

ಒತ್ತಡ ವಯಸ್ಸನ್ನು ನೋಡಿ ಬರುವುದಿಲ್ಲ. ಅದು ಸಹಜ ಪ್ರಕ್ರಿಯೆ. ಬಾರದಂತೆ ಮಾಡಲು ಸಾಧ್ಯವೇ ಇಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಒತ್ತಡಗಳು ಒಳಿತನ್ನೇ ಮಾಡುವುದಿದೆ. ಇಂಥ ಕೆಲಸ ಇಂತಿಷ್ಟು ಸಮಯದಲ್ಲಿ ಆಗಲೇ ಬೇಕು ಎಂಬ ಚೌಕಟ್ಟು ಇದ್ದಾಗ ಪರಿಣಾಮಕಾರಿ ಸಾಧನೆ ಸಾಧ್ಯ. ಅಂಥ ಸಮಯದಲ್ಲಿ ಉದಾಸೀನ, ಉಡಾಫೆಗಳ ಲೇಪವೂ ಹತ್ತಿರ ಸುಳಿಯದು.
ಇಷ್ಟವಿದ್ದ ಕೆಲಸ ಮಾಡುವಾಗ ಒತ್ತಡ ನಿರ್ಮಾಣವಾದರೆ ಅದನ್ನು ಆಸಕ್ತಿಯಿಂದ ಸ್ವೀಕರಿಸುವ ಮನೋಬಲ ನಮ್ಮಲ್ಲಾಗಲೇ ಸೃಷ್ಟಿಯಾಗಿರುತ್ತದೆ. ಆದರೆ, ಇಷ್ಟವಿರದ ಕೆಲಸಗಳನ್ನು ನಿರ್ವಹಿಸುವಾಗ, ಮನಸ್ಸಿಗೆ ಹಿತವೆನಿಸದ ಸಂಗತಿಗಳ ಕುರಿತಾಗಿ ಯೋಚಿಸುವಾಗ ಉಂಟಾಗುವ ಒತ್ತಡ ಅತ್ಯಂತ ಕೆಟ್ಟದ್ದು. ಇದರಿಂದ ತಲೆ ನೋವು, ತಲೇ ಭಾರವಾಗುವುದು, ಮಾನಸಿಕ ಕಿರಿಕಿರಿ, ಆಯಾಸ, ಹಸಿವಿದ್ದರೂ ಊಟ ಸೇವಿಸಲು ಮನಸ್ಸಾಗದಿರುವುದು, ದುರಭ್ಯಾಸಗಳತ್ತ ಚಿತ್ತ ಹರಿಸುವಂತಾಗುವುದು ಇತ್ಯಾದಿ ಅನಾರೋಗ್ಯಕರ ಪರಿಣಾಮ ಬೀರಬಲ್ಲದು. ಹೆಚ್ಚಿನ ಶಕ್ತಿ, ತ್ರಾಣ ಮತ್ತು ಜಾಗರೂಕತೆಯನ್ನು ಬಯಸುವ ದೇಹದ ಪ್ರತಿಕ್ರಿಯೆಯೇ ಒತ್ತಡ. ಆ ಒತ್ತಡವನ್ನು ಸಂಭಾಳಿಸುವ ತಾಕತ್ತು ನಿಮ್ಮದಾಗಬೇಕು. ಈ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ ಕೇಳಿ...
ದುರಭ್ಯಾಸ ದಿಂದ ದೂರ
ಧೂಮಪಾನ, ಮದ್ಯಪಾನ.
ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಆಹಾರ ಸೇವನೆ.
ಟಿವಿ ಅಥವಾ ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು
ಸ್ನೇಹಿತರು, ಸಂಬಂಧಿಗಳಿಂದ ದೂರವಾಗಿ ಒಂಟಿಯಾಗಿರುವುದು.
ಒತ್ತಡ ನಿವಾರಣಾ ಮಾತ್ರೆ ಅಥವಾ ಡ್ರಗ್ಸ್ ತೆಗೆದುಕೊಳ್ಳುವುದು.
ಹೆಚ್ಚು ಸಮಯ ನಿದ್ರಿಸುವುದು ಅಥವಾ ನಿದ್ರೆಗೆಡುವುದು.
ಒತ್ತಡದ ಮೂಲಗಳು
ಯಾರಾದರು ಹೆಚ್ಚು ತಲೆತಿನ್ನುವವರಿದ್ದರೆ ಅವರ ಜೊತೆ ಸಮಯ ಕಳೆಯುವುದನ್ನು ಕಡಿಮೆ ಮಾಡಿ. ಅಥವಾ ಅಂಥವರ ಸಂಬಂಧವನ್ನೇ ಕಡಿದುಕೊಳ್ಳಿ. ಮೊದಲಿಗೆ ನಿಮ್ಮ ಆರೋಗ್ಯ ಎಲ್ಲಕ್ಕಿಂತ ಮಿಗಿಲು. ಹೀಗೆ ಒತ್ತಡದ ಮೂಲವನ್ನು ಹುಡುಕಿ ಅದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿ ಒತ್ತಡ ಮುಕ್ತರಾಗಬಹುದು.
