ಖುಷಿ

ಮೋದಿ ವೃಕ್ಷದ ಹಿಂದೆ...

ಮೋದಿ ವೃಕ್ಷದ ಹಿಂದೆ...
Published On :

ಪಾಶ್ಚಾತ್ಯರ ಭೋಗವಾದದಿಂದಾಗಿ ಹಾಗೂ ಕಾಮವನ್ನೇ ಅಮರ ಪ್ರೇಮ ಎಂಬಂತೆ ಚಿತ್ರಿಸುವ ಚಲನಚಿತ್ರ ಸಂಸ್ಕೃತಿಯ ಪ್ರಭಾವದಿಂದಾಗಿ ಕಾಮ ಮತ್ತು ಪ್ರೇಮಗಳ ವ್ಯತ್ಯಾಸವೇ ನಮಗೆ ಅಸ್ಪಷ್ಟವಾಗಿ ಬಿಡುತ್ತಿದೆ. ಪತಿಯಿಂದ ದೂರವಿದ್ದರೂ, ಕಾಮಾಪೇಕ್ಷೆಯ ಲೇಶವೂ ಇಲ್ಲದಿದ್ದರೂ ಅಮರಪ್ರೇಮವನ್ನು ಮೆರೆದ ಸಾಧ್ವಿಯರ ಉದಾಹರಣೆಗಳು ನಮ್ಮ ನಾಡಲ್ಲಿ ಹೇರಳವಾಗಿ ಸಿಗುತ್ತವೆ.

ಗಂಡಹೆಂಡಿರ ನಡುವೆ ಹೊರಗಡೆಯವರ ಹಸ್ತಕ್ಷೇಪದಿಂದಾಗಿ ಅಥವಾ ವೈಮನಸ್ಯದಿಂದಾಗಿ ಅವರು ಬೇರಾದಾಗ ಅದು ಖಂಡಿತವಾಗಿಯೂ ಅನ್ಯಾಯ. ಗಂಡಹೆಂಡಿರ ಸ್ನೇಹದಲ್ಲಿ ಹುಳಿ ಹಿಂಡುವುದು ಘೋರಾತಿಘೋರ ಪಾಪವೇ ಸರಿ. ಗಂಡ-ಹೆಂಡತಿಯರು ಕುಳಿತಿದ್ದರೆ ಅವರ ಮಧ್ಯದಲ್ಲಿ ಕೂಡುವುದಿರಲಿ, ನಡೆದೂ ಹೋಗಬಾರದು ಎನ್ನುವ ಪದ್ಧತಿ ಈ ಭಾವವನ್ನು ಪುಷ್ಟಿಗೊಳಿಸುತ್ತದೆ. ಆದರೆ ಆದರ್ಶಪಾಲನೆ, ಶಿಷ್ಟಾಚಾರಗಳು ಅಥವಾ ಕರ್ತವ್ಯಗಳ ಕರೆ ಬಂದಾಗ ತ್ಯಾಗ- ಸಂಯಮಗಳಿಗೆ ಮುಂದಾಗುವುದೂ ದಾಂಪತ್ಯ ಪ್ರೇಮದ ಒಂದು ಮರ್ಯಾದೆಯೇ.
ದಾಂಪತ್ಯವೆನ್ನುವುದು ಸಹಬಾಳ್ವೆಯೇ. ನಿಜ, ಆದರೆ ಕೆಲವೊಮ್ಮೆ ಜೀವನವು ಅನಿವಾರ್ಯ ಸಮಸ್ಯೆ- ವಿಯೋಗಗಳನ್ನು ತಂದಿಟ್ಟಾಗ, ದೂರವಿದ್ದೂ ಪ್ರೇಮವನ್ನು ಮೆರೆಯುವ ಛಲ- ಬಲಗಳು, ಕನಸುಗಳು ಕೈಗೂಡದಿದ್ದರೂ, ಪ್ರೇಮವನ್ನು ಹಸಿರಾಗಿರಿಸಿಕೊಂಡು ಸಾಗುವ ಔದಾರ್ಯ, ನಿಷ್ಠೆ ಹಾಗೂ ಸಹನೆಗಳು ಎಷ್ಟು ಸ್ತ್ರೀಪುರುಷರಿಗಿದ್ದೀತು? ನಮ್ಮ ಈ ಪುಣ್ಯ ಭೂಮಿಯಲ್ಲಿ ವಿಯೋಗದಲ್ಲೂ ಇಂಥ ಪ್ರೇಮವನ್ನು ಮೆರೆದ ಹಲವು ಸಾಧ್ವಿಯರ ಉದಾಹರಣೆಗಳನ್ನು ನೋಡಬಹುದು.

