

ಹುಬ್ಬಳ್ಳಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿ ಮಹಿಳೆಯೊಬ್ಬರು ಮಾರ್ಗದ ಮಧ್ಯೆಯೇ ಆಟೋದಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆಯೊಂದು ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ನಡೆದಿದೆ.
ಗೊಡಕೆ ಪ್ಲಾಟ್ ನಿವಾಸಿಯಾಗಿರುವ ಫರ್ವೀನ್ ಭಾನು ನಾಯಕ್ ಎಂಬುವವರು ತುಂಬು ಗರ್ಭಿಣಿಯಾಗಿದ್ದು, ಹೆರಿಗಾಗಿ ಹಳೇ ಹುಬ್ಬಳ್ಳಿ ರಸ್ತೆಯಲ್ಲಿರುವ ಆಸ್ಪತ್ರೆಗೆ ಆಟೋವೊಂದರಲ್ಲಿ ಹೋಗುತ್ತಿದ್ದರು. ರಸ್ತೆಗಳು ಹದಗೆಟ್ಟಿದ್ದ ಕಾರಣ ಸಂಚಾರ ಸುಗಮವಾಗಿ ಸಾಗದೆ ಮಹಿಳೆ ಮಾರ್ಗದ ಮಧ್ಯೆಯೇ ಆಟೋದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆಂದು ತಿಳಿದುಬಂದಿದೆ.
ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿರುವ ವಿಚಾರ ತಿಳಿದ ಕೂಡಲೇ ಆಸ್ಪತ್ರೆಯ ದಾದಿಯರು ಸ್ಥಳಕ್ಕೆ ಬಂದಿದ್ದಾರೆ. ನಂತರ ಆಟೋದಲ್ಲಿಯೇ ಹೆರಿಗೆ ಪ್ರಕ್ರಿಯೆಯನ್ನು ನಡೆಸಿದ್ದಾರೆ. ನಂತರ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದಾಗ ಮಹಿಳೆ ಸಂಪೂರ್ಣವಾಗಿ ಮಗುವಿಗೆ ಜನ್ಮ ನೀಡಿರಲಿಲ್ಲ. ನೋವಿನಿಂದ ಬಳಲುತ್ತಿದ್ದಳು ನಂತರ ಆಟೋದಲ್ಲಿಯೇ ಹೆರಿಗೆ ಪ್ರಕ್ರಿಯೆಯನ್ನು ನಡೆಸಲಾಯಿತು. ಇದೀಗ ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ಆಸ್ಪತ್ರೆಯ ದಾದಿ ಮಮತಾ ಶಿರ್ನೋರ್ ಅವರು ಹೇಳಿದ್ದಾರೆ.
ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಗತ್ಯ ಹಾಗೂ ಪ್ರಾಥಮಿಕ ಚಿಕಿತ್ಸೆಯನ್ನು ಮಗು ಹಾಗೂ ತಾಯಿ ಇಬ್ಬರಿಗೂ ನೀಡಲಾಗಿದೆ. ಮಗು 2.6 ಕೆಜಿಯಿದೆ. ರಸ್ತೆಗಳು ಹದಗೆಟ್ಟಿದ್ದ ಕಾರಣ ಒತ್ತಡ ಹೆಚ್ಚಾಗಿ ಮಹಿಳೆಗೆ ಹೆರಿಗೆಯಾಗುವಂತಾಗಿದೆ ಎಂದು ಅವರು ಹೇಳಿದ್ದಾರೆ.
ನನ್ನ ಗಂಡ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಇದು ನನಗೆ ಮೂರನೇ ಮಗುವಾಗಿದೆ. ಶುಕ್ರವಾರ ರಾತ್ರಿಯಿಂದಲೇ ನನಗೆ ಹೆರಿಗೆ ನೋವು ಆರಂಭವಾಗಿತ್ತು. ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ಹೋಗುತ್ತಿದ್ದೆವು. ಸಮಯಕ್ಕೆ ಸರಿಯಾಗಿ ಆಟೋಗಳು ಸಿಗಲಿಲ್ಲ. ಅಲ್ಲದೆ, ರಸ್ತೆಗಳು ಕೂಡ ಸರಿಯಾಗಿ ಇರಲಿಲ್ಲ ಎಂದು ಮಗುವಿಗೆ ಜನ್ಮ ನೀಡಿದ ಪರ್ವೀನ್ಭಾನು ಅವರು ತಿಳಿಸಿದ್ದಾರೆ