ನಮೋ ರ್ಯಾಲಿಯಲ್ಲಿ ರಾಮ, ಮತ್ತೊಂದು ವಿವಾದದಲ್ಲಿ ಮೋದಿ

ಫೈಜಾಬಾದ್: ಅಯೋಧ್ಯೆ ಸಮೀಪದ ಫೈಜಾಬಾದ್ನಲ್ಲಿ ಸೋಮವಾರ ನಡೆದ ಮೋದಿ ಪ್ರಚಾರ ರ್ಯಾಲಿಯ ವೇದಿಕೆ ಹಿನ್ನೆಲೆ ಪರದೆಯಲ್ಲಿ ರಾಮನ ಚಿತ್ರ ಬಳಸಿರುವುದು ಮಾತ್ರವಲ್ಲದೆ ತಮ್ಮ ಭಾಷಣದಲ್ಲೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ರಾಮನ ಹೆಸರು ಬಳಸಿದ್ದಾರೆ. ಈ ವಿದ್ಯಮಾನದಿಂದ ಕುಪಿತಗೊಂಡಿರುವ ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಅಯೋಧ್ಯೆಯಿಂದ ಕೇವಲ ಐದು ಕಿ.ಮೀ ದೂರದಲ್ಲಿರುವ ಫೈಜಾಬಾದ್ನಲ್ಲಿ ನರೇಂದ್ರ ಮೋದಿ 'ಜೀವಮಾನವಿಡೀ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದು ಶ್ರೀರಾಮ ಜನಿಸಿದ ನೆಲದಲ್ಲಿ ನಿಂತು ಭರವಸೆ ನೀಡುತ್ತೇನೆ' ಎಂದಿದ್ದರು. ಅಲ್ಲದೆ, 'ಮಹಾತ್ಮಾ ಗಾಂಧಿ ಸಹ ಮಾದರಿ ಭಾರತ ರಾಮರಾಜ್ಯದಂತೆ ಇರಬೇಕು ಎಂದಿದ್ದಾರೆ. ಎಲ್ಲ ಸಮುದಾಯಗಳ ಅಭಿವೃದ್ಧಿ ಆಗಬೇಕು ಎನ್ನುವ ವಿಶಾಲ ಮನೋಭಾವ ಗಾಂಧೀಜಿ ಅವರದ್ದಾಗಿತ್ತು' ಎಂದೂ ಮೋದಿ ಹೇಳಿದ್ದರು.
ಹಿನ್ನೆಲೆ ಪರದೆಯಲ್ಲಿ ರಾಮನ ಚಿತ್ರ ಬಳಕೆ ಮತ್ತು ಮೋದಿ ಮಾತಿನಲ್ಲಿ ರಾಮನ ಪ್ರಸ್ತಾಪ ಎರಡೂ ವಿಚಾರಗಳ ಕುರಿತು ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರು ನೀಡಿದೆ. ಧಾರ್ಮಿಕ ವಿಚಾರ ಪ್ರಸ್ತಾಪಿಸಿ ಮತ ಕೇಳಿರುವುದರ ವಿರುದ್ಧ ತೃಣಮೂಲ ಕಾಂಗ್ರೆಸ್ ಕೂಡ ಆಯೋಗಕ್ಕೆ ದೂರು ಸಲ್ಲಿಸಿದೆ. ಈ ಕುರಿತು ವರದಿ ನೀಡುವಂತೆ ಆಯೋಗವು ಫೈಜಾಬಾದ್ ಜಿಲ್ಲಾ ಆಡಳಿತಕ್ಕೆ ಸೂಚಿಸಿದೆ.
ಮತಕ್ಕಾಗಿ ಪ್ರಸ್ತಾಪ: ಮೋದಿ ಫೈಜಾಬಾದ್ ರ್ಯಾಲಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಹಾಗೂ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ಓಲೈಸುತ್ತಿಲ್ಲ, ಆದರೆ ಮೋದಿ ಮತಕ್ಕಾಗಿ ಶ್ರೀರಾಮನ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಮೋದಿ ರ್ಯಾಲಿ ವೇದಿಕೆಯಲ್ಲಿ ರಾಮನ ಚಿತ್ರ ಬಳಸಿರುವುದು ಆಕ್ಷೇಪಾರ್ಹ. ಆದರೆ, ಭಾಷಣದಲ್ಲಿ ರಾಮನ ಹೆಸರನ್ನು ಯಾವ ಹಿನ್ನೆಲೆಯಲ್ಲಿ ಬಳಸಿದ್ದಾರೆ ಎನ್ನುವುದೂ ಮುಖ್ಯವಾಗುತ್ತದೆ. ಹೀಗಾಗಿ ಅದೊಂದೇ ಪದಕ್ಕಿಂತ ಅದರ ಹಿಂದು,ಮುಂದಿನ ಮಾತುಗಳೂ ಮುಖ್ಯವಾಗುತ್ತವೆ. ಈ ಕುರಿತು ಚುನಾವಣಾ ಆಯೋಗ ತೀರ್ಮಾನ ಕೈಗೊಳ್ಳಲಿದೆ ಎಂದು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ರ್ಯಾಲಿಗಳಲ್ಲಿ ಧಾರ್ಮಿಕ ಚಿಹ್ನೆಗಳ ಬಳಕೆಯನ್ನು ಆಯೋಗ ನಿಷೇಧಿಸಿದೆ. ಒಂದೊಮ್ಮೆ ರಾಮನ ವಿಚಾರದಲ್ಲಿ ಆಯೋಗ ಮೋದಿ ವಿರುದ್ಧ ಕ್ರಮಕ್ಕೆ ಮುಂದಾದರೆ ಒಂದೇ ವಾರದಲ್ಲಿ ಎರಡನೇ ಪ್ರಕರಣ ದಾಖಲಾದಂತೆ ಆಗುತ್ತದೆ.
ಈ ಬಾರಿಯ ಲೋಕಸಮರದಲ್ಲಿ ಖುದ್ದು ಮೋದಿ ಸೇರಿದಂತೆ ಬಿಜೆಪಿ ಹಿಂದುತ್ವ ಅಥವಾ ರಾಮ ಮಂದಿರ ನಿರ್ಮಾಣ ಕುರಿತು ನೇರವಾಗಿ ಪ್ರಸ್ತಾಪ ಮಾಡುತ್ತಿಲ್ಲ. ಆದರೆ ಅವಕಾಶ ಸಿಕ್ಕಾಗಲೆಲ್ಲ ಆ ಕುರಿತು ತನ್ನ ನಿಲುವನ್ನು ಸೂಕ್ಷ್ಮವಾಗಿ ಪ್ರಕಟಪಡಿಸುತ್ತಲೇ ಇದೆ. ಮೋದಿ ವಾರಾಣಸಿ ಸ್ಪರ್ಧೆ ಹಿಂದೆಯೂ ಇದೇ ಉದ್ದೇಶ ಇದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


