ಧೂಮಪಾನ ಮುಕ್ತ ಹೋಟೆಲ್/ರೆಸ್ಟೋರೆಂಟ್‌ಗಳು: ಆರೋಗ್ಯ ಮತ್ತು ವ್ಯವಹಾರದ ಸಮಗೆಲುವು

ಧೂಮಪಾನಕ್ಕೆ ಅವಕಾಶ ನೀಡದ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಅಧಿಕ ವ್ಯವಹಾರವನ್ನು ನಡೆಸುತ್ತಿವೆ ಎಂಬ ವಿಚಾರ ಅಧ್ಯಯನಗಳಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಧೂಮಪಾನಕ್ಕೆ ಅವಕಾಶ ನೀಡದ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಅಧಿಕ ವ್ಯವಹಾರವನ್ನು ನಡೆಸುತ್ತಿವೆ ಎಂಬ ವಿಚಾರ ಅಧ್ಯಯನಗಳಿಂದ ತಿಳಿದುಬಂದಿದೆ.

ತಮ್ಮ ಆವರಣವನ್ನು ಸಂಪೂರ್ಣ ಧೂಮಪಾನ ಹೊಗೆ ಮುಕ್ತ ಮಾಡುತ್ತಿರುವುದು ಅವರ ಲಾಭವನ್ನು ಹೆಚ್ಚಿಸುತ್ತಿರುವುದಲ್ಲದೆ ಅನಗತ್ಯ ವೆಚ್ಚಗಳಿಗೂ ಕಡಿವಾಣ ಹಾಕಿದೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ತಮ್ಮ ನೌಕರರು ಮತ್ತು ಗ್ರಾಹಕರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ, ತಮ್ಮ ಆವರಣದಲ್ಲಿ  ಧೂಮಪಾನಕ್ಕೆ ಅವಕಾಶ ನೀಡದಿರಲು ಆತಿಥ್ಯ ಕ್ಷೇತ್ರ ಮುಂದಾಗಿದೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾನಿಲಯವು ಬುಧವಾರ ಆಯೋಜಿಸಿದ್ದ 'ಧೂಮಪಾನ ಮುಕ್ತ ಹೋಟೆಲ್/ರೆಸ್ಟೋರೆಂಟ್‌ಗಳು; ಆರೋಗ್ಯ ಮತ್ತು ವ್ಯವಹಾರಕ್ಕೆ ಸಮಗೆಲುವು' ಎಂಬ ವೆಬಿನಾರ್ ನಲ್ಲಿ ಹೋಟೆಲ್  ಉದ್ದಿಮೆದಾರರರು, ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳು, ರಾಜ್ಯಗಳ ಪ್ರವಾಸೋದ್ಯಮ ಮತ್ತು ಆರೋಗ್ಯ ಇಲಾಖೆಗಳ ಪ್ರತಿನಿಧಿಗಳು, ವೈದ್ಯರು ಮತ್ತು ಜಾಗತಿಕ ತಜ್ಞರು ಭಾಗವಹಿಸಿ, ಶೇ 100ರಷ್ಟು ಧೂಮಪಾನ ಹೊಗೆ ಮುಕ್ತ ಹೋಟೆಲ್/ರೆಸ್ಟೋರೆಂಟ್ ಆವರಣಗಳು ಗ್ರಾಹಕರು ಮತ್ತು ಮಾಲೀಕರು  ಇಬ್ಬರಿಗೂ ಸಮ ಲಾಭ ನೀಡುತ್ತವೆ ಎಂದು ನಿರ್ಧರಿಸಿದರು.

"ನಮ್ಮ ಕೆಫೆಯನ್ನು ಶೇ 100ರಷ್ಟು ಧೂಮಪಾನ ಹೊಗೆ ಮುಕ್ತಗೊಳಿಸಿರುವುದರಿಂದ ಗ್ರಾಹಕರು ಮತ್ತು ಸಿಬ್ಬಂದಿಯ ಆರೋಗ್ಯ ಕಾಪಾಡಿದಂತಾಗಿದೆಯಲ್ಲದೆ, ಹೆಚ್ಚಿನ ವ್ಯವಹಾರವನ್ನು ನಡೆಸಲು ಸಾಧ್ಯವಾಗಿದೆ ಎಂದು ಕೆಫೆ ಕಾರಾ ಮಾಲೀಕರಾದ ಶ್ರೀಮತಿ ರಾಧಾ ನಾಯರ್ ಹೇಳಿದರು. ಬೆಂಗಳೂರು ಮೂಲದ ಈ ಕೆಫೆ  ತನ್ನ ಆವರಣದಲ್ಲಿ ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಅಂದಿನಿಂದ ಹೆಚ್ಚಿನ ಗ್ರಾಹಕರು ಕುಟುಂಬ ಸಮೇತ ಕೆಫೆಗೆ ಬರಲು ಆರಂಭಿಸಿದ್ದಾರೆ. "ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರು ತಂಬಾಕು ಹೊಗೆಗೆ ಒಡ್ಡಿಕೊಂಡಾಗ ಕಸಿವಿಸಿ ಮತ್ತು ಉಸಿರಾಡಲು ಕಷ್ಟ ಅನುಭವಿಸುವುದರಿಂದ,  ಕುಟುಂಬ ಸಮೇತ ಬರುವ ಗ್ರಾಹಕರು ಧೂಮಪಾನಕ್ಕೆ ಅವಕಾಶ ನೀಡದ ಸ್ಥಳಗಳಲ್ಲಿ ಕುಳಿತು ಊಟ ಮಾಡಲು ಬಯಸುತ್ತಾರೆ. ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಗೆ ಆರೋಗ್ಯ ಸಮಸ್ಯೆ ತಂದೊಡ್ಡಬಹುದಾದ ಧೂಮಪಾನ ಪ್ರದೇಶವನ್ನು ತೆರವುಗೊಳಿಸಿ, ಅದೇ ಸ್ಥಳದಲ್ಲಿ ಹೆಚ್ಚಿನ ಗ್ರಾಹಕರು ಕುಳಿತುಕೊಳ್ಳುವಂತೆ  ವ್ಯವಸ್ಥೆ ಏಕೆ ಮಾಡಬಾರದು ಎಂದು ನಾವು ಯೋಚಿಸಿದೆವು ಎನ್ನುತ್ತಾರೆ ನಾಯರ್. ವೃದ್ಧಿಸುತ್ತಿರುವ ತಮ್ಮ ವ್ಯಾಪಾರದಿಂದ ಉತ್ಸುಕರಾಗಿರುವ ರಾಧಾ ನಾಯರ್, ತಮ್ಮಂತೆ ಇತರೆ ಕೆಫೆ ಮತ್ತು ರೆಸ್ಟೋರೆಂಟ್ ಗಳು ತಮ್ಮ ಆವರಣಗಳನ್ನು ಸಂಪೂರ್ಣ ಧೂಮಪಾನ ಮುಕ್ತಗೊಳಿಸಿ ತಮ್ಮ ವಹಿವಾಟನ್ನು  ಹೆಚ್ಚಿಸಿಕೊಳ್ಳಲಿ ಎಂದು ಆಶಿಸುತ್ತಾರೆ.

ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳ ಆವರಣದಲ್ಲಿ ಧೂಮಪಾನವನ್ನು ನಿಷೇಧಿಸಿ ಶೇ100ರಷ್ಟು ಧೂಮಪಾನ ಹೊಗೆ ಮುಕ್ತಗೊಳಿಸುವ ರೂಢಿ ಹೆಚ್ಚುತ್ತಿದೆ. ಮಕ್ಕಳು ಮತ್ತು ಹಿರಿಯ ನಾಗರಿಕರನ್ನೊಳಗೊಂಡ ಕುಟುಂಬಗಳು ಧೂಮಪಾನಕ್ಕೆ ಅವಕಾಶ ನೀಡದಂತ ರೆಸ್ಟೋರೆಂಟ್‌ಗಳಲ್ಲಿ ಕುಳಿತು ಊಟ ಮಾಡಲು ಮತ್ತು  ಹೋಟೆಲ್ ಗಳಲ್ಲಿ ತಂಗಲು ಬಯಸುತ್ತವೆ ಎಂಬುದನ್ನು ಅರಿತ ಮಾಲೀಕರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ. ಧೂಮಪಾನ ಪ್ರದೇಶಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಖರ್ಚಾಗುತ್ತಿದ್ದ ಬಹಳ ಹಣ ಇದರಿಂದ ಉಳಿತಾಯವಾಗುತ್ತಿದ್ದು, ನೌಕರರು ಮತ್ತು ಗ್ರಾಹಕರು ಧೂಮಪಾನದ  ಹೊಗೆಗೆ ಒಡ್ಡಿಕೊಳ್ಳುವುದರಿಂದ ರಕ್ಷಿಸಲು ಸಾಧ್ಯವಾಗುತ್ತಿದೆ.

