ಬೆಂಗಳೂರಲ್ಲಿ ರೈಲ್ವೇ ಅಧಿಕಾರಿಯ ಎಡವಟ್ಟು, ಇಲಾಖೆ ಕೊಠಡಿಯಲ್ಲಿ ಕೊರೋನಾ ಸೋಂಕಿತನ ವಿಶ್ರಾಂತಿ

ಇಡೀ ವಿಶ್ವವೇ ಕೊರೋನಾ ವೈರಸ್ ಭೀತಿಯಲ್ಲಿ ಮುಳುಗಿರುವ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ರೈಲ್ವೇ ಇಲಾಖೆಯ ಅಧಿಕಾರಿಯೊಬ್ಬರು ಮಹಾ ಎಡವಟ್ಟು ಮಾಡಿದ್ದು, ಅಧಿಕಾರಿಯ ಎಡವಟ್ಟಿನಿಂದಾಗಿ ಇಡೀ ರೈಲ್ವೇ ಇಲಾಖೆಯ ಸಿಬ್ಬಂದಿಗಳ ಆರೋಗ್ಯ ಅಪಾಯಕ್ಕೆ ಸಿಲುಕಿದಂತಾಗಿದೆ.
ಮ್ಯಾಪಲ್ಸ್ - ರೈಲ್ವೆ ಅಧಿಕಾರಿಗಳ ವಿಶ್ರಾಂತಿ ಗೃಹ
ಮ್ಯಾಪಲ್ಸ್ - ರೈಲ್ವೆ ಅಧಿಕಾರಿಗಳ ವಿಶ್ರಾಂತಿ ಗೃಹ
Updated on: 

ಬೆಂಗಳೂರು: ಇಡೀ ವಿಶ್ವವೇ ಕೊರೋನಾ ವೈರಸ್ ಭೀತಿಯಲ್ಲಿ ಮುಳುಗಿರುವ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ರೈಲ್ವೇ ಇಲಾಖೆಯ ಅಧಿಕಾರಿಯೊಬ್ಬರು ಮಹಾ ಎಡವಟ್ಟು ಮಾಡಿದ್ದು, ಅಧಿಕಾರಿಯ ಎಡವಟ್ಟಿನಿಂದಾಗಿ ಇಡೀ ರೈಲ್ವೇ ಇಲಾಖೆಯ ಸಿಬ್ಬಂದಿಗಳ ಆರೋಗ್ಯ ಅಪಾಯಕ್ಕೆ ಸಿಲುಕಿದಂತಾಗಿದೆ.

ಹೌದು.. ನೈಋತ್ಯ ರೈಲ್ವೇ ಇಲಾಖೆಯ ಗೆಜೆಟೆಡ್ ಅಧಿಕಾರಿಯೊಬ್ಬರು ಇಂತಹುದೊಂದು ಅಪಾಯ ತಂದೊಡ್ಡಿದ್ದು, ಇತ್ತೀಚೆಗೆ ಜರ್ಮನಿಯಿಂದ ವಾಪಾಸ್ ಆಗಿದ್ದ ತಮ್ಮ ಮಗನನ್ನು ಯಾವುದೇ ರೀತಿಯ ವೈದ್ಯಕೀಯ ತಪಾಸಣೆಗೊಳಪಡಿಸದೇ ಇಲಾಖೆಯ ಕ್ವಾರ್ಟರ್ಸ್ ನಲ್ಲಿ ವಿಶ್ರಾಂತಿ ಮಾಡಲು ಬಿಟ್ಟಿದ್ದಾರೆ. 

ಮೂಲಗಳ ಪ್ರಕಾರ ಇದೇ ಮಾರ್ಚ್ 13ರಂದು ಮಹಿಳಾ ಅಧಿಕಾರಿಯ ಮಗ ಜರ್ಮನಿಯಿಂದ ಸ್ಪೈನ್ ಮೂಲಕವಾಗಿ ಬೆಂಗಳೂರಿಗೆ ವಾಪಸ್ ಆಗಿದ್ದು, ಅಧಿಕಾರಿಗಳ ವಿಶ್ರಾಂತಿ ಗೃಹ (ಒಆರ್ ಹೆಚ್)ದಲ್ಲಿ ತಂಗಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲೇ ಅಧಿಕಾರಿಯ ಮನೆ ಇದೆಯಾದರೂ, ಅಧಿಕಾರಿ ಆತನನ್ನು ಮನೆಗೆ ಕಳುಹಿಸಿಲ್ಲ. ಬದಲಾಗಿ ಜ್ವರ ಮತ್ತು ಇತರ ಅನಾರೋಗ್ಯದಿಂದ ಬಳಲುತ್ತಿದ್ದ ಆತನನ್ನು ಇಲಾಖೆಯ ವಿಶ್ರಾಂತಿ ಗೃಹದಲ್ಲಿ ಬರೊಬ್ಬರಿ 4 ದಿನಗಳ ಕಾಲ ತಂಗಲು ಅನುವು ಮಾಡಿಕೊಟ್ಟಿದ್ದಾರೆ. ಈ ವೇಳೆ ಆತನ ಸ್ಥಿತಿ ಗಂಭೀರವಾದಾಗ ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ವೇಳೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಆತನಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ಸ್ಪಷ್ಟವಾಗಿತ್ತು. ಪ್ರಸ್ತುತ ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.

