

ಮದುವೆ ಕೆಲಸಗಳು ಈಗಷ್ಟೇ ಮುಗಿದಿವೆ. ಸ್ವರ್ಗಕ್ಕೆ ಮೂರೇ ಗೇಣು ಆ ಪ್ರಣಯ ಪಕ್ಷಿಗಳಿಗೆ. ಆಗಾಗಲೇ ಅವನಿಗೆ ಬೇರೊಂದು ದೇಶಕ್ಕೆ ಹೋಗಲು ಕಚೇರಿಯಿಂದ ಆದೇಶವಾಗಿ ಬಿಟ್ಟಿದೆ. ಬಿಟ್ಟು ಹೊರಡಲೇಬೇಕು. ಆ ಮುದ್ದು ಮೊಗದ ಸಂಗಾತಿಯನ್ನು ಬಿಟ್ಟುಹೋಗಲು ಮನಸ್ಸಿಲ್ಲ. ಈಕೆಗೆ ಅವನಿಲ್ಲದ ದಿನಗಳನ್ನು ಕಳೆಯೋದಾದರೂ ಹೇಗೆ!?
ಆದರೆ, ಇದು ಜೀವನಪರ್ಯಂತ ಅಲ್ಲದೇ ಹೋದರೂ ಆಗಷ್ಟೇ ಮದುವೆಯಾದ ದಂಪತಿ ನಡುವೆ ನಿರ್ಮಾಣವಾಗುವ ಈ ವೇದನೆ ನಿಜಕ್ಕೂ ಹೇಳಿಕೊಳ್ಳಲಾರದಂಥದ್ದು. ಇನ್ನೂ ಪ್ರೀತಿಸಿ ಮದುವೆಯಾಗಿದ್ದರಂತೂ ಮುಗಿದೇ ಹೋಯಿತು. ಅವನೊಟ್ಟಿಗಿನ ಮಧುರ ಬಾಂಧವ್ಯ ಎತ್ತಲೂ ಮನ ಹೊರಳದಂತೆ ಮಾಡಿಬಿಡುತ್ತದೆ. ಆದರೆ, ಹೋಗಲೇಬೇಕಾದ ಅನಿವಾರ್ಯ ಅವನಿಗೆ. ಇಲ್ಲಿ ಒಲ್ಲದ ಮನಸ್ಸಿನಿಂದಲೇ ಹೊರಡಿಸುವ ಕಾರ್ಯ ಇವಳಿಗೆ. ಪರ್ಸನಲ್ ಅಷ್ಟೇ ಪ್ರೊಫೆಷನಲ್‌ನಲ್ಲೂ ಬಿಲ್ಡ್ ಮಾಡುವ ಉಮೇದು ಅವಳ ಹೆಗಲಿಗೆ ಮಗ್ಗಲು ಬದಲಾಯಿಸಿರುತ್ತದೆ. ಅಷ್ಟೇ ಧಾವಂತದಲ್ಲಿ ಹೊರಡಿಸುವ ಮನಸ್ಸು ಮಾಡಿಯೇ ಬಿಡುತ್ತಾಳೆ ಆಕೆ. ಆದರೆ, ಇದೇ ವಿಷಯವಾಗಿ ಕೆಲಸಕ್ಕೆ ಬೈ ಬೈ ಹೇಳುವ ಮನಸ್ಸು ಅವನದ್ದು. ಆಕೆಗಿಂತ ಬೇರ್ಯಾವುದೂ ಹೆಚ್ಚಲ್ಲ ಅವನಿಗೆ, ಆ ಸಮಯಕ್ಕೆ. ದಾಂಪತ್ಯದ ಹೊಸ್ತಿಲನ್ನು ಆಗ ತಾನೇ ತುಳಿದಿರುವ ದಂಪತಿಗೆ ಮೊದಲ ಸಲದ ಈ ಸ್ಪೇಸ್ ಎಂಥ ಭಾವ ನಿರ್ಮಾಣವಾಗುತ್ತೆ ಗೊತ್ತಾ?
ಹಾಗಾದರೆ, ಅವನಿಲ್ಲದ ದಿನಗಳನ್ನು ಹೇಗೆ ಕಳೆಯುವುದು?
- ಅವನ ಫೋಟೋ, ಅವನ ನೆನಪಿಸುವ ವಸ್ತುಗಳನ್ನು ಜೋಪಾನವಾಗಿಡಿ. ಅದನ್ನು ಸಾಧ್ಯವಾದಷ್ಟು ನಿಮ್ಮಿಂದ ಹತ್ತಿರದಲ್ಲಿಯೇ ಇಟ್ಟುಕೊಳ್ಳಿ. ಅವುಗಳಲ್ಲೇ ಅವನ ಬಿಂಬ ಕಾಣಿ.
- ಅವನ ಬಾಲ್ಯದ ಫೋಟೋಗಳನ್ನು ಒಂದೆಡೆ ಶೇಖರಿಸಿ ಫೈಲ್ ಮಾಡಿಡಿ. (ಹೆಚ್ಚಾಗಿ ಮಗುವಾಗಿದ್ದಾಗಿನದು) ಅದರಲ್ಲಿ ಮುಂದಿನ ಮಗುವ ಬಿಂಬ ಕಾಣಿ. ಮೈ ನವಿರೇಳಿಸುವ ಪುಳಕವದು.
