ಖುಷಿ

ಅಮ್ಮಾ ನಿಮ್ಮಾ ಮನೆಗಳಲ್ಲಿ...

ಅಮ್ಮಾ ನಿಮ್ಮಾ ಮನೆಗಳಲ್ಲಿ...
Published On :

ನಮ್ಮ ಅಮ್ಮನಿಗೆ ನೀಲಿ ಸೀರೆ ಅಂದರೆ ತುಂಬ ಇಷ್ಟ. ನಾನು ಮಗುವಾಗಿದ್ದಾಗ ಅವಳು ಆಕಾಶದ ಮುಸುಕು ಹಾಕಿ ಹಾಲು ಕರೆಯುವ ಪೂರ್ಣ ಚಂದ್ರನನ್ನು ಯಾವಾಗಲೂ ತೋರಿಸುತ್ತಿದ್ದಳು. ಆಕಾಶದಲ್ಲಿ ಚಂದ್ರನ ಸುತ್ತ ಮಿನಿ ಮಿನಿ ನಕ್ಷತ್ರ ಮಿನುಗುತಾ ಇದ್ದವು. ನನ್ನ ತುಟಿಯ ಸಂದಿಯಿಂದ ಬೆಳ್ಳನೆ ಬೆಳ್ದಿಂಗಳು ಹೊರಗೆ ಜಿನುಗುತ್ತಾ ಇತ್ತು.
ನಾನು ಸಾಕಷ್ಟು ದೊಡ್ಡವನಾದ ಮೇಲೂ ಯಾವಾಗೆಂದರೆ ಆವಾಗ ಚಂದ್ರನನ್ನು ತೋರಿಸು ಅಂತ ರಚ್ಚೆ ಹಿಡಿಯುತ್ತಿದ್ದೆ. ನಿನಗಾಗಲೇ ಕಪ್ಪೆಚಿಪ್ಪಿನಂತೆ ಹಲ್ಲು ಬಂದಿವೆ... ಚಂದ್ರನ ಹುಚ್ಚು ಬಿಡು ಎಂದು ಅಮ್ಮ ರೇಗುತ್ತಿದ್ದಳು. ಚಂದಕ್ಕಿ ಮಾಮ, ಚಕ್ಕುಲಿ ಮಾಮ, ಮುತ್ತಿನ ಕುಡಿಕೆ ಕೊಡುವೆನು ಬಾ... ಎಂದು ಅಳುತ್ತಳುತ್ತಾ ರಾಗವಾಗಿ ಆಲಾಪ ಮಾಡುತ್ತಿದ್ದೆ. ಅಮ್ಮನ ತೊಡೆಯ ಮೇಲೆ ಮಲಗಿದರೆ ನನ್ನ ಪುಟ್ಟಪುಟ್ಟ ಪಾದ ನೆಲಕ್ಕೆ ತಾಗುತ್ತಿದ್ದವು. ಮಗುವಿಗೆ ಹಾಲು ಬಿಡಿಸು... ಇನ್ನೂ ಎಷ್ಟು ದಿನ ಕೊಡುತ್ತೀ...? ನಿನಗೂ ಒಳ್ಳೆಯದಲ್ಲ... ಮಗುವಿಗೂ ಒಳ್ಳೆಯದಲ್ಲ... ಎಂದು ಜೋಲು ಮೊಲೆಯ ಮಡಿ ಮುದುಕಿ ಯಾವಾಗಲೂ ಹೇಳುತ್ತಿದ್ದಳು. ಎದೆಗೆ ಬೇವಿನ ಸೊಪ್ಪು ಅರೆದು ಬಳಿದುಕೊಂಡು ನನಗೆ ಹಾಲು ಬಿಡಿಸುವ ಯತ್ನಗಳು ನಡೆದವು.
ನನಗಾಗ ತೊದಲು ನುಡಿ. ಹುಡುಗನಾಗಿದ್ದರೂ ತಲೆಯಲ್ಲಿ ಜಡೆಯಿತ್ತು. ಕಾಲಲ್ಲಿ ಗೆಜ್ಜೆ. ಸೊಂಟದಲ್ಲಿ ಮಾವಿನೆಲೆ ಉಡುದಾರ. ಅದು ಬೆಳ್ಳಿಯದು. ಚಡ್ಡಿ ಹಾಕಿದರೆ ಅದು ಕಾಣುವುದಿಲ್ಲೆಂದು ನಾನಾಗ ಬರಿಮೈಯಲ್ಲಿ ಓಡಾಡಲು ಹಠ ಮಾಡುತ್ತಿದ್ದೆ. ಆಗ ಶೇಮ್ ಶೇಮ್ ಮಾಡುವ ಸಂಪ್ರದಾಯವಿರಲಿಲ್ಲ.
