

ಏಳು ಸಮುದ್ರದಾಚೆಯಿಂದ ಕುದುರೆ ಏರಿ ಬರುವ ವೀರನ ಕನಸುಗಳ ಪರ್ವ ಇತಿಹಾಸ ಸೇರಿದೆ. ಈಗೇನಿದ್ದರೂ ಆಕೆ ವಾಸ್ತವಪ್ರಜ್ಞೆಯಿಂದಲೇ ಕನಸು ಕಾಣುತ್ತಾಳೆ. ನನ್ನ ಹುಡುಗ ಹಾಗಿರಬೇಕು, ಹೀಗಿರಬೇಕು ಎಂಬುದಷ್ಟೇ ಈಗಿನ ಹುಡುಗಿಯರ ಬೇಕು- ಬೇಡವಲ್ಲ. ಅದರ ಜೊತೆಗೆ ವಾಸ್ತವತೆಯ ನೆಲಗಟ್ಟಿನ ಮೇಲೆ ತನ್ನ ಹುಡುಗನಲ್ಲಿ ಗುಣಗಳನ್ನು ಓರೆಗಲ್ಲಿಗೆ ಹಚ್ಚುವ ಪ್ರವೃತ್ತಿಯನ್ನೂ ಬೆಳೆಸಿಕೊಂಡಿದ್ದಾರೆ. ಅವರನ್ನು ಹೇಗೆ ತೃಪ್ತಿಪಡಿಸಬೇಕೆಂಬುದು ಹುಡುಗರಿಗೆ ಕೂಡಾ ಕಷ್ಟದ ಕೆಲಸ. ಹಾಗಾದರೆ, ಆಕೆ ಆತನಿಂದ ಏನು ಬಯಸುತ್ತಾಳೆ?
ಸರ್ಪ್ರೈಸ್
ಚಾಕೊಲೇಟ್ಗಳಾಗಲೀ, ಅಪರೂಪಕ್ಕೆ ಬರೆದ ಪತ್ರವಾಗಲೀ, ಹೇಳದೇ ನೀವೇ ಎದುರಿಗೆ ಹೋಗಿ ನಿಲ್ಲುವುದಾಗಲೀ... ಇವುಗಳನ್ನು ನೀವು ಆಕೆ ಎಣಿಸಿರದೇ ಇದ್ದಾಗ ಮಾಡಿದರೆ ಖಂಡಿತಾ ನಿಮಗೆ ಸಕ್ಸಸ್ ಲಭಿಸುತ್ತದೆ. ಏಕೆಂದರೆ, ಇಂಥ ಅಚ್ಚರಿಗಳು ಆಕರ್ಷಣೆಯನ್ನು ಹೆಚ್ಚಿಸುತ್ತವೆ.
ಪಾರದರ್ಶಕತೆ
ಪ್ರಾಮಾಣಿಕತೆಗಿಂತ ಹೆಚ್ಚು ಆಕರ್ಷಿಸುವುದು ಇನ್ನಾವುದೂ ಇರಲಾರದೇನೋ. ನಿಜವಾಗಿಯೂ ಒಂದೊಳ್ಳೆಯ ಸಂಬಂಧ ಕಟ್ಟಿಕೊಳ್ಳಬೇಕೆಂಬುದು ನಿಮ್ಮ ಆಸೆಯಾಗಿದ್ದರೆ ಎಂದಿಗೂ ಸುಳ್ಳು ಹೇಳದಿರಿ. ಸಿಗರೇಟು ಸೇದುವುದಾದರೂ ಸರಿ, ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ. ಆಕೆಗೆ ನಿಮ್ಮ ಮೇಲೆ ನಂಬಿಕೆ ಹುಟ್ಟುತ್ತದೆ.
ದೃಢ ದೇಹ
ಪ್ರತಿದಿನ ವ್ಯಾಯಾಮ, ಯೋಗ, ಜಿಮ್, ದೇಹವನ್ನು ದೃಢವಾಗಿಡುವ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಆಕರ್ಷಕ ದೇಹಕ್ಕೆ ಆಕೆ ಖಂಡಿತಾ ಮಾರು ಹೋಗುತ್ತಾಳೆ.
ಡ್ರೆಸಿಂಗ್ ಸೆನ್ಸ್
ಕಾಲಕ್ಕೆ ಸರಿಯಾಗಿ ನಿಮ್ಮ ಸ್ಟೈಲ್ ಬದಲಾಯಿಸಿ. ಬಟ್ಟೆ, ಹೇರ್ಸ್ಟೈಲ್ಗಳಿಗೆ ಆಗಾಗ ಅಪ್ಡೇಟ್ ಆಗ್ತಾ ಇರಿ. ಒಳ್ಳೆಯ ಡಿಯೋಡ್ರೆಂಟ್ ಬಳಸಿ. ಎಣ್ಣೆ ಸುರಿದು ಕ್ರಾಪ್ ತೆಗೆದ ದೊಗಳೆ ಪ್ಯಾಂಟಿನ ಹುಡುಗನಿಗಿಂತ ಆಕರ್ಷಣಾಹೀನವಾದುದು ಆಕೆಗೆ ಇನ್ನೊಂದಿರಲಾರದು.
ನೀವೇ ಅಡುಗೆ ಮಾಡಿ
ನಗರದ ಪ್ರತಿಷ್ಠಿತ ರೆಸ್ಟೋರೆಂಟ್ಗಳಿಗೆ ನೀವು ಅವಳನ್ನು ಕರೆದೊಯ್ದಿರಬಹುದು. ಆದರೂ ಅಪರೂಪಕ್ಕೊಂದು ದಿನ ಆಕೆಗಾಗಿಯೇ ಏನಾದರೊಂದು ಅಡುಗೆ ನಿಮ್ಮ ಕೈಯಾರೆ ಮಾಡಿ ಕೊಡಿ. ಅಂಥ ಸಂದರ್ಭಗಳು ಸವಿನೆನಪುಗಳಾಗಿ ಆಕೆಯ ಮನಸ್ಸಿನಲ್ಲಿ ಅಚ್ಚೊತ್ತಿ ಬಿಡುತ್ತವೆ.
- ಮುನಿಯಮ್ಮ