ಖುಷಿ

ರಾಮಾಯಣ ಓದಿಗೆ ಪ್ರವೇಶಿಕೆ

ರಾಮಾಯಣ ಓದಿಗೆ ಪ್ರವೇಶಿಕೆ
Published On :

ಭಾರತೀಯ ಪೌರಾಣಿಕ ಕಥಾನಕಗಳಿಂದ ಈಗಾಗಲೆ ಪ್ರಸಿದ್ಧರಾಗಿರುವ ಡಾ. ಕೆ.ಎಸ್. ನಾರಾಯಣಾಚಾರ್ಯ ಅವರ ಎರಡು ಕೃತಿಗಳು ಈಗ ಬಂದಿವೆ. 'ದೇವಕಿಯ ಚಿಂತನೆಗಳು' ಕೃತಿಯು ಭಾಗವತಕ್ಕೆ ಸಂಬಂಧಿಸಿದ್ದು. ಇನ್ನೊಂದು 'ವಾಲ್ಮೀಕಿ ಯಾರು?' ಎಂಬ ಕೃತಿಯು ರಾಮಾಯಣಕ್ಕೆ ಸಂಬಂಧಿಸಿದ್ದು. ಈ ಕೃತಿಯ ಸಂಬಂಧದಲ್ಲಿ ಕೆಲವೆಡೆ ಪ್ರತಿಭಟನೆಗಳೂ ನಡೆದದ್ದು ವರದಿಯಾಗಿದ್ದವು. ಈ ಪ್ರತಿಭಟನೆಗಳೂ ಒಂದು ರೀತಿಯ ವಿಮರ್ಶೆಯೇ.
'ದೇವಕಿಯ ಚಿಂತನೆಗಳು' ಕೃತಿಯಲ್ಲಿ ಭಗವಂತನೇ ತನ್ನ ಉದರದಲ್ಲಿ ಜನಿಸಿದರೂ ಆತನನ್ನು ಸಲಹಲಾರದ, ಆತನ ಬಾಲ ಲೀಲೆಗಳನ್ನು ನೋಡಲಾಗದ ದುರದೃಷ್ಟ ದೇವಕಿಯದು. ಆ ನೋವು ಆಕೆಯನ್ನು ಸದಾ ಕಾಡುತ್ತಿತ್ತು. ದೇವಕಿಯ ದೃಷ್ಟಿಯಲ್ಲಿ, ಆಕೆಯ ಸ್ವಗತದಲ್ಲಿ ಮೂಡಿದ ಕೃಷ್ಣ ಕತೆ ಇದು. ಹಾಗಂತ ಇದು ಸಂಪೂರ್ಣ ಭಾಗವತವೂ ಅಲ್ಲ. ಅದರ ದಶಮ ಸ್ಕಂದದ ಹೊಳಹುಗಳು ಮಾತ್ರ ಇದರಲ್ಲಿವೆ. ವಸುದೇವ, ದೇವಕಿ, ಯಶೋದೆ, ನಂದ, ಕಂಸ, ಮಾಲತಿ, ಮಾಧವಿ, ವಾಸಂತಿ, ಭದ್ರ, ವಜ್ರಬಾಹು ಮೊದಲಾದ ಪಾತ್ರಗಳು ಇಲ್ಲಿ ಕೃಷ್ಣನ ಸುತ್ತಲೇ ಸುತ್ತುತ್ತಿರುತ್ತವೆ.
ದೇವಕಿಯ ಕನವರಿಕೆಯಂತೆ ಬೆಳೆಯುತ್ತ ಹೋಗುವ ಈ ಕಥಾನಕವನ್ನು ಆಚಾರ್ಯರಿಗೆ ಎಷ್ಟು ಹೇಳಿದರೂ ತೃಪ್ತಿ ಕಾಣದು. ಅಲ್ಲಲ್ಲಿ ನಾಟಕೀಯವಾದ ಸಂಭಾಷಣೆಗಳೂ ಇವೆ. ನಡುನಡುವೆ ಗೀತೆಗಳೂ ಇವೆ. ಹೀಗಾಗಿ ಇದೊಂದು ರೀತಿಯ ಚಂಪೂ ಕಾವ್ಯ ಎಂದು ಅವರೇ ಹೇಳಿಕೊಂಡಿದ್ದಾರೆ.
