

ಬೆಳಕಿನ ಹಬ್ಬ ದೀಪಾವಳಿ. ಚಿಣ್ಣರ ಕಣ್ಣಿನಲ್ಲಿ ನೂರಾರು ನಕ್ಷತ್ರ ಮೂಡಿಸುವ, ಪ್ರತಿ ಮನೆಯ ಅಡುಗೆ ಮನೆಗಳಲ್ಲಿ ಸಿಹಿಯೂಟ ಸಜ್ಜಾಗುವಂತೆ ಮಾಡುವ ಸಂಭ್ರಮ, ಸಡಗರದ ಹಬ್ಬ ದೀಪಾವಳಿ. ಈ ಬೆಡಗು, ಬಿನ್ನಾಣದ ಹಬ್ಬ ಸಮೀಪಿಸಿರುವ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಉತ್ಸಾಹವೋ ಉತ್ಸಾಹ. ಹೊಸಬಟ್ಟೆ, ಸಿಹಿ ತಿನಿಸು, ದೀಪಗಳು ಹಾಗೂ ಪಟಾಕಿಗಳ ಖರೀದಿಯಲ್ಲಿ ಜನರು ತುಂಬಾ ಬ್ಯುಸಿ. ಕೆಟ್ಟದರ ಮೇಲೆ ಒಳಿತು ದಿಗ್ವಿಜಯ ಸಾಧಿಸುವುದರ ಸಂಕೇತವೆನಿಸಿದ ಈ ದೀಪಗಳ ಹಬ್ಬ ಇತ್ತೀಚಿನ ವರ್ಷಗಳಲ್ಲಿ ಬದಲಾಗುತ್ತಾ ಸಾಗಿದೆ.
ಯಾವ ಹಬ್ಬ ಬೆಳಕಿನ ಬೆಡಗಿನ ಹಬ್ಬವಾಗಬೇಕಿತ್ತೋ ಅದು ಕೆಲವರ ಪಾಲಿಗೆ ಜೀವನ ಪರ್ಯಂತ ಕಾಡುವ ಕತ್ತಲೆಯ ದುಸ್ವಪ್ನವಾಗಿದೆ. ಇದಕ್ಕೆ ಕಾರಣ ಪಟಾಕಿಗಳ ಅನಿಯಂತ್ರಿತ ಅಬ್ಬರ. ಯಾವ ಹಬ್ಬ ಕತ್ತಲೆಯನ್ನು ಹೊಡೆದೊಡಿಸಿ ಮನೆಮನೆಯಲ್ಲಿ ಬೆಳಕು ಹರಡುವಂತೆ ಮಾಡಬೇಕೋ ಆ ಹಬ್ಬ ಪಟಾಕಿಗಳ ಅಬ್ಬರದ ಸಿಡಿತದ ಮೂಲಕ ಸಂಪತ್ತಿನ ಅಸಹ್ಯ ಪ್ರದರ್ಶನಕ್ಕೆ, ಸದ್ದು ಗದ್ದಲಕ್ಕೆ ವಾತಾವರಣ ಕಲುಷಿತಗೊಳ್ಳುವುದಕ್ಕೆ ಕಾರಣವಾಗಿದೆ. ಮಕ್ಕಳನ್ನು ಬಹುವಾಗಿ ಆಕರ್ಷಿಸುವ ಈ ಹಬ್ಬದ ಅತಿ ದೊಡ್ಡ ದುರಂತವೆಂದರೆ, ಚಿಣ್ಣರೇ ಈ ಹಬ್ಬದ ಅಪಸವ್ಯಗಳಿಗೆ ಸಿಲುಕುವುದು. ಪಟಾಕಿ ಸಿಡಿತದಿಂದ ಉಂಟಾಗುವ ಚರ್ಮ ಹಾಗೂ ಕಣ್ಣಿನ ಗಾಯಗಳಿಂದ ನರಳುವವರಲ್ಲಿ ಪುಟ್ಟ ಮಕ್ಕಳ ಸಂಖ್ಯೆ ಹೆಚ್ಚು.
ಪ್ರತಿ ವರ್ಷ ನೂರಾರು ಮಂದಿ ಮಕ್ಕಳು ಪಟಾಕಿ ಸಿಡಿತದಿಂದ ಚರ್ಮ ಹಾಗೂ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಾರೆ. ದುರಂತವೆಂದರೆ, ಈ ರೀತಿಯ ಪಟಾಕಿ ಗಾಯಗಳಿಗೆ ಒಳಗಾದವರಲ್ಲಿ ಹೆಚ್ಚಿನವರು ಖುದ್ದು ಪಟಾಕಿ ಹೊಡೆಯುವವರಲ್ಲ. ಬದಲಾಗಿ, ಪಟಾಕಿ ಹಚ್ಚುವುದನ್ನು ನೋಡಲು ನಿಂತವರು, ಹಾದಿಯಲ್ಲಿ ಹೋಗುವವರು, ವಾಹನ ಚಾಲನೆ ಮಾಡುವವರು.
