ಬೋಟಾಕ್ಸ್ ಬ್ಯೂಟಿ!

ಬೋಟಾಕ್ಸ್ ಬ್ಯೂಟಿ!
Updated on: 

ಇಂದು ಎಲ್ಲಾ ವಯಸ್ಸಿನ ಹೆಣ್ಣು ಮಕ್ಕಳಿಗೆ ಇರುವ ಒಂದೇ ಒಂದು ಆಸೆ ಎಂದರೆ, ತಾವು ಸದಾಕಾಲ ಯುವತಿಯರಾಗಿಯೇ, ಸೌಂದರ್ಯವತಿಯರಾಗಿಯೇ ಇರಬೇಕೆನ್ನುವುದು. ಅದಕ್ಕಾಗಿ ಅವರು ಅದೆಷ್ಟೇ ದುಬಾರಿಯಾದರೂ ದಿನಕ್ಕೊಂದು ಮಾರ್ಗವನ್ನು ಅನುಸರಿಸುವತ್ತಲೇ ತಮ್ಮ ಚಿತ್ತವನ್ನು ಹರಿಸುತ್ತಾರೆ. ಅಂಥ ಮಹಿಳೆಯರಿಗಾಗಿ ರೂಪಿಸಿರುವ, ಅತಿಯಾಗಿ ಬೇಡಿಕೆ ಇರುವ ವೈಜ್ಞಾನಿಕ ವಿಧಾನ ಬೋಟಾಕ್ಸ್ ಚಿಕಿತ್ಸೆ. ಇದು ನಗರವಾಸಿ ಮಧ್ಯ ವಯಸ್ಸಿನ ದುಡಿಯುವ ಹೆಂಗಳೆಯರು ಮಾರುಹೋಗಿರುವ ಸುಲಭ ಮತ್ತು ಸಂಭಾಳಿಸಬಲ್ಲಷ್ಟು ಖರ್ಚಿನ ಚಿಕಿತ್ಸೆ.

ಬೋಟಾಕ್ಸ್(Bot) ಅಂದರೇನು ?
ಬೋಟಾಕ್ಸ್ ಎನ್ನುವುದೊಂದು ಇಂಜೆಕ್ಷನ್. ಇದು ಅತ್ಯಂತ ಕಡಿಮೆ ಯುನಿಟ್‌ಗಳ ಪ್ರೊಟೀನ್ ಹೊಂದಿರುತ್ತದೆ. ಈ ವಿಧಾನದಲ್ಲಿ ಇಂಜೆಕ್ಷನ್‌ಗಳನ್ನು ಸುಕ್ಕುಗಳಿರುವ ಕಡೆ (ಉದಾ: ಕುತ್ತಿಗೆ, ಗಲ್ಲ ಉಬ್ಬು...) ಕೊಡಲಾಗುತ್ತದೆ. ಇದರಿಂದ ಸತ್ತಕೋಶ(ಡೆಡ್ ಸೆಲ್ಸ್)ಗಳು ಹೊರಹೊಮ್ಮಿ ಚರ್ಮವು ಬಿಗಿಯಾಗಿ ಮತ್ತು ಸುಂದರವಾಗಿ ಕಾಣುತ್ತದೆ. ಅಗಲ ಬಾಯಿ ಮತ್ತು ದವಡೆ ಇದ್ದವರು ಕೂಡ ಬೋಟಾಕ್ಸ್ ಚಿಕಿತ್ಸೆಯಿಂದ ಮಾಂಸಖಂಡಗಳ ಬಿಗಿಗೊಳಿಸಿಕೊಂಡು ಆಕರ್ಷಕವಾಗಿ ಕಾಣಬಹುದು.
ಮುಖದ ಕಾಂತಿಹೀನತೆ, 35-40 ದಾಟಿದ ನಂತರ ಗೋಚರಿಸುವ ನೆರಿಗೆಗಳ ಸರಿಸಿ, ಹೆಚ್ಚು ಕಾಲ ತರುಣಿಯರಾಗಿಯೇ ಕಾಣಿಸಿಕೊಳ್ಳ ಬಯಸುವ ಮಹಿಳೆಯರಿಗೆ ಇದೊಂದು ಅತ್ಯುತ್ತಮ ಚಿಕಿತ್ಸೆ ಎನ್ನುವ ಅಭಿಮತ ಕಾಸ್ಮೆಟಿಕ್ ಸರ್ಜನ್‌ಗಳದ್ದು.

