ಖುಷಿ

ಅವನಲ್ಲೇನೋ ಐಬಿರಬೇಕು!

ಅವನಲ್ಲೇನೋ ಐಬಿರಬೇಕು!
Published On :

ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಒಂದಂತೂ ಎಂಥವರಾದರೂ ಸಮ್ಮತಿಸುವಂಥ ಅತ್ಯುತ್ತಮ ಸಂಬಂಧ.  ನನಗೂ ಮದುವೆ ವಯಸ್ಸು ಮೀರುತ್ತಾ ಬಂದಿದೆ. ಎಂಎ ಮಾಡಿಯೂ ಕೆಲಸವಿಲ್ಲ. ಅವಿವಾಹಿತ ಜೀವನವೇನು ಬಾಧಕವೆನಿಸಿಲ್ಲವಾದರೂ, ಯಾವ ಕಾಲಕ್ಕೆ ಏನೇನಾಗಬೇಕೋ ಅದಾಗಬೇಕು ಎಂಬ ಅಜ್ಜಿಯ ಮಾತು ಹಿಂಸಿಸುವಾಗ ಅವಿವಾಹಿತೆಯಾಗುಳಿಯುವುದೂ ಅಪರಾಧವೇನೋ ಎಂಬ ಕೀಳರಿಮೆ. ಸಂಬಂಧಗಳೇನೋ ಬರುತ್ತವೆ. ನನ್ನ ರೂಪಿನ ಬಗ್ಗೆ ಅಂತಹ ಕಾಮೆಂಟ್ಸ್ ಏನಿಲ್ಲವಾದರೂ ಕೊಡೋ ತೆಗೆದುಕೊಳ್ಳುವ ವಿಷಯದಲ್ಲಿ ಮನೆಯವರು ಸೋತು ಸುಣ್ಣವಾಗಿದ್ದಾರೆ.
ತಂದೆ ಹೈಸ್ಕೂಲು ಮಾಸ್ತರ. ನನ್ನ ಹಿಂದೆ ಈಗಾಗಲೇ ವಿವಾಹದ ಕನಸುಗಳು ಚಿಗುರೊಡೆದು ನಳನಳಿಸುತ್ತಿರುವ ತಂಗಿಯರಿದ್ದಾರೆ. ಅವರೂ ಚೆಂದವಾಗಿಯೇ ಇದ್ದಾರೆ. ಈವತ್ತು ಹೆಣ್ಣು ಚೆಂದವಾಗಿದ್ದರೆ ಸಾಲದು, ಅವಳಪ್ಪನಲ್ಲಿ ದಂಡಿ ದುಡ್ಡಿರಬೇಕು. ಇಲ್ಲಾ, ಅವಳು ನೌಕರಿಯಲ್ಲಿರಬೇಕು. ಹೀಗಾಗಿ ಬಿಇಡಿ ಕೂಡ ಕಟ್ಟಿಕೊಂಡಿದ್ದೇನೆ.
ಈ ಸಲ ಒಂದೇ ತಿಂಗಳಲ್ಲಿ ಎರಡು ಗಂಡುಗಳು ನೋಡಲು ಬಂದರೂ ಕೇಸರಿಬಾತು, ಖಾರಾಬಾತು ತಿಂದರು. ಒಬ್ಬ ತಂದೆಯಂತೆಯೇ ಹೈಸ್ಕೂಲಲ್ಲಿ ಮಾಸ್ತರ. ಒಂದಷ್ಟು ಕಪ್ಪಗೆ, ದಪ್ಪಗಿದ್ದ. ನಂತರ ಆತ ಡ್ರಿಲ್ ಟೀಚರ್ ಎಂದು ಹೇಳಿಕೊಂಡ. ಒಳ್ಳೇ ಪರ್ಸನಾಲಿಟಿಯೇ. ನನ್ನನ್ನು ಯಾರೇ ನಿರಾಕರಿಸುವ ಕಾರಣ ಒಂದಿದ್ದರೆ ಅದು ಅವರು ಕೇಳಿದಷ್ಟು ಪೀಕಲಾರದ ವರದಕ್ಷಿಣೆ ಮಾತ್ರವೇ.
