ಖುಷಿ

ನಗುವೇ ನಮ್ಮ ನಾಸ್ತಿ!

ನಗುವೇ ನಮ್ಮ ನಾಸ್ತಿ!
Published On :

ಯಡಿಯೂರಪ್ಪ
ಸದಾ ಬ್ಯುಸಿ ಇರ್ತಾರೆ. ಬಿಸಿ ಆಗಿಯೂ ಇರ್ತಾರೆ. ಉರಿಮುಖದ ನಾಯಕ. ಜೊತೆಗೆ ಸಿಟ್ಟನ್ನೂ ಕೆ.ಜಿ.ಗಟ್ಟಲೆ ತುಂಬಿಕೊಂಡಿರುವ ವ್ಯಕ್ತಿತ್ವ. ಸಿಎಂ ಆಗಿದ್ದಾಗ ಮುಖದಲ್ಲಿ ಆದಷ್ಟು ನಗು ತುಂಬಿಕೊಳ್ಳಲು ಯತ್ನಿಸಿದರೂ, ಅದು ಕೃತಕ ಎಂಬಂತೆ ತೋರಿತು. ನಗೆಕ್ಲಬ್ಬಿಗೆ ಸೇರಿದರೂ ಬಹುಶಃ ಯಡಿಯೂರಪ್ಪ ಅವರ ಮುಖದಲ್ಲಿ ನಗು ಮೂಡುವುದು ಕಷ್ಟಕಷ್ಟ. ಆದರೂ, ಇವರ ನಾಯಕತ್ವಕ್ಕೆ ಆಯಸ್ಕಾಂತೀಯ ಗುಣವಿದೆ.

ಎಸ್.ಎಲ್. ಭೈರಪ್ಪ
ಕನ್ನಡಕ್ಕೊಬ್ಬರೇ 'ಕಾದಂಬರಿ ಭೀಷ್ಮ'. ಅವರು ಎಸ್.ಎಲ್. ಭೈರಪ್ಪ. ಆದರೆ, ಈ ಭೀಷ್ಮ ನಗುವುದೇ ಕಮ್ಮಿ. ಸಾಹಿತಿ ಅಂದರೆ ಗಂಭೀರವಾಗಿರ್ತಾರೆ ಎಂಬ ಆರೋಪ ಇದೆ. ಆ ಆರೋಪವನ್ನು ಅಕ್ಷರಶಃ ನಿಜಮಾಡಿದ ವ್ಯಕ್ತಿ ಇವರು. ಯಾವುದೋ ಚಿಂತನೆಯಲ್ಲಿ ಮುಳುಗಿದಂತೆ ಕಾಣುವ ಇವರ ಮುಖಕ್ಕೆ 'ನಗು' ಅಪರೂಪದ ಅತಿಥಿ.

ಸೌರವ್ ಗಂಗೂಲಿ
ಆ ದಿಟ್ಟ ನೋಟದಲ್ಲಿ ಸಿಟ್ಟೂ ಇದೆ. ಛಲವೂ ಇದೆ. ಗಂಗೂಲಿ ನಗುತ್ತಿದ್ದಾರೆ ಅಂದ್ರೆ ಅವರು 'ಅಂದುಕೊಂಡಿದ್ದು ಆಗಿದೆ' ಅಂತಲೇ ಅಂದುಕೊಳ್ಳಬೇಕು. ಅಲ್ಲಿಯ ತನಕ ಅವರಲ್ಲಿ ನಗುವಿನ ಸಾಸಿವೆ ಕಾಳೂ ಕಾಣದು. ಬಹುಶಃ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಮೇಲೆ, ಒತ್ತಡದಿಂದ ಹೊರಬಂದ ಮೇಲೆ ಗಂಗೂಲಿ ಸ್ವಲ್ಪ ನಗು ತೋರಿರಬಹುದೇನಪ್ಪಾ! ಮಿಕ್ಕಂತೆ ಅವರು ಮಿಸ್ಟರ್ ಸೀರಿಯಸ್!

ಸಾಯಿಕುಮಾರ್
ಗಾಂಧಿನಗರದಲ್ಲಿ 'ಖಾಕಿ'ಸ್ತಾನ ಹುಟ್ಟುಹಾಕಿದಂಥ ಈ ವ್ಯಕ್ತಿಗೂ ನಗುವೆಂದರೆ ಅಲರ್ಜಿಯೇನೋ! ಪೊಲೀಸ್ ಪಾತ್ರ ಮಾಡೀ ಮಾಡಿ ಸಾಯಿಕುಮಾರ್ ಹೀಗಾದರೋ ಏನೋ ಗೊತ್ತಿಲ್ಲ. ತೆರೆಯ ಮೇಲೆ, ತೆರೆಯ ಹಿಂದೆ ಎಲ್ಲೂ ಸಾಯಿಕುಮಾರ್ ನಗುವುದು ಕಡಿಮೆ. ಜಗತ್ತಿನ ಎಲ್ಲರ ರಕ್ಷಣೆಯ ಹೊಣೆ ಇವರ ಮೇಲೆಯೇ ಇದೆಯೇನೋ ಎಂಬುವಷ್ಟು ಮುಖಭಾವ ಹೊಮ್ಮಿಸುತ್ತಾರೆ.

ಮಾಲಾಶ್ರೀ
ಸಾಯಿಕುಮಾರ್ ಇವರ ತಲೆಮೇಲೆ ಕೈ ಇಟ್ಟರೋ ಏನೋ... ನಗುತ್ತಿದ್ದ ಮಾಲಾಶ್ರೀ ಉರಿಚೆಂಡಾಗಿದ್ದಾರೆ. ಅತ್ತೆಯ ಗರ್ವವನ್ನು ಬಿಡಿಸುವ ಈ ಹೆಣ್ಣು ಈಗ ದುಷ್ಟರ ಗರ್ವವನ್ನು ಬಿಡಿಸುವ ಪೊಲೀಸ್. ಹೀಗಾಗಿ, 'ನನ್ನ ಮುಖಕ್ಕೆ ನಗು ಸೂಟ್ ಆಗುವುದಿಲ್ಲ' ಅಂತ ಡಿಸೈಡ್ ಮಾಡಿರಬೇಕು ಮಾಲಾಶ್ರೀ. ಹಾಗಂತ ಇವರದ್ದು ಅಳುಮುಖವೂ ಅಲ್ಲ. ಏನೋ ಸಿಟ್ಟನ್ನು, ಎಂಥದ್ದೋ ಛಲವನ್ನು ತುಂಬಿಕೊಂಡ ವದನ.

ಶಿವರಾಮ ಕಾರಂತ
'ಕಡಲ ತೀರದ ಭಾರ್ಗವ' ಸುನಾಮಿಯಂತೆ ನೋಟ ಬೀರಿದ್ದೇ ಹೆಚ್ಚು. ತುಸು ಕಟು ವಿಮರ್ಶೆಯನ್ನೂ ಸ್ವೀಕರಿಸುವ ವ್ಯಕ್ತಿಯಾಗಿರಲಿಲ್ಲ ಕಾರಂತರು. ಸಾಮಾನ್ಯ ಸಾಹಿತ್ಯಪ್ರಿಯನಿಗೂ ಇವರನ್ನು ಮಾತನಾಡಿಸಲು ಹೆದರಿಕೆ ಆಗುತ್ತಿತ್ತಂತೆ. ಸಿಟ್ಟಿನ ಗ್ರಹದ ಯಾವುದೋ ತುಣುಕಿನಂತೆ ಕಾರಂತರು ಕಾಣಿಸುತ್ತಿದ್ದರು.

ಮಲ್ಲಿಕಾರ್ಜುನ ಖರ್ಗೆ
ಕಡೇಪಕ್ಷ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಾಗಲೂ ಖರ್ಗೆ ನಕ್ಕರೋ ಇಲ್ಲವೋ ಗೊತ್ತಾಗಲಿಲ್ಲ. ಬಿಳಿಹಲ್ಲು ಕಾಣುತ್ತದೆ ಎಂಬ ಭಯವೋ ಏನೋ ಅವರಿಗೆ. ಮುಖದಲ್ಲಿ ಹಲವು 'ಗಂಟು'ಗಳನ್ನು ಹುದುಗಿಸಿಟ್ಟುಕೊಂಡವರು. ಬಹುಶಃ ಅವರನ್ನು ಸಿಎಂ ಮಾಡಿದರೆ ನಗುತ್ತಾರೋ ಏನೋ... ಕಾದುನೋಡಬೇಕು!

