ವೋಟರ್ ಐಡಿ ಇಲ್ಲದಿದ್ದರೂ ಮತದಾನ ಮಾಡಬಹುದು: ಸಂಜೀವ್ ಕುಮಾರ್

ಮತದಾರರಲ್ಲಿ ಜಾಗೃತಿ ಮೂಡಿಸುವ ಸಂಬಂಧ ರಾಜ್ಯ ಚುನಾವಣಾ ಆಯೋಗದ ಮುಖ್ಯ ಅಧಿಕಾರಿ ಸಂಜೀವ್ ಕುಮಾರ್, ಗುರುತಿನ ಚೀಟಿ ಇಲ್ಲದಿದ್ದರೂ ಮತದಾನ ಮಾಡಬಹುದು ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಕೇವಲ 24 ಗಂಟೆ ಬಾಕಿ ಇರುವಂತೆಯೇ ಮತದಾರರಲ್ಲಿ ಜಾಗೃತಿ ಮೂಡಿಸುವ ಸಂಬಂಧ ರಾಜ್ಯ ಚುನಾವಣಾ ಆಯೋಗದ ಮುಖ್ಯ ಅಧಿಕಾರಿ ಸಂಜೀವ್ ಕುಮಾರ್, ಗುರುತಿನ ಚೀಟಿ ಇಲ್ಲದಿದ್ದರೂ ಮತದಾನ ಮಾಡಬಹುದು ಎಂದು ಹೇಳಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಚುನಾವಣಾ ಆಯೋಗ ರಾಜ್ಯದಲ್ಲಿ ಮತದಾನದ ಜಾಗೃತಿಗೆ ಚುನಾವಣಾ ಆಯೋಗ ಹಲವು ಕ್ರಮ ಕೈಗೊಂಡಿದೆ. ರಾಜ್ಯದ ಯಾವೊಬ್ಬ ಪ್ರಜೆಯೂ ಕೂಡ ಮತದಾನದ ಹಕ್ಕಿನಿಂದ ವಂಚಿತನಾಗಬಾರದು ಎಂಬ ಕಾರಣದಿಂದ ಸಾಕಷ್ಟು ಕ್ರಮ ಗಳನ್ನು ಕೈಗೊಂಡಿತ್ತು. ಅದರಂತೆ ಗುರುತಿನ ಚೀಟಿ ಇಲ್ಲದೆ ಇದ್ದರೂ ಇತರೆ ಫೋಟೋ ಇರುವ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು ಎಂದು ಹೇಳಿದ್ದಾರೆ.
ಅಂತೆಯೇ ಚುನಾವಣಾ ಗುರುತಿನ ಚೀಟಿ ಅಥವಾ ಎಪಿಕ್ ಕಾರ್ಡ್ ಇಲ್ಲದೇ ಇದ್ದರೆ ಆಯೋಗ ಸೂಚಿಸಿರುವ 12 ಇತರೆ ಪೂರಕ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಬಹುದು. ಆದರೆ ಇದಕ್ಕೆ ಮತದಾರರ ಪಟ್ಟಿಯಲ್ಲಿ ಮತದಾರನ ಹೆಸರು ಇರಬೇಕು ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.
ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣ
ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ರಾಜ್ಯದಲ್ಲಿ ಮತದಾನಕ್ಕಾಗಿ ಒಟ್ಟು 58 ಸಾವಿರ ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲ ಮತಗಟ್ಟೆಗಳೂ ನೆಲಮಹಡಿಯಲ್ಲೇ ಇರಲಿವೆ. ಈ 58 ಸಾವಿರ ಮತಗಟ್ಟೆಗಳ ಪೈಕಿ 600 ಮತಗಟ್ಟೆಗಳು ಮಹಿಳಾ ವಿಶೇಷ ಮತಗಟ್ಟೆಗಳಾಗಿರಲಿದ್ದು, ಇಲ್ಲಿ ಮಹಿಳಾ ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ. ಅಂತೆಯೇ ಈ ಪಿಂಕ್ ಮತಗಟ್ಟೆಗಳಲ್ಲಿ ಮಹಿಳಾ ಮತದಾರರು ಮಾತ್ರ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಇದಲ್ಲದೆ ವಿಕಲಾಂಗರಿಗೆ 10 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಅಂಗವಿಕಲ ಮತದಾರರನ್ನು ಕರೆ ತರಲು ವಾಹನ ವ್ಯವಸ್ಥೆ ಕೂಡ ಮಾಡಲಾಗಿದೆ. ಮತದಾನಕ್ಕೆ 80 ಸಾವಿರ ವಿವಿಪ್ಯಾಟ್ ಗಳನ್ನು ಬಳಕೆ ಮಾಡಲಾಗುತ್ತಿದ್ದು, ಇವುಗಳ ನಿರ್ವಹಣೆಗಾಗಿ ಹೆ್ಚ್ಚುವರಿ ಸಿಬ್ಬಂದಿಗಳನ್ನೂ ಕೂಡ ನಿಯೋಜಿಸಲಾಗಿದೆ. ಏತನ್ಮಧ್ಯೆ ಈವರೆಗೂ ಆಯೋಗದ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಸುಮಾರು 70 ಕೋಟಿ ನಗದು, 32 ಕೋಟಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಜೀವ್ ಕುಮಾರ್ ಮಾಹಿತಿ ನೀಡಿದರು.
ಇನ್ನು ಇದೇ ಮೇ 12ರಂದು ಮತದಾನ ನಡೆಯಲಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಅಂತಿಮ ಹಂತದ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಮೇ 15ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಂದೇ 225 ಕ್ಷೇತ್ರಗಳ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಮತದಾನಕ್ಕೆ ಆಯೋಗ ಗುರುತಿಸಿರುವ ಪೂರಕ ದಾಖಲೆಗಳು
1. ಚುನಾವಣಾ ಆಯೋಗದ ವತಿಯಿಂದ ನೀಡುವ ದೃಢೀಕೃತ ಫೋಟೋ ಓಟರ್ ಸ್ಲಿಪ್ಸ್
3. ಡ್ರೈವಿಂಗ್ ಲೈಸೆನ್ಸ್
3. ಪಾನ್ ಕಾರ್ಡ್
4. ಆಧಾರ್ ಕಾರ್ಡ್
5. ಪಾಸ್‍ಪೋರ್ಟ್
6. ಫೋಟೋವುಳ್ಳ ಪಿಂಚಣಿ ದಾಖಲೆ
7. ಬ್ಯಾಂಕ್/ಪೋಸ್ಟ್ ಆಫೀಸ್‍ನ ಫೋಟೋ ಇರುವ ಪಾಸ್‍ಬುಕ್
8. ಎಂನರೇಗಾ ಜಾಬ್ ಕಾರ್ಡ್
9. ಆರೋಗ್ಯವಿಮಾ ಸ್ಮಾರ್ಟ್ ಕಾರ್ಡ್ (ಕಾರ್ಮಿಕರ ಸಚಿವಾಲಯದ ಯೋಜನೆಯಡಿ ನೀಡಿರುವುದು)
10. ಎನ್‍ಪಿಆರ್ ಅಡಿ ಆರ್‍ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್
11. ಕೇಂದ್ರ/ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ
12. ಸಂಸದರು/ವಿಧಾನಸಭಾ/ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com