ಪರಮಹಂಸ ರಾಮಕೃಷ್ಣರ ವೈರಾಗ್ಯಸಂಪನ್ನ ಜೀವನಕ್ಕೆ ಅವರ ಪತ್ನಿ ಶಾರದಾಮಣಿಯವರು ಅಖಂಡ ಬ್ರಹ್ಮಚರ್ಯದ ಸಹಕಾರವನ್ನಿತ್ತರು. ಇಂಥ ಕಠಿಣತಮ ವ್ರತವನ್ನು ಆಸಿಧಾರವ್ರತ (ದಂಪತಿ ಕಾಯಾ-ವಾಚಾ-ಮನಸಾ ಅಖಂಡ ಬ್ರಹ್ಮಚರ್ಯ ಪಾಲಿಸುವ ಕತ್ತಿಯ ಅಲಗಿನ ನಡೆಯಂಥ ನಿಯಮ) ಎಂದು ಶಾಸ್ತ್ರಗಳು ಉಲ್ಲೇಖಿಸುತ್ತವೆ. ತನ್ನ ವೈಯಕ್ತಿಕ ಬಯಕೆಗಳನ್ನೆಲ್ಲ ಯೋಗಿಯಾದ ಪತಿಯ ಲೋಕೋತ್ತರ ಆದರ್ಶಗಳ ಸಿದ್ಧಿಗಾಗಿ ಸಂತೋಷವಾಗಿ ತ್ಯಾಗಗೈದ ಶಾರದಾಮಣಿಯವರ ಪ್ರೇಮ ಅನನ್ಯ ಅಸಾಧಾರಣವಾದದ್ದು.
ಅಯೋಧ್ಯೆಯ ರಾಜಶಾಸನದ ನಿಯಮಕ್ಕೆ ಅನಿವಾರ್ಯವಾಗಿ ಬಲಿಯಾಯಿತು ಸೀತಾ-ರಾಮರ ದಾಂಪತ್ಯ. ಶಾಶ್ವತ ವಿರಹವನ್ನು ಅನುಭವಿಸಿದರಾದರೂ ಸೀತಾರಾಮರು ದಾಂಪತ್ಯದ ಆದರ್ಶಪೂರ್ತಿಗಾಗಿ ಕೊನೆವರೆಗೂ ಶ್ರಮಿಸಿದರು. ರಾಜ್ಯಪಾಲನೆ ಹಾಗೂ ಮಕ್ಕಳ ಪಾಲನೆಗಳನ್ನು ಯೋಗ್ಯವಾಗಿ ನೆರವೇರಿಸಿದರು. ದೂರವಿದ್ದರೂ ವಿರಹದಲ್ಲಿ ಒಂದಾಗಿ ಕಾಮಾತೀತವಾದ ಪ್ರೇಮ ಮೆರೆದರು.

ಇನ್ನು, ಯಾವ ಅನಿವಾರ್ಯತೆ ಇಲ್ಲದಿದ್ದರೂ, 14 ವರ್ಷಗಳ ಪತಿವಿಯೋಗವನ್ನು ಅನುಭವಿಸಬೇಕಾದಾಗ ಲಕ್ಷ್ಮಣನ ಪತ್ನಿ ಊರ್ಮಿಳೆ ತಾಳಿದ ಔದಾರ್ಯ, ತ್ಯಾಗಭಾವಗಳು ಅಸಾಧಾರಣವಲ್ಲವೆ?