ಕುಟುಂಬ ಸಹಿತ ಬರುವ ಗ್ರಾಹಕರು ಧೂಮಪಾನಕ್ಕೆ ಅವಕಾಶ ನೀಡದ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳಿಗೆ ಆದ್ಯತೆ ನೀಡುತ್ತಾರೆ ಎಂದು ನಾವು ಮನಗಂಡಿದ್ದೇವೆ. ನಮ್ಮ ಸಂಘದ ಅನೇಕ ಸದಸ್ಯರು ತಮ್ಮ ಹೋಟೆಲ್ ಗಳನ್ನು ಶೇ 100ರಷ್ಟು ಧೂಮಪಾನ ಹೊಗೆ ಮುಕ್ತ ಮಾಡಲು ಸ್ವಯಂಪ್ರೇರಣೆಯಿಂದ  ನಿರ್ಧರಿಸಿದ್ದಾರೆ. ಇತರರು ಇದನ್ನೇ ಅನುಸರಿಸಲು ನಾವು ಪ್ರೇರೇಪಿಸುತ್ತಿದ್ದೇವೆ. ಎಲ್ಲ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳು ನೂರಕ್ಕೆ ನೂರರಷ್ಟು ಧೂಮಪಾನ ಹೊಗೆಮುಕ್ತ ಆಗುವುದರಲ್ಲಿ ತೆಲಂಗಾಣ ಮಾದರಿ ರಾಜ್ಯವಾಗಬೇಕೆಂದು ನಾವು ಬಯಸುತ್ತೇವೆ. ಧೂಮಪಾನ ಪ್ರದೇಶಗಳನ್ನು ಸಂಪೂರ್ಣವಾಗಿ  ನಿಷೇಧಿಸಲು ಸರ್ಕಾರಕ್ಕೆ ಇದು ಸರಿಯಾದ ಸಮಯವಾಗಿದ್ದು, ಅದರಿಂದ ನಮಗೂ ಅವುಗಳನ್ನು ತೆಗೆದುಹಾಕಲು ಸುಲಭವಾಗುತ್ತದೆ ಎನ್ನುತ್ತಾರೆ ತೆಲಂಗಾಣ ಹೊಟೇಲ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷರಾದ ಎಂ. ಎಸ್. ನಾಗರಾಜು.

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ಜಾಹೀರಾತು ಮತ್ತು ನಿಯಂತ್ರಣ) ಕಾಯ್ದೆಯ (COTPA2003) ಪ್ರಕಾರ ಭಾರತದಲ್ಲಿ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಆದರೆ, ರೆಸ್ಟೋರೆಂಟ್,  ಹೋಟೆಲ್, ವಿಮಾನ ನಿಲ್ದಾಣ ಮುಂತಾದ ಕೆಲವು ಸಾರ್ವಜನಿಕ ಸ್ಥಳಗಳ ನಿರ್ದಿಷ್ಠ ಧೂಮಪಾನ ಪ್ರದೇಶಗಳಲ್ಲಿ (ಡಿಎಸ್‌ಎ) ಧೂಮಪಾನಕ್ಕೆ ಅವಕಾಶ ನೀಡಲಾಗಿದೆ. ಪರೋಕ್ಷ ಧೂಮಪಾನ ನೇರ ಧೂಮಪಾನದ? ಹಾನಿಕಾರಕವಾಗಿದೆ. ತಂಬಾಕು ಹೊಗೆ ಹೊರಸೂಸುವ ಹಾನಿಕಾರಕ ರಾಸಾಯನಿಕಗಳಿಗೆ  ಒಡ್ಡಿಕೊಳ್ಳುವುದರಿಂದ ವಯಸ್ಕರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದ್ರೋಗದಂಥ ಹಲವು ಖಾಯಿಲೆಗಳು ಉಂಟಾದರೆ, ಮಕ್ಕಳಲ್ಲಿ ಶ್ವಾಸಕೋಶದ ಕಾರ್ಯಚಟುವಟಿಕೆಯ ದುರ್ಬಲತೆ ಮತ್ತು ಉಸಿರಾಟದ ಸೋಂಕು ಉಂಟಾಗುತ್ತದೆ. ಉಸಿರಾಟ ತೊಂದರೆಯಿಂದ ಬಳಲುವವರು ಮತ್ತು ಹೃದಯರಕ್ತನಾಳ  ವ್ಯವಸ್ಥೆಗೆ ಹಾನಿಯಾದವರು ಕೋವಿಡ್-19ಗೆ ತುತ್ತಾದರೆ ತೀವ್ರ ಯಾತನೆ ಪಡುವ ಮತ್ತು ಸಾವಿಗೀಡಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಿರ್ದಿಷ್ಟ ಧೂಮಪಾನ ಪ್ರದೇಶಗಳಲ್ಲಿ ಜನ ದೈಹಿಕ ಅಂತರ ಕಾಪಾಡಿಕೊಳ್ಳುವುದು ಅಥವಾ ಮಾಸ್ಕ್ ಧರಿಸುವುದು ಸಾಧ್ಯವಿಲ್ಲವಾದ್ದರಿಂದ ಹಾಗೂ ತೀರಾ ಹತ್ತಿರ ನಿಂತು  ಕೊಳ್ಳುವುದರಿಂದ ಇವು (ಡಿಎಸ್ ಎ) ಕೋವಿಡ್-19 ಸೋಂಕನ್ನು ವೇಗವಾಗಿ ಹರಡುತ್ತವೆ.

"ಕೋವಿಡ್ ವೈರಾಣು ಸಾಂಕ್ರಾಮಿಕವಲ್ಲದ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರುವಂತೆ ಕಾಣುತ್ತಿದೆ. ಇದರಿಂದ, ಕೋವಿಡ್ ಸೋಂಕಿಗೆ ತುತ್ತಾಗುವ ಧೂಮಪಾನಿಗಳು ಹೆಚ್ಚು ತೊಂದರೆ ಅನುಭವಿಸುವ ಮತ್ತು ಮರಣ ಹೊಂದುವ ಸಾಧ್ಯತೆ ಇರುತ್ತದೆ. ತಂಬಾಕು  ಉತ್ಪನ್ನಗಳ ಹೊಗೆಯು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿದ್ದು, ಇದು ಪರಿಧಮನಿಯ ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಹಲವಾರು ಕ್ಯಾನ್ಸರ್ ಗಳಿಗೆ ಕಾರಣವಾಗಬಹುದು, ಎಂದು ಪ್ರಸಿದ್ಧ ಕ್ಯಾನ್ಸರ್ ತಜ್ಞರು ಮತ್ತು ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ, ಕರ್ನಾಟಕ ಸರ್ಕಾರ, ಸದಸ್ಯರಾದ  ಡಾ. ವಿಶಾಲ್ ರಾವ್ ತಿಳಿಸಿದರು. "ತಿನಿಸು ಕೇಂದ್ರಗಳಲ್ಲಿ, ವಿಶೇಷವಾಗಿ ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ರೆಸ್ಟೋರೆಂಟ್, ಪಬ್ ಮತ್ತು ಕ್ಲಬ್‌ಗಳಲ್ಲಿ, ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಳ್ಳುವಿಕೆ ನಡೆಯುತ್ತಿದೆ. ಧೂಮಪಾನ ಪ್ರದೇಶಗಳಿಂದ ಹೊಗೆಯು ಇತರೆ ಪ್ರದೇಶಗಳಿಗೂ ಹರಡುವುದರಿಂದ ಧೂಮಪಾನ  ಮಾಡದ ಸಾವಿರಾರು ಜನರ ಜೀವಗಳಿಗೆ ಅಪಾಯ ಉಂಟು ಮಾಡುತ್ತದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಅದರಲ್ಲೂ ಕೋವಿಡ್ ಕಾಲದಲ್ಲಿ ಎಲ್ಲ ಸ್ಥಳಗಳು ಸಂಪೂರ್ಣ ಧೂಮಪಾನ ಮುಕ್ತವಾಗಿರಬೇಕು, ಎಂದು ಹೇಳಿದ ಅವರು, ನಿರ್ದಿಷ್ಟ ಧೂಮಪಾನ ಪ್ರದೇಶಗಳು ಧೂಮಪಾನ ವಿರೋಧಿ ನೀತಿಗಳ  ಉದ್ದೇಶವನ್ನೇ ಮಣಿಸುತ್ತಿರುವುದರಿಂದ ಡಿಎಸ್‌ಎಗೆ ಅನುಮತಿಸುವ ಕೋಟ್ಪಾ 2003ರಲ್ಲಿನ ನಿಬಂಧನೆಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು.

