ಬೇಹು ಬಂಧನ ಬೇಡ: ಯುವತಿ

ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತನಿಖಾ ಆಯೋಗಗಳಿಗೆ ಗುಜರಾತ್ ಬೇಹುಗಾರಿಕೆ ಪ್ರಕರಣದ ತನಿಖಗೆ ಅವಕಾಶ ನೀಡಬಾರದು ಎಂದು ಪ್ರಕರಣದ ಕೇಂದ್ರಬಿಂದುವಾಗಿರುವ ಮಹಿಳೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವ ಮೂಲಕ ಪ್ರಕರಣ ಹೊಸ ತಿರುವು ಪಡೆದಿದೆ.
ಬೇಹುಗಾರಿಕೆ ನಡೆಸಿದ್ದರ ಹಿಂದೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪಾತ್ರವಿದೆ ಎನ್ನುವ ಆರೋಪ ಇರುವುದರಿಂದ ಈ ಬೆಳವಣಿಗೆ ಬಿಜೆಪಿಗೆ ಸಂತಸ ತಂದಿದೆ. ತಮ್ಮ ತಂದೆ ಜತೆಗೂಡಿ ಮಂಗಳವಾರ ಸರ್ವೋಚ್ಛ ನ್ಯಾಯಾಲಯಕ್ಕೆ ಜಂಟಿ ಅರ್ಜಿ ಸಲ್ಲಿಸಿರುವ ಮಹಿಳೆ, ವಿಚಾರಣೆ ಸ್ಥಗಿತಗೊಳಿಸುವಂತೆ ಸೂಚಿಸುವ ಮೂಲಕ ತಮ್ಮ ಖಾಸಗಿತನದ ಹಕ್ಕನ್ನು ಕಾಪಾಡಬೇಕು ಎಂದು ಕೋರಿದರು. ಪ್ರತಿವಾದಿಗಳ ವಾದ ಆಲಿಸದೆ ಯಾವುದೇ ಮಧ್ಯಂತರ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್ ಪೀಠ, ಈ ಸಂಬಂಧ ಶುಕ್ರವಾರದೊಳಗೆ ನಿಲುವು ತಿಳಿಸುವಂತೆ ಕೇಂದ್ರ ಮತ್ತು ಗುಜರಾತ್ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿತು.
ಮಹಿಳೆಗೆ ಮದುವೆಯಾಗಿ ಸುಖ ದಾಂಪತ್ಯ ನಡೆಸುತ್ತಿದ್ದರೂ ಕೇಂದ್ರ ಮತ್ತು ಗುಜರಾತ್ ಸರ್ಕಾರಗಳು ತನಿಖಾ ಆಯೋಗ ರಚಿಸಲು ಮುಂದಾಗಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಅರ್ಜಿದಾರರು, 2009ರಲ್ಲಿ ನಡೆದ ಬೇಹುಗಾರಿಕೆ ಕುರಿತು ತಾವಾಗಿ ಅರ್ಜಿ ಸಲ್ಲಿಸದಿದ್ದರೂ ತಮ್ಮ ಮತ್ತು ಕುಟುಂಬದ ಪ್ರತಿಷ್ಠೆ ಮಣ್ಣಪಾಲು ಮಾಡಲು ವ್ಯವಸ್ಥಿತ ಕಾರ್ಯಾಚರಣೆ ನಡೆಸಲಾಯಿತು ಎಂದು ದೂರಿದ್ದಾರೆ.