ಆಚಾರ್ಯರಿಗೆ ಈ ಕೃತಿಯನ್ನು ರಚಿಸಲು ಮೂಲ ಪ್ರೇರಣೆ ಕುಲಶೇಖರ ಆಳ್ವಾರರ 'ಪೆರುಮಾಳ್ ತಿರುಮಾಳಿ' ಎಂಬ ಪ್ರಬಂಧ. ಅದರಲ್ಲಿಯ ಇಪ್ಪತ್ತು ಪದ್ಯಗಳಲ್ಲಿ ಅವರು ದೇವಕಿಯ ಸ್ವಗತದ ಶೈಲಿಯಲ್ಲಿ ಅವಳು ಕಳೆದುಕೊಂಡ ಭಾಗ್ಯವನ್ನೂ ಯಶೋದೆ ಪಡೆದುಕೊಂಡುದನ್ನು ಮನೋಜ್ಞವಾಗಿ ಹೋಲಿಸಿ ದುಃಖಿಸುವುದನ್ನು ವರ್ಣಿಸಿದ್ದಾರೆ. ಅದೇ ಶೈಲಿ ಇಲ್ಲಿದೆ. ಕೃಷ್ಣ ಭಕ್ತರಿಗೆ ಆಚಾರ್ಯರಿಂದ ಇದೊಂದು ಉತ್ತಮ ಕೊಡುಗೆಯಾಗಿದೆ.
ಇನ್ನೊಂದು ಕೃತಿ 'ವಾಲ್ಮೀಕಿ ಯಾರು?' ಇತ್ತೀಚೆ ವಿವಾದವನ್ನು ಹುಟ್ಟುಹಾಕಿತ್ತು. ಈ ಕೃತಿಯ ಆರಂಭದ ಪ್ರಸ್ತಾವನೆಯಲ್ಲಿ ಆಚಾರ್ಯರು ದೇವರುಗಳು, ಪ್ರಸಿದ್ಧ ಪುರುಷರು ಜಾತಿವಾದಿಗಳ ಕೈಯಲ್ಲಿ ಸಿಕ್ಕಿಬಿದ್ದಿರುವುದನ್ನು ಪ್ರಸ್ತಾಪಿಸಿದ್ದಾರೆ.  
ವಾಲ್ಮೀಕಿಯ ಹುಟ್ಟಿನ ಬಗ್ಗೆ ನಾರಾಯಣಾಚಾರ್ಯರು ಹೀಗೆ ಹೇಳಿದ್ದಾರೆ: 'ವಾಲ್ಮೀಕಿ, ಹಿಂದೆ ಹೇಳಿದಂತೆ, ಅವನೇ ಬರೆದುಕೊಂಡಂತೆ ಭಾರ್ಗವ ಗೋತ್ರದ ಪ್ರಚೇತನನೆಂಬ ಮಹರ್ಷಿಯ ಹತ್ತನೆಯ ಮಗ. (ಉತ್ತರಕಾಂಡದಲ್ಲಿ ಸೀತಾ ಪಾತಾಳಾಗಮನದ ಮುನ್ನ ರಾಮ ಸನ್ನಿಧಿಯಲ್ಲಿ ವಾಲ್ಮೀಕಿ ಶಪಥದಲ್ಲಿ ಹೇಳಿದ್ದಾನೆ. ಶಿಶುವಾಗಿದ್ದಾಗ ಎತ್ತಿಕೊಂಡು ಹೋಗಿ ದೂರದ ಛಂಬಲ್ ಕಣಿವೆಯ ಬೇಡರ ಕೇರಿಯಲ್ಲಿ, ಹಾಕಿದ್ದು ಒಂದು ಹದ್ದು. (ಇದು ಸಾಂಕೇತಿಕವಿದ್ದರೂ ಬಾಧಕವಿಲ್ಲ.) ಹಾಗೆ ಮಗುವಿಗೆ ಆಶ್ರಯವಿತ್ತು ರಕ್ಷಿಸಿ ಪೋಷಿಸಿದವರು ಬೇಡ ಕುಲದವರು. ಅದಕ್ಕೆ ಅವರು ನಮಗೆ ಆದರಣೀಯರು....' ಉತ್ತರಕಾಂಡವೇ ಪ್ರಕ್ಷಿಪ್ತವಾದದ್ದು ಎಂಬ ಅಭಿಪ್ರಾಯಗಳು ಇರುವಾಗ ಅದರಲ್ಲಿ ಪ್ರಸ್ತಾಪಿತವಾದ ವಿಷಯವನ್ನು ಆಧಾರವೆಂಬಂತೆ ಉಲ್ಲೇಖಿಸಿದ್ದು ಸರಿಯಲ್ಲ ಎಂಬುದು ಆಕ್ಷೇಪಣೆಯ ವಿಷಯ. ಜತೆಗೆ ಇದು ಸಾಂಕೇತಿಕವಾಗಿದ್ದರೂ ಬಾಧಕವಿಲ್ಲ ಎಂಬ ಮಾತನ್ನೂ ಲೇಖಕರೇ ಹೇಳಿದ್ದಾರೆ.  ವಾಲ್ಮೀಕಿಯನ್ನು ಒಂದು ಜಾತಿಗೆ ಸೀಮಿತಗೊಳಿಸಿ ವೈಭವೀಕರಿಸುವುದರ ಬಗ್ಗೆ ಲೇಖಕರಿಗೆ ಅಸಮ್ಮತಿ ಇರುವಂತೆ ತೋರುವುದು. ಊರೂರುಗಳಲ್ಲಿ ವಾಲ್ಮೀಕಿ ಭವನ, ವಾಲ್ಮೀಕಿ ಪೂಜೆ, ಗೌರವ ಸಲ್ಲಿಕೆ ನಡೆಯುವುದು ಒಳ್ಳೆಯದೇ. ಜಾತಿ ಇಲ್ಲಿ ಬೆರೆಯಬಾರದುದು ಮುಖ್ಯ ಎಂಬ ಮಾತನ್ನೂ ಲೇಖಕರು ಹೇಳಿದ್ದಾರೆ. ಕೃತಿಯಲ್ಲಿ ಸಾಮತಿಗಳಂಥ ಹಲವು ವಾಕ್ಯಗಳಿವೆ. 'ಅಯೋಧ್ಯೆ ಉದ್ಧಾರವಾದುದು ಬೆಳ್ಳಿ ಬಂಗಾರ, ಸೈನ್ಯಬಲ, ದೇಹಬಲದಿಂದಲ್ಲ, ಅಧ್ಯಾತ್ಮ ಬಲದಿಂದ. ಲಂಕೆ ಹಾಳಾದುದು ಇವೆಲ್ಲ ಇದ್ದೂ ಆ ಅಧ್ಯಾತ್ಮ ಬಲವಿಲ್ಲದೆ. ಕಿಷ್ಕಿಂದೆ ಹಾಳಾಗುವ ಸ್ಥಿತಿಗೆ ಬಂದೂ, ಉಳಿದು ಬೆಳೆದುದು ರಾಮಸಖ್ಯ, ಹನುಮ ಸೇವೆಯಿಂದ!' ರಾಮಾಯಣವನ್ನು ಓದದೆಯೇ ಅದರ ಬಗ್ಗೆ ಮಾತನಾಡುವವರ ಮೇಲೆ ನಾರಾಯಣಾಚಾರ್ಯರಿಗೆ ಸಾತ್ವಿಕ ಆಕ್ರೋಶವಿದೆ. ರಾಮನೇಕೆ ಮರ್ಯಾದಾಪುರುಷೋತ್ತಮ ಎಂಬುದನ್ನು ಅವರು ವಿವರಿಸುವ ರೀತಿಯಲ್ಲಿ ಹೊಸತನವಿದೆ. ರಾಮಾಯಣದ ಓದಿಗೆ ಈ ಕೃತಿಯೊಂದು ಪ್ರವೇಶಿಕೆಯಂತಿದೆ.
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಪುಟಗಳು 344/ 108,
ಬೆಲೆ ರು 350/100

-ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.