ಅಧಿಕಾರ ಬದಲಾವಣೆ ಚರ್ಚೆ ಬೆನ್ನಲ್ಲೇ ಡಿಕೆಶಿ ಟೆಂಪಲ್ ರನ್: CM ಗಾದಿ ಕನಸು ಜೀವಂತ..!

ಮೇ 20ರಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಲಿರುವ ಹೊತ್ತಿನಲ್ಲಿ ಡಿಕೆ ಶಿವಕುಮಾರ್ ಅವರ ಈ ದೇವಾಲಯ ಭೇಟಿ ರಾಜಕೀಯ ಮಹತ್ವ ಪಡೆದುಕೊಂಡಿದೆ.
DK Shivkumar
ಡಿಕೆ.ಶಿವಕುಮಾರ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನದ ಜಟಾಪಟಿ ಇನ್ನು ನಿಂತಿಲ್ಲ. ರಾಜ್ಯ ರಾಜಕೀಯ ವಲಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ಜೋರಾಗುತ್ತಿರುವ ನಡುವೆಯೇ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದು. ಸಿಎಂ ಗಾದಿ ಕನಸನ್ನು ನನಸಾಗಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದಾರೆ.

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪಚುನಾವಣೆಗಳ ಬಳಿಕ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಕುರಿತ ಗುಸುಗುಸುಗಳು ಮತ್ತೆ ಕೇಳಿಬರುತ್ತಿದೆ.

ಇದರ ನಡುವಲ್ಲೇ ಡಿಕೆ ಶಿವಕುಮಾರ್ ಅವರು ದೇವಸ್ಥಾನಗಳ ಭೇಟಿಯನ್ನು ಹೆಚ್ಚಿಸಿದ್ದಾರೆ. ಕಳೆದ ವಾರ ತಮ್ಮ 65ನೇ ಜನ್ಮದಿನದ ಅಂಗವಾಗಿ ಪುದುಚೇರಿಯ ಕರೈಕಲ್‌ನ ಪ್ರಸಿದ್ಧ ಶನೇಶ್ವರ ದೇವಾಲಯ ಹಾಗೂ ತಮಿಳುನಾಡಿನ ತಿರುಚೆಂದೂರಿನ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ಅವರು, ಸೋಮವಾರ ತಿರುಪತಿಗೂ ತೆರಳುತ್ತಿದ್ದಾರೆ.

ಮೇ 20ರಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಲಿರುವ ಹೊತ್ತಿನಲ್ಲಿ ಡಿಕೆ ಶಿವಕುಮಾರ್ ಅವರ ಈ ದೇವಾಲಯ ಭೇಟಿ ರಾಜಕೀಯ ಮಹತ್ವ ಪಡೆದುಕೊಂಡಿದೆ.

“ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ” ಎಂಬ ಮಾತನ್ನು ಆಗಾಗ ಹೇಳುವ ಡಿಕೆ ಶಿವಕುಮಾರ್, 2023ರಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ತಮಗೂ ಸಿದ್ದರಾಮಯ್ಯರಿಗೂ ನಡುವೆ ನಡೆದಿದ್ದ ‘2.5 ವರ್ಷಗಳ ಅಧಿಕಾರ ಹಂಚಿಕೆ’ ಒಪ್ಪಂದದ ಆಧಾರದ ಮೇಲೆ ತಮಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

DK Shivkumar
ನೀವು ನಮಗೂ ಡಿಸಿಎಂ; ಬೆದರಿಸುವ ಕೆಲಸ ಮಾಡೋದು ಬೇಡ: ಡಿಕೆಶಿಗೆ ಶಾಸಕ ಜೀವರಾಜ್ ತಿರುಗೇಟು

ಸೋಮವಾರ ಬೆಳಿಗ್ಗೆ ತಿರುವನಂತಪುರದಲ್ಲಿ ಕೇರಳ ಸಿಎಂ ಆಗಿ ವಿ.ಡಿ. ಸತೀಶನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ನಂತರ ಡಿಕೆ ಶಿವಕುಮಾರ್ ಅವರು, ಬಳಿಕ ಸಂಜೆ ತಿರುಪತಿಗೆ ಪ್ರಯಾಣಿಸಲಿದ್ದಾರೆ. ಮಂಗಳವಾರ ಬೆಳಿಗ್ಗೆ ತಿರುಮಲ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಬೆಂಗಳೂರಿಗೆ ಮರಳಿ, ತುಮಕೂರಿನಲ್ಲಿ ನಡೆಯಲಿರುವ ಕರ್ನಾಟಕ ಸರ್ಕಾರದ ಮೂರು ವರ್ಷದ ಸಾಧನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸದಸ್ಯರೊಂದಿಗೆ ಡಿಕೆ ಶಿವಕುಮಾರ್ ಒಂದೇ ವೇದಿಕೆ ಹಂಚಿಕೊಳ್ಳಲಿದ್ದು, ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆ ಕುರಿತು ಪಕ್ಷದಲ್ಲಿ ಏಕತೆ ಇದೆ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಅವರು, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಸಮಯ ಬಂದಾಗ ಅವರು ಖಂಡಿತವಾಗಿ ಮುಖ್ಯಮಂತ್ರಿ ಆಗುತ್ತಾರೆ” ಎಂದು ಹೇಳಿದ್ದಾರೆ.

ಇದೇ ವೇಳೆ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಒಂದು ರಾಜಕೀಯ ಪಕ್ಷ ಡಿಕೆ ಶಿವಕುಮಾರ್ ಅವರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಆದರೆ, ಅವರು ಕಟ್ಟಾ ಕಾಂಗ್ರೆಸ್ ನಿಷ್ಠಾವಂತರಾಗಿರುವುದರಿಂದ ಅದು ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com