ಮಾದ್ರಿ ಪಾಂಡುವಿನೊಂದಿಗೆ ಸಹಗಮನ ಮಾಡಿ ಪ್ರೇಮವನ್ನು ಮೆರೆದರೆ, ಕುಂತಿಯು ಮಕ್ಕಳನ್ನು ಸಾಕುವ ಸಲುವಾಗಿ ವೈಧವ್ಯ ಹಾಗೂ ವಿರಹದ ಕಷ್ಟಗಳನ್ನು ಅನುಭವಿಸಿದ ಪತಿವ್ರತೆ. ದ್ರೌಪದಿಯು ಪಾಂಡವರೊಂದಿಗೆ ವನವಾಸಕ್ಕೆ ತೆರಳಿ ಕಷ್ಟನಷ್ಟಗಳನ್ನು ಎದುರಿಸಿದ ಧೀಮಂತೆ. ಆದರೆ ಸುಭದ್ರೆ, ಹಿಡಿಂಬಾ ಮುಂತಾದ ಪಾಂಡವರ ಇತರ ಅನೇಕ ಪತ್ನಿಯರು ಗಂಡಂದಿರಿಂದ ದೂರ ಉಳಿಯಬೇಕಾದರೂ, ಸಹಕರಿಸಿ ಪ್ರೇಮವನ್ನು ತೋರಿದ್ದನ್ನೂ ನಾವು ಮರೆಯುವಂತಿಲ್ಲ.

ವಿದ್ವಾಂಸರಾದ ವಾಚಸ್ಪತಿ ಮಿಶ್ರರು ತಮ್ಮ ಶಾಸ್ತ್ರವ್ಯಾಖ್ಯಾನ ಗ್ರಂಥದ ಕಾರ್ಯದಲ್ಲಿ ದಶಕಕ್ಕೂ ಹೆಚ್ಚು ಕಾಲ ತೊಡಗಿ ಮೈಮರೆತರು. ಹರೆಯದ ವಯಸ್ಸಿನ ಪತ್ನಿ ಭಾಮತಿಯು ನಿತ್ಯವೂ ದೀಪ ಬೆಳಗಿ ಹೋಗುತ್ತ, ಸದ್ದಿಲ್ಲದೆ ಸೇವೆಗೈಯುತ್ತಿದ್ದಳು. ಕಾರ್ಯಮಗ್ನರಾದ ಮಿಶ್ರರು ಪತ್ನಿಯತ್ತ ಕಣ್ಣೂ ಹಾಯಿಸುತ್ತಿರಲಿಲ್ಲ. ಗ್ರಂಥಲೇಖನ ಮುಗಿಸಿದ ಬಳಿಕ ಒಂದು ದಿನ ಗಮನಿಸಿ ನೋಡುತ್ತಾರೆ, ಭಾಮತಿಯು ತಮಗೇ ಗುರುತು ಬಾರದಷ್ಟು ಮಾಗಿದ್ದಳು, ಮಧ್ಯವಯಸ್ಸನ್ನು ತಲುಪಿದ್ದಳು! ಅಷ್ಟು ದೀರ್ಘಕಾಲ ಆಕೆಯನ್ನು ನಿರ್ಲಕ್ಷಿಸಿದ್ದಕ್ಕಾಗಿ ವ್ಯಥೆಪಟ್ಟ ಮಿಶ್ರರು, ಆಕೆಯ ತ್ಯಾಗ- ಔದಾರ್ಯಗಳನ್ನು ಪುರಸ್ಕರಿಸುವ ಸಲುವಾಗಿ ಗ್ರಂಥಕ್ಕೆ 'ಭಾಮತೀ ವ್ಯಾಖ್ಯಾನ' ಎಂದೇ ನಾಮಕರಿಸಿದರು. ಕಾಮ- ಸ್ವಾರ್ಥಗಳ ಗಂಧಗಾಳಿಯೂ ಇಲ್ಲದ ಭಾಮತಿಯ ಉದಾರ ಪ್ರೇಮ ನಿಜಕ್ಕೂ ದಿವ್ಯಾದ್ಭುತವಲ್ಲವೆ?