ನನ್ನ ಅಪ್ಪ ನಾನು ಹುಟ್ಟುವ ಮೊದಲೇ ತೀರಿಹೋಗಿದ್ದರು. ವಯಸ್ಸಾಗಿದ್ದ ನಮ್ಮ ಅಜ್ಜಯ್ಯನೇ ನನಗೆ ಅಪ್ಪ ಆಗಿದ್ದರು. ಮಗು ಇನ್ನೂ ಚಿಕ್ಕವನು... ಅವನಿಗೆ ಹಾಲು ಬಿಡಿಸುವ ಹಠ ಯಾಕೆ ನಿಮಗೆ ಎಂದು ನಮ್ಮ ಅಜ್ಜಯ್ಯ ಕೂಗುತ್ತಿದ್ದರು. ಅದು ಅವರು ನಡುಮನೆಯ ಗೋಡೆಗೆ ಹೂತಿದ್ದ ಕನ್ನಡಿಯಲ್ಲಿ ನೋಡುತ್ತಾ, ಅದೆಷ್ಟೋ ಉದ್ದದ ಹನುಮಂತನ ಬಾಲದಂತಿದ್ದ ಬಿಳೀ ರುಮಾಲು ಸುತ್ತಿಕೊಳ್ಳುವ ಸಮಯ. ತಲೆಗೆ ರುಮಾಲು ಸುತ್ತುತ್ತಲೇ ಅವರು ಮಾತಾಡುತ್ತಿದ್ದರು. ಬೇವಿನ ಸೊಪ್ಪು ಅರೆದು ಮೆತ್ತಿದ್ದ ಎದೆಯನ್ನು ತೊಳೆದುಕೊಂಡು ಹಾಲು ಹೀರುವೆನೆಂದು ನಾನು ಚಟ್ಟುತಪ್ಪಲೆಯಲ್ಲಿ ಬಾನಿಯಿಂದ ನೀರು ತುಂಬಿಕೊಂಡು ಅದನ್ನು ಉದ್ದಕ್ಕೂ ಕುಲುಕಿಸುತ್ತಾ ಬಚ್ಚಲಮನೆಯಿಂದ ಕಸೂತಿ ಹಾಕುತ್ತಾ ಕೂತಿದ್ದ ಅಮ್ಮನ ಬಳಿಗೆ ಬರುತ್ತಾ ಇದ್ದೆ. ನಿನಗೆ ಹಲ್ಲು ಬಂದಿವೆ... ಹಾಲು ಕುಡಿಯಲು ನಾಚಿಕೆ ಆಗುವುದಿಲ್ಲವಾ... ಎಂದು ಅಮ್ಮ ರೇಗುತ್ತಿದ್ದಳು. ನನ್ನ ಆಕಾಶದಿಂದ  ನನ್ನ ಚಂದ್ರನನ್ನು ಕಸಿಯುವ ಯತ್ನ ನಿರಂತರವಾಗಿ ನಡೆಯುತ್ತಾ ಇತ್ತು.