ಡ್ರಿಲ್ ಟೀಚರ್, ನನಗೇನು ವರದಕ್ಷಿಣೆ ಬೇಡ, ಸರಳವಾಗಿ ವಿವಾಹ ಮಾಡಿಕೊಟ್ಟರೆ ಸಾಕೆಂದು ನನ್ನತ್ತ ನೋಡಿ ನಗೆ ಸೂಸಿದ. ಕರ್ರಗಿನ ಮೋರೆಯಲ್ಲಿ ಬಿಳಿ ಹಲ್ಲುಗಳು ಮಿಂಚಿದವು. ಆದರೆ, ಅವನ ಮನೆಯವರು ಮಾತ್ರ 'ಅವನು ಯಾವಾಗ್ಲೂ ಹೀಗೆ ಬಿಡಿ, ನಮಗೆ ನೆಂಟರಿಷ್ಟರು ಬಹಳ. ಆಡಿಕೊಳ್ಳಬಾರದಲ್ಲ. ಮದುವೆ ನಿಮ್ಮ ಕೈಲಾದ ಮಟ್ಟಿಗೆ ಗ್ರ್ಯಾಂಡ್ ಆಗಿಯೇ ಮಾಡಿಕೊಡಿ ಮೇಷ್ಟ್ರೆ' ಅಂದರು. ತಂದೆ ಹೆಚ್ಚು ಮಾತು ಬೆಳೆಸಲಿಲ್ಲ. 'ಯಾವುದಕ್ಕೂ ತಿಳಿಸುತ್ತೇನೆ' ಎಂದರು. ಗಂಡಿನ ಕಡೆಯವರು ಹೋದ ಮೇಲೆ ಎಂದಿನಂತೆ ಮನೆಯಲ್ಲಿ ಕಾಮೆಂಟ್ಸ್ ಶುರುವಾಯಿತು. ಅವನು ನನ್ನನ್ನು ಒಪ್ಪಿಕೊಂಡ ಬಗ್ಗೆ ನನ್ನನ್ನೂ ಸೇರಿ ಮನೆಯವರಾರಿಗೂ ಅಷ್ಟೇನು ಸಂತಸವಾಗಿರಲಿಲ್ಲ.
'ವರದಕ್ಷಿಣೆ ಇಲ್ಲದೆ ಒಪ್ಪಿಕೊಂಡಿದಾನಲ್ಲೋ ಹುಡುಗ, ಸದೃಢವಾಗಿದ್ದಾನೆ. ಏನ್ ಯೋಚ್ನೆ ಮಾಡ್ತಿದಿಯಾ?' ಅಜ್ಜಿ ತಂದೆಯತ್ತ ನೋಡಿದಳು.
'ಅವನ ಮೂತಿಗೆ ವರದಕ್ಷಿಣೆ ಬೇರೆ ಕೇಡು. ಆ ದಡಿಯನ್ನ ಮದುವೆಯಾಗೋದೇ ಹೆಚ್ಚು' ಎಂದು ತಂಗಿಯರ ಗೇಲಿ ಶುರು. 'ಪಿ.ಟಿ. ಮಾಸ್ಟರ್‌ಗಳು ಹಾಗೇ ಇರೋದು. ಸಮಸ್ಯೆ ಅದಲ್ಲ. ನಮ್ಮ ಹುಡುಗಿ ಎಂಎ ಮಾಡ್ಕೊಂಡಿದಾಳೆ. ಅವನೋ ಸಿಪಿಎಡ್, ಹೇಗೆ ಕೊಡೋದು? ಹೆಣ್ಣು ಮಕ್ಕಳನ್ನು ಹೆಚ್ಚಿಗೆ ಓದಿಸಿದರೂ ಸಮಸ್ಯೆ, ಓದಿಸದಿದ್ದರೂ ಸಮಸ್ಯೆ ಕಣಮ್ಮ' ತಂದೆ ನಿಡುಸುಯ್ದರು.
