

ಚಳಿಗಾಲದಲ್ಲಿ ತಲೆ ಕೂದಲು ಉದುರುವುದು ಕಾಮನ್. ಹೊಟ್ಟಿನ ಸಮಸ್ಯೆಯೂ ಹೆಚ್ಚು. ಮೇಲ್ನೋಟಕ್ಕೆ ಇದು ಸಾಮಾನ್ಯ ಸಮಸ್ಯೆ. ಆದರೆ, ಒಣಗಿದ ಹಾಗೂ ತುರಿಕೆಯ ಸಮಸ್ಯೆ ಎದುರಿಸುತ್ತಿರುವವರಿಗೆ ಬಿಳಿಯ ಹೊಟ್ಟು ದೊಡ್ಡ ತಲೆಬೇನೆ!
ಚರ್ಮ ಒಣಗುವುದಕ್ಕೆ ವಾತಾವಾರಣ ತಣ್ಣಗಾಗುವುದು ಹಾಗೂ ತೇವಾಂಶದಲ್ಲಿನ ವ್ಯತ್ಯಾಸ ಕಾರಣ. ಇದರಿಂದಾಗಿ ತಲೆಯ ಭಾಗದಲ್ಲಿನ ಚರ್ಮವು ಒಣಗಿ ಬಿಳಿಯ ಹೊಟ್ಟಿನ ರೀತಿಯಲ್ಲಿ ಉದುರಲು ಆರಂಭಿಸುತ್ತದೆ. ಇದೇ ಕಾರಣದಿಂದಲೇ ಕೂದಲಿನ ಬುಡ ಭಾಗವು ದುರ್ಬಲಗೊಂಡು ಕೂದಲುದುರುವಿಕೆ ಹೆಚ್ಚುತ್ತದೆ.
ತಡೆ ಹೇಗೆ?
ತಲೆ ಶುಚಿತ್ವ ಕಾಪಾಡಿಕೊಳ್ಳಲು ಮೊದಲು ಆದ್ಯತೆ ನೀಡಬೇಕು. ಇದರಿಂದಾಗಿ ಹೊಟ್ಟು ಹಾಗೂ ಕೂದಲುದುರುವಿಕೆಯ ಸಮಸ್ಯೆಯನ್ನು ನಿಯಂತ್ರಿಸಬಹುದು.
ಗಮನಾರ್ಹ ಸಂಗತಿ ಎಂದರೆ, ಬೇಸಿಗೆಯಲ್ಲಿ ಬಳಸುವಂಥ ಬಹುತೇಕ ಶಾಂಪೂಗಳು ಚಳಿಗಾಲಕ್ಕೆ ಒಗ್ಗುವುದಿಲ್ಲ. ಚಳಿಗಾಲದಲ್ಲಿ ಕಡಿಮೆ ಸಾಂದ್ರತೆ ಇರುವಂಥ ಹಾಗೂ ತಲೆಯ ಭಾಗಕ್ಕೆ ತೇವಾಂಶ ಒದಗಿಸಬಲ್ಲ ಶಾಂಪೂ ಬಳಕೆ ಉತ್ತಮ.
ಒಂದು ವೇಳೆ ಅತಿಯಾದ ತಲೆಹೊಟ್ಟು ಇದ್ದಲ್ಲಿ ಡ್ಯಾಂಡ್ರಫ್ ಶಾಂಪೂ ಬಳಸಿ. ಇದರಿಂದಾಗಿ ತುರಿಕೆ, ಶುಷ್ಕತನ ದೂರವಾಗುತ್ತದೆ. ಕೆಲವು ಗೃಹ ಬಳಕೆಯ ಸಾಮಗ್ರಿಗಳಾದ ತೈಲ ಹಾಗೂ ಮೊಟ್ಟೆಯ ಬಿಳಿಭಾಗವೂ ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ನೆರವಾಗುತ್ತದೆ.
ಈ ರೀತಿಯ ಸರಳ, ಸುಲಭದ ವಿಧಾನಗಳನ್ನು ಅನುಸರಿಸುವ ಮೂಲಕ ತಿಂಗಳುಗಳ ಅವಧಿಯಲ್ಲಿ ನಿಧಾನವಾಗಿ ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತರಾಗಬಹುದು. ಒಂದು ವೇಳೆ ಹೊಟ್ಟು, ತುರಿಕೆ ಮುಂದುವರಿದಲ್ಲಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಿ.
ಚರ್ಮದ ಶುಷ್ಕತನಕ್ಕೆ ನಾನಾ ಕಾರಣಗಳು. ಇವುಗಳನ್ನು ಕೇವಲ ವೈದ್ಯರಿಂದ ಮಾತ್ರ, ಸಮಸ್ಯೆ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ. ನೀವೇ ವೈದ್ಯರಾಗಬೇಡಿ.