ಅಜ್ಜಯ್ಯ ಈಗ ಪೇಟ ಸುತ್ತಿದ್ದು ಮುಗಿದಿತ್ತು. ಕಪ್ಪನೆ ಸಾದು ಹಣೆಯ ಮಧ್ಯೆ ಇಟ್ಟುಕೊಳ್ಳದೆ ಅವರು ಯಾವತ್ತೂ ಹೊರಗೆ ಹೋಗುತ್ತಿರಲಿಲ್ಲ. ಒಂದು ಖಾಲಿ ತೆಂಗಿನ ಚಿಪ್ಪಲ್ಲಿ ಸಾದು ತುಂಬಿ ಅದನ್ನು ಕನ್ನಡಿಯ ಪಕ್ಕದ ಗೋಡೆಗೆ ಹೂಳಿರುತ್ತಿದ್ದರು. ಸಾದಿನ ಬಟ್ಟಲು ಕಳೆದು ಹೋಗದಿರಲಿ ಎಂಬುದಕ್ಕೆ ಇದು ನನ್ನ ದೊಡ್ಡಜ್ಜಿ ಮಾಡಿದ್ದ ಉಪಾಯ. ಅಜ್ಜ ಚಟ್ಟುತಪ್ಪಲೆಯಲ್ಲಿ ತೋರು ಬೆರಳದ್ದಿ ಅದನ್ನು ಸಾದಿನ ಚಿಪ್ಪಲ್ಲಿ ಅದ್ದಿ ತೇಯುತ್ತಾ ಅಂಟಂಟಿನ ಸಾದುಗಪ್ಪಿನ ಲೇಹವನ್ನು ಬೆರಳ ತುದಿಗೆ ತಂದುಕೊಂಡು ಅದನ್ನು ಹೆಬ್ಬೆರಳಿಂದ ಚೀಟಿ ಚೀಟಿ ತೋರುಬೆರಳ ತುದಿಗೆ ತಂದುಕೊಂಡು ಮಧ್ಯದ ಬೆರಳು ಮತ್ತು ಹೆಬ್ಬೆರಳನ್ನು ಎರಡೂ ಹುಬ್ಬಿನ ಆರಂಭದ ಭಾಗದಲ್ಲಿ ಇರಿಸಿ, ಮೆಲ್ಲಗೆ ಬೆರಳು ನಡುಗಿಸುತ್ತಾ (ಅಜ್ಜಯ್ಯ ಮುದುಕರಾಗಿದ್ದರು) ಹಣೆಯ ನಡುವೆ ದುಂಡಗೆ ಬೊಟ್ಟು ಇಟ್ಟುಕೊಳ್ಳುತ್ತಿದ್ದರು. ನಮ್ಮಲ್ಲಿ ನಮ್ಮ ಅಜ್ಜಿಯನ್ನು ಬಿಟ್ಟರೆ ಉಳಿದವರು ಅಂದರೆ ನಾನು, ನನ್ನ ಅಮ್ಮ, ದೊಡ್ಡಜ್ಜಿ, ಅಜ್ಜ- ಎಲ್ಲರೂ ಹಣೆಗೆ ಸಾದು ಇಟ್ಟುಕೊಳ್ಳುವವರೇ. ಸಾದಿನ ಚಿಪ್ಪು ಕೈಯಿಂದ ಕೈಗೆ ಹೋಗುವಾಗ ಯಾರೋ ಎಲ್ಲೋ ಅದನ್ನು ಇಟ್ಟು ಮರೆತುಬಿಡುತ್ತಿದ್ದರು. ಹೀಗಾಗಬಾರದೆಂದೇ ಅದನ್ನು ನಡುಮನೆಯ ಗೋಡೆಗೆ ಹೂತು ಹಾಕಿದ್ದು.
ನಮ್ಮ ಅಮ್ಮನಿಗೆ ಕುಂಕುಮ ಇಟ್ಟುಕೊಳ್ಳುವ ಆಸೆಯಿತ್ತು ಅನಿಸುತ್ತೆ. ಒಂದು ಮಳೆಗಾಲದ ಸಮಾಚಾರ ಹೇಳುತ್ತೇನೆ. ಆಕಾಶದ ತುಂಬ ಮೋಡ ಕವಿದಿದ್ದವು. ಸೂರ್ಯನ ಮುಖವೇ ಇರಲಿಲ್ಲ. ನಡುಮನೆ ಮತ್ತು ಕತ್ತಲ ಕೋಣೆಯಲ್ಲಿ ಬಿಸಿಲು ಕೋಲು ಬೀಳದೆ ನನ್ನ ಆಟದ ಹದವೇ ಕೆಟ್ಟುಹೋಗಿತ್ತು. ನಮ್ಮ ಅಮ್ಮ ಒಬ್ಬಳೇ ಕತ್ತಲ ಕೋಣೆಯಲ್ಲಿ ಕೂತಿದ್ದಳು. ನಾನು ಕುತೂಹಲದಿಂದ ಅವಳನ್ನು ನೋಡುತ್ತಾ ಇದ್ದೆ. ಸೆರಗಿನಲ್ಲಿ ಏನನ್ನೋ ಮುಚ್ಚಿಟ್ಟುಕೊಂಡು ಬಂದಿದ್ದಳು- ಕಳ್ಳಿ! ಆಗ ನಮ್ಮ ಅಮ್ಮ ಹೇಗಿದ್ದಳು ಅಂತ ಸ್ವಲ್ಪ ಹೇಳುತ್ತೇನೆ-ಕೇಳಿ. ಅವಳಿಗೆ ಎದೆಯ ಮೇಲೆ ಹಾಕಿಕೊಂಡರೆ ಕೂತಾಗ ನೆಲದ ಮೇಲೆ ಬೀಳುವಷ್ಟು ಉದ್ದದ ಜಡೆಯಿತ್ತು. ಆದರೆ ಆ ಜಡೆಯಲ್ಲಿ ಅವಳು ಯಾವತ್ತೂ ಅಜ್ಜಿಯ ಹಾಗೆ ಹೂಮುಡಿದುಕೊಳ್ಳುತ್ತಿರಲಿಲ್ಲ. ಅಮ್ಮಂದು ಗೋಧಿಬಣ್ಣ. ಆದಕಾರಣ ಅವಳು ಕತ್ತಲ ಕೋಣೆಯ ಬೆಳಕಿನಲ್ಲೂ ಮಾಸಲು ಬಿಳುಪಿನಲ್ಲಿ ಸ್ಪಷ್ಟವಾಗಿ ಕಾಣುತ್ತಾ ಇದ್ದಳು. ಅವಳು ಕಪ್ಪು ಸೀರೆ ಉಟ್ಟುಕೊಂಡಾಗಂತೂ ತುಂಬ ಚೆನ್ನಾಗಿ ಕಾಣುತ್ತಾ ಇದ್ದಳು. ಸೆರಗಿನ ಮರೆಯಲ್ಲಿ ಅವಳು ಹುದುಗಿಸಿ ತಂದಿದ್ದು ಏನು ಗೊತ್ತಾ? ಅಜ್ಜಿಯ ಕುಂಕುಮದ ಭರಣಿ!
ಆಕಾಶದಲ್ಲಿ ಮೋಡ ಕಟ್ಟಿತ್ತಲ್ಲ! ಸಣ್ಣಗೆ ಈಗ ಮಳೆ ಹನಿಯತೊಡಗಿತ್ತು. ಅಮ್ಮ ಕನ್ನಡಿಯನ್ನು ಮುಖಕ್ಕೆ ಹಿಡಿದುಕೊಂಡು ಅಲ್ಲಿ ಕಾಣುತ್ತಿದ್ದ ತನ್ನ ಮುಖ ನೆಟ್ಟಗಣ್ಣಲ್ಲಿ ನೋಡುತ್ತಾ ಇದ್ದಳು. ನನಗೆ ಕುತೂಹಲ... ಅಮ್ಮ ಏನು ಮಾಡಲಿಕ್ಕೆ ಹೊರಟಿದ್ದಾಳೆ? ನಾನು ಮಂಡಿಯೂರಿ ಅವಳ ಮುಂದೆ ಕೂತು ಕಣ್ಣು ಬಾಯಿ ಎರಡನ್ನೂ ಬಿಟ್ಟುಕೊಂಡು ಅವಳನ್ನು ನೋಡುತ್ತಾ ಇದ್ದೆ. ಅಮ್ಮ ಕನ್ನಡಿಯಲ್ಲಿ ತನ್ನ ಹಣೆ ಕಾಣುವ ಜಾಗಕ್ಕೆ ನಿಧಾನವಾಗಿ ಕಲಸಿದ ಕುಂಕುಮ ತಿದ್ದುತ್ತಾ ಇದ್ದಳು. ಕುಂಕುಮಕ್ಕೆ ಬೆಲ್ಲದ ನೀರು ಬೆರೆಸಿ ಅಮ್ಮ ಕಲಸಿದ ಕುಂಕುಮ ಮಾಡಿಕೊಂಡಿದ್ದಳು. ನಿಧಾನಕ್ಕೆ ದುಂಡಗೆ ಕುಂಕುಮ ತಿದ್ದಿ, ಆ ಬೊಟ್ಟು ಸರಿಯಾಗಿ ತನ್ನ ಹಣೆಯ ಮಧ್ಯಕ್ಕೆ ಬರುವಂತೆ ಕನ್ನಡಿ ಹೊಂದಿಸಿಕೊಳ್ಳುತ್ತಾ ಕೂತಿದ್ದ ಅಮ್ಮ ನನಗೆ ನಮ್ಮೂರ ಗುಡಿಯ ದೇವಿಯ ಹಾಗೆ ಕಂಡಳು... ಆಕಾಶ... ಮೋಡ... ಮಳೆ... ಮರೆಯಾದ ಸೂರ್ಯ...