ಆತಿಥ್ಯ ಸ್ಥಳಗಳಲ್ಲಿ ಡಿಎಸ್ಎಗಳ ಇರುವಿಕೆ ಮತ್ತು ಕೋಟ್ಪಾ 2003ರಲ್ಲಿ ನಿಗದಿಪಡಿಸಿರುವ ಮಾರ್ಗಸೂಚಿಗಳ ಪಾಲಿಸುವಿಕೆಯ ಮಾಪನಕ್ಕಾಗಿ ಜಾನ್ಸ್ ಹಾಪ್ಕಿನ್ಸ್ ಬ್ಲೂಮ್ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಟೊಬ್ಯಾಕೋ ಕಂಟ್ರೋಲ್ ಇತ್ತೀಚೆಗೆ ಭಾರತದ 8 ನಗರಗಳಲ್ಲಿ ಅಧ್ಯಯನ  ನಡೆಸಿದೆ. ಬೆಂಗಳೂರು, ಚೆನ್ನೈ, ದೆಹಲಿ, ಗುವಾಹಟಿ, ಜೈಪುರ, ಕೋಲ್ಕತಾ, ಲಕ್ನೋ ಮತ್ತು ಮುಂಬೈಗಳಲ್ಲಿನ 3,243 ಸ್ಥಳಗಳ (836 ಬಾರ್‌ಗಳು, 971 ಹೋಟೆಲ್‌ಗಳು ಮತ್ತು 1,436 ರೆಸ್ಟೋರೆಂಟ್‌ಗಳು) ಸಮೀಕ್ಷೆ ಮಾಡಲಾಗಿದೆ. ಇವುಗಳಲ್ಲಿ, ಕೇವಲ 120 ಸ್ಥಳಗಳಲ್ಲಿ ಮಾತ್ರ, ಅಂದರೆ ಕೇವಲ ಶೇ.3  ರಷ್ಟು ಡಿಎಸ್‌ಎಗಳು ಮಾತ್ರ ನಿಗದಿ ಪಡಿಸಿರುವ ಎಲ್ಲ ಮಾನದಂಡಗಳನ್ನು ಹೊಂದಿತ್ತು; ಶೇ. 58ಕ್ಕೂ ಹೆಚ್ಚು ಸ್ಥಳಗಳು ಡಿಎಸ್ಎಗೆ ಇರಬೇಕಾದ ವಿನ್ಯಾಸ ಮಾನದಂಡಗಳನ್ನು ಪಾಲಿಸಿಲ್ಲ; ಮತ್ತು ಶೇ. 92ರಷ್ಟು ಡಿಎಸ್ಎಗಳು ಕಡ್ಡಾಯವಾಗಿರುವ ಧೂಮಪಾನ ಪ್ರದೇಶ ಫಲಕವನ್ನು ಪ್ರದರ್ಶಿಸಿರಲಿಲ್ಲ.