ಆದರೆ, ತುಸು ಎಚ್ಚರಿಕೆ ವಹಿಸಿದರೆ ಬೆಳಕಿನ ಹಬ್ಬವನ್ನು ಅತ್ಯಂತ ಸುರಕ್ಷಿತವಾಗಿ ಆಚರಿಸಬಹುದು. ಸುರಕ್ಷಿತವಾಗಿ ದೀಪಾವಳಿ ಆಚರಿಸಲು ಏನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬ ಬಗ್ಗೆ ಕೆಲ ಸಲಹೆಗಳು ಹೀಗಿವೆ-
ಬೆಳಕಿನ ಹಬ್ಬ ಆಚರಣೆ ವೇಳೆ ಏನೇನು ಮಾಡಬಹುದು?
• ಅಧಿಕೃತ ಹಾಗೂ ಪರವಾನಗಿ ಹೊಂದಿದ ಪಟಾಕಿ ಉತ್ಪಾದನಾ ಕಂಪನಿಯ ಪಟಾಕಿಗಳನ್ನು ಮಾತ್ರ ಖರೀದಿಸಿ.
• ಪಟಾಕಿಗಳನ್ನು ಒಣ ಹಾಗೂ ಮುಚ್ಚಲಾಗಿರುವ ಸುರಕ್ಷಿತ ಜಾಗದಲ್ಲಿ ಸಂಗ್ರಹಿಸಿಡಿ.
• ಪಟಾಕಿಗಳು ಅತಿಯಾದ ಬಿಸಿ ಹಾಗೂ ಬೆಳಕಿನಿಂದ ದೂರವಿರುವಂತೆ ನೋಡಿಕೊಳ್ಳಿ. ಮುಖ್ಯವಾಗಿ ಮಕ್ಕಳು ಹಾಗೂ ಕಂದಮ್ಮಗಳ ಕೈಗೆ ಸಿಗದಂತಹ ಜಾಗದಲ್ಲಿ ಸಂಗ್ರಹಿಸಿ.
• ಪಟಾಕಿ ಹಚ್ಚುವ ಆಟವೇನಿದ್ದರೂ ಹೊರಾಂಗಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿ.
• ಒಬ್ಬೊಬ್ಬರೇ ಪಟಾಕಿ ಹೊಡೆಯುವುದಕ್ಕಿಂತ ನಿಮ್ಮ ಬಡಾವಣೆಯ ಎಲ್ಲರೂ ಸೇರಿ ಒಂದು ಮೈದಾನದಲ್ಲಿ ಸಾಮೂಹಿಕ ಪಟಾಕಿ ಹಚ್ಚುವ ಕಾರ್ಯಕ್ರಮ ಮಾಡುವುದು ಉತ್ತಮ.
• ಪಟಾಕಿ ಹಚ್ಚಲು ಉದ್ದವಾದ ಊದಿನ ಕಡ್ಡಿ - ಮೊಂಬತ್ತಿಯನ್ನು ಬಳಸಿ.
• ಪಟಾಕಿ ಹಚ್ಚುವಾಗ ನಿಮ್ಮ ಹಾಗೂ ಪಟಾಕಿಯ ನಡುವೆ ಅಂತರ ಕಾಯ್ದುಕೊಳ್ಳಿ. ಒಂದು ಬಾರಿ ಪಟಾಕಿ ಹಚ್ಚಿದ ನಂತರ ಸುರಕ್ಷಿತ ತಾಣಕ್ಕೆ ಹೋಗುವಷ್ಟು ಸಮಯವಿರುವಂತೆ ನೋಡಿಕೊಳ್ಳಿ.
• ಪಟಾಕಿ ಸುಡುವ ಕಾರ್ಯಕ್ರಮಕ್ಕೂ ಮೊದಲು ಒಂದು ಬಕೆಟ್‍ನಲ್ಲಿ ನೀರು ಸಿದ್ದಪಡಿಸಿಕೊಳ್ಳಿ. ಒಂದು ವೇಳೆ ಸುಟ್ಟಗಾಯಗಳಾದಲ್ಲಿ ಈ ಮುನ್ನೆಚ್ಚರಿಕೆ ಬಹಳ ಪ್ರಯೋಜನಕಾರಿ.