ಓ..! ಅಮ್ಮಾ ಆಕಾಶದಲ್ಲಿ ಸೂರ್ಯನನ್ನು ಬರೆದಳು...! ಎಂದು ಗಟ್ಟಿಯಾಗಿ ಕೂಗಿದೆ. ಷ್! ಎಂದು ಅಮ್ಮ ನನ್ನ ತುಟಿಯ ಮೇಲೆ ಬೆರಳಿಟ್ಟಳು. ಗಸಗಸ ತಿಕ್ಕಿ ಕನ್ನಡಿಯಲ್ಲಿದ್ದ ಸೂರ್ಯನನ್ನ ಒರೆಸಿಹಾಕಿದಳು... ಅವಳ ಕಣ್ಣಲ್ಲಿ ನೀರು ಜಿನುಗುತ್ತಾ ಇತ್ತು! ಈ ದೊಡ್ಡವರು ಯಾವಾಗ ಏನು ಮಾಡುತ್ತಾರೆ ತಿಳಿಯುವುದಿಲ್ಲ! ಯಾವಾಗ ಯಾಕೆ ಅಳುತ್ತಾರೆ ತಿಳಿಯುವುದಿಲ್ಲ... ಅಮ್ಮ ಅತ್ತಾಗ ನಾನೂ ಅಳುತ್ತಾ ಇದ್ದದು ಮಾತ್ರ ನಿಜ. ಒಬ್ಬರು ಅತ್ತಾಗ ಇನ್ನೊಬ್ಬರ ಕಣ್ಣಲ್ಲಿ ಯಾಕೆ ನೀರು ಬರತ್ತೋ ಗೊತ್ತಿಲ್ಲಪ್ಪ...
ನನಗೆ ಅಪ್ಪ ಇರಲಿಲ್ಲ ಅಂತ ನಿಮಗೆ ಮೊದಲೇ ಹೇಳಿದ್ದೇನೆ. ಅಪ್ಪ ಮದ್ರಾಸಿಗೆ ಹೋಗಿದ್ದಾನೆ ಅಂತ ಅಜ್ಜಿ ಹೇಳುತ್ತಿದ್ದಳು. ಯಾವಾಗ ಬರುತ್ತಾನೆ? ನೀನು ದೊಡ್ಡವನಾದ ಮೇಲೆ? ನಾನು ಯಾವಾಗ ದೊಡ್ಡವನಾಗುತ್ತೇನೆ? ಅಜ್ಜಿ ದಿಮ್ಮಗೆ ನನ್ನನ್ನು ಅವಚಿಕೊಂಡು-ಥೂ! ನನ್ನ ಮುಖವನ್ನೆಲ್ಲಾ ನೆಕ್ಕಿಬಿಡುತ್ತಿದ್ದಳು! ಎಂಜಲಿಲ್ಲ, ಮುಸುರೆ ಇಲ್ಲ! ನನ್ನ ತುಟಿ ಕಚ್ಚಿ ಸುರ್ ಅಂತ ಜೊಲ್ಲು ಹೀರುತ್ತಿದ್ದಳು... ನಾನು ರಪ ರಪ ಅವಳ ಎದೆಗೆ ಗುದ್ದಿ, ಹೇಳು ನಾನು ಯಾವಾಗ ದೊಡ್ಡವನಾಗುತ್ತೇನೆ? ಎಂದು ರಚ್ಚೆ ಹಿಡಿಯುತ್ತಿದ್ದೆ. ಅಜ್ಜಿಯ ಕಣ್ಣು ಆಗ ಫಳ ಫಳ ಹೊಳೆಯುತ್ತಿದ್ದವು. ತನ್ನ ಜಡೆಯ ತುದಿಯನ್ನು ಎರಡು ಭಾಗಕ್ಕೆ ಸೀಳಿ ನನ್ನ ಮೂಗಿನ ಕೆಳಗೆ ಮೀಸೆಯ ಹಾಗೆ ಹಿಡಿದು, ಈಗ..ಈಗಲೇ ನೀನು ದೊಡ್ಡವನಾಗಿದ್ದೀ... ಅಂತ ಅಳುವುದಕ್ಕೆ ನಗುವುದಕ್ಕೆ ಶುರುಹಚ್ಚುತ್ತಿದ್ದಳು. ಅಳಬೇಕು, ಇಲ್ಲ ನಗಬೇಕು! ಎರಡೂ ಒಟ್ಟಿಗೆ ಮಾಡಿದರೆ ಹೇಗೆ?
