

ಬೆಂಗಳೂರು: ಬಿಬಿಎಂಪಿ ಸಿಬ್ಬಂದಿಗಳ ವಿರುದ್ಧ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೊರೋನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರದ ಆದೇಶವಿದ್ದರೂ ಅದನ್ನು ಪಾಲಿಸದ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.
ಹೌದು.. ಈ ಹಿಂದೆ ಸರ್ಕಾರ ಮುಖ್ಯ ಕಾರ್ಯದರ್ಶಿಗಳು ಕೋವಿಡ್-19 ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಸಿಬ್ಬಂದಿಗಳಿಗೆ ಆದೇಶ ನೀಡಲಾಗಿತ್ತು. ಅದರಂತೆ ವಿವಿಧ ಇಲಾಖೆಗಳ ಸುಮಾರು 5 ರಿಂದ 6 ಸಾವಿರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು,. ಆದರೆ ಬಹುತೇಕ ಸಿಬ್ಬಂದಿಗಳು ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ. ಬಹುತೇಕ ಸಿಬ್ಬಂದಿಗಳು ತಮಗೆ ಬಿಪಿ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ಸಮಸ್ಯೆ ಮತ್ತು ಇತರೆ ಅಂಗಾಂಗಗಳ ಸಮಸ್ಯೆಗಳ ನೆಪ ನೀಡಿ ಕರ್ತವ್ಯದಿಂದ ದೂರ ಉಳಿದಿದ್ದಾರೆ. ಶೇ.20ರಷ್ಟು ಸಿಬ್ಬಂದಿ ತಾವು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದೇವೆ ಎಂದು ನೆಪ ನೀಡಿ ಕರ್ತವ್ಯಕ್ಕೆ ಹಾಜರಾಗಿಲ್ಲ,. ಇದೇ ವಿಚಾರವಾಗಿ ಇದೀಗ ಬಿಬಿಎಂಪಿ ಆಯುಕ್ತ ಮುಂಜುನಾಥ್ ಪ್ರಸಾದ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ವಾರ್ಡ್ ಮಟ್ಟದಲ್ಲಿ ಬೂತ್ ಸಮಿತಿಗಳನ್ನು ರಚಿಸಲಾಗಿದ್ದು, ಶತಾಯಗತಾಯ ರಾಜಧಾನಿಯಲ್ಲಿ ಕೊರೋನಾ ವೈರಸ್ ನಿಯಂತ್ರಿಸಬೇಕು ಎಂದು ಆಯುಕ್ತರು ನಿರ್ಧರಿಸಿದ್ದಾರೆ. ಆದರೆ ಆಯುಕ್ತರ ಗುರಿಗೆ ಸಿಬ್ಬಂದಿಗಳ ಕೊರತೆ ಬಹುದೊಡ್ಡ ಹಿನ್ನಡೆಯಾಗಿದೆ.
ಜಿಮ್, ಸ್ವಿಮ್ಮಿಂಗ್ ಪೂಲ್ ಗಳಲ್ಲಿ ನಿರ್ಬಂಧ ಮುಂದುವರಿಕೆ
ಇನ್ನು ನಗರದಲ್ಲಿ ಜಿಮ್, ಸ್ವಿಮ್ಮಿಂಗ್ ಪೂಲ್ ಗಳಲ್ಲಿ ನಿರ್ಬಂಧ ಮುಂದುವರಿಸುವ ಕುರಿತು ಮಾತನಾಡಿದ ಮಂಜುನಾಥ್ ಪ್ರಸಾದ್ ಅವರು, ಬಿಬಿಎಂಪಿ ಪಾರ್ಕ್ ಗಳು, ಜಿಮ್, ಸ್ವಿಮ್ಮಿಂಗ್ ಪೂಲ್ ಗಳಲ್ಲಿ ನಿರ್ಬಂಧ ಮುಂದುರೆಯಲಿದೆ. ಅಂತೆಯೇ ಕಂಟೈನ್ ಮೆಂಟ್ ಝೋನ್ ಗಳಲ್ಲಿರುವ ಎಲ್ಲಾ ವಾಣಿಜ್ಯ ವಹಿವಾಟುಗಳು ಮತ್ತು ಅಗತ್ಯವಸ್ತುಗಳ ಅಂಗಡಿಗಳ ಬಂದ್ ಮುಂದುವರೆಯಲಿದೆ. ಬಿಬಿಎಂಪಿಯ ಕಾರ್ಮಿಕ ಇಲಾಖೆ ಕಂಟೈನ್ ಮೆಂಟ್ ಝೋನ್ ಗಳಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲಿದ್ದಾರೆ ಎಂದು ಆಯುಕ್ತರು ಹೇಳಿದರು.
ಬೆಡ್ ನಿರಾಕರಿಸುವ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್, ಶಿಸ್ತು ಕ್ರಮ
ಇನ್ನು ರೋಗಿಗಳಿಗೆ ಬೆಡ್ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವ ಮಾತನಾಡಿದ ಮಂಜುನಾಥ್ ಪ್ರಸಾದ್ ಅವರು, ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್ ಗಳನ್ನು ಪೂರೈಕೆ ಮಾಡುವುದಾಗಿ ಒಪ್ಪಿಕೊಂಡಿವೆ. ಇದನ್ನು ಪಾಲಿಸದ ಆಸ್ಪತ್ರೆಗಳ ವಿರುದ್ಧ ಮತ್ತು ರೋಗಿಗಳಿಗೆ ಬೆಡ್ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ಬೆಡ್ ನಿರಾಕರಿಸಿದ ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಹೇಳಿದರು. ಅಂತೆಯೇ ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ವಸೂಲಿ ಮಾಡುತ್ತಿರುವ ವಿಚಾರ ನನ್ನ ಗಮನಕ್ಕೂ ಬಂದಿದೆ,. ರೋಗಿಯೊಬ್ಬರು ನಗರದ ಜೀವಿಕಾ ಆಸ್ಪತ್ರೆ ದಿನಕ್ಕೆ 20 ಸಾವಿರ ರೂಗಳಂತೆ 1.5ಲಕ್ಷ ರೂಗಳನ್ನು ಚಿಕಿತ್ಸೆಗಾಗಿ ಪಡೆದ ವಿಚಾರವನ್ನು ನನಗೆ ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
12 ಕೋವಿಡ್-19 ಶವಸಂಸ್ಕಾರ ಘಟಕ
ಇನ್ನು ನಗರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿ 12 ಪ್ರದೇಶಗಳನ್ನು ಗುರುತಿಸಲಾಗಿದ್ದು, ಯಲಹಂಕ, ಬೊಮ್ಮನಹಳ್ಳಿ, ಮಹಾದೇವಪುರ ಮತ್ತು ಕೆಂಗೇರಿಯಲ್ಲಿ ಈಗಾಗಲೇ ಈ ಸಂಬಂಧ ಸಿದ್ಧತಗಳೂ ಪೂರ್ಣಗೊಂಡಿವೆ ಎಂದು ಹೇಳಿದರು.