ಸಮೀಪದ ಹೊಟೆಲ್ ಗೆ ಭೇಟಿ
ಇನ್ನು ವಿಶ್ರಾಂತಿ ಗೃಹದಲ್ಲಿದ್ದಾಗ ಸೋಂಕು ಪೀಡಿತ ಸಮೀಪದ ಬಾಲಾಜಿ ರೆಸ್ಟೋರೆಂಟ್ ಗೆ ತೆರಳಿ ಊಟ ಮಾಡಿ ಬರುತ್ತಿದ್ದನಂತೆ. ರೂಮಿನಲ್ಲಿದ್ದ ಅಷ್ಟೂ ದಿನ ಕೊಠಡಿ ಸ್ವಚ್ಛಗೊಳಿಸಲೂ ಕೂಡ ಯಾರನ್ನೂ ಕರೆಯುತ್ತಿರಲಿಲ್ಲವಂತೆ. ಮುಖ್ಯವಾಗಿ ರೂಮಿನಲ್ಲಿದ್ದಾಗ ಹೆಚ್ಚು ಜನರೊಂದಿಗೆ ಬೆರೆಯುತ್ತಿರಲಿಲ್ಲ ಎಂದು ಹೇಳಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳಿದಂತೆ ಮಂಗಳವಾರ ಸಂಜೆ ಆವರಣದ ಕಲ್ಲಿನ ಮೇಲೆ ಕೂತಿದ್ದ ಆತ ಮೇಲೇಳಲೂ ಕೂಡ ಕಷ್ಟ ಪಡುತ್ತಿದ್ದನಂತೆ. ಆಗ ಆತನೇ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದ. ಇದಕ್ಕೂ ಮೊದಲು ಆತನ ಸಹೋದರ ಕೂಡ ರೂಮಿಗೆ ಬಂದು ಆತನ ಆರೋಗ್ಯ ವಿಚಾರಿಸಿ ಹೋಗಿದ್ದ ಎಂದು ಹೇಳಲಾಗಿದೆ.

ಇನ್ನು ಇಲಾಖೆಯ ಸ್ವಚ್ಛತಾ ಸಿಬ್ಬಂದಿಯೊಬ್ಬರು ನೀಡಿರುವ ಮಾಹಿತಿ ಅನ್ವಯ ನಾನು ಆತನಿಗೆ ಸಾಕಷ್ಟು ಬಾರಿ ನೀರಿನ ಬಾಟಲಿ ತಂದುಕೊಟ್ಟಿದ್ದೆ. ಆದರೆ ನಮಗಾರಿಗೂ ಅತನಿಗೆ ವೈರಸ್ ಸೋಂಕು ಇರುವ ಕುರಿತು ಮಾಹಿತಿ ಇರಲಿಲ್ಲ. ಆದರೆ ಇದೀಗ ನಮಗೂ ವೈರಸ್ ಸೋಂಕುವ ಭೀತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಮತ್ತು ಅಧಿಕಾರಿಗಳಿಗೆ ಸಾಕಷ್ಟು ಮುಂಜಾಗ್ರತಾ ಸೂಚನೆ ನೀಡಿದ್ದರೂ ಜವಾಬ್ದಾರಿಯುತ ಅಧಿಕಾರಿಯ ಬೇಜವಾಬ್ದಾರಿ ನಡೆ ಇದೀಗ ರೈಲ್ವೆ ಇಲಾಖೆ ಇತರೆ ಸಿಬ್ಬಂದಿಗಳ ಆರೋಗ್ಯವನ್ನು ಅಪಾಯಕ್ಕೂ ದೂಡಿದೆ. ಈಗಾಗಲೇ ಈ ಸಂಬಂಧ ಇಲಾಖೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಈ ವಿಶ್ರಾಂತಿ ಗೃಹದಲ್ಲಿ ಸುಮಾರು 40 ಮಂದಿ ತಂಗಿದ್ದರು. ಹೀಗೆ ತಂಗಿದ್ದ ಇತರೆ ಅಧಿಕಾರಿಗಳನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ. ಅಲ್ಲದೆ ಮಹಿಳಾ ಅಧಿಕಾರಿಯನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಆಕೆಯೊಂದಿಗೆ ಸಂಪರ್ಕದಲ್ಲಿದ್ದ ಎಲ್ಲ ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನೂ ತಪಾಸಣೆ ಮಾಡಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಅಧಿಕಾರಿಯ ವೈರಸ್ ಸೋಂಕಿತ ಮಗ ತಂಗಿದ್ದ ಮಾರ್ಚ್ 13ರಿಂದ ಮಾರ್ಚ್ 17ರವರೆಗೂ ಸುಮಾರು 40 ಮಂದಿ ಅದೇ ವಿಶ್ರಾಂತಿ ಗೃಹದಲ್ಲಿ ತಂಗಿದ್ದರು ಎಂಬ ಅಘಾತಕಾರಿ ಬೆಳಕಿಗೆ ಬಂದಿದ್ದು, ಇದೀಗ ಇವರ ಮೇಲೆ ಮತ್ತು ಇವರನ್ನು ಸಂಪರ್ಕಿಸಿದ್ದವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಪ್ರಸ್ತುತ ಮಹಿಳಾ ಅಧಿಕಾರಿಯ ವಿರುದ್ಧ ಹಿರಿಯ ಅಧಿಕಾರಿಗಳು ಕೆಂಡಾಮಂಡಲರಾಗಿದ್ದು, ನಿಮ್ಮ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳಲು ಇತರರ ಜೀವವನ್ನು ಅಪಾಯಕ್ಕೆ ಒಡ್ಡಿದ್ದೀರಿ ಎಂದು ಕಿಡಿಕಾರಿದ್ದಾರೆ. ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆಯೇ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಇದೀಗ ಭಯದಲ್ಲಿ ಕೆಲಸ ಮಾಡುವಂತಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com