ಅಮ್ಮ ಬಹಳ ಹೊತ್ತು ಕಸೂತಿ ಹಾಕುತ್ತಾ ಕಾಲ ಕಳೆಯುತ್ತಿದ್ದಳು. ಕಣ್ಣು ಹಾಳು ಮಾಡಿಕೊಳ್ಳುತ್ತಿ. ಚೆನ್ನಗಿರಿಗೆ ಹೋಗಿ ಸಂಗೀತವಾದರೂ ಕಲಿತುಕೋ... ಅಲ್ಲಿ ಸಂಗೀತ ಮೇಷ್ಟ್ರಿದ್ದಾರಂತೆ... ಸಂಗೀತ ಪಾಸು ಮಾಡಿಕೊಂಡರೆ ನಿನಗೆ ಪ್ರೇಮರಿ ಇಸ್ಕೂಲಲ್ಲಿ ಮೇಡಮ್ಮನ ಕೆಲಸವಾದರೂ ಸಿಗತ್ತೆ ಎಂದು ಅಜ್ಜಿ ಅಮ್ಮನಿಗೆ ದುಂಬಾಲು ಬಿದ್ದಳು. ಅಮ್ಮ ಅಪ್ಪನಾಗಲಿಕ್ಕೆ ಹೊರಟ ದಿನ ಅದು! ಅಮ್ಮ ಸಂಗೀತ ಕಲಿತು ಮೇಡಂ ಕೆಲಸ ಹಿಡಿದಳು. ಅಮ್ಮ ಯಾಕೆ ಕೆಲಸ ಮಾಡಬೇಕು ಅಂದರೆ ಪಥ ಸಾಗಬೇಕಲ್ಲ ಎಂದು ಅಜ್ಜಿ, ದೊಡ್ಡಜ್ಜಿ ಹೇಳುತ್ತಾ ಇದ್ದರು. ಈ ನಡುವೆ ನಮ್ಮ ಅಜ್ಜ ತೀರಿಕೊಂಡರು. ಬಡತನ ಅಂದರೆ ದೊಡ್ಡವರು ಮುದ್ದೆ ತಿಂದು, ಮಕ್ಕಳಿಗೆ ಮಾತ್ರ ಅನ್ನ ಬಡಿಸುವುದು ಎಂಬುದು ನನಗೆ ಆಗಷ್ಟೇ ಗೊತ್ತಾಗಿತ್ತು. ಹಡೆದರು ದೇವಕಿ, ಪಡೆದು ಯಶೋದೆ, ಕೃಷ್ಣನು ಗೋಪಿಯ ಕಂದ ಎಂಬ ನನ್ನ ಹಾಡು ನೀವು ಕೇಳಿದ್ದೀರಾ? ಹಡೆಯುವುದರಿಂದ ಯಾರೂ ಅಮ್ಮ ಆಗುವುದಿಲ್ಲ. ಮಗುವನ್ನು ಪಡೆಯಬೇಕಾಗತ್ತೆ. ದೇವಕಿ ಕೃಷ್ಣನನ್ನು ಹಡೆದಳು. ಆದರೆ ಕೃಷ್ಣನನ್ನು ಪಡೆದದ್ದು ಬೃಂದಾವನದಲ್ಲಿದ್ದ ಯಶೋದ ಎಂಬ ಗೊಲ್ಲರ ಹೆಣ್ಣುಮಗಳು. ಎಂಥ ಪುಣ್ಯಾತಗಿತ್ತಿ ಅವಳು... ಕೃಷ್ಣ, ಬಲರಾಮ ಎಂಬ ಇಬ್ಬರು ಮುದ್ದು ಮುದ್ದು ಮಕ್ಕಳು ಅವಳ ಮನೆಯಲ್ಲಿ! ಇಬ್ಬರೂ ಅವಳು ಹಡೆದವರಲ್ಲ... ಪಡೆದವರು! ಆದರೆ ಕೃಷ್ಣನ ಅಮ್ಮ ಎಂದರೆ ನಮಗೆ ನೆನಪಾಗುವುದು ಯಶೋದೆಯೇ ವಿನಾ ಪಾಪದ ದೇವಕಿಯಲ್ಲ. ಎಂಟು ಮಕ್ಕಳನ್ನು ಹಡೆದೂ ದೇವಕಿ ಅಮ್ಮ ಆಗಲೇ ಇಲ್ಲ! ಒಂದೂ ಹಡೆಯದೆ ಯಶೋದ ಎರಡು ಮಕ್ಕಳ ತಾಯಿಯಾದಳು.