'ಅವನು ಈ ಕಾಲದಲ್ಲಿ ಮೂರು ಕಾಸೂ ವರದಕ್ಷಿಣೆ ಕೇಳ್ದೆ ಮದುವೆ ಆಗ್ತೀನಿ ಅಂತಿದಾನೆ ಅಂದ್ರೆ ಅವನಲ್ಲೇನೋ ಐಬಿರಬೇಕು ಕಣ್ರಿ. ಈಗಿನ ಹುಡುಗರಿಗೋ ಏನೇನೋ ಅಭ್ಯಾಸ, ನಂಬೋಕೆ ಆಗೋಲ್ಲ' ಅಂದಳು ಅಮ್ಮ. ಅವನು ವರದಕ್ಷಿಣೆ ಕೇಳದಿದ್ದದ್ದೇ ಅಪರಾಧವೆಂಬಂತಾಡಬೇಕೆ?
ಅದೇ ತಿಂಗಳಲ್ಲೇ ಮತ್ತೊಬ್ಬ ವರಮಹಾಶಯ ಮನೆಯವರೊಡನೆ ಆಗಮಿಸಿದ. ಡಿಗ್ರಿ ಕಾಲೇಜಲ್ಲಿ ಲೆಕ್ಚರರ್.  ಪಿಎಚ್‌ಡಿ ಮಾಡ್ತಿದಾನೆ. ಕೈತುಂಬಾ ಸಂಬಳ. ಮೈ ತುಂಬಾ ಕೊಬ್ಬು! ಮನೆಯವರಂತೂ ಕೊಟ್ಟ ತಿಂಡಿ ತಿಂದಿದ್ದಕ್ಕಿಂತ ಚೆಲ್ಲಿದ್ದೇ ಹೆಚ್ಚು. ಆದರೆ ಡ್ರಿಲ್ ಮನುಷ್ಯನಿಗಿಂತ ಧಾರಾಳವಾಗಿ ಹೂವು ಹಣ್ಣು ತಂದಿದ್ದರು. ವರದಕ್ಷಿಣೆಯನ್ನೂ ಹಕ್ಕೆಂಬಂತೆ ಧಾರಾಳವಾಗಿ ಕೇಳಿದರು. ಹುಡುಗ ಹಿಸ್ಟರಿ ಮೇಷ್ಟ್ರು. ಹಿಸ್ಟಾರಿಕಲ್ ಹೀರೋ ತರಹವೇ ಮೀಸೆ, ಮೈಕಟ್ಟು. ನಿರಾಕರಿಸುವಂಥದ್ದೇನಿರಲಿಲ್ಲ. ಐದು ಲಕ್ಷ ವರದಕ್ಷಿಣೆ, ವರೋಪಚಾರ, ಗ್ರ್ಯಾಂಡ್ ಮದುವೆ, ದೊಡ್ಡ ಛತ್ರ, ಸೂಟುಬೂಟು ಬೇಡಿಕೆಗಳಿಗೆ ತಂದೆ ಕುಳಿತಲ್ಲೇ ಬೆವೆತರು. ಇದೆಲ್ಲ ನಮಗ್ಯಾರಿಗೂ ಹೊಸ ಅನುಭವವೇನಾಗಿರಲಿಲ್ಲ. ಅಸಹಜವೂ ಅಲ್ಲ. ಅವರಿಗೂ ತಿಳಿಸುತ್ತೇವೆ ಎಂದು ಸಾಗ ಹಾಕಿದರು. ಹುಡುಗನೇನೋ ಇಷ್ಟವಾಗಿದ್ದ. ಹೀಗೆ ಹುಡುಗರು ಇಷ್ಟವಾಗಿದ್ದು ಹೊಸ ವಿಚಾರವಲ್ಲ. ಅವರದ್ದು ಬೇಡಿಕೆ ದುಬಾರಿ. ಹೀಗಾಗಿ ನನ್ನ ಮದುವೆ ಎಂಬುದು ಎಂದಿಗೂ ಮುಗಿಯದ ಸೀರಿಯಲ್‌ನಂತೆ ಹಿಂಸಾನಂದವೇ.