ಕಾಲ ಮತ್ತು ಖರ್ಚು
ಈ ಚಿಕಿತ್ಸೆಗೆ ಕೇವಲ 20ರಿಂದ 30 ನಿಮಿಷ ಸಾಕು. ವ್ಯಕ್ತಿಗಳ ಆದ್ಯತೆಗೆ ಅನುಸಾರವಾಗಿ ಖರ್ಚ ನಿಧಾರವಾಗುತ್ತದೆ. ಅಂದಾಜು ಐದರಿಂದ ಇಪ್ಪತ್ತು ಸಾವಿರ ಆಗಬಹುದು. ಇದರ ಪರಿಣಾಮ ಸುಮಾರು ನಾಲ್ಕರಿಂದ ಆರು ತಿಂಗಳವರೆಗೆ ಇರುತ್ತದೆ.

ವಿಧಾನ
ಚಿಕಿತ್ಸೆ ನೀಡುವ ಜಾಗವನ್ನು ಮೊದಲು ಶುಚಿಗೊಳಿಸಿ, ಮಸಾಜ್ ಮತ್ತು ಫೇಸ್ ಪ್ಯಾಕ್ ಅನ್ನು ಹಾಕಲಾಗುತ್ತದೆ. ನಂತರ ಇಂಜೆಕ್ಷನ್ ಕೊಡಲಾಗುತ್ತದೆ. ಚಿಕಿತ್ಸೆಯ ಫಲಿತಾಂಶ ನಿಮ್ಮ ಮುಖದಲ್ಲಿ ಕಾಣಲು ಆರೆಂಟು ದಿನಗಳು ಬೇಕಾಗುತ್ತದೆ. ಸೌಂದರ್ಯ ಹೆಚ್ಚಿಸಲು ನೂರಾರು ವಿಧಾನಗಳಿವೆ ಯೋಚಿಸಿ, ಯೋಜಿಸಿ ತಜ್ಞರ ಅಣತೆಯಂತೆ ಮುಂದುವರೆದರೆ ಪರಿಣಾಮ ಹೆಚ್ಚು ಎನ್ನುವುದು ನೆನಪಿರಲಿ.

ಚಿಕಿತ್ಸೆಗೆ ಮೊದಲು

  • ಚಿಕಿತ್ಸೆಗೆ ಒಳಗಾಗುವ ಐದಾರು ತಾಸು ಮುನ್ನ ಕಾಫಿ-ಟೀ ತೆಗೆದುಕೊಂಡಿರಬಾರದು.
  • ಮದ್ಯಪಾನ, ಧೂಮಪಾನ ಚಟವಿದ್ದವರು ಚಿಕಿತ್ಸೆ ತೆಗೆದುಕೊಳ್ಳುವ ಎರಡು ಮೂರು ದಿನಗಳ ಮೊದಲೇ ಅವುಗಳಿಂದ ದೂರವಿರಬೇಕು.
  • ಅಲರ್ಜಿಯುಕ್ತ ಚರ್ಮ ನಿಮ್ಮದಾಗಿದ್ದರೆ ಚಿಕಿತ್ಸೆಗೆ ಒಳಗಾಗುವ ಮುನ್ನವೇ ಚರ್ಮ ವೈದ್ಯರ ಕಂಡು ಸಲಹೆ ಪಡೆದರೆ ಉತ್ತಮ.
  •  ಗರ್ಭಾವಸ್ಥೆಯಲ್ಲಿರುವವರು ಹಾಗೂ ಮಗುವಿಗೆ ಹಾಲುಣಿಸುವ ತಾಯಂದಿರು ಚಿಕಿತ್ಸೆಗೆ ಒಳಗಾಗದಿರುವುದೇ ಆರೋಗ್ಯದ ದೃಷ್ಟಿಯಿಂದ ಉತ್ತಮ.
- ಜಮುನಾ ರಾಣಿ ಎಚ್.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com