ಭೀತಿ ಏಕೆ ಭೂಮಿ ಮೇಲಿದೆ?

ಭೀತಿ ಏಕೆ ಭೂಮಿ ಮೇಲಿದೆ?
Updated on: 

ಪ್ರತಿಯೊಬ್ಬ ವ್ಯಕ್ತಿಗೆ ಭೀತಿ ಸರ್ವೆಸಾಮಾನ್ಯ. ಕೆಲವರು ಹಗ್ಗ ಕಂಡರೂ ಹಾವೆಂದು ಗಾಬರಿಯಾಗುತ್ತಾರೆ. ಆ ಭಯ ವ್ಯಕ್ತಿಗತವಾಗಿರಹುದು, ಕೌಟುಂಬಿಕವಾಗಿರಬಹುದು, ಇಲ್ಲವೆ ಸಾಮಾಜಿಕವೂ ಆಗಿರಬಹುದು.
ಈಗ ಇರಾಕ್‌ನಲ್ಲಿ ನಡೆಯುತ್ತಿರುವ ಭಯೋತ್ಪಾದಕರ ದಾಳಿಯಿಂದ ತಪ್ಪಿಸಿಕೊಂಡು ಬಂದವರೊಬ್ಬರ ಪ್ರತಿಕ್ರಿಯೆಯನ್ನು ದಿನಪತ್ರಿಕೆಯಲ್ಲಿ ಕಂಡಿರಬಹುದು. ಅವರು ಬಚ್ಚಿಟ್ಟುಕೊಂಡಿದ್ದ ಕಾರಿನ ಬದಿಯಲ್ಲಿ ಬಂದೂಕುಧಾರಿ ಭಯೋತ್ಪಾದಕನೊಬ್ಬ ತೀರಾ ಹತ್ತಿರ ಬಂದು ಇವರನ್ನು ನೋಡದಂತೆ ಹೋದನಂತೆ. ಆಗ ಅವರ ಎದೆಬಡಿತ ಹಾಗೂ ಸಾವನ್ನು ಗೆದ್ದು ಬಂದ ರೀತಿ ಹೇಳುವಾಗ ಹತ್ತಿರದಿಂದ ಕಂಡ ಆ ದೃಶ್ಯವನ್ನು ವಿವರಿಸುತ್ತಿದ್ದ ರೀತಿ ಅವರಲ್ಲಿನ ಭೀತಿಯ ತೀವ್ರತೆಯನ್ನು ತೋರಿಸುತ್ತಿತ್ತು.
ಇದು ಉದಾಹರಣೆಯಷ್ಟೇ. ಅದೇ ಇರಾನ್- ಇರಾಕ್‌ಗಳಲ್ಲಿ ಅನೇಕ ವರ್ಷಗಳಿಂದ ಯುದ್ಧ ನಡೆಯುತ್ತಿದೆ. ಆಗ ಜೆರೂಸಲೇಮ್‌ನಲ್ಲಿದ್ದ ವೈದ್ಯ ಜೆರೆಮಿ ಕರ್ಕ್ ಈ ಅವಧಿಯಲ್ಲಿ ಕಂಡುಕೊಂಡಿದ್ದೇನೆಂದರೆ, 'ಟಿವಿಯ ಮೇಲೆ ಸತತ ಎಚ್ಚರಿಕೆಯಿಂದಿರಲು ನೀಡುತ್ತಿದ್ದ ಸಂದೇಶದಿಂದಲೇ ಜನ ಭೀತಿಗೊಳಗಾಗಿದ್ದರು' ಎಂಬ ಸಂಗತಿ.
ಅಮೆರಿಕೆಯ ಸ್ಕಡ್ ಕ್ಷಿಪಣಿಗಳು ಇರಾಕ್‌ನಲ್ಲಿ ಬೀಳತೊಡಗಿದಾಗ, ಮೊದಲ ದಿನವೇ ಜೇರೂಸಲೇಮ್‌ನ ಆಸ್ಪತ್ರೆಯಲ್ಲಿ ಮೃತ್ಯು ಪ್ರಮಾಣ ಶೇ.50ರಷ್ಟು ಹೆಚ್ಚಿತ್ತು ಎಂದೂ ಡಾ. ಜೆರೆಮಿ ಕರ್ಕ್ ಹೇಳುತ್ತಾರೆ.
ಗುಜರಾತ್‌ನಲ್ಲಿ ಭೂಕಂಪದಿಂದ ಉಂಟಾದ ಹಾಹಾಕಾರ ಮುಂಬೈನಲ್ಲೂ ಭೀತಿ ಸೃಷ್ಟಿಸಿತ್ತು. ಇಲ್ಲೂ ಭೂಕಂಪವಾಗುತ್ತದೆಂಬುದೇ ಅವರ ಭೀತಿಗೆ ಕಾರಣ. ಹೀಗಾಗಿ ಅನೇಕ ಉಪನಗರಗಳಲ್ಲಿ ಜನರು ರಾತ್ರಿ ಮನೆಯಿಂದ ಹೊರಬಿದ್ದು ರಸ್ತೆಯಲ್ಲಿ ವಾಸಿಸುತ್ತಿದ್ದರು. ಕ್ರಮೇಣ ಈ ಸಾಮೂಹಿಕ ಭೀತಿ ಕಡಿಮೆಯಾಯಿತು.
