ರೇವಂತ್ ರೆಡ್ಡಿ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಣೆ: ಕೇಂದ್ರದ ‘ಸಂಕುಚಿತ ಮನೋಭಾವ’ಕ್ಕೆ ಸಾಕ್ಷಿ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ತಮ್ಮ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಹೂಡಿಕೆದಾರರು ಇರುವ ದೇಶಗಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡಬೇಕು. ಹೂಡಿಕೆದಾರರಿಗೆ ರಾಜ್ಯದಲ್ಲಿರುವ ಅವಕಾಶಗಳು ಮತ್ತು ಅನುಕೂಲಗಳನ್ನು ವಿವರಿಸಬೇಕು.
Congress president Mallikarjun Kharge
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Updated on

ಕಲಬುರಗಿ: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಉದ್ದೇಶಿತ ಅಮೆರಿಕ ಪ್ರವಾಸಕ್ಕೆ ರಾಜಕೀಯ ಅನುಮತಿ ನಿರಾಕರಿಸಿರುವುದು ಕೇಂದ್ರ ಸರ್ಕಾರದ ಸಂಕುಚಿತ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಶನಿವಾರ ಕಲಬುರಗಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹೂಡಿಕೆ ಆಕರ್ಷಿಸಲು, ಅದರಲ್ಲೂ ಅನಿವಾಸಿ ಭಾರತೀಯರಿಂದ (ಎನ್‌ಆರ್‌ಐ) ಹೂಡಿಕೆ ಪಡೆಯಲು ನಿಯಮಿತವಾಗಿ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಇಂತಹ ಪ್ರವಾಸಗಳು ರಾಜ್ಯಗಳಷ್ಟೇ ಅಲ್ಲದೆ ದೇಶದ ಆರ್ಥಿಕ ಅಭಿವೃದ್ಧಿಗೂ ನೆರವಾಗುತ್ತವೆ.

ತಮ್ಮ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಹೂಡಿಕೆದಾರರು ಇರುವ ದೇಶಗಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡಬೇಕು. ಹೂಡಿಕೆದಾರರಿಗೆ ರಾಜ್ಯದಲ್ಲಿರುವ ಅವಕಾಶಗಳು ಮತ್ತು ಅನುಕೂಲಗಳನ್ನು ವಿವರಿಸಬೇಕು. ರಾಜ್ಯಗಳು ಅಭಿವೃದ್ಧಿಯಾದರೆ ದೇಶವೂ ಅಭಿವೃದ್ಧಿಯಾಗುತ್ತದೆ. ಬಿಜೆಪಿಗೆ ವಿರುದ್ಧವಾಗಿರುವ ಪಕ್ಷಗಳಿಗೆ ಸೇರಿದವರು ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳನ್ನು ವಿದೇಶ ಪ್ರವಾಸದಿಂದ ತಡೆಯಬಾರದು ಎಂದು ಹೇಳಿದರು.

ಇದೇ ವೇಳೆ ರೇವಂತ್ ರೆಡ್ಡಿ ಅವರ ಅಮೆರಿಕ ಪ್ರವಾಸಕ್ಕೆ ಕೊನೆಯ ಕ್ಷಣದಲ್ಲಿ ರಾಜಕೀಯ ಅನುಮತಿ ನಿರಾಕರಿಸಲಾಗಿದೆ ಎಂದು ಆರೋಪಿಸಿದ ಖರ್ಗೆ, ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.

ಬಳಿಕ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಪದ್ಧತಿಯನ್ನು ಸಮರ್ಥಿಸಿಕೊಂಡ ಖರ್ಗೆಯವರು, ಈ ನಿರ್ಧಾರವನ್ನು ಐದು ದಶಕಗಳ ಹಿಂದೆಯೇ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್ ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಸೇರಿದಂತೆ ರಾಷ್ಟ್ರೀಯ ನಾಯಕರೊಂದಿಗೆ ನಡೆದ ಚರ್ಚೆಗಳ ಬಳಿಕ ಈ ನಿರ್ಧಾರಕ್ಕೆ ಬರಲಾಗಿತ್ತು ಎಂದು ಹೇಳಿದರು.