ಅರ್ಥಕಾಮಗಳ ಅಪೇಕ್ಷೆಯೇ ಇಲ್ಲದೆ ಕೇವಲ ಗುರು- ಶಿಷ್ಯ ಸಂಬಂಧದಲ್ಲಿ ಗಂಡನೊಂದಿಗೆ ಮೋಕ್ಷಪತ್ನಿಯಾಗಿ ಸಹಕರಿಸಿದ ಮೈತ್ರೇಯಿಯ ಉದಾಹರಣೆಯೂ ಉಪನಿಷತ್ತುಗಳಲ್ಲಿ ಸಿಗುತ್ತದೆ.

ತನ್ನ ಮಗ ಶಿವಾಜಿಯನ್ನು ಭಾವೀ ಛತ್ರಪತಿಯನ್ನಾಗಿ ರೂಪಿಸುವ ಸಲುವಾಗಿ ಜೀಜಾಬಾಯಿ ಗಂಡನಿಂದ ದೂರವೇ ಉಳಿದಳು. ಮೊಘಲರ ಅಧಿಕಾರವನ್ನು ಒಪ್ಪಿ ಶರಣಾದ ಗಂಡನ ಆಶ್ರಯದಲ್ಲಿ ಮಗ ಬೆಳೆದು ಅದೇ ದಾಸ್ಯಬುದ್ಧಿಯನ್ನು ಮೈಗೂಡಿಸಿಕೊಳ್ಳಬಾರದು ಎನ್ನುವುದು ಅವಳ ಎಚ್ಚರ. ಆದರೆ ಪತಿಯ ಕುರಿತಾಗಿ ಅವಳ ಪ್ರೇಮ- ನಿಷ್ಠೆಗಳು ಮಾತ್ರ ಪ್ರಶ್ನಾತೀತ. ಆತ ಸತ್ತಾಗ ಜೀಜಾಬಾಯಿ ಸಹಗಮನಕ್ಕೂ ಮುಂದಾಗಿದ್ದಳಂತೆ! ನಿಜ, ಮಾತೃಸಂಕಲ್ಪದ ಸಿದ್ಧಿಗಾಗಿ ಹಾಗೂ ದೇಶನಿರ್ಮಾಣದ ಘನಾದರ್ಶಕ್ಕಾಗಿ ಜೀಜಾಬಾಯಿ ಪತಿವಿಯೋಗವನ್ನು ಸಹಿಸಿಕೊಂಡಳು. ಆದರೆ ವಿಯೋಗದಲ್ಲೂ ಅವಳ ಪತಿಪ್ರೇಮವೇನೂ ಕುಂದಲಿಲ್ಲ.
