

ಬೆಂಗಳೂರು: ಬೆಂಗಳೂರಿಗರ ಜೀವನಾಡಿ ಆಗಿರುವ ನಮ್ಮ ಮೆಟ್ರೋ ನಿಲ್ದಾಣ ಬುಧವಾರ ಮನಕಲಕುವ ದೃಶ್ಯವೊಂದಕ್ಕೆ ಸಾಕ್ಷಿಯಾಗಿದ್ದು, ಕೋತಿಯೊಂದು ತನ್ನ ಮಗುವಿನ ಅಸ್ಥಿಪಂಜರ ಹೊತ್ತುಕೊಂಡು ನಡೆಯುವ ದೃಶ್ಯ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.
ಮಗು ಸಾವನ್ನಪ್ಪಿ ದಿನಗಳೇ ಕಳೆದಿದ್ದರೂ, ತಾಯಿ ಕೋತಿ ಮಾತ್ರ ತನ್ನ ಮಗುವಿನ ಅಸ್ಥಿಪಂಜರವನ್ನೇ ತನ್ನ ಕೈಯಲ್ಲಿ ಹಿಡಿದು ಮೆಟ್ರೋ ನಿಲ್ದಾಣದ ಆವರಣದಲ್ಲಿ ಓಡಾಡುತ್ತಿದೆ.
ತನ್ನ ಮಗು ಸತ್ತಿದೆ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಆ ತಾಯಿಯ ಮೌನ ವೇದನೆ ಮೆಟ್ರೋ ನಿಲ್ದಾಣದ ಜನರನ್ನು ಮರುಗುವಂತೆ ಮಾಡಿತು.
ಈ ಘಟನೆ ಆಳವಾದ ಭಾವನಾತ್ಮಕ ಕ್ಷಣ, ಪ್ರೀತಿ, ದುಃಖ ಮತ್ತು ಬಾಂಧವ್ಯವು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ ಎಂದು ನಮಗೆ ನೆನಪಿಸುತ್ತದೆ. ಪ್ರಾಣಿ ಪ್ರಪಂಚದಲ್ಲಿ ಅದರಲ್ಲೂ ಮಂಗಗಳಲ್ಲಿ ಈ ರೀತಿಯ ವರ್ತನೆ ವಿರಳವಾದರೂ, ಇದು ಅವುಗಳಿಗೂ ಮನುಷ್ಯರಂತೆ ದುಃಖ ಮತ್ತು ಬಾಂಧವ್ಯ ಇರುತ್ತದೆ ಎನ್ನುವುದನ್ನು ತೋರಿಸಿಕೊಡುತ್ತದೆ.
Advertisement