ಆಧಾರ್ ಒಂದೇ ನಿಮ್ಮ ಐಡೆಂಟಿಟಿ

ಶ್ರೀ ನಂದನ್ ನಿಲೇಕಣಿ ಅವರಿಗೆ ನಮಸ್ಕಾರಗಳು...
ಸಾರ್ ಹೇಗಿದ್ದೀರಿ? ಇತ್ತೀಚೆಗೆ ಎಲ್ಲಾ ಕಡೆ ನಿಮ್ಮದೇ ಸುದ್ದಿ. ನಿಲೇಕಣಿ ರಾಜಕೀಯಕ್ಕೆ ಬರ್ತಾರಂತೆ. ಲೋಕಸಭೆ ಚುನಾವಣೆಗೆ ನಿಲ್ತಾರಂತೆ... ಅದು, ಇದು ಅನ್ನೋ ವಿಚಾರ ಇದೆ.
ನಿಲೇಕಣಿ ರಾಜಕೀಯಕ್ಕೆ ಬರ್ತಾರಂತೆ ಅನ್ನೋ ನ್ಯೂಸು ಈ ಹಿಂದೆ ಪೇಪರ್ನಲ್ಲಿ ಬಂದಿತ್ತು. ಆವಾಗ ನೀವು ಅಂಥದ್ದೆಲ್ಲ ಏನೂ ಇಲ್ಲ. ರಾಜಕೀಯಕ್ಕೂ ನನಗೂ ತುಂಬಾ ದೂರ. ಇನ್ನು ಚುನಾವಣೆಗೆ ನಿಲ್ಲುವ ಮಾತೆಲ್ಲಿಯದು ಅಂತ ಹೇಳಿ ತಳ್ಳಿ ಹಾಕಿದ್ರಿ.
ಆದರೆ, ಈವಾಗ ನೀವೇ ಕಾಂಗ್ರೆಸ್ ನಾಯಕರ ಮನೆಗೆ ಹೋಗ್ತಾ ಇದೀರ. ಚರ್ಚೆ, ಸಮಾಲೋಚನೆ ನಡೆಸ್ತಿದ್ದೀರ. ಹಾರ, ತುರಾಯಿ ಹಾಕಿಸಿಕೊಳ್ತಾ ಇದೀರ. ಲೋಕಸಭೆ ಚುನಾವಣೆಗೆ ತಯಾರಿನೂ ಶುರುಮಾಡಿದ್ದೀರಿ ಅಲ್ವಾ?
ಇದೆಲ್ಲ ಒಕೆ. ನೀವು ಇನ್ನೂ ಕಾಂಗ್ರೆಸ್ ಸೇರಿಯೇ ಇಲ್ವಲ್ಲ. ನನಗೆ ಗೊತ್ತಿರುವ ಪ್ರಕಾರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ನೀವು ತಗೊಂಡಿಲ್ಲ ಅಂತ ಕಾಣುತ್ತೆ. ಆದರೂ ಲೀಡರ್ ಥರ ಓಡಾಡ್ತಿದ್ದೀರ. ಪಕ್ಷ ಸೇರಲಿಕ್ಕೆ ಏನಾದರೂ ಮಹೂರ್ತ ನಿಗದಿ ಮಾಡಿದ್ದೀರ?
ನೀವು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯೋದು ನಿಜ ತಾನೆ? ರಾಜಕೀಯದಲ್ಲಿ ಸಕ್ಸಸ್ ಆಗ್ತೀನಿ ಅನ್ನೋ ನಿರೀಕ್ಷೆ ನಿಮಗೆ ಇದೆಯೇ? ಇಷ್ಟಕ್ಕೂ ರಾಜಕಾರಣವನ್ನ ಸೀರಿಯಸ್ಸಾಗಿ ಪರಿಗಣಿಸಿದ್ದೀರ? ಅಥವಾ ಒಂದು ಕೈ ನೋಡೋಣ ಅಂತ ಬರ್ತಾ ಇದೀರ?