ಸಕಾರಾತ್ಮಕ ಮಾತು
ಅವರಿಂದ ನನಗೆ ಅನ್ಯಾಯವಾಯಿತು, ಇವರು ನನಗೆ ಮೋಸ ಮಾಡಿದರು ಇತ್ಯಾದಿಯಾಗಿ ನೀವು ಅನುಭವಿಸಿದ ನಕಾರಾತ್ಮಕ ಅನುಭವಗಳನ್ನೇ ಪದೇಪದೆ ಇತರರೊಂದಿಗೆ ಹೇಳುತ್ತಿದ್ದರೆ ಒತ್ತಡ ಮತ್ತಷ್ಟು ಜಾಸ್ತಿಯಾಗುತ್ತದೆ. ನೀವು ಮಾಡಿದ ಒಳ್ಳೆಯ ಕೆಲಸಗಳ ಕುರಿತು ಹೆಚ್ಚು ಮಾತನಾಡಿ. ಅಷ್ಟಕ್ಕೂ ನೀವು ಒಳ್ಳೆಯ ಕೆಲಸಗಳನ್ನೇ ಮಾಡಿಲ್ಲವೇ?
ಕಣ್ಮುಚ್ಚಿಕೊಂಡು ಎದುರಿಸಿ!
ಮಾರಣಾಂತಿಕ ಕಾಯಿಲೆ ಬಂದಿದೆ. ಇನ್ನು ನೀವು ಬದುಕಿರುವ ದಿನಗಳು ಕಡಿಮೆ ಎಂಬಿತ್ಯಾದಿ ಆಘಾತಕಾರಿ ಒತ್ತಡಗಳು ಸಂಭವಿಸಿದಾಗ ಸಹಜವಾಗಿ ಎದುರಿಸಿ. ಅಯ್ಯೋ ನನಗೆ ಹೀಗಾಯ್ತಲ್ಲಾ..! ಅಂತ ಕೊರಗುತ್ತಿದ್ದರೆ ಮತ್ತಷ್ಟು ಒತ್ತಡ ಹೆಚ್ಚಾಗಿ ವೈದ್ಯರು ಕೊಟ್ಟ ಸಮಯಕ್ಕಿಂತ ಮುನ್ನವೇ ಅವರು ಹೇಳಿದ್ದು ಘಟಿಸಬಹುದು.
ಅಲ್ಲಿಗೇ ಮರೆತು ಬಿಡಿ
ಮನಸ್ಸಿನ ನೋವನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಿ. ನಂತರ ಮರೆತು ಬಿಡಿ. ಒಂದು ವೇಳೆ ನಿಯತ್ತಿನ ಸ್ನೇಹಿತ ನಿಮಗಿಲ್ಲದಿದ್ದರೆ ಚಿಂತೆ ಬೇಡ. ಡೈರಿಯಲ್ಲಿ ಯಥಾವತ್ತು ಏನೇನಾಯಿತು ಎಂಬುದನ್ನು ಬರೆದಿಡಿ. ಒಮ್ಮೆ ಮನಸ್ಸಿಂದ ಹೊರಗೆ ಬಂತು ಎಂದರೆ ಮರೆಯುವುದು ತೀರಾ ಸುಲಭ. ಅಕ್ಷರಗಳಿಗೆ ಇಳಿಸಿದರಂತೂ ಮತ್ತೆಂದೂ ಆ ನೋವು ಕಿರಿಕಿರಿ ತರುವುದಿಲ್ಲ.
ಆರೋಗ್ಯಕರ ಆಹಾರ
ಹಸಿವಾಗುತ್ತಿದೆ ಎಂದು ಸಿಕ್ಕಿದ್ದನ್ನೆಲ್ಲ ತಿನ್ನುವ ಖಯಾಲಿಗೆ ಬ್ರೇಕ್ ಹಾಕಿ. ಉತ್ತಮ ಉಪಾಹಾರ ಸೇವನೆಯೊಂದಿಗೆ ದಿನವನ್ನಾರಂಭಿಸಿ. ಪೌಷ್ಟಿಕಾಂಶವಿರುವ ಊಟವನ್ನು ಮಧ್ಯಾಹ್ನ ಮತ್ತು ರಾತ್ರಿ ಸೇವಿಸಿ. ಎಣ್ಣೆ ಪದಾರ್ಥಗಳಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿರಿ.
- ಮಂಜು