ಬದುಕು ಅನ್ನೋದು ಒಂದು ವೇಷಾಂತರದ ಆಟ ಅಂತ ನನಗೆ ಅನ್ನಿಸುತ್ತೆ. ನಮ್ಮ ಅಮ್ಮ, ಅಮ್ಮನ ವೇಷದಿಂದ ನಿಧಾನಕ್ಕೆ ಅಪ್ಪನ ವೇಷಕ್ಕೆ ಪಾತ್ರಾಂತರ ಮಾಡಿಕೊಂಡಳು. ಏನೇನೋ ಓದಿದಳು. ಬರೆದಳು. ಪರೀಕ್ಷೆ ಮಾಡಿಕೊಂಡು ಮೇಡಮ್ಮ ಆದಳು. ಅವಳ ದುಡಿಮೆಯಿಂದ ಮನೆ ನಡೆಯತೊಡಗಿತು. ಅವಳಿಗೆ ಸ್ಕೂಲು, ಮನೆ, ಮೀಟಿಂಗು, ಮನೆಯ ಹೊರಗಿನ ಅಲೆತ...ಹಾಗಾದರೆ ನನ್ನ ಅಮ್ಮ? ನಿಧಾನಕ್ಕೆ ನನ್ನ ಇಬ್ಬರು ಅಜ್ಜಿಯರು ನನ್ನ ಅಮ್ಮನ ಪಾತ್ರ ನಿರ್ವಹಣೆಗೆ ಸಿದ್ಧವಾದರು. ನನ್ನ ಪಾಲಿನ ಯಶೋದೆಯರಾದರು! ಅಮ್ಮ ನನ್ನ ಅಪ್ಪ! ಅಜ್ಜಿಯರು ನನ್ನ ಅಮ್ಮಂದಿರು!
ನನ್ನ ಅಜ್ಜಿಯರು ನನ್ನನ್ನು ಮಗುವಾಗಿ ಹಡೆಯಲಿಲ್ಲ, ಆದರೆ ಪಡೆದರು. ಬುಕೂಚಿ ಮಾಡಿಸುವವರು ಅವರು! ಕೈತುತ್ತು ತಿನ್ನಿಸುವವರು ಅವರು! ಹಿತ್ತಲಲ್ಲಿ ಬಾಗೆ ಮರದ ಸಂಧಿಯಲ್ಲಿ ಮುಚ್ಚಿಟ್ಟುಕೊಳ್ಳುತ್ತಿದ್ದ ಚಂದ್ರನನ್ನು ತೋರಿಸುವವರು ಅವರು! ನನ್ನ ದೊಡ್ಡಜ್ಜಿ ನನಗೆ ರಾತ್ರಿಯಾದರೆ ರಾಮಾಯಣ ಭಾರತದ ಕಥೆಗಳನ್ನು ಹೇಳುತ್ತಾ ಇದ್ದಳು. ಅವಳು ತಂಗಿಯರ ಊರಿಗೆ ಬಾಣಂತನಕ್ಕೆ ಹೋಗಿ ಮರಳಿ ಬರುವಾಗ ಮರೆಯದೆ ನನಗಾಗಿ ಚಂದಮಾಮದ ಬಣ್ಣಬಣ್ಣದ ಪುಸ್ತಕ ತರುತ್ತಿದ್ದಳು! ಅದರಲ್ಲಿ ಏಕಾಕ್ಷ ಎಂಬ ಮಂತ್ರವಾದಿಯ ಕಥೆ! ನೆನೆದರೆ ಈಗಲೂ ಮೈ ಜುಂ ಎನ್ನುತ್ತದೆ.