- ಮತ್ತೆ ಮತ್ತೆ ನೆನಪಿಸುವ ಅವನ ತುಂಬಾ ಹತ್ತಿರವೆನಿಸುವ ನೆನಪುಗಳನ್ನು ಮಾಡಿಕೊಳ್ಳುತ್ತೀರಿ. ಆ ಕ್ಷಣವನ್ನು ಎಂಜಾಯ್ ಮಾಡಿ ನೋಡಿ. ಜಸ್ಟ್ ಚಿಲ್ ಆಗಿ...
- ಅವನ ಗಿಫ್ಟ್‌ಗಳನ್ನು ಜೋಪಾನ ಮಾಡಿ. ಮತ್ತೆ ಅವನು ವಾಪಸ್ ಬರುವ ಹೊತ್ತಿನಲ್ಲಿ ನಾನಿಷ್ಟು ಅವನ ಅಭಿರುಚಿಗೆ ತಕ್ಕಂತೆ ನಿಮ್ಮ ಮನೋಗುಣ, ಡ್ರೆಸ್ಸಿಂಗ್ ಸೆನ್ಸ್, ನಡವಳಿಕೆಗಳನ್ನು ಬದಲಾಯಿಸಿಕೊಳ್ಳಿ. ಆತನಿಗೆ ಮತ್ತೆ ನಿಮ್ಮನ್ನು ನೋಡುವಷ್ಟರಲ್ಲಿ ಸರ್‌ಪ್ರೈಸ್ ನೀಡಿ. ಅವನ ಮೊಗದ ಆ ಸಂತೋಷ ನೋಡಿ.
- ಸಂಗಾತಿಯನ್ನು ಬಾಯಿ ರುಚಿಯಿಂದ ಬೇಗ ಸಂತೋಷ ಪಡಿಸಬಹುದು. ಹಾಗಾಗಿಯೇ ಒಳ್ಳೊಳ್ಳೆಯ ಅಡುಗೆ ತಿಂಡಿ ತಿನಿಸುಗಳನ್ನು ಮಾಡುವುದನ್ನು ಕಲಿಯಿರಿ. ಅವನಿಲ್ಲದ ಘಳಿಗೆಯನ್ನು ಅವನಿಗಾಗಿಯೇ ಮೀಸಲಿಡಿ.
- ನಿತ್ಯ ಅವನ ಯಾವ್ಯಾವ ಚೇಷ್ಟೆ, ವರ್ತನೆ ಅತಿ ನೆನಪಾಯಿತು ಎಂಬುದನ್ನು ನೋಟ್ ಮಾಡಿಡಿ. ಯಾವ ನೆನಪು ಸಾಕಷ್ಟು ಖುಷಿ ಕೊಟ್ಟಿತು ಅದನ್ನು ಕೂಡ ಡೈರಿಯಲ್ಲಿ ಬರೆದಿಡಿ.
- ಅವನೊಟ್ಟಿಗೆ ಓಡಾಡಿದ ಸ್ಥಳಗಳನ್ನು ಆಗಿಂದಾಗ್ಗೆ ಭೇಟಿ ನೀಡುತ್ತಲಿರಿ. ಅವನ ಸಂಬಂಧಿಕರು, ಗೆಳೆಯರು ಅವನ ಬಗೆಗೆ ಆಡುವ ಒಳ್ಳೆಯ ಮಾತುಗಳನ್ನು ಆಲಿಸಿ. ಒಳಗೊಳಗೆ ಹೆಮ್ಮೆ ಪಡಿ. ಸಂಗಾತಿ ಸುಮ್ಮನೆ ಅಲ್ಲ. ಅವನ ಖ್ಯಾತಿ ಎಲ್ಲೆಲ್ಲೂ ಹಬ್ಬಿದೆ.
- ಅವನ ಮೊದಲ ಭೇಟಿಯ ಶರ್ಟ್ ಇದ್ದರೆ. ತಾವೇ ಅದನ್ನು ತೊಟ್ಟು ಒಮ್ಮೆ ಕನ್ನಡಿಯಲ್ಲಿ ನಿಮ್ಮ ಬಿಂಬ ನೋಡಿಕೊಳ್ಳಿ. ಸುಮ್ಮನೆ ಅವನನ್ನು ಮನದಲ್ಲಿ ನೆನೆಯಿರಿ. ಆ ಖುಷಿ ಇದೆಯಲ್ಲಾ ಜಸ್ಟ್ ಫೀಲ್ ದಟ್..
ಇಷ್ಟು ಮಾಡಿ ನೋಡಿ ಹೊಸ ಸಂವತ್ಸರ, ಹೊಸ ಮನ್ವಂತರ ಶುರುವಾಗುತ್ತದೆ ಇನಿಯನ ಆಗಮನ ಹೊತ್ತಿಗಾಗಲೇ... ಇನಿಯನೊಂದಿಗೆ ಕಳೆವ ಹೊತ್ತು ಇದ್ದೇ ಇದೆ... ಅವನಿಲ್ಲದ ಆ ಹೊತ್ತನ್ನು ಜಸ್ಟ್ ಫೀಲ್ ಮಾಡುತ್ತಿರಿ. ಮೇಲೆ ಹೇಳಿರುವ ಎಲ್ಲಾ ಕಿವಿಮಾತುಗಳನ್ನು ಒಮ್ಮೆ ಪಾಲಿಸಿ. ಯುಗಗಳು ಕ್ಷಣಗಳಾಗಿ ಕಳೆದಿರುತ್ತವೆ ಇನಿಯನ ಆಗಮನದೊತ್ತಿಗೆ...
- ಭಾಗ್ಯಗೌಡ
bhagyabsvp@gmail.com