆಪಿ ಅಭ್ಯರ್ಥಿ.
ಜಾತ್ಯತೀತ ಮತಗಳ ಮೇಲೆ ಕಣ್ಣಿಟ್ಟಿರುವ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ, ಕೇಂದ್ರ ಸಚಿವ ಸಚಿನ್ ಪೈಲಟ್ ಅಜ್ಮೇರ್ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ.
ಕೇಂದ್ರ ಸಚಿವ ಸಿ.ಪಿ. ಜೋಶಿ ಮರು ಆಯ್ಕೆ ಬಯಸಿರುವ ಜೈಪುರ್ ಗ್ರಾಮೀಣ ಕ್ಷೇತ್ರದಲ್ಲಿ ಒಲಂಪಿಕ್ ಪದಕ ವಿಜೇತ ಹರ್ಷವರ್ಧನ ರಾಥೋಡ್ ಬಿಜೆಪಿ ಅಭ್ಯರ್ಥಿ. ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ್ದ ಬಿಜೆಪಿ ಈಗ ಮೋದಿ ಅಲೆ ಜತೆ ತೇಲುತ್ತಿದೆ.
ಕೌಟುಂಬಿಕ ರಾಜಕೀಯ
ಕೌಟುಂಬಿಕ ಹಾಗೂ ವಂಶಪಾರಂಪರ್ಯ ರಾಜಕೀಯ ಹಿನ್ನೆಲೆ ಇರುವ 13 ಮಂದಿ ಕಣದಲ್ಲಿದ್ದಾರೆ. ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಏಳು ಕ್ಷೇತ್ರಗಳಲ್ಲಿ ಟಿಕೆಟ್ ನೀಡಿವೆ. ವಸುಂಧರಾ ರಾಜೆ ಪುತ್ರ ದುಷ್ಯಂತ್ ಸಿಂಗ್ ಜಾಲ್ವಾರ್ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್ ಕೇಂದ್ರ ಮಾಜಿ ಸಚಿವ ನಾಥುರಾಮ್ಮಿರ್ಧಾ ಮೊಮ್ಮಗಳು ಜ್ಯೋತಿ ಮಿರ್ಧಾಗೆ ಟಿಕೆಟ್ ನೀಡಿದೆ. ಮಾಜಿ ಸಚಿವ ಪ್ರಮೋಜ್ ಜೈನ್ ಪತ್ನಿ ಉರ್ಮಿಳಾ ಜೈನ್, ಸಚಿನ್ ಪೈಲಟ್, ರಾಹುಲ್ ಕೆಸ್ವಾನ್, ಮುನ್ನಿದೇವಿ, ರಾಜಬಾಲ ಓಲಾ ಕೌಟುಂಬಿಕ ರಾಜಕಾರಣದ ಹಿನ್ನೆಲೆ ಇರುವವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

