

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರ ಚಿಕಿತ್ಸೆಗೆ ಇಬ್ಬರು ನುರಿತ ವೈದ್ಯರ ತಂಡವನ್ನು ವಿದೇಶಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಮೇದೋಜೀರಕ (ಪ್ಯಾಂಕ್ರಿಯಾಟೈಟಿಸ್) ಸಮಸ್ಯೆಯಿಂದ ಬಳಲುತ್ತಿದ್ದು, ಪ್ರಸ್ತುತ ಅವರು ಬೆಲ್ಜಿಯಂ ಪ್ರವಾಸದಲ್ಲಿದ್ದಾರೆ. ಹೀಗಾಗಿ ಅವರ ಚಿಕಿತ್ಸೆಗೆ ಬೆಂಗಳೂರಿನಿಂದ ಇಬ್ಬರು ನುರಿತ ವೈದ್ಯರ ತಂಡವನ್ನು ಬೆಲ್ಜಿಯಂಗೆ ಕಳಿಸಲು ಸಿದ್ಧತೆ ನಡೆಸಲಾಗಿದೆ. ಈ ವೈದ್ಯರ ತಂಡದೊಂದಿಗೆ ರಾಕೇಶ್ ಅವರ ತಾಯಿ, ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರು ಕೂಡ ಬೆಲ್ಜಿಯಂಗೆ ತೆರಳಿ ಪುತ್ರನ ಆರೋಗ್ಯ ಮೇಲ್ವಿಚಾರಣೆ ನೋಡಿಕೊಳ್ಳಲ್ಲಿದ್ದಾರೆ ಎಂದು ತಿಳಿದುಬಂದಿದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಕರೆ ಮಾಡಿದ ಸಿಎಂ ಸಿದ್ದು
ಬೆಲ್ಜಿಯಂನಲ್ಲಿರುವ ತಮ್ಮ ಪುತ್ರನ ಅನಾರೋಗ್ಯ ವಿಚಾರ ತಿಳಿಯುತ್ತಿದ್ದಂತೆಯೇ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿರುವ ಸಿದ್ದರಾಮಯ್ಯ ಅವರು ಪುತ್ರನ ಆರೋಗ್ಯ ವಿಚಾರದ ಕುರಿತು ಮಾಹಿತಿ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಅವರ ಕರೆಗೆ ಸಕಾರಾತ್ಮಕವಾಗಿ ಸ್ಪಂಧಿಸಿರುವ ಸುಷ್ಮಾ ಸ್ವರಾಜ್ ಅವರು ಅಧಿಕಾರಿಗಳ ಮೂಲಕ ರಾಕೇಶ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ. ಅಲ್ಲದೆ ರಾಕೇಶ್ ಅವರ ಆರೋಗ್ಯ ಸುಧಾರಣೆ ಸಂಬಂಧ ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರ ಪ್ರಕರಣ ಸಂಬಂಧ ತಲೆ ಬಿಸಿ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ಇದೀಗ ತಮ್ಮ ಪುತ್ರನ ಅನಾರೋಗ್ಯ ವಿಚಾರ ಕೂಡ ಆತಂಕಪಡುವಂತೆ ಮಾಡಿದೆ.