ಬೆಳಕಿನ ಹಬ್ಬದ ವೇಳೆ ಏನೇನು ಮಾಡಬಾರದು.
• ಪಟಾಕಿಗಳನ್ನು ಕೈಯಲ್ಲಿ ಹಿಡಿದುಕೊಂಡು ಹಚ್ಚುವ ದುಸ್ಸಾಹಸ ಬೇಡ.
• ಪಟಾಕಿಗಳನ್ನು ಜನಸಂದಣಿಯಿರುವ, ಸಂಕುಚಿತ ಹಾಗೂ ಓರೆಕೋರೆ ಪ್ರದೇಶಗಳಲ್ಲಿ ಹಚ್ಚಬೇಡಿ.
• ಒಳಾಂಗಣ ಪ್ರದೇಶ (ಮನೆ ಒಳಗೆ) ಪಟಾಕಿ ಸುಡುವ ಹುಚ್ಚು ಸಾಹಸ ಬೇಡ.
• ಪಟಾಕಿಯ ಮೇಲೆ ಟಿನ್ ಬಾಕ್ಸ್ ಅಥವಾ ಗ್ಲಾಸ್ ಕಂಟೇನರ್‍ಗಳನ್ನು ಇಟ್ಟು ಹಚ್ಚಬೇಡಿ.
• ಹೊತ್ತಿಕೊಳ್ಳದ ಪಟಾಕಿಗಳನ್ನು ಮತ್ತೆ ಮತ್ತೆ ಹಚ್ಚುವ ಪ್ರಯತ್ನ ಮಾಡಬೇಡಿ.
• ಒಂದು ಬಾರಿಗೆ ಒಬ್ಬರು ಮಾತ್ರ ಪಟಾಕಿ ಹಚ್ಚಲಿ. ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಒಮ್ಮೆಗೆ ಪಟಾಕಿ ಹಚ್ಚುವುದು ಒಳ್ಳೆಯದಲ್ಲ.
• ಪಟಾಕಿಯನ್ನು ಜನ ಸಂದಣಿಯ ಮೇಲೆ ಎಸೆಯಬೇಡಿ.
• ಪಟಾಕಿ ಹಚ್ಚುವಾಗ ದೊಗಲೆ ಹಾಗೂ ಉದ್ದದ ಉಡುಪುಗಳನ್ನು ಮತ್ತು ಸಿಂಥಟಿಕ್ ಉಡುಪುಗಳನ್ನು ಧರಿಸಬೇಡಿ
• ಪಟಾಕಿ ಸುಡುವ ವೇಳೆ ಮದ್ಯ ಸೇವನೆ ಅತ್ಯಂತ ಅಪಾಯಕಾರಿ.
• ದೊಡ್ಡವರ ನಿಗಾ ಇಲ್ಲದೆ ಮಕ್ಕಳು ಪಟಾಕಿ ಹಚ್ಚಲು ಅವಕಾಶ ನೀಡಬೇಡಿ.
• ಐದು ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳಿಗೆ ಸುರುಸುರು ಬತ್ತಿಯನ್ನು ನೀಡಬೇಡಿ.
• ಭಾರಿ ಗಾಳಿ ಬೀಸುವಾಗ ಪಟಾಕಿ ಹಚ್ಚಬೇಡಿ.
• ಪಟಾಕಿ ಹಚ್ಚುವಾಗ ಸುಟ್ಟಗಾಯಗಳಾದರೆ ಆಯಿಂಟ್‍ಮೆಂಟ್-ಕ್ರೀಮ್ ಅಥವಾ ಯಾವುದೇ ರೀತಿಯ ಎಣ್ಣೆಯನ್ನು ಹಚ್ಚಬೇಡಿ.
• ಪಟಾಕಿ ಹಚ್ಚುವಾಗ ಅದರ ಮೇಲೆ ವಾಲಿಕೊಂಡಿರಬೇಡಿ.
