

ಬೆಂಗಳೂರು: ದರೋಡೆಗೆ ಸಂಚು ರೂಪಿಸುತ್ತಿದ್ದ ಆರು ಮಂದಿ ರೌಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಅವರಿಂದ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲು ಸಂಚು ರೂಪಿಸಿದ್ದರು. ಈ ಸಂಬಂಧ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಯಲಹಂಕ ಸುಭೇದಾರ್ ಪಾಳ್ಯ 3ನೆ ಕ್ರಾಸ್ ನಿವಾಸಿ ರವಿಶಂಕರ್ ಅಲಿಯಾಸ್ ಆರ್.ಎಕ್ಸ್ ರವಿ (28), ಯಲಹಂಕ ಸಿಂಗನಾಯಕನಹಳ್ಳಿ, ರಾಮಗೊಂಡನಹಳ್ಳಿಯ ಮೊಬೈಲ್ ಟವರ್ ಹತ್ತಿರದ ನಿವಾಸಿ ಶರತ್ ಬಾಬು (24), ಯಲಹಂಕ ಯಲಚೇತನಹಳ್ಳಿ ಆನಂತಪುರ ಹಳೆ ಊಟಿ ಕಾನ್ವೆಂಟ್ ಹತ್ತಿರದ ನಿವಾಸಿ ದೀಪಕ್ ಕುಮಾರ್ ಆರ್. (20), ಯಲಹಂಕ ಅಟ್ಟೂರ್ ಲೇಔಟ್‌ನ ಅಟ್ಟೂರ್ ಮೈನ್ ರೋಡ್‌ನ 5ನೇ ಕ್ರಾಸ್ ನಿವಾಸಿ ಕೀರ್ತಿ ರಾಜ್ ಎಸ್. (22), ಯಲಹಂಕ ಅಟ್ಟೂರ್ ಲೇಔಟ್‌ನ ಓಂ ಶಕ್ತಿ ದೇವಸ್ಥಾನ ರಸ್ತೆಯ ನಿವಾಸಿ ಸಂತೋಷ್ (22), ಯಲಹಂಕ ಆನಂತಪುರ ನಿವಾಸಿ ಗಿಲ್‌ಭರ್ಟ್ (21) ಬಂಧಿತ ಆರೋಪಿಗಳು.
ಈ ಪೈಕಿ ರವಿಶಂಕರ್ ಬಾಣಸವಾಡಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ, ರಾಮಮೂರ್ತಿನಗರ, ಯಲಹಂಕ ನ್ಯೂಟೌನ್, ಬಾಣಸವಾಡಿ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ.
ಶರತ್ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಒಂದು ಹಲ್ಲೆ ಪ್ರಕರಣ, ದೀಪಕ್ , ಕೀರ್ತಿ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆಯತ್ನ ಪ್ರಕರಣ ದಾಖಲಾಗಿವೆ.
ಆರೋಪಿಗಳಿಂದ ಮರದ ಹಿಡಿಕೆ ಇರುವ ಸುಮಾರು 29 ಇಂಚು ಉದ್ದದ ಸುಮಾರು 1.5 ಇಂಚಿನ ಅಗಲ ಇರುವ ಒಂದು ಕಬ್ಬಿಣದ ಲಾಂಗ್, ಮರದ ಹಿಡಿಕೆ ಸೇರಿ ಸುಮಾರು 29 ಇಂಚು ಉದ್ದ, ಸುಮಾರು 1.5ರಿಂದ 5 ಇಂಚಿನವರೆಗೆ ಅಗಲ ಇರುವ ಒಂದು ಕಬ್ಬಿಣದ ಲಾಂಗ್, ಮರದ ಹಿಡಿಕೆ ಇರುವ ಸುಮಾರು 27 ಇಂಚು ಉದ್ದ, ಸುಮಾರು 1.5 ರಿಂದ 5 ಇಂಚು ವರೆಗೆ ಅಗಲ ಇರುವ ಒಂದು ಕಬ್ಬಿಣದ ಲಾಂಗ್, ಮರದ ಹಿಡಿಕೆ ಇರುವ ಸುಮಾರು 12 ಇಂಚು ಉದ್ದ ಸುಮಾರು 1.5 ಇಂಚು ಅಗಲ ಇರುವ ಒಂದು ಸ್ಟೀಲ್ ಚಾಕು, ಸುಮಾರು 33.5 ಇಂಚು ಉದ್ದ ಸುಮಾರು 4.5 ಇಂಚು ಸುತ್ತಳತೆಯ ಒಂದು ಬಿದಿರು ಮರದ ದೊಣ್ಣೆ, ಅಂದಾಜು 20 ಗ್ರಾಂ ತೂಕದ ಒಂದು ಖಾರದ ಪುಡಿ ಪೊಟ್ಟಣ ಮತ್ತು ಅವರು ಬಂದಿದ್ದ ಒಂದು ಮಾರುತಿ ಓಮ್ನಿ ಕಾರು, ಒಂದು ಹೋಂಡಾ ಡಿಯೋ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿ ಮತ್ತು ಸಿಬ್ಬಂದಿ ಸಂಭವಿಸಬಹುದಾದ ದರೋಡೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ.