

ಶ್ರೀಮತಿ ಉಮಾಶ್ರೀ ಅವರಿಗೆ ನಮಸ್ಕಾರ...
ಹೇಗಿದ್ದೀರಿ ಮೇಡಂ? ಸಿಕ್ಕಾಪಟ್ಟೆ ಬ್ಯುಸಿನಾ? ಅಥವಾ ಬ್ಯುಸಿ ಇರೋ ಥರ ಆಕ್ಟಿಂಗ್ ಮಾಡ್ತೀರಾ? ಎಷ್ಟೇ ಅದರೂ ನೀವು ಆಕ್ಟಿಂಗ್ನಲ್ಲಿ ಫೇಮಸ್ ಅಲ್ವಾ? ಅದಕ್ಕೆ ಕೇಳಿದೆ.
ನಿಮ್ಮನ್ನ ನೋಡಿ ಬಹಳ ದಿನ ಆಯ್ತು. ಮೊದಲು ಸಿನಿಮಾದಲ್ಲೋ, ನಾಟಕದಲ್ಲೋ ನೀವು ಕಾಣಿಸಿಕೊಳ್ತಾ ಇದ್ರಿ. ಈವಾಗ ಎರಡೂ ಬಿಟ್ಟಿದ್ದೀರಿ ಅಂತ ಕಾಣುತ್ತೆ. ಸಿನಿಮಾ, ನಾಟಕ, ರಾಜಕೀಯ, ಈ ಮೂರೂ ಕಡೆ ಆಕ್ಟಿಂಗ್ ಮಾಡೋದು ಸ್ವಲ್ಪ ಕಷ್ಟ ಅಲ್ವಾ? ರಾಜಕೀಯಕ್ಕೆ ಬಂದ ಮೇಲೂ ಆಗಾಗ ಸಿಕ್ತಾ ಇದ್ರಿ. ಮಂತ್ರಿ ಆದಮೇಲೆ ಜನರ ದೃಷ್ಟಿಗೆ ಬೀಳ್ತಾನೇ ಇಲ್ವಲ್ಲ ಏಕೆ?
ಅದೃಷ್ಟ ಅಂದ್ರೆ ನಿಮ್ದು ನೋಡಿ ಮೇಡಂ. ಹೇಗೆ ಅಂತೀರ? ಕಾಂಗ್ರೆಸ್ನಲ್ಲಿ ವಿಧಾನಸಭೆಗೆ ಮೂರು, ನಾಲ್ಕು, ಐದು ಬಾರಿ ಗೆದ್ದು ಬಂದೋರು ಪಲ್ಟಿ ಹೊಡೆದ್ರೂ ಮಂತ್ರಿ ಆಗಲಿಕ್ಕೆ ಸಾಧ್ಯವಾಗ್ತಿಲ್ಲ. ನಿಮಗೆ ಮಾತ್ರ ಮಂತ್ರಿಗಿರಿ ಒಂದೇ ಟೇಕ್ನಲ್ಲಿ ಓಕೆ ಆಗೋಯ್ತಲ್ಲ. ನಸೀಬು ಅಂದ್ರೆ ಹೀಗಿರಬೇಕು.
ತೇರದಾಳ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ನಿಮಗೆ ಟಿಕೆಟ್ ಸಿಗೋದೆ ಡೌಟು ಅಂತಿದ್ರು. ಆದರೆ, ಸಿಎಂ ಸಿದ್ದರಾಮಣ್ಣೋರು ಕೊಟ್ರೆ ಉಮಾಶ್ರೀಗೇ ಟೆಕೆಟ್ ಅಂತ ಒಂದು ಆವಾಜ್ ಬಿಟ್ರು ನೋಡಿ. ಟೆಕೆಟ್ ಬಂದು ನಿಮ್ಮ ಮಡಿಲಿಗೆ ಬಿತ್ತು. ಹೇಗೂ ಕಾಂಗ್ರೆಸ್ನ ಅಲೆ ಇತ್ತು. ಅದರಲ್ಲಿ ತೇರದಾಳ ಕ್ಷೇತ್ರದಿಂದ ತೇಲಿಕೊಂಡು ವಿಧಾನಸಭೆ ವರೆಗೂ ಬಂದುಬಿಟ್ರಿ.
ನೀವು ಮಂತ್ರಿ ಆಗ್ತೀರಾ ಅಂತ ಯಾರೂ ಅಂದುಕೊಂಡಿರಲಿಲ್ಲ ಬಿಡಿ. ಮತ್ತೆ ಸಿದ್ದರಾಮಣ್ಣೋರು ತಮ್ಮ ಕ್ಯಾಬಿನೆಟ್ಗೆ ನಿಮ್ಮನ್ನ ಸೇರಿಸಿಕೊಂಡ್ರು. ಅದೂ ಎಂಥ ಖಾತೆ ಕೊಟ್ರು ನಿಮ್ಗೆ. ಒಂದು ಸಾಲದು ಅಂತ ಎರಡು! ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀವೇ ಈವಾಗ ಓನರ್ರು. ಒಟ್ಟಿನಲ್ಲಿ ಬೆಂಗಳೂರಿಂದ ಬಳ್ಳಾರಿವರೆಗೆ ನೀವು ಮಾಡಿದ 'ಪಾದಯಾತ್ರೆ' ಫಲ ಕೊಟ್ಟಿತು ಬಿಡಿ.
ಅಲ್ಲ, ಮೊದಲು ನೀವು ಚೆನ್ನಾಗೇ ಇದ್ರಿ. ಮಂತ್ರಿ ಆದಮೇಲೆ ಏನಾಯ್ತು ಅಂತ. ಅದೇನು ಘನತೆ, ಗಾಂಭೀರ್ಯ ಬಂತು. ಅದರ ಜೊತೆಗೆ ಧಿಮಾಕು ಬಂದೇಬಿಡ್ತಲ್ಲ. ನಿಮ್ಮ ಕಣ್ಣಿಗೆ ಈವಾಗ ಯಾರೂ ಕಾಣಿಸೋದೇ ಇಲ್ವಂತೆ. ಮೊನ್ನೆ ವಿಧಾನಸೌಧಕ್ಕೆ ಹೋಗಿದ್ದೆ. ಅಲ್ಲಿ ನಿಮ್ಮ ಬಗ್ಗೆನೇ ಮಾತು ನಡೀತಿತ್ತು. ನೋಡ್ರಪ್ಪ, ಮಂತ್ರಿ ಅದಮೇಲೆ ಉಮಾಶ್ರೀ ಫುಲ್ ಚೇಂಜ್ ಆಗೋಗಿದ್ದಾರೆ. ಅವರ ನಡೆ, ನುಡಿ ಎಲ್ಲಾನೂ ಚೇಂಜ್ ಆಗೋಗಿದೆ. ಸಿಕ್ಕಾಪಟ್ಟೆ ಧಿಮಾಕು ಅಂತ ಜನ ಹೇಳ್ತಾ ಇದ್ರು.
ನೀವು ಈ ಮಟ್ಟಕ್ಕೆ ಬರಲಿಕ್ಕೆ ರಂಗಭೂಮಿ ಮತ್ತು ಸಿನಿಮಾನೇ ಕಾರಣ ಅಲ್ವೇ? ರಂಗಭೂಮಿ ಕಲಾವಿದ್ರು, ಸಿನಿಮಾ ಕ್ಷೇತ್ರದ ಗಣ್ಯರು ಬಂದ್ರೂ ಮಾತೇ ಆಡಿಸೋದಿಲ್ವಂತೆ. ಹತ್ತಿದ ಏಣಿಯನ್ನು ಯಾರಾದ್ರೂ ಹೀಗೆ ಒದೀತಾರೇನು? ಹೋಗ್ಲಿ, ಮಂತ್ರಿ ಆಗಿ ಆರು ತಿಂಗಳು ಆಯ್ತಲ್ಲ, ನಿಮ್ ಕೈಯ್ಯಲ್ಲಿ ಎರಡೆರಡು ಖಾತೆ ಇದೆಯಲ್ಲ. ಅದೇನು ಸಾಧನೆ ಮಾಡಿದ್ದೀರಿ ಸ್ವಲ್ಪ ಹೇಳಿ ನೋಡೋಣ.
