ದುಬಾರಿ ಬೆಲೆ, ಕಾಳಸಂತೆ ಮಾರಾಟಕ್ಕೆ ಬ್ರೇಕ್: ಕರ್ನಾಟಕ ಸರ್ಕಾರದಿಂದಲೇ ಖಾಸಗಿ ಆಸ್ಪತ್ರೆಗಳಿಗೆ ರೆಮ್ಡೆಸಿವಿರ್ ಪೂರೈಕೆ

ದುಬಾರಿ ಬೆಲೆ, ಕಾಳಸಂತೆ ಮಾರಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ರೆಮ್ಡೆಸಿವಿರ್ ಲಸಿಕೆ ಸರಬರಾಜು ಮಾಡುವ ಕುರಿತು ಕರ್ನಾಟಕ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ರೆಮ್ಡೆಸಿವಿರ್ ಲಸಿಕೆ
ರೆಮ್ಡೆಸಿವಿರ್ ಲಸಿಕೆ
Updated on: 

ಬೆಂಗಳೂರು: ದುಬಾರಿ ಬೆಲೆ, ಕಾಳಸಂತೆ ಮಾರಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ರೆಮ್ಡೆಸಿವಿರ್ ಲಸಿಕೆ ಸರಬರಾಜು ಮಾಡುವ ಕುರಿತು ಕರ್ನಾಟಕ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಕರ್ನಾಟಕದಲ್ಲಿ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ನಡೆದ ಕೋವಿಡ್-19 ಟಾಸ್ಕ್ ಫೋರ್ಸ್ ಸಭೆಯಲ್ಲಿ ಕೊರೋನಾ ವೈರಸ್ ಸೋಂಕು ನಿಯಂತ್ರಣ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪ್ರಮುಖವಾಗಿ ಕೊರೋನಾ ಸೋಂಕು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಮೇಲುಗೈ ಸಾಧಿಸಿರುವ ರೆಮ್ಡೆಸಿವಿರ್ ಲಸಿಕೆ ಸಂಬಂಧ ಸರ್ಕಾರ ನಿರ್ಣಯ ಕೈಗೊಂಡಿದ್ದು, ಕಾಳಸಂತೆಯಲ್ಲಿ ದುಬಾರಿ ದರದಲ್ಲಿ ಮಾರಾಟವಾಗುವುದನ್ನು ತಪ್ಪಿಸಲು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ರೆಮ್ಡೆಸಿವಿರ್ ಲಸಿಕೆ ಸರಬರಾಜು ಮಾಡಲು ನಿರ್ಧರಿಸಿದೆ.  ಈಗಾಗಲೇ ಕೋರೋನಾ ಸೋಂಕಿತರಿಗೆ ಹೆಚ್ಚುವರಿ ಔಷಧಿಯಾಗಿ ರೆಮ್ಡೆಸಿವಿರ್ ಲಸಿಕೆ ನೀಡಲು ಐಸಿಎಂಆರ್ ಅನುಮತಿ ನೀಡಿದ್ದು, ಇದೇ ಕಾರಣಕ್ಕಾಗಿ ರೆಮ್ಡೆಸಿವಿರ್ ಲಸಿಕೆಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗಿದೆ. 

