ವ್ಯಕ್ತಿತ್ವ ವ್ಯಸನ

ದುಶ್ಚಟದ ದಾಸನಾದ ವ್ಯಕ್ತಿ ಆ ವಿಷ ವರ್ತುಲದಿಂದ ಹೊರಬರುವುದು ಸುಲಭವಲ್ಲ. ಆದರೂ ಆತನನ್ನು ಸಮಾಜದ ಉತ್ತಮ ಪ್ರಜೆಯಾಗಿ ರೂಪಿಸಲು ಹಲವು ಮಾರ್ಗಗಳಿವೆ...
ವ್ಯಕ್ತಿತ್ವ ವ್ಯಸನ
Updated on: 

ದುಶ್ಚಟದ ದಾಸನಾದ ವ್ಯಕ್ತಿ ಆ ವಿಷ ವರ್ತುಲದಿಂದ ಹೊರಬರುವುದು ಸುಲಭವಲ್ಲ. ಆದರೂ ಆತನನ್ನು ಸಮಾಜದ ಉತ್ತಮ ಪ್ರಜೆಯಾಗಿ ರೂಪಿಸಲು ಹಲವು ಮಾರ್ಗಗಳಿವೆ.
ಇಂಥ ಕಾಯಕದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಹಲವು ಎನ್‌ಜಿಒಗಳು ಇವೆಯಾದರೂ ಅದಕ್ಕೆ ತದ್ವಿರುದ್ಧವಾಗಿ ಕೆಲಸ ಮಾಡುವಂಥವುಗಳೂ ಇವೆ. ಆಪ್ತ ಸಲಹೆ ನೀಡುವ ಬದಲು ವ್ಯಸನಿಗೆ ಚಿತ್ರಹಿಂಸೆ ನೀಡುವ ಪುನರ್ವಸತಿ ಕೇಂದ್ರಗಳೂ 'ನಾಯಿಕೊಡೆ'ಗಳಂತೆ ತಲೆ ಎತ್ತುತ್ತಿವೆ. ಇದರಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಕೇಂದ್ರಗಳು ಮುಜುಗರ ಅನುಭವಿಸುವಂತಾಗಿದೆ. ದುಶ್ಚಟಕ್ಕೆ ಬೀಳುವವರ ಸಂಖ್ಯೆಯೂ ದಿನೇ ದಿನೇ ಮಿತಿಮೀರಿ ಬೆಳೆಯುತ್ತಿರುವುದರಿಂದ ಇದನ್ನೇ ಎನ್‌ಕ್ಯಾಷ್ ಮಾಡಿಕೊಳ್ಳುವವರೂ ಹೆಚ್ಚುತ್ತಿದ್ದಾರೆ.

ನಿಮ್ಮನ್ನು ನೀವು ತಿದ್ದಿಕೊಳ್ಳಿ
'ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ಕಸುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನಸ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚನು ಕೂಡಲ ಸಂಗಮದೇವ'

- ಎಂಬ ಬಸವಣ್ಣನವರ ವಚನದಂತೆ ಮೊದಲು 'ನಮ್ಮನ್ನು ನಾವು ಸರಿಪಡಿಸಿಕೊಳ್ಳಬೇಕು'. ಆದರೆ, ಹಲವು ಮದ್ಯವ್ಯಸನ ವಿಮುಕ್ತಿ ಕೇಂದ್ರಗಳನ್ನು ನಡೆಸುವವರೇ ವ್ಯಸನಿಗಳಾಗಿರುವುದು ವಿಪರ್ಯಾಸ. ಬೀಡಿ, ತಂಬಾಕುಗಳನ್ನೂ ಕೇಂದ್ರ ನಡೆಸುವವರೇ ಪೂರೈಸುತ್ತಾರೆ ಎಂದು ವ್ಯಸನಿಗಳೇ ಹೇಳುತ್ತಾರೆ. ತಮ್ಮಲ್ಲಿರುವ ಹುಳುಕನ್ನು ಸರಿಪಡಿಸಿಕೊಳ್ಳದೇ ಬೇರೆಯವರಿಗೆ ಚಿಕಿತ್ಸೆ ನೀಡಲು ಹೇಗೆ ಸಾಧ್ಯ?