ಮಂತ್ರಿಗಿರಿ ಹೀಗೇ ಶಾಶ್ವತವಾಗಿ ಇರುತ್ತೆ, ಇಲ್ಲೇ ಗೂಟ ಹೊಡ್ಕಂಡು ಇರ್ತೀನಿ ಅಂದುಕೊಂಡಿದ್ದೀರ? ಈ ರಾಜಕೀಯದಲ್ಲಿ ಎಂತೆಂಥವರೋ ಏನೇನೋ ಆಗಿ ಹೋಗಿದ್ದಾರೆ. ಇನ್ನು ನೀವು ಯಾವ ಲೆಕ್ಕ ಮೇಡಂ. ಮಂತ್ರಿ ಆಗಿದ್ದೀರಿ, ಸ್ವಲ್ಪ ಸ್ಕೋಪ್ ತಗೋಬೇಕು ಬಿಡಿ. ಹಾಗಂತ ಧಿಮಾಕು ತೋರಿಸೋದೇ? ಈಗೇನೋ ಗೋಲ್ಡ್ ಆಗಿದ್ದೀರ, ಹೀಗೆ ಮಾಡಿದ್ರೆ ನಾಳೆ ಅಧಿಕಾರದಿಂದ ಕೆಳಗಿಳಿದ ಮೇಲೆ ಉಮಾ ಗೋಲ್ಡ್ ಆಗ್ಹೋಗ್ತೀರಾ.
ಮರೆತಿದ್ದೆ, ನೀವು ಎಂಎಲ್ಸಿ ಆಗಿದ್ದಾಗ ಯಾವುದೋ ದೂರದ ಊರಿನ ವಿಳಾಸ ಕೊಟ್ಟಿದ್ರಿ ಅಲ್ವಾ. ಸರ್ಕಾರಿ ಸಭೆಗಳಿಗೆ ಅಲ್ಲಿಂದಲೇ ಬರೋದು ಅಂತಾನು ಹೇಳಿದ್ರಿ. ಬೆಂಗಳೂರಿನಲ್ಲೇ ಇದ್ರೂ ಯಾವುದೋ ವಿಳಾಸ ಕೊಟ್ಟು ಟಿಎ, ಡಿಎ ತಗೋತಿದ್ರಿ. ಈ ವಿಷಯ ಆವಾಗ ದೊಡ್ಡ ಸುದ್ದಿನೂ ಆಗಿತ್ತು ಅಂತ ನನಗೆ ಯಾರೋ ಹೇಳಿದ್ರು. ಈವಾಗ ನೆನಪಿಗೆ ಬಂತು. ಅದನ್ನು ನಿಮಗೆ ಜ್ಞಾಪಕ ಮಾಡಿಸಿದೆ ಅಷ್ಟೇ.
ಬೇಡ ಮೇಡಂ, ಅತಿ ಮಾಡಬೇಡಿ. ಈ ಆಕ್ಟಿಂಗ್ ರಂಗಭೂಮಿಗೆ, ಸಿನಿಮಾಗೆ ಮಾತ್ರ ಇರಲಿ. ಸಾರ್ವಜನಿಕ ಬದುಕಿನಲ್ಲಿರೋರು ನಾಟಕ ಮಾಡಿದ್ರೆ ಜನ ಸಹಿಸಲ್ಲ. ಆಮೇಲೆ ಅವರೇ ಅಂಕದ ಪರದೆ ಎಳೆದುಬಿಡ್ತಾರೆ. ಉಮಾಶ್ರೀ ಜನರ ಕೈಲಿ ಇಸ್ತ್ರಿ ಆಗೋದು ಬೇಡ.
ಹುಷಾರು ಮೇಡಂ, ನಮಸ್ಕಾರ...
- ಕೆ.ವಿ. ಪ್ರಭಾಕರ್
prabhukolar@yahoo.com