'ಹಿಂಗೆ ಯೋಚ್ನೆ ಮಾಡ್ತಾ ಕುಂತ್ರೆ ಮಗಳು ಮದುವಿ ಆಗಲಲೇ ತಮಾ. ಎರಡು ಎಕರೆ ಹೊಲ ಐತಲ್ಲ. ಮಾಡೋರಿಲ್ದೆ ಬೀಳ್ ಬಿದ್ದಾತಿ. ಮಾರಿ ಬಿಟ್ಟು ಮದುವಿ ಮಾಡಿಬಿಡತ್ತ' ಅಜ್ಜಿಯದು ಎಂದಿನ ವರಾತ. 'ಇನ್ನೂ ಇಬ್ಬರು ಅದಾರಲ್ಲವ್ವ ಅವರಿಗೇನು ಮಾಡೋದಂತಿ?' ಅಪ್ಪನ ಸಂಕಟ. 'ಹುಡುಗ ಚಲೋ ಅದಾನ. ಒಳ್ಳೇ ನೌಕರಿ. ಹುಡುಗಿಗೂ ವಯಸ್ಸಾತು. ಏನಾರ ಧೈರ್ಯ ಮಾಡದಿದ್ದರೆ ಹ್ಯಾಂಗ್ರಿ?' ಅಮ್ಮನೂ ಅಪ್ಪನ ಮೇಲೆ ಮುನಿಸಿಕೊಂಡಳು. 'ಉಳಿದ ಹೆಣ್ಣುಮಕ್ಕಳ ಕತಿ ಬಿಡಪ್ಪ. ರಿಟೈರ್ ಆದ ಮೇಲೆ ಬರೋ ರೊಕ್ಕದಾಗೇ ಏನಾರ ಸರ್ಕಸ್ ಮಾಡಿದ್ರಾತು. ದೇವರಿದಾನೆ. ಮೊದಲು ಬೀಸೋ ದೊಣ್ಣೆಗೆ ತಲೆ ತಪ್ಪಿಸಿಕೊಂಡ್ರಾತು. ಮುಂದಿಂದು ಯಾರು ಕಂಡವರೆ? ವರದಕ್ಷಿಣೆ ಕೇಳದೆ ಇರೋನೂ ಅವರಿಗೆ ಸಿಕ್ಕಾನು' ಅಜ್ಜಿ ಪರಿಹಾರ ಸೂಚಿಸಿತು.
ಅವರವರೇ ಮಾತನಾಡಿಕೊಂಡರು. 'ಇಂಥ ಅವಕಾಶ ಬಿಡಬಾರ್ದುರೀ... ಏನಂತೀರಾ? ಅತ್ತೆ, ಅಮ್ಮನ ಸಡಗರ.
ವರದಕ್ಷಿಣೆ ಕೇಳ್ದೆ ಇರೋನು ಸಿಕ್ಕಾಗ ಕೈಬಿಟ್ಟು ಮುಂದೆಂದೋ ಸಿಕ್ಕಾನೆಂಬ ಆಶೆ ಹೊತ್ತು ಹೊಲ ಮಾರಲು ಸಿದ್ಧವಾದ ಅವರ ಮನೋಸ್ಥಿತಿ ಕಂಡು ನನ್ನಲ್ಲಿ ಮರುಕ ಉಂಟಾಯಿತು. ನೀವು ನೀವೇ ತೀರ್ಮಾನ ತಗೊಂಡ್ರಾಯಿತೆ? ನನ್ನ ಇಷ್ಟಾನಿಷ್ಟಗಳನ್ನು ಕೇಳೋದಿಲ್ವೆ?' ಥಟ್ಟನೆ ಸಿಡುಕಿದೆ. 'ಬಿಡೆ, ಲೆಕ್ಷರರ್ ಇಷ್ಟವಾಗಿರ್ತಾನೆ. ನಿನ್ನ ಕೇಳೋದೇನ್ ಬಂತು', ಅಮ್ಮ ನಕ್ಕುಬಿಟ್ಟಳು. 'ಕ್ಷಮಿಸಿ, ನನಗೆ ಡ್ರಿಲ್ ಟೀಚರ್ರೇ ಇಷ್ಟ' ಅಂದೆ. ಆವಕ್ಕಾದರು.  'ತಲೆ ಕೆಟ್ಟಿದೆಯಾ? ಅವನಿಗೆ ಸಂಬಳ ಕಡಿಮೆ. ನಿನ್ನಷ್ಟು ಎಜುಕೇಶನ್ ಇಲ್ಲ. ಅಷ್ಟು ಚೆನ್ನಾಗೂ ಇಲ್ಲ'- ಅಪ್ಪ ಏನೇನೋ ಹೇಳುತ್ತಿದ್ದರು.