ಕನ್ನಡದ ಹೆಮ್ಮೆಯ ಕವಿ ಡಿವಿಜಿರವರ ಪತ್ನಿಯಾದರೋ ಗಂಡನ ಅಪರಿಗ್ರಹ ವ್ರತದಿಂದ ಅದೆಷ್ಟೇ ಬಡತನದ ಬೇಗೆಯನ್ನೂ, ಅನನುಕೂಲವನ್ನೂ ಅನುಭವಿಸಬೇಕಾಗಿ ಬಂದರೂ ಬೇಸರಿಸದೆ ಪತಿಯ ಆದರ್ಶಕ್ಕೆ ಹೆಗಲು ಕೊಟ್ಟು ನಿಂತ ಉದಾರಹೃದಯಿ. ಚೈತನ್ಯಮಹಾಪ್ರಭುಗಳು ಸನ್ಯಾಸ ಸ್ವೀಕರಿಸಲು ಹೊರಟಾಗ ಅವರ ಮಾರ್ಗಕ್ಕೆ ಅಡ್ಡ ಬಾರದೆ ಆಜನ್ಮವಿರಹಿಣಿಯಾಗಿ ಉಳಿದು ತಪೋನಿರತಳಾದ ಅವರ ಪತ್ನಿ ವಿಷ್ಣುಪ್ರಿಯೆಯ ತ್ಯಾಗವೇನು ಕಡಿಮೆಯದೇ? ಇದೇ ತರಹ ಸನ್ಯಾಸಕ್ಕಾಗಿ ಹೊರಡುವ ಅದೆಷ್ಟೋ ಪುರುಷರನ್ನೂ ಮನಸಾ ಹರಸಿ ಕಳುಹಿಸುವ ಅವರ ಮಡದಿಯರ ತ್ಯಾಗ ಕಾಮಾತೀತವಾದ ಪ್ರೇಮವಲ್ಲದೆ ಮತ್ತೇನು? ಇನ್ನು ನಮ್ಮ ವೀರಯೋಧರ ಪತ್ನಿಯರು, ತಮ್ಮ ಪತಿ ಮರಳಿ ಬರುವರೋ ಇಲ್ಲವೋ ಎನ್ನುವ ಸಂಕಟವನ್ನೂ ನುಂಗಿ, ತಿಲಕವಿಟ್ಟು, ಹುರಿದುಂಬಿಸಿ ಗಂಡಂದಿರನ್ನು ಯುದ್ಧಕ್ಕೆ ಕಳುಹುತ್ತಾರಲ್ಲಾ, ಈ ಪ್ರೇಮದಲ್ಲಿ ಅದೆಂಥ ಸಂಯಮವಿದೆ? ಬಲಿದಾನವಿದೆ?!

ಸ್ವಯಂಪ್ರೀತಿಯಿಂದ ಅಂಧನನ್ನೇ ಅರಸಿ ಮದುವೆಯಾಗಿ ಸಂತೋಷದಿಂದ ಬದುಕು ನಡೆಸುತ್ತಿರುವ ಒಬ್ಬಳನ್ನು ಕಂಡಿದ್ದೇನೆ. ಅಂತೆಯೇ ಗಾಲಿಕುರ್ಚಿಯ ಮೇಲೆ ತಿರುಗಾಡುವ ಪೋಲಿಯೋಪೀಡಿತನನ್ನು ಮದುವೆಯಾಗಿ ಸಂತೋಷವಾಗಿ ಬಾಳುತ್ತಿರುವ ರೂಪ-ವಿದ್ಯಾ-ಗುಣ-ಆಸ್ತಿವಂತೆಯಾದ ಯುವತಿಯ ಉದಾಹರಣೆಯೂ ಇದೆ. ನನ್ನ ಗೆಳತಿ ರಾಧಾ ಹಳ್ಳಿಯ ಹುಡುಗಿ. ಆಕೆ ಮದುವೆಯಾದ ಎರಡೇ ವರ್ಷಗಳಲ್ಲಿ ಗಂಡ ದೃಷ್ಟಿಹೀನನೂ, ಉದ್ಯೋಗಹೀನನೂ ಆದ. ಆದರೆ ಆಕೆ ಎದೆಗುಂದದೆ ಪತಿಗೆ ಬೆಂಬಲವಾಗಿ ನಿಂತು, ಅಕ್ಷರಶಃ ಕೈಹಿಡಿದು ನಡೆಸುತ್ತ ಗಂಡನನ್ನೂ, ಮಗುವನ್ನೂ ಸಲಹುತ್ತಿದ್ದಾಳೆ. ಇವೆಲ್ಲ ಇಂದಿಗೂ ಕಾಣುವ ಅಮರ ಪ್ರೇಮದ ನಿದರ್ಶನಗಳಲ್ಲವೇ?

