

ನಿತ್ಯದ ಆಗುಹೋಗುಗಳಲ್ಲಿ ನಾಟಕೀಯ ಸನ್ನಿವೇಶಗಳು ಗೋಚರಿಸುತ್ತವೆ. ರಂಗದ ಮೇಲೆ ನಟಿಸಿದರೂ ನೈಜವೆನಿಸುತ್ತದೆ. ಹಾಗಾಗಿ ಎರಡೂ ಆಯಾಮಗಳು ಒಂದರ ಒಳಗೊಂದು ಹೆಣೆದುಕೊಂಡಿವೆ. ಅದಕ್ಕಾಗಿಯೇ ನಾಟಕ ರಂಜನೀಯವಾಗಿ ತೋರುತ್ತದೆ. ಇತ್ತೀಚೆಗೆ ಹೀಗೆ ವ್ಯಾಸ್ಪ್ ರಂಗ ತಂಡ ಗಜಲ್ ಶಾಯರಿಗಳನ್ನೇ ಆಧಾರವಾಗಿಸಿ ಬಂಡಾಯದ ಮನಗಳಲ್ಲೂ ಪ್ರೇಮದ ಕೊಳಲು ನುಡಿಸಿದ್ದಾರೆ. ತೆಳು ಹಾಸ್ಯವನ್ನು ತೆರೆದಿಡುತ್ತಾ ಎಂಬತ್ತರ ದಶಕದ ವಸ್ತುಸ್ಥಿತಿಯನ್ನೂ, ಆಗಿನ ಕಾಲಘಟ್ಟವನ್ನು ಪ್ರತಿಬಿಂಬಿಸುವತ್ತ ಈ ಪ್ರಯತ್ನ ಗಮಿಸಿದೆ.
ದೇಶದಲ್ಲಿನ ಭ್ರಷ್ಟ ಪಿಡುಗಿನ ವಿರುದ್ಧ ದನಿ ಎತ್ತಿ, ಅನ್ಯಾಯವನ್ನು ಖಂಡಿಸಿ, ಮುಷ್ಕರ, ಹರತಾಳಗಳನ್ನು ನಡೆಸುತ್ತಾ ಮಾತೂಮಾತು ಮಾತಲ್ಲೇ ಮುಳುಗಿ ವಯೋವಾನದ ಬಯಕೆಗಳನ್ನು ಮರೆತ ಯುವ ಸಮೂಹದ ನಾಯಕನೂ ಹಾಗೂ ಗಂಡಸರ ನೆರಳು ಕಂಡರೂ ಸಿಡಿದೇಳುವ ಇಡೀ ಗಂಡು ಜಾತಿಯನ್ನೇ ಹುರಿದು ಮುಕ್ಕುವ ಗಯ್ಯಾಳಿಯ ಪ್ರತಿರೂಪವಾಗಿ ಬಿರುಗಾಳಿಯಂತೆ ಸಂಚರಿಸುತ್ತಾಳೆ ನಾಟಕದ ನಾಯಕಿ. ಆದರೆ ಇಂಥ ಬಂಡಾಯದ ಬರಡು ನೆಲದಲ್ಲೂ ಪ್ರೇಮಾಂಕುರವಾಗಿ ಕೊರಡು ಕೊನರುತ್ತದೆ. ಇದು ಮಾಮೂಲು ಕಥೆಯೆನಿಸಿದರೂ ಇಲ್ಲಿನ ಸಂಭಾಷಣೆಯನ್ನು ಅರಗಿಸಿಕೊಳ್ಳಲು ಕಿವಿ ತೆರೆದೇ ಇರಬೇಕು. ಕೆಲವು ಪದಗಳನ್ನು ಪದರಪದರವಾಗಿ ಪೇರಿಸುತ್ತಾ ಹೋಗುತ್ತಾರೆ ಅದನ್ನು ಕೇಳಿ ಸ್ವತಃ ಪಾತ್ರಗಳೇ ತಲೆಸುತ್ತು ಬಂದು ಬೀಳುತ್ತವೆ... ಇನ್ನು ಪ್ರೇಕ್ಷಕನ ಗತಿಯೇನು? ಪ್ರತಿ ಪದಗಳಿಗೂ ಅರ್ಥ ಹೇಳುವಂತೆ ನಾ. ಕಸ್ತೂರಿ ಅವರ ಅನರ್ಥ ಕೋಶವನ್ನು ಅರೆದು ಕುಡಿದ ನಾಯಕನ ಅಪ್ಪನ ಪಾತ್ರಧಾರಿಯ ಮಾತುಗಳನ್ನು ಗಮನಿಸಿ ಕೇಳದಿದ್ದರೆ ಪ್ರೇಕ್ಷಕರಿಗೇ ನಷ್ಟ. 'ವಯಸ್ಕಾಂತ'ದಂಥ ಹಲವು ಪದಪುಂಜಗಳು ನಗೆ ಉಕ್ಕಿಸಲೇ ಇವೆ. 'ಕುರುಕ್ಷೇತ್ರ'ದ ಪದ ಬಳಕೆ ಹಾಗೂ ಅದಕ್ಕಾಗಿಯೇ ಸೃಷ್ಟಿಸಿದ ಪಾತ್ರ, ಪಾತ್ರದ ಪೋಷಣೆಯು ಪ್ರೇಕ್ಷಕರನ್ನು ಟೆನ್ಷನ್ ಫ್ರೀಮಾಡುತ್ತವೆ. ಆದರೆ ನಾಯಕನ ಅಮ್ಮನ ಕಾಲು ಮುರಿದು ಕೂಡಿಸಿದ್ದು ತನ್ನ ಗಂಡನ ಅರ್ಥಗಳ ಪ್ರಲಾಪವನ್ನು ಓಡಿ ಹೋಗದೇ ಕೇಳಲಿ ಎಂದು ಇರಬೇಕು. ಆಕೆಯೂ ಡೈಲಾಗ್ ಹೊಡೆಯುವುದರಲ್ಲಿ ಕಡಿಮೆ ಏನಿಲ್ಲ, 'ಎಲ್ಲಕ್ಕೂ ನಿಮ್ಮಲ್ಲಿ ಅರ್ಥವಿದೆ ಆದರೆ ಜೇಬಲ್ಲಿ ಅರ್ಥವಿಲ್ಲವಲ್ಲ' ಎಂದು ಮಾರ್ಮಿಕವಾಗಿ ಹೇಳುತ್ತಾರೆ.
ಹುಡುಗನ ತಾಯಿ ಹಾಗೂ ಹುಡುಗಿಯ ತಾಯಿ ಮನೆಗಳಲ್ಲೇ ಕುಳಿತು ಕಿಟಕಿಗಳಿಂದಲೇ ಮಾತಾಡುವ ತಂತ್ರ ವರ್ಕ್ಔಟ್ ಆಗಿದೆ. ಈಗಿನ ಕಾಲಘಟ್ಟದ ಕಥೆಯಾಗಿದ್ದರೆ ಮೊಬೈಲ್, ವಾಟ್ಸ್ಆ್ಯಪ್ಗಳು ವೈಭವೀಕರಿಸುತ್ತಿದ್ದವು. ಬಣ್ಣ ಬಣ್ಣಗಳ ಕೊಡೆಗಳನ್ನು ಬಳಸಿ ರಂಗಸಜ್ಜಿಕೆ ಮಾಡಿರುವುದು ಸೂಚ್ಯಾರ್ಹ. ಇಲ್ಲಗಳಲ್ಲೂ ಇದೆಯಾಗಿಸುವ ಪ್ರಯತ್ನ ಈ ರಂಗಸಜ್ಜಿಕೆಯಲ್ಲಿದೆ.