ಕನಿಷ್ಟ 66 ದೇಶಗಳು ಒಳಾಂಗಣ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಿದ್ದು, ಇದು ಡಿಎಸ್‌ಎಗಳಿಗೂ ಹೊರತಾಗಿಲ್ಲ. ಬ್ರೆಜಿಲ್, ಕೆನಡಾ, ಗಯಾನಾ, ಪಾಕಿಸ್ತಾನ, ಸುರಿನಾಮ್, ಉಗಾಂಡಾ ಮತ್ತು ಯುನೈಟೆಡ್ ಕಿಂಗ್‌ಡಮ್ ಇದಕ್ಕೆ ಗಮನಾರ್ಹ ಉದಾಹರಣೆಗಳು. ಧೂಮಪಾನ ಮುಕ್ತ ನೀತಿಗಳು  ವ್ಯವಹಾರದ ಮೇಲೆ ಸಕಾರಾತ್ಮಕ ಆರ್ಥಿಕ ಪರಿಣಾಮ ಬೀರುತ್ತವಲ್ಲದೆ, ರೆಸ್ಟೋರೆಂಟ್ ಮತ್ತು ಬಾರ್‌ಗಳನ್ನೂ ಒಳಗೊಂಡಂತೆ ವ್ಯವಹಾರದ ಮೇಲೆ ವ್ಯತಿರಿಕ್ತ ಆರ್ಥಿಕ ಪರಿಣಾಮ ಬೀರುವುದಿಲ್ಲ. ಯುಎಸ್, ಮೆಕ್ಸಿಕೊ ನಗರ, ಐಲೆಂಡ್, ನಾರ್ವೆ, ಅಜೆಂಟೀನಾ, ಸೈಪ್ರಸ್, ಹಂಗೇರಿ ಮತ್ತು ಇತರ ದೇಶಗಳಲ್ಲಿನ ಆತಿಥ್ಯ  ಸ್ಥಳಗಳು ಶೇ 100ರಷ್ಟು ಧೂಮಪಾನ ಮುಕ್ತಗೊಳ್ಳುವ ಮೊದಲು ಮತ್ತು ನಂತರದ ಅಂಕಿಅಂಶಗಳನ್ನು ಗಮನಿಸಿದಾಗ, ಶೇ100ರಷ್ಟು ಧೂಮಪಾನ ಮುಕ್ತಗೊಂಡ ಮೇಲೂ ವ್ಯವಹಾರದಲ್ಲಿ ಯಾವುದೇ ಋಣಾತ್ಮಕ ಆರ್ಥಿಕ ಪರಿಣಾಮ ಕಂಡುಬಂದಿಲ್ಲ.

ತಂಬಾಕು ಬಳಕೆದಾರರ ಪಟ್ಟಿಯಲ್ಲಿ ಜಾಗತಿಕವಾಗಿ ಭಾರತ ಎರಡನೇ ಸ್ಥಾನದಲ್ಲಿದ್ದು  (268 ಮಿಲಿಯನ್ ಅಥವಾ ಭಾರತದ ಶೇ. 98.6ರಷ್ಟು ವಯಸ್ಕರು), ಪ್ರತಿವರ್ಷ 12 ಲಕ್ಷ ಮಂದಿ ತಂಬಾಕು ಸಂಬಂಧಿತ ಖಾಯಿಲೆಗಳಿಂದ ಮೃತಪಡುತ್ತಿದ್ದಾರೆ. ಧೂಮಪಾನದಿಂದ 10 ಲಕ್ಷ ಸಾವುಗಳು ಸಂಭವಿಸುತ್ತಿದ್ದು, ಪರೋಕ್ಷ  ಧೂಮಪಾನದಿಂದ ಎರಡು ಲಕ್ಷಕ್ಕೂ ಅಧಿಕ ಮಂದಿ ಮತ್ತು 350000ಕ್ಕೂ ಹೆಚ್ಚು ಜನ ಹೊಗೆರಹಿತ ತಂಬಾಕು ಬಳಕೆಯಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿರುವ ಎಲ್ಲ ವಿಧದ ಕ್ಯಾನ್ಸರ್ ಗಳ ಪೈಕಿ ಶೇ.27ರಷ್ಟು ಕ್ಯಾನ್ಸರ್ ಗಳಿಗೆ ತಂಬಾಕು ಬಳಕೆ ಕಾರಣವಾಗಿದೆ. ತಂಬಾಕು ಸಂಬಂಧಿತ ಖಾಯಿಲೆಗಳಿಂದ  ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ (35 ವರ್ಷಕ್ಕೂ ಮೇಲ್ಪಟ್ಟು) 1,77,341 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದು, ಇದು ಭಾರತದ ಜಿಡಿಪಿಯ ಶೇ. 1.04 ರಷ್ಟಿದೆ. ಯಾವುದೇ ಬಗೆಯ ತಂಬಾಕು ಬಳಕೆಗೂ (ಧೂಮಪಾನ/ಜಗಿಯುವುದು) ಕೋವಿಡ್-19 ಸಂಬಂಧಿತ ಸಾವು-ನೋವುಗಳಿಗೂ ನಿಕಟ ನಂಟಿದೆ ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com