ಎಚ್.ಡಿ. ಕುಮಾರಸ್ವಾಮಿ
ದೇವೇಗೌಡರಾದರೂ ಸ್ವಲ್ಪ ನಗ್ತಾರೆ. ಆದರೆ, ಅವರ ಮಗ ಕುಮಾರಣ್ಣ ನಕ್ಕಿದ್ದು ಬಹಳ ಕಡಿಮೆ. ರಾಧಿಕಾ ಪಕ್ಕದಲ್ಲಿದ್ದಾಗಲೂ ಅವರು ನಕ್ಕು ಪೋಸು ಕೊಡಲಿಲ್ಲ. ಸಿಎಂ ಆದಾಗಲೂ ಒಂದು ಸಣ್ಣ ನಗುವನ್ನೂ ಅವರು ಹೊಮ್ಮಿಸಲಿಲ್ಲ. ಅಪರೂಪಕ್ಕೆ ನಕ್ಕರೂ ಅದು ನಗು ಅಂತ ನಮಗ್ಯಾರಿಗೂ ಗೊತ್ತಾಗೋದಿಲ್ಲ. ಅಂಥ ನಿಗೂಢ ನಗು ಅದು!

ಸೋನಿಯಾ ಗಾಂಧಿ
ಈ ಮೇಡಮ್ಮಿಗೆ ಅದೇನು ಸೀರಿಯಸ್‌ನೆಸ್ಸಪ್ಪ. ಕಾಂಗ್ರೆಸ್‌ನ ವಿಜಯೋತ್ಸವದಲ್ಲಿ ನಗಲೂ ಫೋಟೋಗ್ರಾಫರ್ ಹೇಳಿಕೊಡಬೇಕು. ತಾವು ತುಂಬಾ ಸ್ಟ್ರಿಕ್ಟ್ ಅಂತನ್ನಿಸಿಕೊಳ್ಳಲು ಮುಂದಾದಾಗ ಇವರ ಮುಖ ಇನ್ನಷ್ಟು ಬಾಡಿರುತ್ತದೆ. ಮೋದಿ ಹವಾ ಜೋರಾಗಿದೆ. ಫಲಿತಾಂಶದ ದಿನ ಇವರ ಮುಖ ಹೇಗಿರುತ್ತದೋ ಎಂಬ ಕುತೂಹಲ ಎಲ್ಲರಲ್ಲಿ.

ಎಲ್.ಕೆ. ಅಡ್ವಾಣಿ
ಬಿಜೆಪಿಯ ಈ 'ಭೀಷ್ಮ' ಎಂದಾದರೂ ಖುಷಿಯಿಂದ ನಕ್ಕಿದ್ದು ಕಂಡಿದ್ದೀರಾ? ಬಹುಶಃ ಇರಲಿಕ್ಕಿಲ್ಲ. ಪ್ರಧಾನಿ ಮಾಡಿದರೂ ಅವರ ಮುಖದಲ್ಲಿ ನಗು ಮೂಡದೇನೋ! ಮೋದಿ ಪ್ರಧಾನಿ ಅಭ್ಯರ್ಥಿ ಆದಮೇಲಂತೂ ಇವರ ಮುಖ ಇನ್ನಷ್ಟು ಗಂಟಾಗಿದೆ. ಗಂಟುಮೊಗದಿಂದ ಮುಖದಲ್ಲಿ ನೆರಿಗೆಗಳು ಹೆಚ್ಚಾಗುತ್ತವೆ ಎಂಬ ಸೌಂದರ್ಯ ಕಾಳಜಿಯೂ ಈ ಹಿರಿಕನಿಗೆ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.