

ಬೆಂಗಳೂರು :ಫ್ರೆಜರ್ ಟೌನ್ ನ ಸರ್ಕಾರಿ ಅನುದಾನಿತ ಪ್ರೌಢಶಾಲೆಯ ಆಡಳಿತ ಮಂಡಳಿ ನೀರಿನ ಬಿಲ್ ಪಾವತಿಸದ ಕಾರಣ ಪ್ರತಿದಿನ ವಿದ್ಯಾರ್ಥಿಗಳು ನೀರಿಗಾಗಿ ಪರದಾಡುವಂತಾಗಿದೆ.
ಪಾತಿಮಾ ಬಾಲಕಿಯರ ಪ್ರೌಢಶಾಲೆಯಲ್ಲಿ 149 ವಿದ್ಯಾರ್ಥಿನಿಯರು ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದ ನಗರ ನೀರು ಪೂರೈಕೆ ಮಂಡಳಿಯಿಂದ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಕುಡಿಯುವ ನೀರಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಾಗಿದೆ. ಶೌಚಾಲಯ ಕೂಡಾ ಬಳಸದಂತಾಗಿದೆ.
ವರದಿಗಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ,ನೆರೆಹೊರೆಯವರಿಂದ ನೀರನ್ನು ತಂದು ಶಾಲಾ ಸಿಬ್ಬಂದಿ ನೀಡುತ್ತಿದ್ದಾರೆ. ಪಾತ್ರೆಗಳ ಮೂಲಕ ನೀರನ್ನು ಸಂಗ್ರಹಿಸಿಟ್ಟಿರುವ ದೃಶ್ಯ ಕಂಡುಬಂದಿತ್ತು.
ಕುಡಿಯುವ ನೀರಿನ ಟ್ಯಾಪ್ ಗಳು ಒಣಗಿದ್ದು, ಶೌಚಾಲಯಗಳಲ್ಲಿ ನೀರು ಬರುತ್ತಿರಲಿಲ್ಲ. ಕಿರಿದಾದ ಕಾರಿಡಾರ್ ನಲ್ಲಿ ಐದು ಮುಚ್ಚಿಲ್ಲದ ಪಾತ್ರೆಗಳಲ್ಲಿ ನೀರು ತುಂಬಿಸಿಟ್ಟಿರುವ ದೃಶ್ಯ ಕಂಡುಬಂದಿತ್ತು. ಶಾಲೆಯಲ್ಲಿ ಇಂತಹ ಪರಿಸ್ಥಿತಿ ಮುಂದುವರೆದಿದ್ದರೂ ಯಾರೋಬ್ಬರು ಅದರ ಬಗ್ಗೆ ಗಮನ ನೀಡುತ್ತಿರಲಿಲ್ಲ.
ಶಾಲೆಯಿಂದ 83 ಸಾವಿರ ರೂ ನೀರಿನ ಬಿಲ್ ಪಾವತಿಸಬೇಕಾಗಿದೆ ಎಂದು ಮೇಲ್ವಿಚಾರಣಾ ವಿಭಾಗದ ಮುಖ್ಯ ಎಂಜಿನಿಯರ್ ಹೆಚ್. ಎಂ. ರವೀಂದ್ರ ಹೇಳುತ್ತಾರೆ. ಎಲ್ಲರಿಗೂ ಒಂದೇ ಕಾನೂನಾಗಿದ್ದು, ಬಿಲ್ ಪಾವತಿಸದೆ ಹೇಗೆ ನೀರು ಪೂರೈಸಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ.
ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸ್ಥಳವಕಾಶವೂ ಇಲ್ಲ ಎಂದು ಪೋಷಕರು ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲಾ ಮುಖ್ಯಸ್ಥರಾಗಿರುವ ವೈದ್ಯ, ಎನ್, ಅಶೋಕ್ ಕುಮಾರ್ , ಶಾಲೆಯ ಮುಖ್ಯೋಪಾಧ್ಯಾಯನಿ ಎಲ್ಲಾ ವಿದ್ಯಾರ್ಥಿನಿಯರಿಂದ ಹಣ ಸಂಗ್ರಹಿಸಿ ನೀರಿನ ಬಿಲ್ ಪಾವತಿಸುವಂತೆ ಹೇಳುತ್ತಾರೆ.
ಈ ಶಾಲೆಯ ಭೂಮಿಯ ಮಾಲೀಕತ್ವ ಮತ್ತು ಶಾಲೆಯ ಬಗ್ಗೆ ದಶಕದಿಂದಲೂ ಕೇಸ್ ನಡೆಯುತ್ತಿದೆ ಎಂಬಂತಹ ವಿಚಾರವೂ ತಿಳಿದುಬಂದಿದೆ