ಅಮ್ಮನ ಹಣೆಯಿಂದ ಜಾರಿದ ಚಂದ್ರ, ಸ್ವಲ್ಪ ದಿನ ಬಾಗೆ ಮರದ ರೆಂಬೆಯಲ್ಲಿ ಕೂತವನು, ಈಗೀಗ ಚಂದಮಾಮನಾಗಿ ಪ್ರತ್ಯಕ್ಷನಾಗಿದ್ದ! ನನ್ನ ಅಪ್ಪ ಮದ್ರಾಸಿಗೆ ಹೋಗಿಲ್ಲ... ಮತ್ತೆ ಹಿಂದಿರುಗಲಾರದ ಲೋಕಕ್ಕೆ ಹೋಗಿದ್ದಾನೆ ಎಂಬುದು ಈಗ ನನಗೆ ಗೊತ್ತಾಗಿತ್ತು. ವಾಸ್ತವ ಲೋಕದ ಸಂಕಟ ಮರೆಯಲು ನಾನು ನನ್ನದೇ ಕಲ್ಪನಾ ಲೋಕಕ್ಕೆ ಮೆಲ್ಲಗೆ ಜಾರಿಕೊಳ್ಳುತ್ತಿದ್ದೆ! ಅದೆಷ್ಟು ಕಥೆ ಓದಿದೆನೋ. ಅಂಜುಗುಳಿಯಾಗಿದ್ದರೂ ಸ್ಕೂಲಲ್ಲೂ ನಾನೇ ಫಸ್ಟು. ಮನೆಯಲ್ಲಿ ಅಜ್ಜಿಯರ ಮುದ್ದು.
ಮನೆಯೊಳಗೆ ಮಲಗಿದ್ದರೂ ರಾತ್ರಿ ನಮ್ಮ ಹೆಂಚಿನ ಮನೆಯ ಸೂರಲ್ಲಿ ನಕ್ಷತ್ರಗಳು ಕಾಣುತ್ತಾ ಇದ್ದವು. ಅವನ್ನು ನಿದ್ದೆ ಬರುವವರೆಗೂ ನಾನು ಪಿಳಿಪಿಳಿ ನೋಡುತ್ತಾ ಮಲಗುತ್ತಿದ್ದೆ! ಎಡಪಕ್ಕದಲ್ಲಿ ದೊಡ್ಡಜ್ಜಿ. ಬಲಪಕ್ಕದಲ್ಲಿ ಸಣ್ಣಜ್ಜಿ. ಅವರು ಎರಡು ಮಹಾಪರ್ವತಗಳಂತೆ ಆ ಪಕ್ಕ ಈ ಪಕ್ಕ ಮಲಗುತ್ತಾ ಇದ್ದರು. ಉಸಿರಾಡುವ ಪರ್ವತಗಳು ನನ್ನ ಅಜ್ಜಿಯರು! ಅವರ ಮಧ್ಯೆ ಕಣಿವೆಯಾಳದಲ್ಲಿ ನಾನು. ವೇಷಾಂತರದ ಆಟ ಅದ್ಭುತವಾಗಿ ನಡೆಯುತ್ತಾ ಇತ್ತು. ಬೃಂದಾವನದಲ್ಲಿ ಯಶೋದೆ ಮತ್ತು ಇತರ ಗೋಪಿಯರು ಕೃಷ್ಣನನ್ನು ಹುಡುಕಿಕೊಂಡು ಅಲೆಯುತ್ತಿದ್ದರು. ನಾನು ನನ್ನ ಪುಟಾಣಿ ಹಳ್ಳಿಯಲ್ಲಿ ಅಮ್ಮನನ್ನು ಹುಡುಕಿಕೊಂಡು ಅಲೆಯುತ್ತಾ ಇದ್ದೆ! ಅಮ್ಮಾ..ನಿಮ್ಮಾ...ಮನೆಗಳಲ್ಲಿ ನಮ್ಮಾ ಅಮ್ಮನ ಕಂಡಿರೇನಮ್ಮಾ? ಎಂದು ನನ್ನಲ್ಲೇ ನಾನು ಹಾಡಿಕೊಳ್ಳುತ್ತಾ.


- ಎಚ್.ಎಸ್. ವೆಂಕಟೇಶಮೂರ್ತಿ
hadigerevmurthy@yahoo.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.