ಮೊದಲಿಂದಲೂ ದೇಶಸೇವೆಯ ಧ್ಯೇಯಕ್ಕೆ ಮನಗೊಟ್ಟು ಅದರಲ್ಲೇ ತನ್ಮಯನಾದ ಪತಿ ನರೇಂದ್ರ ಮೋದಿಯವರ ಅಂತರಂಗವನ್ನು ಅರಿತು ಆಧರಿಸಿದವರು ಜಶೋದಾ ಬೆನ್. ಪತಿಯು ತನಗೆ ಸಲ್ಲದಿದ್ದರೂ ವ್ಯಥೆಪಡದೆ, ಗೊಣಗಾಡದೆ, ಆತ ದೇಶಕ್ಕೆ ಪ್ರಧಾನಿಯಾಗಲಿ ಎಂದು ಹರಕೆ ತೊಟ್ಟು ಅನ್ನತ್ಯಾಗ, ಬರಿಗಾಲಲ್ಲಿ ತೀರ್ಥಯಾತ್ರೆ ಮುಂತಾದ ನೇಮಗಳನ್ನು ಕೈಗೊಂಡಿದ್ದಾರೆ. ಭಾರತದ ಕುಲನಾರಿಯ ನಿಷ್ಕಳಂಕ ಪ್ರೇಮದ ಅಚ್ಚಿನಲ್ಲಿ ಮೂಡಿದ ತ್ಯಾಗಶೀಲ ವನಿತೆಯರಲ್ಲಿ ಈಕೆಯೂ ಒಬ್ಬರಲ್ಲವೆ?

ನೈಜಪ್ರೇಮದ ಪರೀಕ್ಷೆಗಳು
ಹಿಂದೂ ಸಂಸ್ಕೃತಿಯಲ್ಲಿ ಅರಳಿದ ಹೆಣ್ಣುಮಕ್ಕಳಿಗೆ ತ್ಯಾಗ, ಸಂಯಮಗಳು ಸಹಜವಾಗಿಯೇ ಮೈಗೂಡಿ ಬರುತ್ತವೆ. ಅವರ ಪಾಲಿಗೆ ಸಂಯಮವು ಶೋಷಣೆ ಎನಿಸುವುದಿಲ್ಲ. ಬದಲಾಗಿ ನಿಜವಾದ ಪ್ರೇಮದ ಪರೀಕ್ಷೆಯೆನಿಸುತ್ತದೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ ಸಂಯಮ, ತ್ಯಾಗಗಳಿಲ್ಲದೆ, ಭೋಗೈಕಪೂರ್ತಿಗಾಗಿ ಹವಣಿಸುವ ಪ್ರೇಮ ಹೇಯವಾದದ್ದು. ಅದೆಷ್ಟೇ ಸ್ನೇಹ- ಸರಸತೆಗಳು ತುಂಬಿದ್ದರೂ, ಜವಾಬ್ದಾರಿಯರಿತ ದಂಪತಿಯು ಮಕ್ಕಳ, ಅತಿಥಿ ಹಾಗೂ ವೃದ್ಧರ ಸೇವೆ ಮಾಡುವಾಗ, ಕಾಲಕಾಲದ ವ್ರತ-ನಿಯಮಗಳ ಆಚರಣೆ ಮಾಡುವಾಗ, ಕೆಲವಾರು ಆದರ್ಶಪಾಲನೆ ಮಾಡುವಾಗ ಅಥವಾ ಸಾಮಾಜಿಕ ಮರ್ಯಾದೆಗಳನ್ನು ಪಾಲಿಸುವಾಗ ಸಂಯಮಿಗಳಾಗಬೇಕಾಗುತ್ತದೆ.