ಯಾವುದೇ ದುರ್ಘಟನೆ ಸಂಭವಿಸಿದಾಗ, ಘಟನೆಯಲ್ಲಿ ನೊಂದ ವ್ಯಕ್ತಿ ಏಕಾಂಗಿಯಾದರೆ ಆತನ ದುಃಖ, ಭಯ ಇನ್ನಷ್ಟು ಹೆಚ್ಚಾಗುತ್ತದೆ. ಆಗ ಆತನಿಗೆ ಬೇಕಿರುವುದು ದುಃಖ ಹಂಚಿಕೊಳ್ಳಲು ಒಬ್ಬ ವ್ಯಕ್ತಿಯ ನ್ಯತಿಕ ಸಹಾಯ. ಭೀತಿ ಉಂಟಾದಾಗ ನಿಜವಾಗಿಯೂ ಮನುಷ್ಯನಿಗೆ ಹೇಗನಿಸುತ್ತದೆ? ಮುಂಬೈನ ಸುಪ್ರಸಿದ್ಧ ನರರೋಗ ತಜ್ಞ ಸೂರ್ಯನಿರ್ಮಲ ಹೀಗೆ ಹೇಳುತ್ತಾರೆ; 'ಯಾವುದಾದರೂ ಸಂಗತಿಯ ಬಗ್ಗೆ ಭೀತಿಯುಂಟಾದಾಗ, ಕಿಡ್ನಿ ಸಮೀಪದ ಗ್ರಂಥಿಯೊಂದರಿಂದ ಆ್ಯಡ್ರಿನಾಲಿನ್ ಎಂಬ ಹಾರ್ಮೋನು ಸ್ರವಿಸಲಾರಂಭಿಸುತ್ತದೆ. ಆ ವ್ಯಕ್ತಿಯ ರಕ್ತದೊತ್ತಡ ಹೆಚ್ಚಿ, ಹೃದಯಬಡಿತ ಹೆಚ್ಚಾಗುತ್ತದೆ'.
'ನಮಗೂ ಅನೇಕ ಸಲ ಹೀಗೆಯೇ ಆಗುತ್ತದೆ. ಭರದಿಂದ ಧಾವಿಸುವ ಟ್ರಕ್ಕೊಂದರ ಎದುರಿಗೆ, ಆಕಸ್ಮಿಕವಾಗಿ ರಸ್ತೆ ದಾಟುವ ಮನುಷ್ಯನನ್ನು ಕಂಡು ಜನ ಒಮ್ಮೆಲೆ ಚೀರುತ್ತಾರೆ. ಇದಕ್ಕೆ 'ಸಡನ್ ಪ್ರೈಟ್‌' ಎನ್ನುತ್ತಾರೆ. ನಾವು ಇನ್ನೊಬ್ಬರಿಗೆ 'ನಿರ್ಭಯರಾಗಿ' ಎಂದು ಹೇಳುವುದು ಎಷ್ಟು ಸುಲಭವೋ, ಪ್ರತ್ಯಕ್ಷವಾಗಿ ನಿರ್ಭಯರಾಗಿವುದು ಮಾತ್ರ ತುಂಬಾ ಕಠಿಣ.
ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿರುವ ಜಾನ್ ರೆಡಿಕಲ್ ಆಸ್ಪತ್ರೆಯ ಡಾ. ಜೋನಾಥನ್ ಫ್ಲೀಂಟ್ ಹಾಗೂ ನ್ಯೂಯಾರ್ಕ್ ವಿಶ್ವವಿದ್ಯಾಲಯದ ನ್ಯೂರಾಲಾಜಿಸ್ಟ್ ಡಾ. ಜೋಸೇಫ ಲಾಡ್ಯೂಕ್ಸ್ ಒಂದು ಪ್ರಯೋಗ ಕೈಗೊಂಡರು. ಅವರು ರಾತ್ರಿ ಕೆಲ ಇಲಿಗಳನ್ನು ಹಿಡಿದು ನಡುಮಧ್ಯಾಹ್ನ ಹೊರಬಿಟ್ಟರು. ಅದರಲ್ಲಿ ಕೆಲ ಇಲಿಗಳು ಭೀತಿಯಿಂದ ಗಡಗಡ ನಡುಗತೊಡಗಿದವು. ಇಷ್ಟೊಂದು ಬೆಳಕಿನ ಅಭ್ಯಾಸ ಅವಕ್ಕಿರಲಿಲ್ಲ. ಅದರಲ್ಲಿ ಕೆಲವು ಮಾತ್ರ ಅತ್ಯಂತ ನಿರ್ಭಯವಾಗಿ ಓಡಾಡುತ್ತಿದ್ದವು. ಅವಕ್ಕೆ ಬೆಳಕಿನ ಭೀತಿ ಇರಲಿಲ್ಲ.