ಕೇಂದ್ರ ತೆರೆಯಲು ಮಾನದಂಡ
ವ್ಯಸನಮುಕ್ತ ಕೇಂದ್ರಗಳೆಂದರೆ ಮನಸ್ಸಿಗೆ ಸಂಬಂಧಿಸಿದ ಚಿಕಿತ್ಸೆ ನೀಡುವುದು. ಅದಕ್ಕೆ ಮಾನಸಿಕ ಆರೋಗ್ಯ ಕಾಯಿದೆ ಅಡಿಯಲ್ಲಿ ಲೈಸೆನ್ಸ್ ಪಡೆದಿರಲೇಬೇಕು. ಈ ರೀತಿ ಎನ್‌ಜಿಒ ನಡೆಸುವವರು ಮನೋವೈದ್ಯರು, ಮನಃಶಾಸ್ತ್ರಜ್ಞರು, ಫಿಸಿಷಿಯನ್ ಅಥವಾ ಎಂಎಸ್‌ಡಬ್ಲ್ಯುನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜತೆಗೆ ಕೇಂದ್ರದಲ್ಲಿ ಫುಲ್‌ಟೈಮ್ ನರ್ಸಿಂಗ್ ಸ್ಟಾಫ್ ಇರಲೇಬೇಕು.

ಟೀಮ್ ವರ್ಕ್‌ನಿಂದ ಹಾಗೂ ಧ್ಯಾನ, ಪ್ರಾಣಾಯಾಮ, ಕೆಲವು ಥೆರಪಿಗಳನ್ನು ತಜ್ಞರು ರೋಗಿಗಳಿಗೆ ನೀಡುವುದರಿಂದ ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ಮಾನಸಿಕ ಸ್ವಾಸ್ಥ್ಯ ಮರಳಿ ಪಡೆಯಲು ಸಾಧ್ಯ. ಬದಲಾಗಿ ಹಿಂಸೆ ನೀಡುವ ಮೂಲಕ ಆತನನ್ನು ಮತ್ತಷ್ಟು ಕುಗ್ಗುವಂತೆ ಮಾಡಿದರೆ ಯಾರನ್ನೂ, ಯಾವುದೇ ದುರಭ್ಯಾಸದಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ.
ವ್ಯಸನಿಗಳಿಗೆ ಬೇಕಾಗಿರುವುದು ದೈಹಿಕ ತೊಂದರೆಗೆ ಸೂಕ್ತ ಚಿಕಿತ್ಸೆ, ಮಾನಸಿಕ ಸ್ಥೈರ್ಯ ಹೆಚ್ಚಿಸಿಕೊಳ್ಳಲು ಆಪ್ತ ಸಲಹೆ. ಮುಖ್ಯವಾಗಿ ಆತ ರೂಢಿಸಿಕೊಂಡಿರುವ ದುರಭ್ಯಾಸದಿಂದ ಆತನಿಗೆ ಆಗುತ್ತಿರುವ ದೈಹಿಕ ಹಾಗೂ ಮಾನಸಿಕ ತೊಂದರೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿ ಸರಿ ತಪ್ಪುಗಳ ನಡುವಿನ ವ್ಯತ್ಯಾಸಗಳನ್ನು ತಿಳಿಹೇಳುವುದು ಅತ್ಯಗತ್ಯ. ಹಣಕ್ಕಾಗಿ ವ್ಯಕ್ತಿಯನ್ನು ಹಿಂಸಿಸಿದರೆ ದ್ವೇಷ, ಖಿನ್ನತೆ, ಸಮಾಜಘಾತುಕ ವ್ಯಕ್ತಿತ್ವ, ಆತ್ಮಹತ್ಯಾ ಮನೋಭಾವ ಹೆಚ್ಚುವುದೇ ವಿನಾ ಕಡಿಮೆಯಾಗುವುದಿಲ್ಲ.