ಲೋಕಸಭೆ ಚುನಾವಣೆಯಲ್ಲಿ ನಿಮ್ಮನ್ನ ಕಣಕ್ಕೆ ಇಳಿಸ್ತಾ ಇದಾರಲ್ಲ ಆ ಕಾಂಗ್ರೆಸ್ ನಾಯಕರ ಧೈರ್ಯವನ್ನು ನಿಜವಾಗಲೂ ಮೆಚ್ಚಿಕೋಬೇಕು ಸಾರ್. ನಿಮ್ಮ ಯಾವ ಸಾಧನೆ ನೋಡಿ ಅವರು ಈ ತೀರ್ಮಾನ ತೆಗೆದುಕೊಂಡರು ಅನ್ನೋದೇ ಗೊತ್ತಾಗ್ತಾ ಇಲ್ಲ.
ಬಹುಶಃ ಆಧಾರ್ ಕಾಡ್ ಹಂಚಿರೋದನ್ನ ನೋಡಿ ಹೈಕಮಾಂಡ್ನವರು ಬಹಳ ಖುಷಿಯಾಗಿರಬಹುದು. ಆಧಾರ್ ಒಂದೇ ನೋಡಿ ನಿಮಗೆ ಇರೋ ಐಡೆಂಟಿಟಿ ಕಾರ್ಡು. ಆದರೆ, ಕಾಂಗ್ರೆಸ್ ನಾಯಕರಿಗೆ ರಿಯಾಲಿಟಿ ಗೊತ್ತಿಲ್ಲ ಅಂತ ಕಾಣುತ್ತೆ.
ನೀವು ಆಧಾರ್ ಕಾರ್ಡ್ ತಂದು ಜನಗಳ ನೆಮ್ಮದಿ ಹಾಳು ಮಾಡಿದ್ರಿ. ಅಲ್ಲ ಯಾಕೆ ಬೇಕಾಗಿತ್ತು ಈ ಕಾರ್ಡ್. ರೇಷನ್ ಕಾರ್ಡ್ ಇದೆ. ವೋಟರ್ ಐಡಿ ಇದೆ. ಹತ್ತರ ಜೊತೆಗೆ ಹನ್ನೊಂದು ಅಂತ ಈ ಆಧಾರ್ ಕಾರ್ಡ್ ಸೇರಿಕೊಂಡಿದೆ.
ಈ ಕಾರ್ಡ್ ಬೇಡ ಅಂತ ಸುಪ್ರೀಂಕೋರ್ಟ್ನವರು ಹೇಳಿದರೂ ಕೇಳ್ತಾ ಇಲ್ವಲ್ಲ ನೀವು. ಆಧಾರ್ ಕಾರ್ಡ್ನಿಂದಾಗಿ ಜನರ ಬದುಕೇ ಚಿತ್ರಾನ್ನ ಮಾಡಿಬಿಟ್ರಿ ನೀವು. ಪಾಪ, ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳಲಿಕ್ಕೆ ಜನ ಎಷ್ಟು ಕಷ್ಟ ಅನುಭವಿಸ್ತಾ ಇದಾರೆ ನೋಡಿ. ನೀವೇನೋ ಬುದ್ಧಿವಂತರು ಸಾರ್, ಆದರೆ, ಎಲ್ಲರೂ ನಿಮ್ಮ ಥರಾನೇ ಬುದ್ಧಿವಂತರು ಆಗಿರೋದಕ್ಕೆ ಸಾಧ್ಯವೇ? ಹಳ್ಳಿಗಳಲ್ಲಿ ಅನಕ್ಷರಸ್ಥರು ಎಷ್ಟು ಮಂದಿ ಇಲ್ಲ. ಅವರಿಗೆ ಈ ಆಧಾರ್ ಕಾರ್ಡು, ಗ್ಯಾಸ್ ಸಬ್ಸಿಡಿ, ಬ್ಯಾಂಕ್ ಆಕೌಂಟು ಎಲ್ಲಿ ಗೊತ್ತಾಗಬೇಕು. ಯಾರಿಗೋ ಅನುಕೂಲ ಮಾಡಿಕೊಡಲಿಕ್ಕೆ ಆಧಾರ್ ಕಾರ್ಡ್ ತಂದಿದ್ದಾರೆ ಅನ್ನೋ ಅನುಮಾನ ಇದೆ. ನಿಜವಾ ಸಾರ್?