• ಚರ್ಮದ ಗಾಯಗಳಾದರೆ ಈ ಕೆಳಗಿನ ಸೂಚನೆ ಪಾಲಿಸಿ
• ಪಟಾಕಿ ಸುಡುವಾಗ ಸುಟ್ಟಗಾಯವಾದರೆ ಮೊದಲು ಸುಟ್ಟಗಾಯದ ಮೇಲಿನ ಬಟ್ಟೆಯನ್ನು ತೆಗೆಯಿರಿ. ಸಾಕಷ್ಟು ನೀರಿನಿಂದ ಸುಟ್ಟ ಗಾಯವನ್ನು ತೊಳೆಯಿರಿ. ಅನಂತರ ಸ್ವಚ್ಛ ಹತ್ತಿಯ ಬೆಡ್‍ಶಿಟ್‍ನಿಂದ ಗಾಯದ ಪ್ರದೇಶಕ್ಕೆ ಬ್ಯಾಂಡೇಜ್ ರೀತಿ ಕಟ್ಟಿ.
ಪಟಾಕಿ ಹಚ್ಚುವಾಗ ನೀವು ತೊಟ್ಟ ಬಟ್ಟೆ ಬೆಂಕಿಹತ್ತಿಕೊಂಡರೆ ಈ ಕೆಳಗಿನಂತೆ ವರ್ತಿಸಿ-
• ಬೆಂಕಿ ಹತ್ತಿದ ಕೂಡಲೇ ಓಡುವುದನ್ನು ನಿಲ್ಲಿಸಿ. ನಿಂತಲ್ಲೇ ನಿಲ್ಲಿ. ಅನಂತರ ನೆಲದಲ್ಲಿ ಉರುಳಾಡಿ ಬೆಂಕಿಯನ್ನು ನಂದಿಸಿ.
• ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯವಾದರೆ ಮೊದಲು ಸುರಿಯುವ ನೀರಿನಿಂದ ಕಣ್ಣನ್ನು ಸುಮಾರು 10 ನಿಮಿಷದವರೆಗೂ ತೊಳೆಯಿರಿ. ಕೂಡಲೇ ಸಮೀಪದ ಆಸ್ಪತ್ರೆಗೆ ಗಾಯಾಳುವನ್ನು ಒಯ್ಯಿರಿ.
• ಚರ್ಮದ ಸುಟ್ಟಗಾಯ ಅಥವಾ ಕಣ್ಣಿನ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಬೇಡಿ. ಸುರಕ್ಷಿತವಾಗಿ ವಾಹನ ಚಲಾಯಿಸಿ.
ಭವ್ಯ ಭಾರತದ ಪ್ರಜ್ಞಾವಂತ ನಾಗರೀಕರಾದ ನಾವು ಯಾವ ಕಾರಣಕ್ಕೂ ಬಾಲ ಕಾರ್ಮಿಕರನ್ನು ಬಳಸಿ (14 ವರ್ಷದೊಳಗಿನ ಮಕ್ಕಳು) ಪಟಾಕಿ ಉತ್ಪಾದಿಸಿದ ಕಂಪನಿಗಳ ಉತ್ಪನ್ನಗಳನ್ನು ತಿರಸ್ಕರಿಸೋಣ. ಈ ಕಂಪೆನಿಗಳು ಉತ್ಪಾದಿಸಿದ ಪಟಾಕಿ ಖರೀದಿಸುವುದನ್ನು ನಿಲ್ಲಿಸೋಣ.
ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ ಹಾಗೂ ವಾಯು ಮಾಲಿನ್ಯ ತಡೆಗಟ್ಟೋಣ. ಜತೆಗೆ, ಪಟಾಕಿಗಳ ಸಿಡಿತದಿಂದ ಸಾಕುಪ್ರಾಣಿಗಳು ತೀವ್ರ ಸಂಕಷ್ಟ ಅನುಭವಿಸುತ್ತೇವೆ ಎಂಬುದನ್ನು ಮನಗಂಡು ಪಟಾಕಿ ಸುಡುವುದನ್ನು ನಿಯಂತ್ರಿಸೋಣ.
ಈ ದೀಪಾವಳಿಯಲ್ಲಿ ಪಟಾಕಿ ಸುಡುವುದಿಲ್ಲ. ಸಂಭ್ರಮ ಸಡಗರದ ಬೆಳಕಿನ ಹಬ್ಬವನ್ನು ಕತ್ತಲೆಯ ಹಬ್ಬವಾಗಿ ಪರಿವರ್ತಿಸುವುದಿಲ್ಲ ಎಂದು ಶಪಥ ತೊಡೋಣ.
ಪಟಾಕಿ ಸುಡುವಾಗ ಉಂಟಾಗುವ ಯಾವುದೇ ತುರ್ತು ಪರಿಸ್ಥಿತಿಗೆ ಸಂಪರ್ಕಿಸಿ -
ಪೀಪಲ್ ಟ್ರೀ ಐ ಕೇರ್,
ದೂ. ಸಂ. 9900027281/ 9900091881.