ದಾಂಪತ್ಯದ ಕೌಟುಂಬಿಕ ಹಾಗೂ ಸಾಮಾಜಿಕ ಮರ್ಯಾದೆಗಳನ್ನೂ, ಶಿಷ್ಟಾಚಾರಗಳನ್ನೂ ತಮ್ಮ ಪ್ರೇಮಕ್ಕೆ ತಡೆ ಎಂದು ಭಾವಿಸುವ ಸ್ವೇಚ್ಛಾಚಾರಿಗಳು ಕಾಮಪಶುಗಳೇ ಸರಿ. ಇಂಥವರ ಪ್ರೇಮವೆಲ್ಲ ಎರಡು ದಿನದ ಕನಸಿನಲ್ಲಿ ಜಾರಿ, ವಾಸ್ತವದ ಸಮಸ್ಯೆ-ಸವಾಲುಗಳ ಮುಂದೆ ಕಾದ ಬೆಣ್ಣೆಯಂತೆ ಕರಗಿ ಮರೆಯಾಗುತ್ತದೆ. ಇಂಥ ಪ್ರೇಮದಲ್ಲಿ ನಿರಾಶೆ, ಬೋರ್, ಅನುಮಾನ ಇತ್ಯಾದಿಗಳು ಬೇಗನೆ ತಲೆದೋರಿ ಸಂಬಂಧವು ಜಿಗುಪ್ಸೆ, ದ್ವೇಷ, ವಿಚ್ಛೇದನಗಳಲ್ಲಿ ಕೊನೆಗೊಳ್ಳುವುದೂ ಉಂಟು. ದೇಹವನ್ನಷ್ಟೇ ಬಯಸುವ ಕಾಮವು ಸ್ವಾರ್ಥಪ್ರೇರಿತ, ಪಾಶವೀಯ. ಆದರೆ ವ್ಯಕ್ತಿಯನ್ನು ಅರಿತು ಆದರಿಸುವ ಪ್ರೌಢ ಪ್ರೇಮವು ಮುಪ್ಪು ಅಡರಿದರೂ, ಅಂಗಾಂಗಗಳು ಕುಗ್ಗಿದರೂ, ಸುಖದುಃಖಗಳ ಬೇಗೆ ಅದೆಷ್ಟೇ ಬೇಯಿಸಿ ನೋಯಿಸಿದರೂ, ಪರಸ್ಪರರ ಆಕರ್ಷಣೆಯೂ, ಪ್ರೇಮವೂ ದಿನೇ ದಿನೆ ಬಲಿಯುತ್ತಲೇ ಹೋಗುತ್ತವೆ. ಪ್ರೀತಿ ತೃಪ್ತಿಪಡಿಸುವ ಸೇವೆಗೈಯುವ ಭಾವವಾದರೆ, ಕಾಮ ಬಯಸುವ ಭಾವ. ದಾಂಪತ್ಯದಲ್ಲಿ ಕಾಮಕ್ಕೂ ಸರಸತೆಗೂ ವಿಶೇಷ ಪಾತ್ರವುಂಟು, ಮನ್ನಣೆಯುಂಟು ನಿಜ. ಆದರೆ ಕಾಮವೇ ಸರ್ವಪ್ರಧಾನವಾಗಿ, ತ್ಯಾಗ ಸಂಯಮಗಳನ್ನು ನುಂಗಿ ಹಾಕಿದರೆ ದಾಂಪತ್ಯವು ಪೈಶಾಚಿಕತೆಯ ದುರ್ವಾಸನೆಯಿಂದ ನಾರುತ್ತದೆ. ತ್ಯಾಗ, ಸಂಯಮಗಳಿಂದ ಪಾಲಿಸಲಾದ ದಾಂಪತ್ಯದಲ್ಲಿ ಪ್ರೇಮವು ದಿನದಿನಕ್ಕೂ ಶಕ್ತವೂ ನಿತ್ಯನೂತನವೂ ಆಗುತ್ತ ಸಾಗಿ ಸಾತ್ವಿಕತೆಯ ಸುವಾಸನೆಯನ್ನು ಪಸರಿಸುತ್ತದೆ. 