ಆಧಾರ್ ಕಾರ್ಡ್ಗೆ ಸಂಬಂಧಪಟ್ಟಂತೆ ನೀವು ಯಾವುದೇ ಪ್ರಶ್ನೆಗಳಿಗೂ ಸರಿಯಾಗಿ ಉತ್ತರವನ್ನೇ ಕೊಡೋದಿಲ್ಲ. ಜೋರಾಗಿ ಕೇಳಿದ್ರೆ ಜಾರಿಕೊಂಡು ಹೋಗ್ತೀರ ನೀವು. ಆಧಾರ್ ಕಾರ್ಡ್ ಕೊಟ್ರೆ ದೇಶದಲ್ಲಿ ಭ್ರಷ್ಟಾಚಾರ ಕಡಿಮೆ ಆಗೋಗುತ್ತೆ ಅಂತ ಮಾತು ಮಾತಿಗೂ ಹೇಳ್ತಾ ಇರ್ತೀರ ನೀವು. ಎಲ್ಲಿ ಕಡಿಮೆ ಅಗಿದೆ ಅನ್ನೋದನ್ನ ಸ್ಪಲ್ವ ತೋರಿಸ್ತೀರ ಸ್ವಾಮಿ.
ನೀವು ಇನ್ಫೋಸಿಸ್ನಲ್ಲಿ ಇದ್ರಲ್ಲ, ಅವಾಗ ಎಷ್ಟೊಂದು ಒಳ್ಳೆ ಕೆಲಸಗಳನ್ನ ಮಾಡಿದ್ರಿ. ಕಂಪನಿಯನ್ನ ಚೆನ್ನಾಗಿ ಬೆಳಿಸಿದ್ರಿ. ಆದೇ ಲೈನ್ನಲ್ಲಿ ಹೋಗಬಹುದಾಗಿತ್ತು. ಒಳ್ಳೆ ಅವಕಾಶ ಅಂತ ಆಧಾರ್ ಕಾರ್ಡ್ ಹಂಚಲಿಕ್ಕೆ ಹೊರಟ್ರಿ. ಈವಾಗ ರಾಜಕೀಯಕ್ಕೆ ಎಂಟ್ರಿ ತಗೋತಾ ಇದ್ದೀರ. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದೀರ. ಕ್ಷೇತ್ರದ ಉದ್ದಗಲ ಎಷ್ಟು ಅನ್ನೋದಾದ್ರೂ ನಿಮಗೆ ಗೊತ್ತಿದೆಯಾ? ನೀವು ರಾಜಕೀಯಕ್ಕೆ ಬರಬೇಡಿ ಅಂತ ಹೇಳ್ತಿಲ್ಲ. ಆದರೆ, ಬಂದಮೇಲೆ ಜನಗಳಿಗೆ ಏನು ಮಾಡ್ತೀರಿ ಅನ್ನೋದು ಮುಖ್ಯ ಅಲ್ವೇ. ಅದನ್ನಾದ್ರೂ ಹೇಳ್ತೀರ? ಕೇಳಿ ಜನ ಪುಣ್ಯ ಕಟ್ಕೋತಾರೆ. ಹೇಳ್ತೀರಲ್ಲ, ಕಾಯ್ತಾ ಇರ್ತೀನಿ ಸಾರ್. ನಮಸ್ಕಾರ...
-ಓಲೆಕಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