'ಆದರೂ ನನಗಿಷ್ಟ ಅಂದ್ನಲ್ಲ', ಚೀರಿದೆ.
'ನಮಗೆ ತೊಂದರೆ ಆಗುತ್ತೆ ಅಂತ ನೀನು ಒಪ್ಕೋತಿದ್ದಿ. ಅದೆಲ್ಲ ರಿಸ್ಕ್ ಬೇಡ. ನೀನು ಸುಖವಾಗಿರೋದು ಮುಖ್ಯ' ಅಮ್ಮ ಈಗ ಗದ್ಗದಿತಳಾದಳು.
'ಅದೆಲ್ಲ ಎಂಥದ್ದೂ ಇಲ್ಲಮ್ಮ. ಇಷ್ಟು ಜನ ಬಂದವರಲ್ಲಿ ವರದಕ್ಷಿಣೆಯನ್ನು ಕೇಳದೆ ಮದುವೆಗೆ ಒಪ್ಪಿದ ಗಂಡು ಪಿ.ಟಿ. ಮಾಸ್ಟರ್ ಮಾತ್ರವೆ. ಆತನ ಆದರ್ಶ ನನಗಿಷ್ಟವಾಯಿತು. ಆತನ ದುಡಿಮೆಯಲ್ಲೂ ಸುಖವಾಗಿರಬಹುದಲ್ಲಮ್ಮ. ನಿಮಗೆಲ್ಲ ಇಷ್ಟವಾದ ಲಕ್ಚರರ್‌ಗೆ ನನಗಿಂತ ಇಷ್ಟವಾದದ್ದು ನಾವು ಕೊಡೋ ವರದಕ್ಷಿಣೆ, ವರೋಪಚಾರ ಇತ್ಯಾದಿ. ಆದರೆ ಡ್ರಿಲ್ ಟೀಚರ್ ಒಪ್ಪಿದ್ದು ನನ್ನನ್ನು. ಸೋ...' ಎಂದು ಮಾತುಮುಗಿಸಿ ಎಲ್ಲರತ್ತ ನಿರ್ಭಿಡೆಯಿಂದ ನೋಡಿದೆ.
'ಏನೋ ಅಮ್ಮ, ಇಬ್ಬರೂ ಫೋನ್ ನಂಬರ್ ಕೊಟ್ಟಿದಾರೆ. ಯಾರಿಗೆ ಮಾಡೋದು?' ಅಪ್ಪನದು ವಿಷಾದ. 'ಪಿ.ಟಿ. ಮಾಸ್ಟರ್‌ಗೇ ಮಾಡಿ ಅಪ್ಪಾ' ಎನ್ನುವಾಗ ನಾಚಿಕೆಯೇ ನಗುವಾಗಿತ್ತು. 'ಲೆಫ್ಟ್ ರೈಟ್, ಎಬೌಟ್ ಟರ್ನ್‌' ಎಂದು ತಂಗಿಯರಾಗಲೇ ಡ್ರಿಲ್ ಮಾಡಲಾರಂಭಿಸಿದಾಗ ಮನೆಯವರ ಮುಖಗಳಲ್ಲೂ ನಿಧಾನವಾಗಿ ನಗೆ ಚಿಗುರೊಡೆಯಿತು.

-ಡಾ. ಬಿ.ಎಲ್. ವೇಣು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.