Congress president Mallikarjun Kharge
'ಇದೆಂತಹ ಸ್ವಾವಲಂಬಿ ಭಾರತ?': ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ದೇಶವೇ ರಫ್ತು ಮಾಡಿಕೊಳ್ಳುತ್ತಿರುವುದೇಕೆ?; ಮಲ್ಲಿಕಾರ್ಜುನ ಖರ್ಗೆ

ಇಂದು ಬಿಜೆಪಿಯ ನಾಯಕರು ಸಂಪೂರ್ಣ ವಂದೇ ಮಾತರಂ ಹಾಡದ ಕಾಂಗ್ರೆಸ್ ಸದಸ್ಯರನ್ನು ದೇಶದ್ರೋಹಿಗಳು ಎಂದು ಕರೆಯುತ್ತಿದ್ದಾರೆ. ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಒಪ್ಪಿಕೊಂಡಿದ್ದ ರಾಷ್ಟ್ರೀಯ ನಾಯಕರನ್ನೂ ದೇಶದ್ರೋಹಿಗಳು ಎಂದು ಕರೆಯಬೇಕೇ ಎಂಬುದನ್ನು ಅವರು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ರಾಷ್ಟ್ರಗೀತೆ ಜನಗಣಮನದ ಒಂದು ಚರಣವನ್ನು ಮಾತ್ರ ಹಲವು ದಶಕಗಳಿಂದ ಅಧಿಕೃತವಾಗಿ ಹಾಡಲಾಗುತ್ತಿದೆ. ಇದಕ್ಕೂ ರಾಷ್ಟ್ರೀಯ ನಾಯಕರು ಕೈಗೊಂಡ ನಿರ್ಧಾರವೇ ಆಧಾರವಾಗಿದೆ ಎಂದು ಹೇಳಿದರು.

ಬಿಜೆಪಿಗೆ ತಿರುಗೇಟು

ಇದೇ ವೇಳೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್. ವಂದೇ ಮಾತರಂ ಮತ್ತು ಜನಗಣಮನ ಹಾಡುವ ಪದ್ಧತಿಯನ್ನು ಜನಪ್ರಿಯಗೊಳಿಸಿದ್ದೂ ಕಾಂಗ್ರೆಸ್ ಎಂದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ದೇಶಭಕ್ತಿಯ ಬಗ್ಗೆ ಕಾಂಗ್ರೆಸ್‌ಗೆ ಪಾಠ ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ವಂದೇ ಮಾತರಂನ ಎಲ್ಲಾ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವ ನಿಲುವು ಬಿಜೆಪಿಗಿದ್ದರೆ, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಏಕೆ ಕಡ್ಡಾಯಗೊಳಿಸಲಿಲ್ಲ? ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಏಕೆ ಈ ಕ್ರಮ ಜಾರಿಗೆ ಬಂದಿಲ್ಲ? ಎಂದು ಪ್ರಶ್ನಿಸಿದರು.

ಉದ್ಯೋಗ ಸೃಷ್ಟಿ, ಶಿಕ್ಷಣದ ಅವಕಾಶಗಳು ಹಾಗೂ ನೀತಿ ಸುಧಾರಣೆಗಳಂತಹ ಪ್ರಮುಖ ವಿಷಯಗಳತ್ತ ಗಮನಹರಿಸುವ ಬದಲು ಅನಗತ್ಯ ವಿವಾದಗಳನ್ನು ಸೃಷ್ಟಿಸುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ಮೋದಿ ಅವರು ಇತ್ತೀಚೆಗೆ ಅಗತ್ಯ ಆಧಾರಿತ ನೀತಿಗಳ ಕುರಿತು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಖರ್ಗೆ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಕಾಲದಲ್ಲೇ ಇಂತಹ ಅಭಿವೃದ್ಧಿ ಆಧಾರಿತ ನೀತಿಗಳನ್ನು ಜಾರಿಗೆ ತರಲಾಗಿತ್ತು ಎಂದು ಹೇಳಿದರು.

ನೆಹರು ಅವರ ಅವಧಿಯಲ್ಲಿ ಪ್ರಮುಖ ಅಣೆಕಟ್ಟುಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಎಂಜಿನಿಯರಿಂಗ್ ಸಂಸ್ಥೆಗಳನ್ನು ಸ್ಥಾಪಿಸಲಾಗಿತ್ತು. ಇಂದು ಪ್ರಧಾನಿ ಮೋದಿ ಮಾತನಾಡುತ್ತಿರುವ ಹಲವು ವಿಚಾರಗಳನ್ನು ನೆಹರು ಅವರ ಕಾಲದಲ್ಲೇ ಅನುಷ್ಠಾನಗೊಳಿಸಲಾಗಿತ್ತು ಎಂದು ತಿಳಿಸಿದರು. ನಂತರ ಬಂದ ಸರ್ಕಾರಗಳು ಆ ಯೋಜನೆಗಳನ್ನು ಮುಂದುವರಿಸಿ ಮತ್ತಷ್ಟು ಬಲಪಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com