ಮೆದುಳಿನ ಕೆಲ ನಿರ್ದಿಷ್ಟ ಪ್ರಕಾರದ ನ್ಯೂರಾನ್‌ಗಳು (ಸಂವೇದನಾ ತಂತು) ಮನಸ್ಸಿನ ಭೀತಿಯನ್ನು ನಿಯಂತ್ರಿಸುತ್ತವೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ 'ಎಮಿಗ್‌ಡಾಲಿ' ಅಂತಾರೆ. ಇವಿರುವುದು ಕಿವಿಯ ಹಿಂಭಾಗದಲ್ಲಿ. ಇದೇ ಎಮಿಗ್‌ಡಾಲಿಯಿಂದಾಗಿ ಮನುಷ್ಯನ ವಿಚಾರಶಕ್ತಿ, ತರ್ಕಶಕ್ತಿ ಹಾಗೂ ಸ್ನಾಯುಗಳ ಚಲನವಲನಗಳ ಮೇಲೆ ನಿಯಂತ್ರಣವಿರುತ್ತದೆ.
ಡಾ. ಫ್ಲೀಂಟ್ ಮತ್ತು ಜೋಸೆಫ್‌ರ ಪ್ರಕಾರ, 'ಕೆಲವು ಸಲ ಜ್ಞಾನೇಂದ್ರಿಯದಿಂದ ಜಾಗೃತ ಮನಸ್ಸಿಗೆ ಕಲ್ಪನೆಗೂ ಬಾರದ ರೀತಿಯಲ್ಲಿ ಅನೇಕ ಸಂದೇಶಗಳು ಎಮಿಗ್ಲಾಡಿಯಾದತ್ತ ರವಾನೆ ಆಗುತ್ತಿರುತ್ತವೆ. ಹೀಗಾಗಿ ಜೀರಳೆಯಂಥ ಸಣ್ಣಪುಟ್ಟ ಜೀವಿಗಳನ್ನು ಕಂಡಾಗಲೂ ಒಮ್ಮೊಮ್ಮೆ ಮನುಷ್ಯ ಗಾಬರಿ ಆಗುತ್ತಾನೆ' ಎಂದು ತಿಳಿಸಿದರು.
ಯಾವುದೇ ರೀತಿಯ ಭಯ ಒಳ್ಳೆಯದಲ್ಲ. ಕಾಲ್ಪನಿಕ ಭೀತಿ ಒಬ್ಬ ವ್ಯಕ್ತಿಯ ಭವಿಷ್ಯವನ್ನು ಉದ್ವಸ್ತಗೊಳಿಸಬಲ್ಲದು. ಆಕಾಂಕ್ಷೆಗಳನ್ನು ನುಚ್ಚುನೂರು ಮಾಡಬಲ್ಲದು. ಭೀತಿಗೊಳಗಾದವರಿಗೆ ಅನೇಕ ಭಯಾನಕ ಕನಸುಗಳು ಬೀಳುತ್ತವೆ.ಅವುಗಳಿಂದ ಎಚ್ಚರವಾದಾಗಲೂ ಅವರು ಕನಸಿನ ಲೋಕದಿಂದ ಹೊರಬಂದಿರದಷ್ಟು ಅವುಗಳ ಪ್ರಭಾವ ಅವರ ಮೇಲಿರುತ್ತವೆ.
ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ಭಯದ ಕುರಿತಾಗಿ ಹೀಗೆ ಬರೆದಿದ್ದಾರೆ; 'ಕಂದೀಲಿನ ಪ್ರಕಾಶದಿಂದ ಬೀಳುವ ದೊಡ್ಡ ಹಾಗೂ ಉದ್ದನೆಯ ನೆರಳು ನನಗೆ ಬಹಳ ಭೀತಿ ತರುತ್ತಿತ್ತು. ನಾನು ಒಣಗಿದ ಎಲೆಯಂತೆ ಥರಥರ ನಡುಗುತ್ತಿದ್ದೆ' ಅಂದು ಭೀತಿಗೊಳಗಾದ ಗಾಂಧೀಜಿ, ನಂತರ ಇಡೀ ಜಗತ್ತಿಗೆ ನಿರ್ಭಯವಾಗಿ ಸಂದೇಶ ನೀಡಿದರು.
ಭೀತಿ ಮನುಷ್ಯನ ಮೆದುಳು ಹಾಗೂ ಮನಸ್ಸಿನ ಮೇಲೆ ತೀವ್ರ ಪ್ರಭಾವ ಬೀರುತ್ತದೆ. ಆದರೆ ಅದು ನಿರಂತರವಾಗಿರದೇ ಧೈರ್ಯದಿಂದಿರಲು ಪ್ರಯತ್ನಿಸಿದರೆ ಎಂಥ ಕಠಿಣತೆಯಿಂದಲೂ ನಾವು ಸುಲಭವಾಗುವುದರತ್ತ ಸಾಗಬಹುದು ಎಂಬ ಅಂಶ ಧೈರ್ಯದಿಂದ ಇರುವುದು ಕಲಿಸಿಕೊಡುತ್ತದೆ.

= ವೈ.ಬಿ. ಕಡಕೋಳ
 yallappakadakol12@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com