ತ್ಯಾಗಕ್ಕೆ ವ್ರತನಿಯಮಗಳು
ಈ ದಿವ್ಯ ಸಂಯಮ, ತ್ಯಾಗ ಗುಣವನ್ನು ಬೆಳೆಸುವುದು ಸುಲಭಸಾಧ್ಯವಲ್ಲ. ಅದಕ್ಕಾಗಿಯೇ ಹಿಂದೂ ಸಂಸ್ಕೃತಿಯಲ್ಲಿ ಮದುವೆಯಾದ ಮೊದಲ 16 ವರ್ಷಗಳ ಕಾಲ ವರ್ಷವರ್ಷವೂ, ಋತು, ಮಾಸ, ನಕ್ಷತ್ರಗಳಿಗನುಸಾರವಾಗಿ ಒಂದಲ್ಲ ಒಂದು ವ್ರತ, ನಿಯಮ, ದಾನ ಧರ್ಮ ಮುಂತಾದವುಗಳನ್ನು ದಂಪತಿಗೆ ವಿಧಿಸಲಾಗುತ್ತದೆ. ಪತಿ ಪತ್ನಿಯರು ಪ್ರತ್ಯೇಕವಾಗಿ ಮಾಡುವ ವ್ರತ-ನೇಮಗಳು ಕೆಲವು, ಸೇರಿ ಆಚರಿಸುವ ಧರ್ಮಕರ್ಮಗಳು ಕೆಲವು. ವಿವಾಹವಾದ ಮೊದಲ ಮೂರು ರಾತ್ರಿಗಳಂದು ನವ ದಂಪತಿ ಕಟ್ಟುನಿಟ್ಟಾದ ಬ್ರಹ್ಮಚರ್ಯ ಪಾಲಿಸಬೇಕೆಂಬುದು ಶಾಸ್ತ್ರವಿಧಿ. ಕೂಡು ಕುಟುಂಬದಲ್ಲಂತೂ ಸಂಯಮ ಶಿಷ್ಟಾಚಾರಗಳ ಪಾಲನೆ ಇನ್ನೂ ಅನಿವಾಯ್ಯವೆನಿಸುತ್ತದೆ. ಇದೆಲ್ಲ ಮಾನವನ ಮನಸ್ಸಿನ ಕೆಳಮುಖವಾದ ಪ್ರವೃತ್ತಿಗೆ ಕಡಿವಾಣ ಹಾಕುವ ಸರಳ ತಂತ್ರಗಳು. ತ್ಯಾಗಭೋಗಗಳ ಲಗು-ಬಿಗಿಗಳ ನಯವನ್ನರಿಯದ ನರನಾರಿಯರು ಭೋಗವನ್ನೂ ಸರಿಯಾಗಿ ಆಸ್ವಾದಿಸಲಾರರು. ತ್ಯಾಗದ ಆದರ್ಶವಂತೂ ಅಂಥವರಿಗೆ ಅರ್ಥವೇ ಆಗುವುದಿಲ್ಲ.
ಅಂತೂ ತ್ಯಾಗವಿಲ್ಲದ ಪ್ರೇಮ ಜಲಹೀನವಾದ ಬಾವಿಯಂತೆ- ಇದ್ದೂ ನಿಷ್ಪ್ರಯೋಜಕ. ಸೇವೆ ತ್ಯಾಗಗಳಿಂದ ಪುಷ್ಟವಾದ ಪ್ರೇಮವಿದ್ದೆಡೆ ದಾಂಪತ್ಯವು ಸ್ವರ್ಗಕ್ಕೆ ಕಿಚ್ಚಿಡುವ ಸುಯೋಗವೇ ಆಗಿಬಿಡುತ್ತದೆ. ಕ್ಷಣಿಕ ಕಾಮಕ್ಕಿಂತ ಶಾಶ್ವತವಾದ ನೈಜ ಪ್ರೇಮಕ್ಕೆ, ತ್ಯಾಗಕ್ಕೆ ಪ್ರಾಶಸ್ತ್ಯವೀಯುವ ಹೆಣ್ಣು ಮಕ್ಕಳು ನಮ್ಮ ದೇಶದಲ್ಲಿ ಇರುವುದರಿಂದಲೇ ಭಾರತ ಎಂದಿನಿಂದಲೂ ಪುಣ್ಯಭೂಮಿಯೆಂದು ಮಾನ್ಯವಾಗಿದೆ.
-ಡಾ. ಆರತಿ ವಿ.ಬಿ.
arathi.vbr@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.