ಅನೇಕ ಬಗೆಗಳು
ಈ ತಲೆಹೊಟ್ಟಿನಲ್ಲೂ ಹಲವು ವಿಧಗಳಿವೆ. ಚರ್ಮಕ್ಕೆ ಇದು ತಂದೊಡ್ಡುವ ತಾಪತ್ರಯ ಹಲವು. ಅಂಥ ಕೆಲ ಬಗೆಗಳು ಇಲ್ಲಿ...
ಸೆರ್ಬೋಹೆಕ್ ಡರ್ಮಟೈತಿಸ್
ಕೆಂಪು ಹಾಗೂ ತೈಲಯುಕ್ತವಾದ ಚರ್ಮ ಇಲ್ಲಿ ಕಾಣಿಸುತ್ತದೆ. ಜತೆಗೆ ಬಿಳಿಯ ಅಥವಾ ಹಳದಿ ಬಣ್ಣದ ಹೊಟ್ಟು ಉದುರಲು ಶುರುವಾಗುತ್ತದೆ. ಇದು ಕೇವಲ ತಲೆಯ ಭಾಗವನ್ನಷ್ಟೇ ಅಲ್ಲ. ಕಣ್ಣಿನ ಹುಬ್ಬು, ಮೂಗಿನ ಬದಿಭಾಗಗಳಲ್ಲಿ ಕಿವಿಯ ಹಿಂಭಾಗದಲ್ಲಿ, ತೊಡೆಯ ಸಂದುಗಳಲ್ಲಿ ಹಾಗೂ ಕಂಕುಳಿನಲ್ಲಿಯೂ ಕಾಣಿಸಿಕೊಳ್ಳುತ್ತದೆ.
ಸೋರಿಯಾಸಿಸ್
ಈ ಚರ್ಮದ ಸಮಸ್ಯೆಯು ಡೆಡ್ಸ್ಕಿನ್ ಸೆಲ್ಸ್ನಿಂದಾಗಿ ಕಾಣಿಸಿಕೊಳ್ಳುತ್ತದೆ. ತಲೆ ಭಾಗದಲ್ಲಿನ ಸೊರಿಯಾಸಿಸ್ ಕೆಂಪು ಬಣ್ಣಕ್ಕೆ ತಿರುಗಿ ಹಣೆ ಹಾಗೂ ಕುತ್ತಿಗೆ ಮತ್ತು ಬೆನ್ನಿನ ಭಾಗದವರೆಗೂ ಹರಡುತ್ತದೆ.
ಫಂಗಲ್ ಇನ್ಫೆಕ್ಷನ್
ಮಲಸೇಝಿಯಾ ಪ್ರಭೇದ ಫಂಗಸ್ ವಯಸ್ಕರಲ್ಲಿ ನೈಸರ್ಗಿಕವಾಗಿಯೇ ಕಾಣಿಸಿಕೊಳ್ಳುವ ಮೂಲಕ ತಲೆಯಭಾಗದಲ್ಲಿನ ಎಣ್ಣೆಯ ಅಂಶವನ್ನು ಬಳಸಿಕೊಂಡು ಬೆಳೆಯುತ್ತದೆ. ಇದು ಅಷ್ಟೇನೂ ಹಾನಿಕಾರ ಅನಿಸದೇ ಇದ್ದರೂ, ಫಂಗಸ್ ಹೆಚ್ಚಾದಂತೆ ತಲೆ ಭಾಗದಲ್ಲಿ ತುರಿಕೆ ಹೆಚ್ಚಾಗಿ ಹೊಟ್ಟೂ ವೃದ್ಧಿಸುತ್ತದೆ.
ಎಕ್ಜೇಮಾ
ಈ ಗುಣಲಕ್ಷಣ ಕಾಣಿಸಿಕೊಂಡಲ್ಲಿ ತಲೆಯ ಭಾಗದ ಚರ್ಮ ಬಹುಬೇಗನೆ ತೇವಾಂಶ ಕಳೆದುಕೊಂಡು ಕೆಂಬಣ್ಣಕ್ಕೆ ತಿರುಗಿ, ಒಡೆದುಕೊಳ್ಳುತ್ತದೆ. ತಲೆಯ ಭಾಗ ಅಲ್ಲದೆ ಮುಖ, ಕಿವಿ, ಎದೆ ಹಾಗೂ ಇತರ ಭಾಗಗಳಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ತಲೆ ಹೊಟ್ಟು ಹಾಗೂ ತುರಿಕೆ ಹೆಚ್ಚಾದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಇದರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಡಾ. ಶಾಹಿದ್ ಶಂಶೀರ್ (080-23568290)