ಬಿಡಿಎ ಭ್ರಷ್ಟಾಚಾರ ತಡೆಯಲು ಆಗುತ್ತಿಲ್ಲ, ಎಸಿಬಿ ದಾಳಿ ಸ್ವಾಗತಿಸುವೆ, ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ: ಅಧ್ಯಕ್ಷ ವಿಶ್ವನಾಥ್

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ನಾನು ಕೂಡ ತಡೆಯಲು ಆಗುತ್ತಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಡಿಎ ಅಧ್ಯಕ್ಷ ವಿಶ್ವನಾಥ್
ಬಿಡಿಎ ಅಧ್ಯಕ್ಷ ವಿಶ್ವನಾಥ್

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ನಾನು ಕೂಡ ತಡೆಯಲು ಆಗುತ್ತಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಡಿಎ ಮೇಲಿನ ಎಸಿಬಿ ದಾಳಿ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡ ಬಿಡಿಎ ಅಧ್ಯಕ್ಷ ವಿಶ್ವನಾಥ್, 'ನಾನು ಬಿಡಿಎ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ನವೆಂಬರ್ 26ಕ್ಕೆ ಒಂದು ವರ್ಷ ಆಗುತ್ತದೆ. ಅಧಿಕಾರ ಸ್ವೀಕಾರ ಮಾಡಿದ ಸಂದರ್ಭ ಸ್ವಚ್ಛ ಬಿಡಿಎ ಮಾಡುತ್ತೇನೆಂದು ಎಂದು ಹೇಳಿದ್ದೆ. ಸಾಕಷ್ಟು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದರೂ ಎಲ್ಲ ಭ್ರಷ್ಟಾಚಾರ ತಡೆಯಲು ಆಗಿಲ್ಲ ಎಂದು ಹೇಳಿದರು.

ನಾನೇ ಸ್ವತಃ ದೂರು ಕೊಟ್ಟಿದ್ದೇನೆ
'ಬಿಡಿಎ ಭ್ರಷ್ಟಾಚಾರ ಸಂಬಂಧ ನಾನೇ ಸ್ವತಃ ಎಸಿಬಿ ಅಧಿಖಾರಿಗಳಿಗೆ ದೂರು ಕೊಟ್ಟಿದ್ದೇನೆ. ಹಲವಾರು ಸಾರ್ವಜನಿಕರೂ ಕೂಡ ಎಸಿಬಿಯಲ್ಲಿ ದೂರು ದಾಖಲಿಸಿದ್ದಾರೆ. ಸಾಕಷ್ಟು ಮಂದಿ ಜೈಲಿಗೂ ಹೋಗಿ ಬಂದಿದ್ದಾರೆ. ಕೆಳಹಂತದ ಅಧಿಕಾರಿಗಳು ಲಂಚ ಇಲ್ಲದೇ ಕೆಲಸ ಮಾಡೋದಿಲ್ಲ ಎಂಬ ದೂರುಗಳಿವೆ. ಮಧ್ಯವರ್ತಿಗಳು ಇದ್ದಾಗ ದಾಳಿ ನಡೆಯಬೇಕಿತ್ತು ಎಂದು ಅಭಿಪ್ರಾಯಪಟ್ಟ ವಿಶ್ವನಾಥ್ ಅವರು ನಕಲಿ ದಾಖಲೆ ಕೊಟ್ಟು ನಿವೇಶನ ಪಡೆದವರಿದ್ದಾರೆ. ಏನೇ ಕ್ರಮ ತೆಗೆದುಕೊಂಡರೂ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುತ್ತಾರೆ. ಈಗ ಎಸಿಬಿ ತನಿಖೆ ನಡೆಯುತ್ತಿದೆ. ಎಲ್ಲ ಸಹಕಾರ ಕೊಡುತ್ತೇನೆ ಎಂದರು.

ತನಿಖೆಗೆ ಸಂಪೂರ್ಣ ಸಹಕಾರ
ಬಿಡಿಎನಲ್ಲಿ ದಾಖಲೆಗಳೇ ಮಾಯವಾಗುತ್ತವೆ. ನಕಲಿ ದಾಖಲೆ ಕೊಟ್ಟು ನಿವೇಶನ ಪಡೆದವರಿದ್ದಾರೆ. ಏನೇ ಕ್ರಮ ಮಾಡಿದರೂ ಕೋರ್ಟ್ ನಲ್ಲಿ ಸ್ಟೇ ತೆಗೆದುಕೊಳ್ಳುತ್ತಾರೆ. ಕೆಲವು ಭ್ರಷ್ಟಾಚಾರಗಳನ್ನು ನಾನೂ ಕೂಡಾ ತಡೆಯಲು ಆಗುತ್ತಿಲ್ಲ. ಈಗ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ. ನಿನ್ನೆಯ ದಾಳಿಯಲ್ಲಿ ನಗದು ಹಣ ಸಿಕ್ಕಿಲ್ಲ‌ ಅನ್ನಿಸುತ್ತದೆ. ನಿನ್ನೆ ಜನ ಬಂದಿದ್ದಾಗ ದಾಳಿ ಆಗಿದೆ. ಬ್ರೋಕರ್ ಗಳು ಇದ್ದಾಗ ದಾಳಿ ನಡೆಯಬೇಕಿತ್ತು. ನಾನೂ ಸಹ ಸಿಎಂ ಬೊಮ್ಮಾಯಿ ಅವರಿಗೆ ಈ ಬಗ್ಗೆ ವಿವರಣೆ ನೀಡಿದ್ದೇನೆ ಎಂದು ಬಿಡಿಎ ಅಧ್ಯಕ್ಷ ವಿಶ್ವನಾಥ್​ ಹೇಳಿದ್ದಾರೆ.

ಎಸಿಬಿಯಿಂದ ಪತ್ರಿಕಾ ಹೇಳಿಕೆ ಸಾಧ್ಯತೆ
ಇದೇ ವೇಳೆ ಎಸಿಬಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದಂತೆ ಅಕ್ರಮಗಳು ಬಯಲಾಗುತ್ತಿವೆ. ಯಾರದೋ ವ್ಯಕ್ತಿಗಳ ಹೆಸರುಗಳಿಗೆ ನಿವೇಶನ ಹಂಚಿಕೆ ಮಾಡಿರುವುದು, ಈ ನಂತರ ಮಧ್ಯವರ್ತಿಗಳ ಹೆಸರುಗಳಿಗೆ ಸೇಲ್ ಡೀಡ್ ಆಗಿರುವುದು, ಮಹಿಳೆಯೊಬ್ಬರ ಹೆಸರಿಗೆ ಎಂಟು ನಿವೇಶನಗಳು ಹಂಚಿಕೆಯಾಗಿರುವುದು ಪತ್ತೆಯಾಗಿವೆ ಎನ್ನಲಾಗಿದೆ. ಈ ಎಲ್ಲ ಅಕ್ರಮಗಳ ಹಿನ್ನಲೆಯಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇವುಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಎಸಿಬಿ ತನಿಖೆ ಪೂರ್ಣಗೊಂಡ ನಂತರ ಹೊರಬೀಳಲಿದೆ ಎನ್ನಲಾಗಿದೆ. ಇನ್ನೂ ಕೆಲಹೊತ್ತಿನಲ್ಲಿ ದಾಳಿಯ ಪ್ರಾಥಮಿಕ ಮಾಹಿತಿ ಬಗ್ಗೆ ಎಸಿಬಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com