ವಯಸ್ಸಾದ ಪ್ರೇಮಿ ತನ್ನ ಯವ್ವನದ ದಿನಗಳಲ್ಲಿ ಪ್ರೇಯಸಿಗೆ ಕೊಟ್ಟ ಉಡುಗೊರೆ ಹಿಡಿದು ನೆನಪಿಗೆ ಜಾರಿ ಆಗೆಲ್ಲ ನಡೆದ ಘಟನೆಗಳ ಪ್ರೇಮೋತ್ಸಾಹದ ಮೆರವಣಿಗೆಯಲ್ಲಿ ಸಾಗಿ ಕರಗಿ ಮತ್ತೆ ವಾಸ್ತವಕ್ಕೆ ಬರುವಲ್ಲಿಗೆ ನಾಟಕ ಮುಕ್ತಾಯ. ಹುಡುಗಿಯ ತಾಯಿಯೇ ಪ್ರೇಮಕ್ಕೆ ಪ್ರೋತ್ಸಾಹಿಸಿ ಆಯಾ ವಯೋವಾನಕ್ಕೆ ಇರಬೇಕಾದ ಕಾಮನೆಗಳ ಬಗ್ಗೆ ಉತ್ತೇಜನ ಕೊಡುವ ತಾಯಿಯ ಪಾತ್ರವನ್ನು ಈ ಪಾತ್ರಧಾರಿ ಚೆನ್ನಾಗಿಯೇ ನಿಭಾಯಿಸಿದ್ದಾರೆ. ಆ್ಯಕ್ಟಿವಿಸ್ಟ್ ಆಗಿದ್ದ ನಾಯಕ ಹೆಣ್ಣಿನ ಮೋಹದ ಬಲೆಗೆ ಬಿದ್ದು ಬಂಡಾಯವನ್ನು ಬಿಟ್ಟು ಮದುವೆಯಾಗಲು ನಿರ್ಧರಿಸುತ್ತಾನೆ. ಆದರೆ, ಅವನ ಮಿತ್ರರಾದ ಕಾಮ್ರೆಡ್ಗಳು ಅದಕ್ಕೆ ಒಪ್ಪಿಗೆ ಸೂಚಿಸುವುದು, ಆಶೀರ್ವದಿಸುವುದು ವಿಪರ್ಯಾಸವೆನಿಸುತ್ತದೆ. ಕಾಮ್ರೆಡ್ ಆಗಿದ್ದಾಗ ನಾಯಕನು ಜುಬ್ಬಾ ಪೈಜಾಮದಲ್ಲಿದ್ದು ಪ್ರೇಮಿಯಾದ ಮೇಲೆ ಕೆಂಪಂಗಿ ತೊಡುವ ಉದ್ದೇಶ ಅರ್ಥೈಸಲಾಗಲಿಲ್ಲ.
ಎನ್.ಸಿ. ಮಹೇಶ್ ಅವರ ನಾಟಕ ರಚನೆ ಮತ್ತು ಸಂಭಾಷಣೆಯ ನಿರೂಪಣೆ ಅವರ ಭಾಷಾ ತಂತ್ರವನ್ನು ಪ್ರತಿಬಿಂಬಿಸಿದರೆ ವಿನಯ್ ಶಾಸ್ತ್ರಿ ಅವರ ನಿರ್ದೇಶನವು ಬೆಳವಣಿಗೆಯತ್ತ ಹೆಜ್ಜೆ ಹಾಕಿದೆ. ರಂಗ ತಂತ್ರಗಳ ಅಳವಡಿಕೆ ಹಾಗೂ ಬೆಳಕನ್ನು ಬಳಸಿಕೊಳ್ಳಲು ವಿಷಯವು ಸಹಕರಿಸಿಲ್ಲ. ಸಂಗೀತವು ಹಿನ್ನೆಲೆಯಲ್ಲೇ ಇರದೇ ರಂಗದ ಮೇಲೂ ಹರವಿಕೊಂಡಿತ್ತು. ಗಜಲ್ ಮತ್ತು ಶಾಯರಿಗಳನ್ನು ಹೆಸರಲ್ಲಿ ಇಟ್ಟುಕೊಂಡಿದ್ದರಿಂದ ಆಗಾಗ ಅವು ಹಾಡಾಗಿ ಹರಿಯಬಹುದಿತ್ತೇನೋ ಎಂದೆನಿಸದೇ ಇರಲಿಲ್ಲ.
= ಸಂಕೇತ್ ಗುರುದತ್
gurudattans@gmail.com