ಇದಲ್ಲದೆ ಆ್ಯಂಟಿಜೆನ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಕಳುಹಿಸುವ ರೋಗಿಗಳಿಗೆ 2 ಸಾವಿರ ಮತ್ತು ಖಾಸಗಿಯಾಗಿ ಪರೀಕ್ಷೆಗೆ ಬರುವವರಿಗೆ 3 ಸಾವಿರೂ ಗಳನ್ನು ನಿಗದಿ ಪಡಿಸಿದೆ. ಒಂದು ವೇಳೆ ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ಮೊತ್ತವನ್ನು ಕೇಳಿದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಇನ್ನು ಸರ್ಕಾರ ಈಗಾಗಲೇ4 ಲಕ್ಷ ಆ್ಯಂಟಿಜೆನ್ ಕಿಟ್ ಗಳನ್ನು ಮತ್ತು 5ಲಕ್ಷ ಸ್ವಾಬ್ ಟೆಸ್ಟ್ ಕಿಟ್ ಗಳನ್ನು ಖರೀದಿ ಮಾಡಲು ನಿರ್ಧರಿಸಿದೆ. ಅಂತೆಯೇ ಹೊಸದಾಗಿ 13 ಆರ್ ಟಿ-ಪಿಸಿಆರ್ ಮತ್ತು 15 ಆಟೋಮೇಟೆಡ್ ಆರ್ ಎಸ್ ಎ ಎಕ್ಸ್ ಟ್ರಾಕ್ಟ್ ಲ್ಯಾಬ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ದಿನಕ್ಕೆ ಕನಿಷ್ಠ 50 ಸಾವಿರ ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ಈ ಪರೀಕ್ಷಗಳ ಮೇಲುಸ್ತುವಾರಿಯನ್ನು ಸಮಿತಿಗೆ ನೀಡಲಾಗಿದೆ. ಈ ಸಮಿತಿ ಶಿಫಾರಸ್ಸಿನ ಆಧಾರದ ಮೇಲೆ ಕೋವಿಡ್-19 ಪರಿಕರಗಳ ಖರೀದಿಗೆ ನಿರ್ಧರಿಸಲಾಗುತ್ತದೆ. ಈ ಖರೀದಿಗೆ ಕೋವಿಡ್ 19 ಟಾಸ್ಕ್ ಫೋರ್ಸ್ ಅಂತಿಮ ನಿರ್ಣಯ ಕೈಗೊಳ್ಳುತ್ತದೆ. ಕೋವಿಡ್-19 ಪರಿಕರಗಳ ಖರೀದಿಗೆ  ಸರ್ಕಾರ 500 ಕೋಟಿ ರೂ ಮೀಸಲಿಟ್ಟಿದೆ. ಈ ಸಮಿತಿಗೆ ಐಟಿಬಿಟಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳನ್ನು ಮುಖ್ಯಸ್ಥರಾಗಿ ನೇಮಿಸಲಾಗಿದೆ.

ಇನ್ನು ಕೋವಿಡ್ ನಿರ್ವಹಣೆಯಲ್ಲಿ ಮುನ್ನಲೆಯಲ್ಲಿ ನಿಂತು ಕರ್ತವ್ಯ ಪಾಲನೆ ಮಾಡುವ ಆರೋಗ್ಯಕಾರ್ಯಕರ್ತರ ಸುರಕ್ಷತೆಗಾಗಿ 2.59ಲಕ್ಷ ಎನ್ 95 ಮಾಸ್ಕ್ ಗಳು, 2.59 ಲಕ್ಷ ಪಿಪಿಇ ಕಿಟ್ ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. 17 ಸರ್ಕಾರಿ ವೈದ್ಯಕೀಯ ಕಾಲೆೇಜುಗಳಲ್ಲಿನ 4,736 ಬೆಡ್ ಗಳಿಗೆ ಪೈಪ್ ಲೈನ್ ಮೂಲಕ ಆಕ್ಸಿಜನ್ ಸರಬರಾಜು ಮಾಡಲಾಗುತ್ತದೆ. ಅವಶ್ಯಕತೆ ಬಿದ್ದರೆ ಹೆಚ್ಚಿನ ವೇಗದಲ್ಲಿ ಆಕ್ಸಿಜನ್ ಸರಬರಾಜು ಮಾಡಲು ಇದು ನೆರವಾಗುತ್ತದೆ  ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದರು.

ಆಯುಷ್ ವೈದ್ಯರು ಮುಂದಿನ 6 ತಿಂಗಳ ಕಾಲ ಮಾಸಿಕ 48 ಸಾವಿರ ರೂ ವೇತನ ಪಡೆಯಲಿದ್ದು, ಎಂಬಿಬಿಎಸ್ ವೈದ್ಯರು ಮಾಸಿಕ 80 ಸಾವಿರ ರೂ ಮತ್ತು ನರ್ಸ್ ಗಳು 30 ಸಾವಿರ ರೂ ವೇತನ ನೀಡಲು ನಿರ್ಧರಿಸಲಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com