ವೆಬ್ ಪೋರ್ಟಲ್‌ಗಳಲ್ಲಿ ಪ್ರಸಾರವಾದ ಪರಿಶೀಲನೆಗೆ ಒಳಪಡದ ಮತ್ತು ಅನಧಿಕೃತ ಮಾಹಿತಿಗಳನ್ನು ಆಧರಿಸಿ ಗುಜರಾತ್ ಐಎಎಸ್ ಅಧಿಕಾರಿಯನ್ನು ಅಮಾನತುಗೊಳಿಸಿರುವ, ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ಒಪ್ಪಿಸುವ ಒತ್ತಾಯಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ತಮ್ಮ ಜೀವಕ್ಕೆ ಅಪಾಯ ಎದುರಾದಾಗ ಗುಜರಾತ್ ಸರ್ಕಾರ ಕೈಗೊಂಡ ಭದ್ರತಾ ಕ್ರಮಗಳ ಬಗ್ಗೆ ಅರ್ಜಿದಾರರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ತಾವು ರಾಷ್ಟ್ರೀಯ ಮಹಿಳಾ ಆಯೋಗ, ಗುಜರಾತ್ ರಾಜ್ಯ ಮಹಿಳಾ ಆಯೋಗಗಳಿಗೂ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಮಾಧ್ಯಮಗಳಲ್ಲಿ ತಮ್ಮ ಹೆಸರು ಪ್ರಕಟಿಸುವುದನ್ನು, ಪ್ರಸಾರ ಮಾಡುವುದನ್ನು ನಿರ್ಬಂಧಿಸಬೇಕು ಎಂದೂ ಅರ್ಜಿದಾರರು ಮನವಿ ಮಾಡಿದ್ದಾರೆ. ಅದಕ್ಕೆ ಸ್ಪಂದಿಸಿರುವ ನ್ಯಾಯಾಲಯ, ಮಹಿಳೆ ಹೆಸರನ್ನು ಬಹಿರಂಗಗೊಳಿಸದಂತೆ ಮಾಧ್ಯಮಗಳಿಗೆ ಸೂಚಿಸಿತು.
ಮಹಿಳೆ ಮೇಲೆ ಬೇಹುಗಾರಿಕೆ ನಡೆಸುವ ಸಂಬಂಧ 2009ರ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಮೋದಿ ಆಪ್ತ ಅಮಿತ್ ಶಾ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯನ್ನು ಕಳೆದ ವರ್ಷ ಕೋಬ್ರಾ ಪೋಸ್ಟ್ ಮತ್ತು ಗುಲೈಲ್ ಡಾಟ್‌ಕಾಮ್‌ಗಳು ಪ್ರಸಾರ ಮಾಡಿದ್ದವು. ಎಲ್ಲಿಯೂ ಮೋದಿ ಹೆಸರು ಪ್ರಸ್ತಾಪವಾಗಿರಲಿಲ್ಲ. ಅದರಲ್ಲಿನ ಶಾ 'ಸಾಹಿಬ್' ಎಂದಿದ್ದು ಮೋದಿಯವರಿಗೆ ಎಂದು ಹೇಳಲಾಗುತ್ತಿದೆ.
ಗುಜರಾತ್ ಸರ್ಕಾರ 2013ರ ನವೆಂಬರ್‌ನಲ್ಲಿ ತನಿಖಾ ಆಯೋಗ ರಚಿಸಿತ್ತು. ಕೇಂದ್ರ ಸಚಿವ ಸಂಪುಟ ಡಿಸೆಂಬರ್‌ನಲ್ಲಿಯೇ ತನಿಖಾ ಆಯೋಗ ರಚಿಸುವ ತೀರ್ಮಾನ ಕೈಗೊಂಡಿತ್ತಾದರೂ, ವಾರದ ಹಿಂದೆ ಆಯೋಗದ ಮುಖ್ಯಸ್ಥರನ್ನು ಮೇ 16ರ ಒಳಗೆ ನೇಮಿಸುವುದಾಗಿ ಘೋಷಿಸಿತ್ತು. ಯುಪಿಎ ಮಿತ್ರಪಕ್ಷಗಳ ವಿರೋಧದ ಹಿನ್ನೆಲೆಯಲ್ಲಿ ನಿಲುವು ಬದಲಿಸಿ, ಆಯೋಗದ ಮುಖ್ಯಸ್ಥರ ನೇಮಕವನ್ನು ಮುಂದಿನ ಸರ್ಕಾರದ ವಿವೇಚನೆಗೆ ಬಿಡುವುದಾಗಿ ಪ್ರಕಟಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