ವ್ಯಸನಮುಕ್ತತೆ ಸುಲಭವಲ್ಲ
ವ್ಯಸನಿಗಳಿಗೆ ಚಿಕಿತ್ಸೆ ನೀಡುವ ಮೊದಲು ಆತನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸೂಕ್ತವಾಗಿ ಪರೀಕ್ಷಿಸಿರಬೇಕು. ಆ ಆಧಾರದಲ್ಲಿಯೇ ಚಿಕಿತ್ಸೆಗೆ ಅಗತ್ಯವಿರುವ ಅವಧಿಯನ್ನು ನಿರ್ಧರಿಸಬೇಕು. ಬದಲಾಗಿ ಹೆಚ್ಚು ದಿನ ಚಿಕಿತ್ಸೆ ನೀಡಿದರೆ ರೋಗಿ ಸರಿ ಹೋಗುತ್ತಾನೆ ಎಂಬುದು ತಪ್ಪುಕಲ್ಪನೆ.

ವ್ಯಸನಮುಕ್ತರಾಗಿಸುತ್ತೇವೆ ಎಂದು ಶೇ.100ರಷ್ಟು ಭರವಸೆ ನೀಡುವುದೂ ಅಸಾಧ್ಯ. ಚಟವನ್ನು ಕಲತಷ್ಟು ಬಿಡೋದು ಸುಲಭವಲ್ಲ. ಅದು ಮನಸ್ಸಿನ ದೃಢ ಹಾಗೂ ಅಚಲ ನಿರ್ಧಾರದ ಮೇಲೆ ಅವಲಂಬಿತವಾಗುತ್ತದೆ. ಚಟ ಕಲಿತವನ ದೇಹ ಹಾಗೂ ಮನಸ್ಸು ಎರಡೂ ಕಾಯಿಲೆಗೆ ಬಿದ್ದಿರುತ್ತದೆ. ದೈಹಿಕ ತೊಂದರೆಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬಹುದು. ಆದರೆ, ಮನಸ್ಸಿನ ರೋಗವನ್ನು ವ್ಯಕ್ತಿಯ ಸಂಪೂರ್ಣ ಸಹಕಾರವಿಲ್ಲದೇ ಮಾನಸಿಕ ತೊಂದರೆಗಳಿಗೆ ಔಷಧಿ ನೀಡುವುದು ಸಾಧ್ಯವೇ ಇಲ್ಲ. ಅಕಸ್ಮಾತ್ ಆತನಿಗೆ ತಿಳಿಯದಂತೆ ಮದ್ದು ನೀಡಿದರೂ ಅದು ಸುದೀರ್ಘವಾಗಿ, ಪರಿಣಾಮಕಾರಿ ಆಗಿರುವುದಿಲ್ಲ.
ವ್ಯಸನಿಗಳನ್ನು ಸೂಕ್ತ ಚಿಕಿತ್ಸೆ ನೀಡುವ ಕೇಂದ್ರಗಳಿಗೆ ಕರೆದುಕೊಂಡು ಹೋಗಬೇಕೇ ವಿನಾ ಸುಳ್ಳು ಭರವಸೆ ನೀಡಿ ನೂರಾರು ದಿನಗಳು ಚಿಕಿತ್ಸೆ ನೀಡುವಂಥ ಸೆಂಟರ್‌ಗಳಿಗೆ ಅಲ್ಲ. ಎಷ್ಟು ದಿನ, ಎಷ್ಟು ಹಣಕ್ಕೆ ಚಿಕಿತ್ಸೆ ನೀಡುತ್ತಾರೆ ಎನ್ನುವುದಕ್ಕಿಂತ ಯಾವ ರೀತಿ? ಏನು ಚಿಕಿತ್ಸೆ ನೀಡುತ್ತಾರೆ? ಅದು ಹೇಗೆ ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ಆಸ್ಪತ್ರೆಗೆ ರೋಗಿಯನ್ನು ಸೇರಿಸುವ ಮುನ್ನ ಖಾತ್ರಿಪಡಿಸಿಕೊಳ್ಳಿ.

(ಲೇಖಕರು ಮನಃಶಾಸ್ತ್ರಜ್ಞ- ಮೊ. 9880441703)

- ಸದಾನಂದ್ ಕೆ.ಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com